ಖ್ಯಾತ ಸ್ಯಾಕ್ಸೋಫೋನ್ ವಾದಕ ನಿಂಗರಾಜು ಪಾಂಡವ ನಿಧನ

ಅಮೆರಿಕಾ, ಆಸ್ಟ್ರೇಲಿಯಾದಲ್ಲಿ ಪಾಂಡಿತ್ಯ ಪ್ರದರ್ಶನ ನೀಡಿದ್ದ ಕಲಾವಿದ


ಪಾಂಡವಪುರ : ತಾಲ್ಲೂಕಿನ ಹಾರೋಹಳ್ಳಿ ಗ್ರಾಮದ ಖ್ಯಾತ ಸ್ಯಾಕ್ಸೋಫೋನ್ ಕಲಾವಿದ ನಿಂಗರಾಜು(೪೧) ಸೋಮವಾರ ರಾತ್ರಿ ನಿಧನರಾದರು.
ಕಳೆದ ಮರ‍್ನಾಲ್ಕು ದಿನಗಳಿಂದ ಅಸ್ವಸ್ಥರಾಗಿದ್ದ ಅವರನ್ನು ಮೈಸೂರಿನ ಕೆ.ಆರ್.ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೆ ಅವರು ಮೃತಪಟ್ಟರು. 
ಸ್ಯಾಕ್ಸೋಫೋನ್ ನುಡಿಸುವಲ್ಲಿ ಅಪಾರ ಪಾಂಡಿತ್ಯ ಗಳಿಸಿದ್ದ ನಿಂಗರಾಜು, ನಾದ ಚಿಕಿತ್ಸೆ ಪ್ರಯೋಗ ನಡೆಸಿದ್ದರು. ಒರಿಸ್ಸಾದಲ್ಲಿ ನಡೆದ ರಾಷ್ಟ್ರೀಯ ಸಂಗೀತ ಸಮ್ಮೇಳನದಲ್ಲಿ ಭಾಗವಹಿಸಿದ್ದರು.
೨೦೦೪ ರಲ್ಲಿ ಆಸ್ಟ್ರೇಲಿಯಾಕ್ಕೂ ಹೋಗಿ ತಮ್ಮ ಪಾಂಡಿತ್ಯ ಪ್ರದರ್ಶಿಸಿದ್ದ ನಿಂಗರಾಜು ಅವರನ್ನು ಅಮೇರಿಕಾದ ಅಕ್ಕ ಸಮ್ಮೇಳನಕ್ಕೆ ಆಯ್ಕೆ ಮಾಡಲಾಗಿತ್ತು.
ಮಂಡ್ಯ ಜಿಲ್ಲಾ ಕನ್ನಡ ರಾಜ್ಯೋತ್ಸವ ಪ್ರಶಸ್ತಿ, ಶ್ರೀ ದುರ್ದಂಡೇಶ್ವರ ಮಹಂತ ಶಿವಯೋಗಿಗಳ ಮಠದಿಂದ ನೀಡಲಾಗುವ ಪ್ರತಿಷ್ಠಿತ ಕಾವೇರಿ ಪ್ರಶಸ್ತಿ, ಕನಕ ಪ್ರಶಸ್ತಿ ಸೇರಿದಂತೆ ಹಲವಾರು ಪ್ರಶಸ್ತಿಗಳು ನಿಂಗರಾಜುಗೆ ಲಭಿಸಿದ್ದವು.
ನಿಂಗರಾಜು ಹಲವಾರು ಕಿರಿಯ ಕಲಾವಿದರಿಗೆ ಮಾರ್ಗದರ್ಶಕರಾಗಿದ್ದರು. ದೇಶಾದ್ಯಂತ ಪ್ರತಿಷ್ಠಿತ ಸಮ್ಮೇಳನಗಳು ಮತ್ತು ಕಾರ್ಯಕ್ರಮಗಳಲ್ಲಿ ತಮ್ಮ ತಂಡದೊಂದಿಗೆ ಭಾಗವಹಿಸಿದ್ದರು.
ಮೃತರಿಗೆ ಇಬ್ಬರು ಹೆಣ್ಣುಮಕ್ಕಳಿದ್ದು, ಮಂಗಳವಾರ ಮದ್ಯಾಹ್ನ ೧೨ ಗಂಟೆಗೆ ಹಾರೋಹಳ್ಳಿ ಗ್ರಾಮದಲ್ಲಿ ಅಂತ್ಯಸಂಸ್ಕಾರ ನೆರವೇರಿಸಲಾಗುವುದು ಎಂದು ಕುಟುಂಬದ ಮೂಲಗಳು ತಿಳಿಸಿವೆ. 

 

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು