ಹಳೆ ಕೆಸರೆ ತ್ಯಾಜ್ಯ ವಿಲೇವಾರಿ ಘಟಕಕ್ಕೆ ಶಾಸಕ, ಮೇಯರ್ ಭೇಟಿ : ಡಿಸೆಂಬರ್ 15 ರೊಳಗೆ ಕೆಲಸ ಮುಗಿಸಲು ಗಡುವು ನೀಡಿದ ರಾಮದಾಸ್

ಮೈಸೂರು : ನಗರದ ಹಳೆ ಕೆಸರೆಯಲ್ಲಿ ನಿರ್ಮಾಣವಾಗುತ್ತಿರುವ ಬೃಹತ್ ತ್ಯಾಜ್ಯ ವಿಲೇವಾರಿ ಘಟಕಕ್ಕೆ ಶಾಸಕ ಎಸ್.ಎ.ರಾಮದಾಸ್, ಮೇಯರ್ ಶಿವಕುಮಾರ್ ಮತ್ತು ಉಪ ಮೇಯರ್ ಡಾ. ಡಿ.ರೂಪ ಮಂಗಳವಾರ ಅಧಿಕಾರಿಗಳ ಜತೆ ಭೇಟಿ ನೀಡಿ ಪರಿಶೀಲಿಸಿದರು.
ಸಿವಿಲ್ ಕಾಮಗಾರಿ ಇನ್ನೂ ಅಪೂರ್ಣಗೊಂಡಿರುವುದನ್ನು ಕಂಡು ಸಿಡಿಮಿಡಿಗೊಂಡ ಶಾಸಕ ರಾಮದಾಸ್ ಗುತ್ತಿಗೆದಾರರನ್ನು ತರಾಟೆಗೆ ತೆಗೆದುಕೊಂಡು ಡಿಸೆಂಬರ್ 15 ರೊಳಗೆ ಕಾಮಗಾರಿ ಮುಗಿಸುವಂತೆ ಗಡುವು ನೀಡಿದರು. 
ಇದೇ ವೇಳೆ ತ್ಯಾಜ್ಯ ವಿಲೇವಾರಿ ಘಟಕಕ್ಕೆ ಇನ್ನೂ ವಿದ್ಯುತ್ ಸಂಪರ್ಕ ನೀಡಿಲ್ಲದ ಕಾರಣ ಸ್ಥಳದಿಂದಲೇ ಸೆಸ್ಕ್ ಅಧಿಕಾರಿಗಳನ್ನು ಸಂಪರ್ಕಿಸಿ ಕೂಡಲೇ ಟಿಸಿ ಅಳವಡಿಸಿ ವಿದ್ಯುತ್ ಸಂಪರ್ಕ ನೀಡುವಂತೆ ಆದೇಶಿಸಿದರು. ಜತೆಗೆ ತ್ಯಾಜ್ಯ ವಿಲೇವಾರಿ ಘಟಕದ ಅಪೂರ್ಣ ಕಾಮಗಾರಿಗಳನ್ನು ನವೆಂಬರ್ 30 ರೊಳಗೆ ಪೂರೈಸಬೇಕು ಹಾಗೂ ಟ್ರಯಲ್ ನೀಡಬೇಕೆಂದು ತಾಕೀತು ಮಾಡಿದರು.

ಬಳಿಕ ಅವರು ಮಾಧ್ಯಮದವರೊಂದಿಗೆ ಮಾತನಾಡಿ, 2014 ಮತ್ತು 2015 ರಲ್ಲಿ ಮೈಸೂರಿಗೆ ಸ್ವಚ್ಛ ನಗರ ಎಂಬ ಬಿರುದು ಲಭಿಸಿತ್ತು. ಈ ನಿಟ್ಟಿನಲ್ಲಿ ದಿನನಿತ್ಯ ಸಂಗ್ರಹವಾಗುವ ನೂರಾರು ಟನ್ ಕಸವನ್ನು ನಗರದ 18 ಕಡೆ ವಿಲೇವಾರಿ ಮಾಡುವ ಮೂಲಕ ಕಸದಿಂದ ಗೊಬ್ಬರ ಮತ್ತಿತರ ಲಾಭದಾಯಕ ಉತ್ಪನ್ನಗಳನ್ನು ಉತ್ಪಾದಿಸುವ ಯೋಜನೆ ಹಮ್ಮಿಕೊಂಡಿದ್ದೇವೆ. ಹಳೆ ಕೆಸರೆ ಮತ್ತು ರಾಯನಕೆರೆ ಬಳಿ ಆಧುನಿಕ ತಂತ್ರಜ್ಞಾನ ಬಳಸಿ ಬೃಹತ್ ತ್ಯಾಜ್ಯ ವಿಲೇವಾರಿ ಘಟಕಗಳನ್ನು ನಿರ್ಮಿಸಲಾಗಿದೆ. ಇದರ ತುರ್ತು ಆರಂಭಕ್ಕೆ ಅಗತ್ಯವಾದ ಕ್ರಮ ಕೈಗೊಳ್ಳಲಾಗಿದೆ. ಇದರಿಂದ ಸುಯೇಜ್ ಫಾರಂನಲ್ಲಿ ಸಂಗ್ರಹವಾಗಿರುವ ಸುಮಾರು 7 ಲಕ್ಷ ಟನ್ ಕಸವನ್ನು ವಿಲೆ ಮಾಡಲಾಗುವುದು ಎಂದರು.
ಮೇಯರ್ ಶಿವಕುಮಾರ್ ಮಾತನಾಡಿ, ಸುಯೇಜ್ ಫಾರಂನಲ್ಲಿ ಸಂಗ್ರಹವಾಗಿರುವ ಬೃಹತ್ ಕಸವನ್ನು ಕೂಡಲೇ ವಿಲೇ ಮಾಡುವ ಸವಾಲು ನಮ್ಮ ಮುಂದಿದೆ. ಈಗಾಗಲೇ ಈ ಸ್ಥಳದ ಕಾಮಗಾರಿ ಮುಗಿಯಬೇಕಿತ್ತು. ತಾಂತ್ರಿಕ ಕಾರಣದಿಂದ ತಡವಾಗಿದೆ. ಈ ಘಟಕ ಸ್ಥಾಪನೆಯಿಂದ ಗೊಬ್ಬರ ಮತ್ತಿತರ ಉಪ ಉತ್ಪನ್ನಗಳನ್ನು ಕಸದಿಂದ ಉತ್ಪದಿಸಲಾಗುವುದು. ಇದರಿಂದ ಮೈಸೂರು ಮಹಾನಗರ ಪಾಲಿಕೆಗೆ ಆರ್ಥಿಕವಾಗಿಯೂ ಆದಾಯ ಸಂಗ್ರಹವಾಗುವ ನಿರೀಕ್ಷೆ ಇದೆ ಎಂದರು.  




ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು