2 ದಿನದೊಳಗೆ ಸಂಸದ ಪ್ರತಾಪ್ ಸಿಂಹ ವಿರುದ್ಧ ಸುಮೊಟೋ ಕೇಸ್ ದಾಖಲಿಸದಿದ್ದರೆ ಪೊಲೀಸ್ ಆಯುಕ್ತರ ಕಚೇರಿ ಮುಂದೆ ಧರಣಿ : ಗಿರೀಶ್ ಶಿವಾರ್ಚಕ
ನವೆಂಬರ್ 22, 2022
ಮೈಸೂರು : ಶಾಸಕ ರಾಮದಾಸ್ ಅನುದಾನದಲ್ಲಿ ನಿರ್ಮಿಸಿರುವ ಬಸ್ ನಿಲ್ದಾಣವನ್ನು ಜೆಸಿಬಿ ಯಂತ್ರ ತಂದು ಒಡೆದು ಹಾಕುತ್ತೇನೆ ಎಂದು ಹೇಳಿಕೆ ನೀಡಿರುವ ಸಂಸದ ಪ್ರತಾಪ್ ಸಿಂಹ ವಿರುದ್ಧ ಪೊಲೀಸರು 2 ದಿನದೊಳಗೆ ಸುಮೋಟೊ ಕೇಸ್ ದಾಖಲಿಸಬೇಕು ಇಲ್ಲದಿದ್ದರೇ ಮೈಸೂರು ಪೊಲೀಸ್ ಆಯುಕ್ತರ ಕಚೇರಿ ಮುಂದೆ ಧರಣಿ ನಡೆಸಲಾಗುವುದು ಎಂದು ಕರ್ನಾಟಕ ನ್ಯಾಯಪರ ವೇದಿಕೆ ರಾಜ್ಯಾಧ್ಯಕ್ಷ ಗಿರೀಶ್ ಶಿವಾರ್ಚಕ ಹೇಳಿದರು. ಜಿಲ್ಲಾ ಪತ್ರಕರ್ತರ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿ, ದೇಶದ ಕಾನೂನು ಎಲ್ಲರಿಗೂ ಒಂದೇ ಆಗಿದೆ. ಸಂಸದರ ಹೇಳಿಕೆ ಎರಡು ಕೋಮುಗಳ ನಡುವೆ ಸೌಹಾರ್ಧತೆಗೆ ಧಕ್ಕೆ ತರುವ ಹೇಳಿಕೆಯಾಗಿದ್ದು, ಭಾರತ ದಂಡ ಸಂಹಿತೆ ಕಲಂ 32 ಮತ್ತು 226 ರೀತ್ಯಾ ನ್ಯಾಯಾಲಯ ಸ್ವಯಂ ಪ್ರೇರಿತ ದೂರು ದಾಖಲಿಸುವ ಅವಕಾಶವಿದೆ. ಬಸ್ ನಿಲ್ದಾಣ ಸಾರ್ವಜನಿಕರ ತೆರಿಗೆ ಹಣದಿಂದ ನಿರ್ಮಾಣವಾಗಿರುವ ಸರ್ಕಾರಿ ಆಸ್ತಿಯಾಗಿದೆ. ಒಬ್ಬ ಸಂಸದರಾಗಿ ಪ್ರತಾಪ್ ಸಿಂಹ ಸರ್ಕಾರಿ ಕಟ್ಟಡ ಕೆಡವುದಾಗಿ ಹೇಳಿಕೆ ನೀಡುವುದು ಜನರನ್ನು ಕೆರಳಿಸಿ ಅಶಾಂತಿ ಸೃಷ್ಟಿಸುವ ಹೇಳಿಕೆಯಾಗಿದೆ. ಪೊಲೀಸರು ಕೂಡಲೇ ಸಂಸದರ ವಿರುದ್ಧ ದೂರು ದಾಖಲಿಸಬೇಕು ಮತ್ತು ಕಾನೂನು ಮತ್ತು ನ್ಯಾಯ ಎಲ್ಲರಿಗೂ ಒಂದೇ ಎಂಬುದನ್ನು ನಾಡಿನ ಜನತೆಗೆ ತೋರಿಸಬೇಕು ಎಂದರು. ಪ್ರತಾಪ್ ಸಿಂಹ ಮೈಸೂರಿನಲ್ಲಿ ಮನೆ ಕಟ್ಟಿಸುತ್ತಿದ್ದಾರೆ. ನಮ್ಮ ಕಣ್ಣಿಗೆ ಅದು ಬೇರೆ ರೀತಿ ಕಾಣುತ್ತಿದೆ ಒಡೆಸಿ ಹಾಕಿ ಎಂದರೇ, ಇವರು ಸುಮ್ಮನೆ ಬಿಡುತ್ತಾರಾ ? ಎಂದು ಪ್ರಶ್ನಿಸಿದ ಗಿರೀಶ್, ಜನಪರ ಚಳವಳಿ ನಡೆಸಿದವರನ್ನು ಬಂಧಿಸಲು 70-80 ಜನ ಪೊಲೀಸರು ಮತ್ತಿಗೆ ಹಾಕುತ್ತಾರೆ. ಆದರೇ, ಸರ್ಕಾರಿ ಆಸ್ತಿಯನ್ನು ಒಡೆದು ಹಾಕುವುದಾಗಿ ಸಾರ್ವಜನಿಕದ ಸಮ್ಮೂಖದಲ್ಲೇ ಹೇಳಿಕೆ ಕೊಟ್ಟರೂ ಸಂಸದರು ಎನ್ನುವ ಕಾರಣಕ್ಕೆ ಪೊಲೀಸರು ಕಾನೂನು ಜಾರಿ ಮಾಡುವುದರಲ್ಲಿ ತಾರತಮ್ಯ ತೋರುತ್ತಾರೆ ಎಂದು ಕಿಡಿ ಕಾರಿದರು. ಪತ್ರಿಕಾಗೋಷ್ಠಿಯಲ್ಲಿ ಮುಖಂಡರಾದ ರಾಕೇಶ್ ರವಿ, ಶಂಕರ್, ರಾಚಪ್ಪ, ಪುಟ್ಟಯ್ಯ, ಸೋಮಶೇಖರ್, ಪ್ರಕಾಶ್, ಮೋಹನ್ ಮತ್ತಿತರರು ಇದ್ದರು.
0 ಕಾಮೆಂಟ್‌ಗಳು