ಇಲವಾಲ ಬಳಿ ರಸ್ತೆ ತಡೆ ನಡೆಸುತ್ತಿದ್ದ ೧೦೦ಕ್ಕೂ ಹೆಚ್ಚು ರೈತರ ಬಂಧನ

 ವಿಸಿ ಫಾರಂ ಬಳಿ ರೈತರು ಪೊಲೀಸರ ನಡುವೆ ಮಾತಿನ ಚಕಮಕಿ 

ಮೈಸೂರು : ಟನ್ ಕಬ್ಬಿಗೆ ೪,೫೦೦ ರೂ. ನಿಗದಿ ಮಾಡುವುದು, ಶಾಶ್ವತ ಗಣಿಗಾರಿಕೆ ನಿಷೇಧ, ವಿದ್ಯುತ್ ತಿದ್ದುಪಡಿ ಕಾಯ್ದೆ ಹಿಂಪಡೆಯುವುದು ಸೇರಿದಂತೆ ತಮ್ಮ ೧೮ ಬೇಡಿಕೆಗಳನ್ನು ಈಡೇರಿಸಬೇಕೆಂದು ಒತ್ತಾಯಿಸಿ ಇಲವಾಲ ಬಳಿ ರಸ್ತೆತಡೆ ನಡೆಸುತ್ತಿದ್ದ ನೂರಾರು ರೈತರನ್ನು ಪೊಲೀಸರು ಬಂಧಿಸಿ ನಂತರ ಬಿಡುಗಡೆ ಮಾಡಿದರು.
ತಮ್ಮ ಬೇಡಿಗಳನ್ನು ಈಡೇರಿಸುವಂತೆ ರೈತರು ಹಲವಾರು ಬಾರಿ ಸರ್ಕಾರಕ್ಕೆ ಮನವಿ ಮಾಡಿದ್ದರೂ ಸರ್ಕಾರ ರೈತರ ಸಮಸ್ಯೆಗೆ ಸ್ಪಂದಿಸುತ್ತಿಲ್ಲ.
ಮೈಸೂರು ಜಿಲ್ಲಾ ಉಸ್ತುವಾರಿ ಸಚಿವರಾದ ಎಸ್.ಟಿ.ಸೋಮಶೇಖರ್ ಅವರು ರೈತ ಮುಖಂಡರ ಜತೆ ಮಾತನಾಡಿ, ಅ.೪ ರಂದು ಮುಖ್ಯಮಂತ್ರಿಗಳು ಮೈಸೂರಿಗೆ ಭೇಟಿ ನೀಡಲಿದ್ದು, ಅವರೊಂದಿಗೆ ಚರ್ಚಿಸಿ ಸಮಸ್ಯೆ ಬಗೆ ಹರಿಸುವುದಾಗಿ ಭರವಸೆ ನೀಡಿದ್ದರು. ಆದರೆ, ನಮಗೆ ಮಾತುಕತೆಗೆ ಕರೆದಿಲ್ಲ. ಕೆಲ ದಿನಗಳ ಹಿಂದೆ ಮುಖ್ಯಮಂತ್ರಿಗಳ ನಿವಾಸಕ್ಕೆ ಮುತ್ತಿಗೆ ಹಾಕುವ ಕಾರ್ಯಕ್ರಮದಂದೂ ಸಹ ರೈತರನ್ನು ಸಿಎಂ ನಿವಾಸಕ್ಕೆ ಬಿಡದೆ ಪೊಲೀಸರು ಸಿಕ್ಕ ಸಿಕ್ಕಲ್ಲೆಲ್ಲಾ ರೈತರನ್ನು ಬಂಧಿಸಿದ್ದರು. ನಂತರ ರೈತರಿಗೆ ಸಿಹಿ ಸುದ್ದಿ ಕೊಡುವ ಬಗ್ಗೆ ವಾಗ್ದಾನವನ್ನೂ ಮುಖ್ಯಮಂತ್ರಿಗಳು ಮಾಡಿದ್ದು, ಅದನ್ನೂ ಸಹ ಈಡೇರಿಸಿಲ್ಲ. ರೈತರ ಸಮಸ್ಯೆಗಳಿಗೆ ಸ್ಪಂದಿಸದ ಮುಖ್ಯಮಂತ್ರಿಗಳ ನಡೆಯನ್ನು ಖಂಡಿಸಿ ರಸ್ತೆ ತಡೆ ಮಾಡುತ್ತಿರುವುದಾಗಿ ರೈತಸಂಘದ ಮುಖಂಡರು ತಿಳಿಸಿದರು.
ಪ್ರತಿಭಟನೆ ಹಿಂಪಡೆಯುವಂತೆ ಪೊಲೀಸರು ರೈತರ ಮನವೊಲಿಸಲು ಪ್ರಯತ್ನಿಸಿದರಾದರೂ ರೈತರು ಒಪ್ಪಲಿಲ್ಲ. ನಂತರ ಪೊಲೀಸರು ಪ್ರತಿಭಟನಾ ನಿರತ ರೈತರನ್ನು ಬಂಧಿಸಿದರು.
ಪ್ರತಿಭಟನೆಯಲ್ಲಿ ಮೈಸೂರು ಜಿಲ್ಲಾ ಅಧ್ಯಕ್ಷರಾದ ಹೊಸೂರ್ ಕುಮಾರ್, ಮುಖಂಡರಾದ ಪ್ರಸನ್ನ ಎನ್ ಗೌಡ, ಪಿ.ಮರಂಕಯ್ಯ, ಪ್ರಭಾಕರ್, ರಾಘವೇಂದ್ರ, ಮಾದೇವ ನಾಯಕ, ಬೆಂಕಿಪುರ ಚಿಕ್ಕಣ್ಣ, ಬೋರೇಗೌಡ, ದೇವಮ್ಮ, ಮಲ್ಲೇಶ್ ಭಾಗವಹಿಸಿದ್ದರು.

ಮಂಡ್ಯ ಜಿಲ್ಲೆ ಶ್ರೀರಂಗಪಟ್ಟಣ ಬಳಿಯ ಕಿರಂಗೂರು ಸರ್ಕಲ್‌ನಲ್ಲಿ ಬೃಹತ್ ಪ್ರತಿಭಟನೆ ನಡೆಯಿತು. ಈ ವೇಳೆ ಮಂಡ್ಯ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಚೇತನ್ ಸ್ಥಳಕ್ಕೆ ಭೇಟಿ ನೀಡಿ ರಾಜ್ಯಾಧ್ಯಕ್ಷ ಬಡಗಲಪುರ ನಾಗೇಂದ್ರ, ರೈತಸಂಘದ ವರಿಷ್ಠ ನಾಯಕಿ ಸುನೀತಾ ಪುಟ್ಟಣ್ಣಯ್ಯ ಹಾಗೂ ಜಿಲ್ಲಾಧ್ಯಕ್ಷ ಎ.ಎಲ್.ಕೆಂಪೂಗೌಡ ಅವರ ಮನವೊಲಿಸಿದಾಗ ಪ್ರತಿಭಟನೆ ಹಿಂಪಡೆಯಲಾಯಿತು.

ಮಂಡ್ಯ ವಿಸಿ ಫಾರಂ ಬಳಿ ನಡೆಯುತ್ತಿದ್ದ ಪ್ರತಿಭಟನೆ ತೀವ್ರಗೊಂಡು
ರೈತರು ಮತ್ತು ಪೊಲೀಸರ ನಡುವೆ ಮಾತಿನ ಚಕಮಕಿ ನಡೆದು ರೈತರ ಮೇಲೆ ಪೊಲೀಸರು ಲಾಠಿ ಬೀಸಿದ ಪರಿಣಾಮ ರೈತರೊಬ್ಬರಿಗೆ ಬಲವಾದ ಪೆಟ್ಟು ಬಿದ್ದಿದ್ದು, ಇಲ್ಲಿ ೧೫೦ ಕ್ಕೂ ಹೆಚ್ಚು ರೈತರನ್ನು ಪೊಲೀಸರು ಬಂಧಿಸಿರುವ ಬಗ್ಗೆ ವರದಿಯಾಗಿದೆ. 


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು