ಅಜೀಜ್ ಸೇಠ್, ತನ್ವೀರ್ ಸೇಠ್, ಅಪ್ಪ, ಮಗ ಇಬ್ಬರೂ ನಮ್ಮ ವಾರ್ಡ್ ಅಭಿವೃದ್ಧಿಗೆ ಬಿಡಿಗಾಸೂ ನೀಡಿಲ್ಲ : ಮಾಜಿ ಮೇಯರ್ ಶ್ರೀಕಂಠೇಗೌಡ ಕಿಡಿ

ಮೈಸೂರು : ದಿ.ಅಜೀಜ್ ಸೇಠ್ ಅಥವಾ ಅವರ ಮಗ ತನ್ವೀರ್ ಸೇಠ್ ಇಬ್ಬರೂ ಕೂಡ ನಮ್ಮ ವಾರ್ಡ್ ಅಭಿವೃದ್ಧಿಗೆ ಯಾವತ್ತೂ ಕೂಡ ಬಿಡಿಗಾಸೂ ನೀಡಿಲ್ಲ. ಎಂದು ಮಾಜಿ ಮೇಯರ್ ಶ್ರೀಕಂಠೇಗೌಡ ಕಿಡಿ ಕಾರಿದರು.
ನಗರದ ಕೆ.ಎನ್.ಪುರ ಬಡಾವಣೆಯಲ್ಲಿ ಶ್ರೀ ಮಲೆ ಮಹದೇಶ್ವರ ಮತ್ತು ಶ್ರೀ ಆದಿಶಕ್ತಿ ಚಾಮುಂಡೇಶ್ವರಿ ದೇವಾಲಯದಲ್ಲಿ 7ನೇ ವರ್ಷದ ಪೂಜಾ ಮಹೋತ್ಸವದಲ್ಲಿ ಭಾಗವಹಿಸಿ ಅವರು ಮಾತನಾಡಿದರು. 
ವಾರ್ಡ್‍ಗಳ ಅಭಿವೃದ್ಧಿ ಬಗ್ಗೆ ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿದ ಅವರು,
ನಾನು ಅಪ್ಪ, ಮಗ ಇಬ್ಬರು ಶಾಸಕರಾಗಿದ್ದಾಗಲೂ ಪಾಲಿಕೆ ಸದಸ್ಯನಾಗಿದ್ದೆ. ಯಾವತ್ತೂ ನಮ್ಮ ಏರಿಯಾ ಅಭಿವೃದ್ಧಿಗೆ ಅನುದಾನ ನೀಡಿಲ್ಲ. ಅವರಿಗೆ ಓಟು ಬರುವ ಏರಿಯಾಗಳು ಮಾತ್ರ ಅಭಿವೃದ್ಧಿಯಾಗಿವೆ. ನಾನೂ ದುರಹಂಕಾರಿ ಯಾವತ್ತೂ ಕೂಡ ಅಭಿವೃದ್ಧಿಗೆ ಅವರ ಬಳಿ ಹಣ ಕೇಳಿಲ್ಲ ಎಂದು ಸ್ಪಷ್ಟಪಡಿಸಿದರು.
ನಾನು ಈ ವಾರ್ಡ್ ಸದಸ್ಯನಾಗಿದ್ದಾಗ ನಗರ ಪಾಲಿಕೆಯಿಂದ ಸಿಗುವ ಅನುದಾನಗಳನ್ನು ತಂದು ಮೂಲಭೂತ ಸೌಕರ್ಯ ಕಲ್ಪಿಸಿದ್ದೇನೆ. ರಸ್ತೆ, ಚರಂಡಿ, ವಿದ್ಯುತ್ ದೀಪಗಳು, ಕುಡಿಯಲು ಕಾವೇರಿ ನೀರು ದೊರೆಯುತ್ತಿದೆ. ಇನ್ನೂ ಇಲ್ಲಿನ ರಸ್ತೆಗಳು ಅಭಿವೃದ್ಧಿಯಾಗಬೇಕಿದೆ. ಈ ವಾರ್ಡ್‍ನ ಆರೇಳು ರಸ್ತೆಗಳನ್ನು ಒಳ ಚರಂಡಿ ಹಾಕುವ ಕಾರಣ ಕಿತ್ತು ಹಾಕಲಾಗಿದೆ. ಇನ್ನೂ ರಿಪೇರಿಯಾಗಿಲ್ಲ. ಶಾಸಕರು ಮನಸ್ಸು ಮಾಡಿದ್ದಿದ್ದರೆ ನಮ್ಮ ವಾರ್ಡ್ ಮತ್ತಷ್ಟು ಅಭಿವೃದ್ಧಿಯಾಗುತ್ತಿತ್ತು ಎಂದರು. 
ಇದು ಸಂಪೂರ್ಣ ರೆವಿನ್ಯೂ ಬಡಾವಣೆ ಈ ಕಾರಣಕ್ಕೂ ಪಾಲಿಕೆಯಿಂದ ನಿರ್ಲಕ್ಷ್ಯಕ್ಕೆ ಒಳಗಾಗಿದೆ. ಪ್ರಾರಂಭದಲ್ಲಿ ಇಲ್ಲಿದ್ದವರು ತೆರಿಗೆ ಕಟ್ಟುತ್ತಿದ್ದರು, ಈಗ ಅವರೆಲ್ಲರೂ ಮನೆಗಳನ್ನು ಮಾರಿ ಹೋಗಿದ್ದಾರೆ. ಅಥವಾ ಬಾಡಿಗೆಗೆ ಕೊಟ್ಟು ಹೋಗಿದ್ದಾರೆ. ತೆರಿಗೆ ಕಟ್ಟದ ಕಾರಣ ಮಹಾನಗರಪಾಲಿಕೆ ಇದರ ಅಭಿವೃದ್ಧಿ ಕಡೆ ಗಮನ ಹರಿಸಿಲ್ಲ. ನಾನು 20 ವರ್ಷ ಪಾಲಿಕೆ ಸದಸ್ಯನಾಗಿ ಮೇಯರ್ ಕೂಡ ಆಗಿದ್ದ ಸಂದರ್ಭದಲ್ಲಿ ಸಾಕಷ್ಟು ಅಭಿವೃದ್ಧಿಯಾಗಿತ್ತು. ಈಗಿನ ಸದಸ್ಯರು ಈ ಏರಿಯಾ ಬಗ್ಗೆ ನಿರ್ಲಕ್ಷ್ಯ ವಹಿಸಿದ್ದಾರೆ. ರಸ್ತೆಯನ್ನು ಕಿತ್ತು ಹಲವು ತಿಂಗಳು ಕಳೆದರೂ ಡಾಂಬರ್ ಹಾಕಿಸಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
 

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು