ಡಾ.ಎನ್.ಎಸ್.ಇಂದ್ರೇಶ್ ನೇತೃತ್ವದಲ್ಲಿ ಪಾಂಡವಪುರದಲ್ಲಿ ಶ್ರೀ ಮಹದೇಶ್ವರ ಜ್ಯೋತಿ ಸ್ವಾಗತಕ್ಕೆ ಸಿದ್ಧತೆ


ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಶ್ರೀ ಮಹದೇಶ್ವರ ಜ್ಯೋತಿಯನ್ನು ಪಟ್ಟಣಕ್ಕೆ ಬರಮಾಡಿಕೊಳ್ಳಲು ಕೋರಿಕೆ

-ನಜೀರ್ ಅಹಮದ್, ಪಾಂಡವಪುರ

 ಪಾಂಡವಪುರ : ಜಿಲ್ಲೆಯ ಕೆ.ಆರ್.ಪೇಟೆ ತಾಲೂಕಿನ ಅಂಬಿಗರಹಳ್ಳಿ ಬಳಿಯಿರುವ ತ್ರಿವೇಣಿ ಸಂಗಮದ ಕಾವೇರಿ, ಹೇಮಾವತಿ ಮತ್ತು ಲಕ್ಷ್ಮಣತೀರ್ಥ ನದಿಗಳ ಸಂಗಮ ಸ್ಥಳದಲ್ಲಿ ಅ.13, 14, 15 ಹಾಗೂ 16ರಂದು ನಡೆಯಲಿರುವ ಮಹಾ ಕುಂಭಮೇಳ ಅಂಗವಾಗಿ ಹೊರಟಿರುವ ಶ್ರೀ ಮಲೈಮಹದೇಶ್ವರ ಮಹಾಜ್ಯೋತಿಯು ಅ.9 ಹಾಗೂ 10ರಂದು ಮೇಲುಕೋಟೆ ವಿಧಾನಸಭಾ ಕ್ಷೇತ್ರಕ್ಕೆ ಆಗಮಿಸುತ್ತಿರುವುದರಿಂದ ಅದ್ದೂರಿಯಾಗಿ ಸ್ವಾಗತಿಸಿಕೊಳ್ಳಲಾಗುವುದು ಎಂದು ಬಿಜೆಪಿ ಮುಖಂಡ, ಪರಿವರ್ತನಾ ಟ್ರಸ್ಟ್ ಅಧ್ಯಕ್ಷ ಡಾ.ಎನ್.ಎಸ್.ಇಂದ್ರೇಶ್ ಹೇಳಿದರು.
ಮಹಾಕುಂಭಮೇಳದ ಪ್ರಯುಕ್ತ ಮಂಡ್ಯ, ಮೈಸೂರು, ಚಾಮರಾಜನಗರ ಜಿಲ್ಲೆಗಳಿಂದ ಮಹಾಜ್ಯೋತಿ ರಥವು 3 ತಂಡಗಳಾಗಿ ಹೊರಟಿದ್ದು, ಮಹದೇಶ್ವರಬೆಟ್ಟದಲ್ಲಿ ಸಚಿವರು ಮಹಾಜ್ಯೋತಿಗೆ ಚಾಲನೆ ನೀಡಿದ್ದಾರೆ. ಅ.9ರಂದು ಈ ಮಹಾಜ್ಯೋತಿಯು ಮೇಲುಕೋಟೆ ವಿಧಾನಸಭಾ ಕ್ಷೇತ್ರದ ದುದ್ದ ಹೋಬಳಿಯ ಎಚ್.ಮಲ್ಲಿಗೆರೆ, ಶಿವಳ್ಳಿ, ಚಂದಗಾಲು ಮಾರ್ಗದಲ್ಲಿ ಸಂಚರಿಸಿ ಶ್ರೀರಂಗಪಟ್ಟಣ ತಲುಪಲಿದೆ.
ಅ.10ರಂದು ಬೆಳಗ್ಗೆ 10ಕ್ಕೆ ಪಾಂಡವಪುರ ಸಹಕಾರ ಸಕ್ಕರೆ ಕಾರ್ಖಾನೆ (ನಿರಾಣಿ ಶುಗರ್ಸ್) ಬಳಿ ಆಗಮಿಸಲಿರುವ ಮಹಾಜ್ಯೋತಿಯನ್ನು ಅದ್ದೂರಿಯಾಗಿ ಸ್ವಾಗತಿಸಿಕೊಳ್ಳಲಾಗುವುದು. ಬಳಿಕ ಜ್ಯೋತಿಯು ಪಿಎಸ್‍ಎಸ್‍ಕೆಯಿಂದ ಆರತಿ ಉಕ್ಕಡ, ಕ್ಯಾತನಹಳ್ಳಿ, ಹರವು, ಅರಳಕುಪ್ಪೆ, ಕಟ್ಟೇರಿ, ಹಾಗನಹಳ್ಳಿ, ಬೇಬಿ, ಕೆ.ಬೆಟ್ಟಹಳ್ಳಿ, ಗುಮ್ಮನಹಳ್ಳಿ, ಚಿನಕುರಳಿ, ನಾರಾಯಣಪುರ, ಜಕ್ಕನಹಳ್ಳಿ, ಕದಲಗೆರೆ ಸೇರಿದಂತೆ ಇತರೆ ಗ್ರಾಮಗಳ ಮಾರ್ಗಗಳಲ್ಲಿ ಸಂಚರಿಸಿ ಮೇಲುಕೋಟೆಗೆ ತಲುಪಿ ಅಲ್ಲಿಯೇ ತಂಗಲಿದೆ ಎಂದರು.
ಪ್ರತಿ 9 ವರ್ಷಕ್ಕೊಮ್ಮೆ ಮಹಾಕುಂಭಮೇಳ ನಡೆಯಲಿದ್ದು, ಸುಮಾರು 6ರಿಂದ 7ಲಕ್ಷ ಜನರು ಸೇರಲಿದ್ದಾರೆ. ಇದೊಂದು ಪುಣ್ಯ ಕಾರ್ಯವಾಗಿರುವ ಹಿನ್ನೆಲೆಯಲ್ಲಿ ಜನರು ಜಾತ್ಯಾತೀತ, ಪಕ್ಷತೀತವಾಗಿ ಪಾಲ್ಗೊಂಡು ಮಹದೇಶ್ವರನ ಕೃಪೆಗೆ ಪಾತ್ರರಾಗಬೇಕು ಎಂದು ಮನವಿ ಮಾಡಿದರು.


ಬಿಜೆಪಿ ಮುಖಂಡ, ಪರಿವರ್ತನಾ ಟ್ರಸ್ಟ್ ಅಧ್ಯಕ್ಷ ಡಾ.ಎನ್.ಎಸ್.ಇಂದ್ರೇಶ್ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.
ಅ.16ರಂದು ಗಣಪತಿ ವಿಸರ್ಜನಾ ಕಾರ್ಯಕ್ರಮ : 

ಇದೇ ಅ.16ರಂದು ಮಧ್ಯಾಹ್ನ 2ಕ್ಕೆ ಪಟ್ಟಣದ ಹಳೆಬಸ್‍ನಿಲ್ದಾಣದ ವಿನಾಯಕ ಸೇವಾ ಸಮಿತಿಯಿಂದ ಸುಮಾರು ಒಂದೂವರೆ ತಿಂಗಳವರೆಗೆ ಪ್ರತಿಷ್ಠಾಪಿಸಿದ್ದ ದೊಡ್ಡ ಗಣಪತಿ ವಿಸರ್ಜನಾ ಉತ್ಸವ ಕಾರ್ಯಕ್ರಮ ಆಯೋಜಿಸಲಾಗಿದೆ. ವಿವಿಧ ಸಾಂಸ್ಕøತಿಕ ಹಾಗೂ ಜಾನಪದ ಕಲಾತಂಡಗಳ ಮೆರವಣಿಗೆ ಮೂಲಕ ಬಹಳ ವಿಜೃಂಭಣೆಯಿಂದ ಗಣಪತಿ ವಿಸರ್ಜಿಸಲಾಗುತ್ತದೆ. ಹೀಗಾಗಿ ಪಟ್ಟಣದ ನಾಗರಿಕರು ಅಂಗಡಿ, ಮುಂಗಟ್ಟುಗಳನ್ನು ಬಂದ್ ಮಾಡಿ ಉತ್ಸವದಲ್ಲಿ ಭಾಗವಹಿಸುವ ಮೂಲಕ ಯಶಸ್ವಿಗೊಳಿಸಬೇಕು ಎಂದರು. 
ಗೋಷ್ಠಿಯಲ್ಲಿ ಗ್ರಾ.ಪಂ ಸದಸ್ಯ ಬಳೇಅತ್ತಿಗುಪ್ಪೆ ರೇವಣ್ಣ, ಬಿಜೆಪಿ ಮುಖಂಡರಾದ ರಾಜೀವ್ ತಮ್ಮಣ್ಣ, ಬಳಘಟ್ಟ ಅಶೋಕ್, ಎಲೆಕೆರೆ ಈರೇಗೌಡ, ಚಿಕ್ಕಮರಳಿ ನವೀನಕುಮಾರ್ ಇತರರಿದ್ದರು.
 



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು