ಸೇಡಿನ ರಾಜಕಾರಣದಿಂದ ಪ್ರಿಯಾಂಕ ಖರ್ಗೆಗೆ ಜೀವ ಬೆದರಿಕೆ : ವಿಪಕ್ಷ ನಾಯಕ ಸಿದ್ಧರಾಮಯ್ಯ ವಾಗ್ದಾಳಿ
ನವೆಂಬರ್ 14, 2022
ಮೈಸೂರು : ನರೇಂದ್ರ ಮೋದಿ ಪ್ರಧಾನಿ ಆದ ಮೇಲೆಯೇ ದೇಶದಲ್ಲಿ ಸೇಡಿನ ರಾಜಕಾರಣ ಪ್ರಾರಂಭವಾಗಿದೆ. ಸಿಎಂ ಬಸವರಾಜ ಬೊಮ್ಮಾಯಿ, ಗೃಹ ಸಚಿವ ಅರಗ ಜ್ಞಾನೇಂದ್ರ ಇದರ ಭಾಗವಾಗೆ ಕೆಲಸ ಮಾಡುತ್ತಿದ್ದಾರೆ. ಇದರಿಂದಾಗಿ ಶಾಸಕ ಪ್ರಿಯಾಂಕ ಖರ್ಗೆಗೆ ಜೀವ ಬೆದರಿಕೆ ಬಂದಿದೆ ಎಂದು ವಿರೋಧ ಪಕ್ಷದ ನಾಯಕ ಸಿದ್ಧರಾಮಯ್ಯ ವಾಗ್ದಾಳಿ ನಡೆಸಿದರು. ನಗರದಲ್ಲಿ ಸೋಮವಾರ ಖಾಸಗಿ ಆಸ್ಪತ್ರೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಬಿಜೆಪಿಯವರು ಭಯ ಹುಟ್ಟಿಸುವ ಮೂಲಕ ಅಭಿವ್ಯಕ್ತಿ ಸ್ವಾತಂತ್ರ್ಯಹರಣ ಮಾಡುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಸಾಹಿತಿಗಳು, ಬರಹಗಾರರು, ಪತ್ರಕರ್ತರು ಮತ್ತು ರಾಜಕಾರಣಿಗಳಿಗೆ ಜೀವ ಭಯ ಒಡ್ಡುವುದು ಪ್ರಜಾಪ್ರಭುತ್ವಕ್ಕೆ ಮಾರಕ, ಇಂತಹ ಕೆಲಸವನ್ನು ಯಾರೂ ಮಾಡಬಾರದು. ಇದನ್ನು ನಾನು ಬಲವಾಗಿ ಖಂಡಿಸುತ್ತೇನೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಡಿಕ್ಟೇಟರ್ ಶಿಪ್ ಇರಬಾರದು. ಅಭಿವ್ಯಕ್ತಿ ಸ್ವಾತಂತ್ರ್ಯ ಇರಬೇಕು, ಸರ್ಕಾರ ತಪ್ಪು ಮಾಡಿದಾಗ ಪ್ರಶ್ನಿಸುವ ಹಕ್ಕು ಇರಬೇಕು ಎಂದು ಹೇಳಿದರು. ಶಾಲೆಗಳ ಗೋಡೆಗಳನ್ನು ಕೇಸರಿಕರಣ ಮಾಡುವುದು ಸರಿಯಲ್ಲ, ಇವರು ಖರ್ಚು ಮಾಡುವುದು ಜನರ ದುಡ್ಡನ್ನೆ ಹೊರತು ಬಿಜೆಪಿಯದನ್ನಲ್ಲ, ಶಾಲೆ ಗೋಡೆಗಳನ್ನು ಕೇಸರೀಕರಣಗೊಳಿಸಿ ಎಂದು ಜನರು ಕೇಳಿದ್ದಾರಾ? ಇವರಿಗೆ ಸಂಪೂರ್ಣ ಜನ ಬೆಂಬಲ ಸಿಕ್ಕಿಲ್ಲ. ಹಿಂಬಾಗಿಲ ಮೂಲಕ ಅಧಿಕಾರಕ್ಕೆ ಬಂದು ಇವರ ಇಷ್ಟ ಬಂದ ಹಾಗೆ ಮಾಡಲು ಆಗುವುದಿಲ್ಲ ಎಂದು ಕಿಡಿಕಾರಿದರು.
ಸಿದ್ಧರಾಮಯ್ಯಗೆ ರಾಜಕೀಯವಾಗಿ ಪುನರ್ ಜನ್ಮ ಕೊಟ್ಟೆ ಎಂಬ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಹೇಳಿಕೆಗೆ ತಿರುಗೇಟು ನೀಡಿದ ಸಿದ್ಧರಾಮಯ್ಯ, ನಾನು ಚುನಾವಣೆಯಲ್ಲಿ ಗೆದ್ದಾಗ ಕುಮಾರಸ್ವಾಮಿ ಎಲ್ಲಿದ್ದರು. ಅವರು ರಾಜಕೀಯಕ್ಕೆ ಬಂದಿದ್ದೆ 1996 ರಲ್ಲಿ. ನಾನು ಆ ವೇಳೆಗಾಗಲೇ 5 ಚುನಾವಣೆಯನ್ನು ಗೆದ್ದಿದ್ದೆ. ಆಗ ಇವರು ಬಂದು ಕ್ಯಾಂಪೇನ್ ಮಾಡಿದ್ದರಾ? ಇವರ ಹೇಳಿಕೆ ಮತದಾರರಿಗೆ ಮಾಡಿದ ಅವಮಾನ ಎಂದು ಆಕ್ರೋಶ ವ್ಯಕ್ತಪಡಿಸಿದರು.
0 ಕಾಮೆಂಟ್‌ಗಳು