ಮೌಲಾನಾ ಆಜಾದ್ ಮಾದರಿ ಶಾಲೆಗಳನ್ನು ಮುಚ್ಚಬಾರದು :ಎಐಡಿಎಸ್‌ಒ


 ಮೈಸೂರು : ರಾಜ್ಯ ಸರ್ಕಾರ ಕಳೆದ ೪ ವರ್ಷಗಳ ಹಿಂದೆ ಪ್ರಾರಂಭಿಸಿದ್ದ ೨೦೦ ಮೌಲಾನಾ ಆಜಾದ್ ಮಾದರಿ ಶಾಲೆಗಳನ್ನು ಅನುದಾನದ ಕೊರತೆಯ ನೆಪವೊಡ್ಡಿ ಮುಚ್ಚಲು ಮುಂದಾಗುತ್ತಿರುವುದು ದುರದೃಷ್ಟಕರವಾಗಿದ್ದು, ೩೯ ಸಾವಿರ ವಿದ್ಯಾರ್ಥಿಗಳ ವ್ಯಾಸಂಗಕ್ಕೆ ಅಡ್ಡಿಯಾಗಿದೆ. ಯಾವುದೇ ಕಾರಣಕ್ಕೂ ಈ ಶಾಲೆಗಳನ್ನು ಮುಚ್ಚಬಾರದು ಎಂದು ಎಐಡಿಎಸ್‌ಓ ಜಿಲ್ಲಾ ಕಾರ್ಯದರ್ಶಿ ಚಂದ್ರಕಲಾ ಸರ್ಕಾರವನ್ನು ಒತ್ತಾಯಿಸಿದ್ದಾರೆ. 

ಮದರಸಗಳಿಗಿಂತ ಉತ್ತಮ ಶಿಕ್ಷಣವನ್ನು ಒದಗಿಸುತ್ತೇವೆ ಎಂಬ ವಾದದೊಂದಿಗೆ ೨೦೧೮-೧೯ರಲ್ಲಿ ಪ್ರಾರಂಭವಾದ ಈ ಶಾಲೆಗಳಿಗೆ ಈಗ ಅವುಗಳ ನಿರ್ವಹಣೆಗೆ ಹಣ ನೀಡಲು ಸಾಧ್ಯವಿಲ್ಲ ಎಂಬ ಕಾರಣಕ್ಕೆ ಸರ್ಕಾರವೇ ಸುಮಾರು ೨೨ ಶಾಲೆಗಳನ್ನು ಮುಚ್ಚಲು ಕೈಗೊಂಡಿರುವ ನಿರ್ಧಾರವನ್ನು ವಾಪಸ್ ಪಡೆಯಬೇಕೆಂದು ಒತ್ತಾಯಿಸಿರುವ ಅವರು, 

ಈ ಶಾಲೆಗಳಲ್ಲಿ ಬಡ, ಅಲ್ಪಸಂಖ್ಯಾತ ವಿದ್ಯಾರ್ಥಿಗಳು ಓದುತ್ತಿದ್ದು, ಪ್ರತಿ ಶಾಲೆಯಲ್ಲೂ ೧೦೦ ರಿಂದ ೧೫೦ ಕ್ಕೂ ಹೆಚ್ಚು ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ. ಹೀಗಿರುವಾಗ, ಶಾಲೆಗಳಿಗೆ ಬೀಗ ಹಾಕಿ, ಆ ವಿದ್ಯಾರ್ಥಿಗಳ ವ್ಯಾಸಂಗಕ್ಕೆ ಅಂತ್ಯ ಹಾಕುವಂತಹ ನಿರ್ಧಾರ ಮಾಡಿರುವುದು ಅತ್ಯಂತ ಖಂಡನೀಯ ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. 

ರಾಜ್ಯದಲ್ಲಿ ೧೩,೮೦೦ ಸರ್ಕಾರಿ ಶಾಲೆಗಳನ್ನು ವಿಲೀನದ ಹೆಸರಿನಲ್ಲಿ ಮುಚ್ಚುವ ಸರ್ಕಾರದ ನಿರ್ಧಾರದ ಕುರಿತು ಈಗಾಗಲೇ ಸಾಕಷ್ಟು ವಿರೋಧಗಳು, ಚಳುವಳಿಗಳು ನಡೆದಿವೆ. ಲಕ್ಷಾಂತರ ವಿದ್ಯಾರ್ಥಿಗಳು ಸರ್ಕಾರಿ ಶಾಲೆ ಉಳಿಸುವ ಆಂದೋಲನದ ಭಾಗವಾಗಿದ್ದಾರೆ. ದಾಖಲಾತಿ ಕಡಿಮೆ ಅಥವಾ ಅನುದಾನ ನೀಡಲು ಹಣದ ಕೊರತೆ ಎಂಬ ನೆಪದಲ್ಲಿ ಸರ್ಕಾರಿ ಶಾಲೆಗಳನ್ನು ಮುಚ್ಚುವುದೆ ಸರ್ಕಾರದ ನೀತಿಯಾಗಿ ಬಿಟ್ಟಿದೆ. ಈಗ ೨೨ ಶಾಲೆಗಳನ್ನು ಮುಚ್ಚಲು ನಿರ್ಧಾರ ಮಾಡಿರುವುದು ಅವರ ನೀತಿಗೆ ತಕ್ಕಂತೆ ಇದೆ.

ಶಿಕ್ಷಣದ ಸಂಪೂರ್ಣ ಆರ್ಥಿಕ ಜವಾಬ್ದಾರಿಯನ್ನು ಸರ್ಕಾರ ವಹಿಸಿಕೊಳ್ಳಬೇಕು ಎಂಬುದು ದೇಶದ ಸ್ವಾತಂತ್ರ‍್ಯ ಚಳುವಳಿ, ನವೋದಯ ಚಳುವಳಿಯ ಆಶಯವಾಗಿತ್ತು. ಈ ಆಶಯಗಳನ್ನು ಸ್ವಾತಂತ್ರ‍್ಯ ನಂತರ ಅಧಿಕಾರಕ್ಕೆ ಬಂದ ಎಲ್ಲ ಸರ್ಕಾರಗಳು ಗಾಳಿಗೆ ತೂರಿ, ಸರ್ಕಾರವೆ ನಿಂತು ಸರ್ಕಾರಿ ಶಾಲೆಗಳನ್ನು ಮುಚ್ಚುವಂತಹ ದಾರಿ ಹಿಡಿದಿರುವುದು ಅತ್ಯಂತ ವಿಷಾದನೀಯ. ಈ ಹಿನ್ನೆಲೆಯಲ್ಲಿ, ರಾಜ್ಯದಲ್ಲಿ ಒಂದೇ ಒಂದು ಸರ್ಕಾರಿ ಶಾಲೆಯನ್ನು ಸಹ ಮುಚ್ಚಬಾರದು, ಬದಲಿಗೆ ಶಾಲೆಯ ಉತ್ತಮ ನಿರ್ವಹಣೆಗೆ ಸರ್ಕಾರ ಅನುದಾನ ಬಿಡುಗಡೆ ಮಾಡಬೇಕು ಎಂದು ಅವರು ಆಗ್ರಹಿಸಿದ್ದು,  ಶಾಲೆ ಮುಚ್ಚಲು ನಿರ್ಧಾರ ಮಾಡಿದರೆ, ವಿದ್ಯಾರ್ಥಿಗಳು ಹೋರಾಟವನ್ನು ಮತ್ತಷ್ಟು ತೀವ್ರಗೊಳಿಸಲು ಎಐಸಿಎಸ್‌ಓ ಮುಂದಾಗಲಿದೆ ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು