ಇಂಟರ್‍ನ್ಯಾಶನಲ್ ಹ್ಯೂಮನ್ ಡೆವಲಪ್‍ಮೆಂಟ್ ಅಂಡ್ ಅಪ್ಲಿಫ್ಟ್‍ಮೆಂಟ್ ಅಕಾಡೆಮಿಯಿಂದ `ಚಿಕ್ಕುಂಡಿ’ ಗ್ರಾಮ ದತ್ತು ಸ್ವೀಕಾರ
ಅಕ್ಟೋಬರ್ 30, 2022
6 ವರ್ಷದಲ್ಲಿ ಮಾದರಿ ಗ್ರಾಮವನ್ನಾಗಿ ಮಾಡುವ ಭರವಸೆ
ಗುಂಡ್ಲುಪೇಟೆ : ತಾಲೂಕಿನ ಚಿಕ್ಕುಂಡಿ ಗ್ರಾಮವನ್ನು ಮಾದರಿ ಗ್ರಾಮವನ್ನಾಗಿ ಮಾಡುವ ನಿಟ್ಟಿನಲ್ಲಿ ಇಂಟರ್‍ನ್ಯಾಶನಲ್ ಹ್ಯೂಮನ್ ಡೆವಲಪ್‍ಮೆಂಟ್ ಅಂಡ್ ಅಪ್ಲಿಫ್ಟ್‍ಮೆಂಟ್ ಅಕಾಡೆಮಿ ಸಂಸ್ಥೆಯಿಂದ ಗ್ರಾಮವನ್ನು ದತ್ತು ಸ್ವೀಕರಿಸಿ ವಿವಿಧ ಯೋಜನೆಗಳಿಗೆ ಚಾಲನೆ ನೀಡಲಾಯಿತು. ಈ ಸಂದರ್ಭದಲ್ಲಿ ಮಾದರಿ ಗ್ರಾಮ ನಿರ್ಮಾಣಕ್ಕೆ ಚಾಲನೆ ನೀಡಿದ ಐಎಚ್‍ಡಿಯುಎ ಅಧ್ಯಕ್ಷ ಡಾ.ಬಿ.ಎಸ್.ಅಜಯಕುಮಾರ್ ಮಾತನಾಡಿ, ಸುಮಾರು 360 ಜನಸಂಖ್ಯೆ ಮತ್ತು 78 ಮನೆಗಳನ್ನು ಒಳಗೊಂಡಿರುವ ಗುಂಡ್ಲುಪೇಟೆ ತಾಲೂಕಿನ ಹೊರೆಯಾಳ ಗ್ರಾಪಂ ಯ ಚಿಕ್ಕುಂಡಿ ಗ್ರಾಮವನ್ನು ನಾವು ದತ್ತು ತೆಗೆದುಕೊಂಡಿದ್ದು, ಆರು ವರ್ಷಗಳಲ್ಲಿ ಇಲ್ಲಿ ಆಧುನಿಕ ಶಾಲಾ ಶಿಕ್ಷಣ, ಸಾರ್ವತ್ರಿಕ ಉತ್ತಮ ಆರೋಗ್ಯ, ಸೇರಿದಂತೆ ವಿವಿಧ ಸೌಲಭ್ಯಗಳನ್ನು ಪರಿಚಯಿಸುವ ಮೂಲಕ ಇದನ್ನು ಮಾದರಿ ಗ್ರಾಮವನ್ನಾಗಿ ಮಾಡಲಾಗುವುದು. ಮೂಲ ಸೌಕರ್ಯಗಳಾದ ರಸ್ತೆಗಳು, ಸೌರವಿದ್ಯುತ್ ಮತ್ತು ಜಲಸಂಪನ್ಮೂಲಗಳನ್ನು ಪುನರುತ್ಪಾದಿಸುವುದು. ಎಂದರು. ಮಹಿಳಾ ನಾಯಕತ್ವ ಅಭಿವೃದ್ಧಿಪಡಿಸಲು ಮಹಿಳೆಯರಿಗಾಗಿ ನಾಯಕತ್ವ ಶಾಲೆಯನ್ನು ಸ್ಥಾಪಿಸುವ ಗುರಿಯನ್ನು ಹೊಂದಿದ್ದೇವೆ. ಇದು 21 ನೇ ಶತಮಾನದ ನಾಯಕರಾಗಲು ನೂರಾರು ಸ್ವ-ಸಹಾಯ ಗುಂಪಿನ ಮಹಿಳೆಯರನ್ನು ರೂಪಿಸುತ್ತದೆ. ಇದರಲ್ಲಿ ತಂತ್ರಜ್ಞಾನ ಆಧಾರಿತ ತರಬೇತಿಯು ಮಹಿಳೆಯರನ್ನು ಅವರ ಮನೆಗಳಲ್ಲಿ ಅಲ್ಲದೇ ಸಮುದಾಯಕ್ಕೆ ನಾಯಕರನ್ನಾಗಿ ಪರಿವರ್ತಿಸುವ ಗುರಿಯನ್ನು ಹೊಂದಿದೆ. ಈ ಕಾರ್ಯಕ್ರಮವು ಮಹಿಳೆಯರಿಗೆ ಆತ್ಮವಿಶ್ವಾಸವನ್ನು ಹೆಚ್ಚಿಸುವಲ್ಲಿ ದೇಶಕ್ಕೆ ಮಾದರಿಯಾಗಲಿದೆ ಎಂದರು. ಕಳೆದ 20 ವರ್ಷಗಳಿಂದ ಐಎಚ್‍ಡಿಯುಎ ಮೂಲಕ ಚಿಕ್ಕುಂಡಿ ಗ್ರಾಮದಲ್ಲಿ ಹಲವಾರು ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಂಡಿದ್ದು, ಇದೀಗ ಈ ಗ್ರಾಮವನ್ನು ಕರ್ನಾಟಕದಲ್ಲಿಯೇ ಅಲ್ಲ, ಭಾರತದಲ್ಲಿಯೇ ಮಾದರಿ ಗ್ರಾಮವನ್ನಾಗಿ ಮಾಡಲು ಉದ್ದೇಶಿಸಿದ್ದೇವೆ. ಇದಕ್ಕೆ ಗ್ರಾಮಸ್ಥರ ಸಹಕಾರ ಮುಖ್ಯ ನಿಮ್ಮ ಹಳ್ಳಿಯೊಳಗೆ ಬರಲು ಟಿಕೆಟ್ ಪಡೆಯುವ ರೀತಿಯಲ್ಲಿ ಗ್ರಾಮವನ್ನು ಮಾದರಿಯಾಗಿಸಬೇಕು ಎಂದರು.
ನಂತರ ಬೇಗೂರು ಗ್ರಾಮದಲ್ಲಿ ನಡೆದ ಮಹಿಳಾ ನಾಯಕತ್ವ ಯೋಜನೆಗೆ ಚಾಲನೆ ನೀಡಿ ಮಾತನಾಡಿದ ಡಾ.ಅಜಯ್ ಕುಮಾರ್, ದೇಶದಲ್ಲಿ ಶೇಕಡಾ 50ಕ್ಕಿಂತ ಹೆಚ್ಚು ಮಹಿಳಾ ಜನಸಂಖ್ಯೆ ಇದ್ದರೂ ರಾಜಕೀಯ ಸೇರಿದಂತೆ ಅವರ ಪ್ರಾತಿನಿಧ್ಯ ಒಂದೂ ಇಲ್ಲ. ನಾಯಕತ್ವ ತರಬೇತಿಯಿಂದ ಮಹಿಳೆಯರು ಸಮಾಜದ ಮುಖ್ಯವಾಹಿನಿಗೆ ಬರಲು ಮತ್ತು ಅವರ ಧ್ವನಿಯನ್ನು ಹೆಚ್ಚಿಸಲು ಅನುಕೂಲ ಮಾಡಿಕೊಡುತ್ತದೆ ಎಂದರು. ಈ ಸಂದರ್ಭದಲ್ಲಿ ಹೊರೆಯಾಲ ಗ್ರಾಪಂ.ಪಿಡಿಒ ಕುಮಾರಸ್ವಾಮಿ ರೈತರಿಗೆ ದೊರೆಯುತ್ತಿರುವ ಸರ್ಕಾರದ ವಿವಿಧ ಯೋಜನೆಗಳ ಕುರಿತು ಮಾಹಿತಿ ನೀಡಿ, ಚಿಕ್ಕಹುಂಡಿ ಗ್ರಾಮವನ್ನು ಮಾದರಿ ಗ್ರಾಮವನ್ನಾಗಿ ಮಾಡಲು ತಮ್ಮ ಕೈಲಾದ ನೆರವು ನೀಡುವುದಾಗಿ ಭರವಸೆ ನೀಡಿದರು. ಬೇಗೂರು ಗ್ರಾಮ ಪಂಚಾಯಿತಿ ಅಧ್ಯಕ್ಷೆ ಇಂದಿರಾ ಸುರೇಶ್, ಐಎಚ್‍ಡಿಯುಎ ಟ್ರಸ್ಟಿ ಭಾಗ್ಯ, ಅಜಯ್‍ಕುಮಾರ್, ಐಎಚ್‍ಡಿಯುಎ ಯೋಜನಾ ನಿರ್ದೇಶಕ ಎನ್ ಮಧು, ಭಾರತ್ ಆಸ್ಪತ್ರೆ ಮತ್ತು ಆಂಕೊಲಾಜಿ ಸಂಸ್ಥೆಯ ಕೇಂದ್ರ ಮುಖ್ಯಸ್ಥೆ ನಿರ್ಮಲಾ ಕೃಷ್ಣಮೂರ್ತಿ, ಜಿಎಚ್‍ಎಂ ಎಂಡಿ ಅನಿತಾ ನಿರಂಜನ್ ಮತ್ತು ಜಿಎಚ್‍ಎಂ ತರಬೇತುದಾರ ರಾಮಚಂದ್ರ. ಉಪಸ್ಥಿತರಿದ್ದರು.
0 ಕಾಮೆಂಟ್‌ಗಳು