ಭಾರತೀಯರೆಲ್ಲರೂ ಮೂಲದಲ್ಲಿ ಬೌದ್ಧರೇ ಆಗಿದ್ದರು : ಶ್ರೀ ಜ್ಞಾನ ಪ್ರಕಾಶ ಸ್ವಾಮೀಜಿ
ಅಕ್ಟೋಬರ್ 30, 2022
ಸರ್ದಾರ್ ವಲ್ಲಭಬಾಯಿ ಪಟೇಲ್ ಮತ್ತು ಐಪಿಎಸ್ ನಗರದಲ್ಲಿ ಜೈ ಭೀಮ್ ಬಂಧು ಬಳಗ ಸಂಘದ ನೂತನ ಕಚೇರಿ ಉದ್ಘಾಟನೆ
ಮೈಸೂರು : ಭಾರತೀಯರೆಲ್ಲರೂ ಮೂಲದಲ್ಲಿ ಬೌದ್ಧರೇ ಆಗಿದ್ದು, ಪ್ರತಿಯೊಂದು ಗ್ರಾಮದಲ್ಲಿರುವ ಅರಳಿ ಮರಗಳು, ಅರಳಿ ಕಟ್ಟೆಗಳೇ ಇದಕ್ಕೆ ಸಾಕ್ಷಿಯಾಗಿವೆ. ಬುದ್ಧರಿಗೆ ಜ್ಞಾನೋದಯವಾದುದ್ದು, ಅರಳಿ ಮರದ ಕೆಳಗೆ ಆದ್ದರಿಂದ ಜ್ಞಾನ ಅರಳಿದ ಮರವನ್ನು ಅರಳಿಮರ ಎನ್ನುತ್ತೇವೆ ಎಂದು ಮೈಸೂರು ಉರಿಲಿಂಗ ಪೆದ್ದಿಮಠದ ಶ್ರೀ ಜ್ಞಾನಪ್ರಕಾಶ ಸ್ವಾಮೀಜಿ ಹೇಳಿದರು. ನಗರದ ಸರ್ದಾರ್ ವಲ್ಲಭಬಾಯಿ ಪಟೇಲ್ ಮತ್ತು ಐಪಿಎಸ್ ನಗರದಲ್ಲಿ ಜೈ ಭೀಮ್ ಬಂಧು ಬಳಗ ಸಂಘದ ನೂತನ ಕಚೇರಿಯನ್ನು ಉದ್ಘಾಟಿಸಿ ಬಳಿಕ ವೇದಿಕೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಜೈ ಭೀಮ್ ಹೆಸರಲ್ಲಿ ಸಂಘಟನೆ ಮಾಡಿರುವುದು ಸಂತೋಷ ತಂದಿದೆ. ಜೈ ಭೀಮ್ ಎನ್ನುವುದು ವಿಜಯದ ಸಂಕೇತ. 1818ರಲ್ಲಿ 500 ಜನ ಮಹರ್ ಸೈನಿಕರು 25 ಸಾವಿರ ಪೇಶ್ವೆಗಳ ತಲೆ ಕಡಿದು ಊಟವಿಲ್ಲದೇ ಭೀಮಾ ನದಿಯ ನೀರು ಕುಡಿದು ಜೈಭೀಮ್ ಎಂದು ಮೊದಲ ಬಾರಿಗೆ ಘೋಷಣೆ ಕೂಗಿದರು. ಆದರೆ, ಇಲ್ಲಿ ಜೈ ಭೀಮ್ ಅನ್ನುವುದು ನಂತರ ಅಲ್ಲಿ ವಿವಿಧ ದೇವರುಗಳಿಗೆ ಕುರಿ ಕೋಳಿ ಬಲಿ ಕೊಡುವುದು, ಹರಕೆ ತೀರಿಸುವುದು, ಮಾಡುವುದು ತಪ್ಪು ಇದು ಜೈ ಭೀಮ್ ಘೋಷಣೆಗೆ ನಾವು ಮಾಡುವ ದ್ರೋಹ ಎಂದರು.
ಬುದ್ಧ ಎಂದರೆ ಜ್ಞಾನ, ಪ್ರಜ್ಞೆ, ಕರುಣೆ, ಮೈತ್ರಿ, ಸಹೋದರತೆಯಾಗಿದೆ. ಬುದ್ಧಿ ಯಾರಿಗಿದೆಯೋ ಅವರು ಬುದ್ಧರು. ಇಂದು ಜಗತ್ತೇ ಬುದ್ಧರ ಕಡೆ ಮುಖ ಮಾಡಿದೆ. ಜೈ ಭೀಮ್ ಎಂದರೇ ಜಗತ್ತಿನ 198 ರಾಷ್ಟ್ರಗಳು ಎದ್ದು ನಿಂತು ನಮನ ಮಾಡುತ್ತವೆ. ಜೈ ಭೀಮ್ ಎನ್ನುವ ಹೆಸರು ಸ್ಪೂರ್ತಿಯ ಸಂಕೇತವಾಗಿದೆ. ಇಂತಹ ಪವಿತ್ರ ಹೆಸರನ್ನಿಟ್ಟಿರುವ ಸಂಘಟನೆಗಳು ಸಮುದಾಯದ ಒಳಿತಿಗಾಗಿ ಶ್ರಮಿಸಬೇಕು. ಬಾಬಾ ಸಾಹೇಬರು ಒಂದು ಜಾತಿ ಅಥವಾ ಧರ್ಮಕ್ಕೆ ಕೇಲಸ ಮಾಡಿಲ್ಗ. ದೇಶದ ಎಲ್ಲ ವರ್ಗದ ಜನರ ಶ್ರೇಯೋಭಿವೃದ್ಧಿಗೆ ತಮ್ಮ ಬದುಕು ಸವೆಸಿದ್ದಾರೆ ಅವರ ಮಾರ್ಗದಲ್ಲಿ ನಾವು ನಡೆಯಬೇಕಿದೆ ಎಂದರು.
ಡಾ.ಅಂಬೇಡ್ಕರ್ ಇಲ್ಲದ ಭಾರತ ಶೂನ್ಯ ಎಂದು ಪಶ್ಚಿಮ ಬಂಗಾಳದ ನ್ಯಾಯಮೂರ್ತಿಗಳಾದ ಛಾಗ್ಲಾ ಅವರು ಹೇಳಿದ್ದಾರೆ. ಡಾ.ಅಂಬೇಡ್ಕರ್ ಕೊಟ್ಟ ಮೀಸಲಾತಿ ಎಂಬ ಭಿಕ್ಷೆಯಿಂದ ಲಾಭ ಪಡೆದ ಎಲ್ಲ ವರ್ಗದ ಜನರು ಇಂದು ಕಾರಿನಲಿ ತಿರುಗಾಡುತ್ತಾ ಬಂಗಲೆಯಲ್ಲಿ ವಾಸ ಮಾಡುತ್ತಿದ್ದಾರೆ. ಆದರೆ, ಅಂತಹವರು ಸಮುದಾಯದತ್ತ ತಿರುಗಿ ನೋಡುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು. ಪ್ರಸ್ತುತ ಆಡಳಿತ ನಡೆಸುತ್ತಿರುವ ಬಿಜೆಪಿ ಸರ್ಕಾರದ ಎಸ್‍ಸಿ. ಎಸ್‍ಟಿ ವಿರೋಧಿ ನೀತಿಯಿಂದ ಮೈಸೂರಿನ ಯುವರಾಜ ಮತ್ತು ಮಹಾರಾಜ ಕಾಲೇಜಿನಲ್ಲಿ ಒಂದು ಸಾವಿರ ಎಸ್‍ಸಿ, ಎಸ್‍ಟಿ ವಿಧ್ಯಾರ್ಥಿಗಳಿಗೆ ಶುಲ್ಕ ಪಾವತಿಸಿಲ್ಲ ಎಂದು ಪ್ರವೇಶ ನಿರಾಕರಿಸಲಾಗಿದೆ. ಇದುವರೆಗೂ ಆಡಳಿತ ನಡೆಸುತ್ತಿದ್ದ ಸರ್ಕಾರಗಳು ಎಸ್‍ಸಿ, ಎಸ್‍ಟಿ ವಿಧ್ಯಾರ್ಥಿಗಳಿಗೆ ಪ್ರವೇಶ ನೀಡಿದ ನಂತರ ಸರ್ಕಾರದಿಂದ ಶುಲ್ಕ ಭರಿಸಲಾಗುತ್ತಿತ್ತು. ಆದರೆ ನಮ್ಮ ಸಮುದಾಯವನ್ನು ಶಿಕ್ಷಣದಿಂದ ವಚಿತರನ್ನಾಗಿ ಮಾಡುವ ದುರುದ್ಧೇಶದಿಂದ ಈ ನೀತಿಯನ್ನು ಅನುಸರಿಸಲಾಗುತ್ತಿದೆ. ಅಂಬೇಡ್ಕರ್ ಅವರ ಮೀಸಲಾತಿಯಿಂದ ಲಾಭ ಪಡೆದು ಐಶಾರಾಮಿ ಜೀವನ ನಡೆಸುತ್ತಿರುವ ಯಾರೋಬ್ಬರೂ ಈ ವಿಧ್ಯಾರ್ಥಿಗಳ ನೆರವಿಗೆ ಧಾವಿಸಿಲ್ಲದಿರುವುದು ವಿಷಾದದ ಸಂಗತಿ. ಈ ನಿಟ್ಟಿನಲ್ಲಿ ಜೈ ಭೀಮ್ ಬಂಧು ಬಳಗ ಸಂಘಟನೆ ಬಡ ಮಕ್ಕಳ ಶಿಕ್ಷಣಕ್ಕೆ ಹೆಚ್ಚು ಮಹತ್ವ ನೀಡಬೇಕೆಂದು ಸಲಹೆ ನೀಡಿದರು.
``ಕಾಲೇಜು ಶುಲ್ಕ ಪಾವತಿಸಿಲ್ಲ ಎಂದು ಪರಿಶಿಷ್ಟ ಜಾತಿ, ಪಂಗಡದ ಒಂದು ಸಾವಿರ ವಿದ್ಯಾರ್ಥಿಗಳನ್ನು ಕಾಲೇಜಿಗೆ ಪ್ರವೇಶ ನಿರಾಕರಿಸಲಾಗಿದ್ದು, ಸಮುದಾಯದ ಮುಖಂಡರು ಈ ಬಗ್ಗೆ ಚಿಂತಿಸಬೇಕಿದೆ’’
0 ಕಾಮೆಂಟ್‌ಗಳು