ಸರ್ಕಾರಿ ವಾಲ್ಮೀಕಿ ಜಯಂತಿಗೆ ಸಾಮೂಹಿಕ ಬಹಿಷ್ಕಾರ : ಪಾಳ್ಯಕೃಷ್ಣ

 ವರದಿ-ಶಾರುಕ್ ಖಾನ್ ಹನೂರು 
ಹನೂರು : ಮೀಸಲಾತಿ ಹೆಚ್ಚಳಕ್ಕೆ ಶ್ರೀ ಪ್ರಸನ್ನಾನಂದಪುರಿ ಸ್ವಾಮೀಜಿಗಳು ೨೬೦ ಕ್ಕೂ ಹೆಚ್ಚು ದಿನಗಳಿಂದ ನಿರಂತರವಾಗಿ ಧರಣಿ ನಡೆಸುತ್ತಿದ್ದರೂ ಸರ್ಕಾರ ಸ್ಪಂದಿಸುತ್ತಿಲ್ಲ. ಇದಕ್ಕಾಗಿ ವಾ ಲ್ಮೀಕಿ ಸಮುದಾಯದವರು ಸರ್ಕಾರದಿಂದ ಆಚರಿಸಲಾಗುವ ವಾಲ್ಮೀಕಿ ಜಯಂತಿ ಕಾರ್ಯಕ್ರಮವನ್ನು ಸಾಮೂಹಿಕವಾಗಿ ಬಹಿಷ್ಕರಿಸುತ್ತೇವೆ ಎಂದು ಸಮುದಾಯದ ಮುಖಂಡ ಪಾಳ್ಯಕೃಷ್ಣ ಆಕ್ರೋಶ ವ್ಯಕ್ತಪಡಿಸಿದರು.
ಪಟ್ಟಣದ ಲೋಕೋಪಯೋಗಿ ವಸತಿ ಗೃಹದಲ್ಲಿ ಏರ್ಪಡಿಸಲಾಗಿದ್ದ ವಾಲ್ಮೀಕಿ ಜಯಂತಿ ಪೂರ್ವಭಾವಿ ಸಭೆ ಬಳಿಕ ಸುದ್ದಿಗಾರರೊಡನೆ ಮಾತನಾಡಿ, ವಾಲ್ಮೀಕಿ ಸಮುದಾಯದ ಅನುಕೂಲಕ್ಕೆ ನ್ಯಾಯಮೂರ್ತಿ ನಾಗಮೋಹನ್ ದಾಸ್ ವರದಿಯನ್ನು ಜಾರಿ ಮಾಡುವಂತೆ ಫ್ರೀಡಂ ಪಾರ್ಕ್ ನಲ್ಲಿ ಶ್ರೀಗಳು ಸಮುದಾಯದ ಪರವಾಗಿ ಹೋರಾಟ ಮಾಡುತ್ತಿದ್ದಾರೆ. ಆದರೆ ಸರ್ಕಾರ ಇದಕ್ಕೆ ಸ್ಪಂದಿಸುತ್ತಿಲ್ಲ. ಹೀಗಾಗಿ ನಾವು ಸರ್ಕಾರದಿಂದ ಆಚರಿಸಲಾಗುವ ವಾಲ್ಮೀಕಿ ಜಯಂತಿ ಆಚರಣೆಯನ್ನು ಪಕ್ಷಾತೀತವಾಗಿ ಬಹಿಷ್ಕರಿಸುತ್ತೇವೆ. ಇದೇ ತಿಂಗಳ ೯ ರಂದು ಸ್ವಾಮೀಜಿಗಳು ಕರೆಕೊಟ್ಟಿರುವ ಹಿನ್ನಲೆಯಲ್ಲಿ ಮಹಿಳೆಯರು, ಮಕ್ಕಳಾದಿಯಾಗಿ ಸಮುದಾಯದ ಎಲ್ಲ ಜನತೆ ಬೆಂಗಳೂರು ಚಲೋ ಕಾರ್ಯಕ್ರಮವನ್ನು ಕೈಗೊಂಡಿದ್ದೇವೆ. ಸರ್ಕಾರದಿಂದ ಆಚರಿಸಲಾಗುವ ಕಾರ್ಯಕ್ರಮವನ್ನು ಬಹಿಷ್ಕರಿಸುತ್ತಿದ್ದೇವೆ ಎಂದರು.

ಈ ಸಂದರ್ಭದಲ್ಲಿ ಸಮುದಾಯದ ಮುಖಂಡರುಗಳಾದ ಜಗದೀಶ್ ನಾಯಕ, ಚಂಗವಾಡಿ ರಾಚಪ್ಪ, ಅನಿಲ್, ಶಿವರಾಮು, ವೆಂಕಟಾಚಲ, ಮಂಜು, ಉದ್ದನೂರು ಸಿದ್ದರಾಜು ಸೇರಿದಂತೆ ಇನ್ನಿತರೆ ಮುಖಂಡರುಗಳು ಉಪಸ್ಥಿತರಿದ್ದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು