ಮೈಸೂರಿನಲ್ಲಿ 60ಕ್ಕೂ ಹೆಚ್ಚು ಅಕ್ರಮ ಇಸ್ಪೀಟ್ ಜೂಜು ಅಡ್ಡೆ : ಆಪ್ ಮುಖಂಡ ತಮ್ಮಯ್ಯ ಆರೋಪ
ನವೆಂಬರ್ 05, 2022
ಮೈಸೂರು : ನಗರದಾದ್ಯಂತ ರಿಕ್ರಿಯೇಷನ್ ಕ್ಲಬ್ ಹೆಸರಲ್ಲಿ 60ಕ್ಕೂ ಹೆಚ್ಚು ಇಸ್ಪಿಟ್ ಜೂಜು ಅಡ್ಡೆಗಳು ಕಾರ್ಯನಿರ್ವಹಿಸುತ್ತಿದ್ದು, ಪೊಲೀಸರು ಇವುಗಳ ವಿರುದ್ಧ ಯಾವುದೇ ಕ್ರಮ ಜರುಗಿಸುತ್ತಿಲ್ಲ ಎಂದು ವಕೀಲ ಹಾಗೂ ಚಾಮುಂಡೇಶ್ವರಿ ಕ್ಷೇತ್ರದ ಆಮ್ ಆದ್ಮಿ ಪಕ್ಷದ ಸಂಭವನೀಯ ಅಭ್ಯರ್ಥಿ ಎಂ.ಪಿ.ತಮ್ಮಯ್ಯ ಆರೋಫಿಸಿದರು. ಮೈಸೂರು ಪತ್ರಕರ್ತರ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿ, ಕೂಡಲೇ ಸಹಕಾರ ಇಲಾಖೆ ಈ ರಿಕ್ರಿಯೇಷನ್ ಕ್ಲಬ್ ಗಳಿಗೆ ನೀಡಿರುವ ಪರವಾನಗಿ ರದ್ದು ಮಾಡಬೇಕು. ಜತೆಗೆ ಪೊಲೀಸರು ಈ ಜೂಜು ಅಡ್ಡೆಗಳ ಮೇಲೆ ದಾಳಿ ನಡೆಸಿ ಕಾನೂನು ಕ್ರಮ ಕೈಗೊಳ್ಳಬೇಕು ಇಲ್ಲದಿದ್ದಲ್ಲಿ ಪ್ರತಿಭಟನೆ ನಡೆಸಲಾಗುವುದು ಎಂದರು. ಅಲ್ಲದೇ ಕಳೆದ 2 ವರ್ಷಗಳ ಕೋವಿದ್ ಸಂಕಷ್ಟದಿಂದ ಮೈಸೂರು ಜನತೆ ಇನ್ನೂ ಚೇತರಿಸಿಕೊಂಡಿಲ್ಲ. ಆರ್ಥಿಕ ಮುಗ್ಗಟ್ಟು ಪರಿಹಾರವಾಗಿಲ್ಲ. ಈ ಕಾರಣದಿಂದ ಮಹಾನಗರಪಾಲಿಕೆ ಮೈಸೂರಿಗರ ನೀರಿನ ಬಿಲ್ ಮನ್ನಾ ಮಾಡಬೇಕು. ಕುಕ್ಕರಹಳ್ಳಿ ಕೆರೆ ಹೂಳು ತುಂಬಿಕೊಂಡು ಶಿಥಿಲಾವಸ್ಥೆಗೆ ತಲುಪಿದೆ. ಇನ್ನೊಂದು ಬಿಗಿಯಾದ ಮಳೆ ಬಂದರೆ ಕೆರೆಗೆ ಅಪಾಯವಿದೆ. ಇದಿಂದ ಸರಸ್ವತಿ ಪುರಂ ಮನೆಗಳಿಗೆ ಅಪಾಯ ಎದುರಾಗಲಿದ್ದು, ಕೂಡಲೇ ಹೂಳು ಎತ್ತಿಸಬೇಕು. ರಾಜ್ಯ ಸಾರಿಗೆ ಸಂಸ್ಥೆಯ ಡಿಸೇಲ್ ಖರೀದಿಯಲ್ಲಿ ಭಾರಿ ಭ್ರಷ್ಟಾಚಾರ ನಡೆಯುತ್ತಿದೆ. ಜತೆಗೆ ಉದ್ಯೋಗಿಗಳ ಶೋಷಣೆಯೂ ನಡೆಯುತ್ತಿದೆ ಇದು ತಪ್ಪಬೇಕೆಂದು ಆಗ್ರಹಿಸಿದರು. 15 ದಿನದೊಳಗೆ ಮೇಲಿನ ಎಲ್ಲಾ ನ್ಯೂನತೆಗಳನ್ನು ಸರ್ಕಾರ ಸರಿಮಾಡದಿದ್ದರೆ ಹೋರಾಟ ಹಮ್ಮಿಕೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು. ಇದೇ ಸಂದರ್ಭದಲ್ಲಿ ಪಕ್ಷ ಸೇರ್ಪಡೆಯದ ಹಲವರಿಗೆ ನೇಮಕಾತಿ ಪತ್ರ ವಿತರಣೆ ಮಾಡಲಾಯಿತು. ಮುಖಂಡರಾದ ರೇಣುಕಾ ಪ್ರಸಾದ್, ಮಾಚಯ್ಯ, ಹೂಟಗಳ್ಳಿ ರವಿ, ರಾಜಶೇಖರ ಇದ್ದರು.
0 ಕಾಮೆಂಟ್‌ಗಳು