ಇಂದಿನಿಂದ ಅಂಬಿಗರಹಳ್ಳಿಯಲ್ಲಿ ಮಹಾ ಕುಂಭಮೇಳ

೧೬ಕ್ಕೆ ವಿಶೇಷ ಗಂಗಾರತಿ, ಪೂಜಾ ಕೈಂಕರ್ಯಗಳಿಗೆ ಬೇಬಿ ಸ್ವಾಮೀಜಿ ನೇತೃತ್ವ 

ಮೈಸೂರು: ಮಂಡ್ಯ ಜಿಲ್ಲೆ, ಕೆ.ಆರ್.ಪೇಟೆ ತಾಲೂಕಿನ ಅಂಬಿಗರಹಳ್ಳಿ ಸಂಗಾಪುರ-ಪುರದಲ್ಲಿರುವ ಕಾವೇರಿ-ಹೇಮಾವತಿ-ಲಕ್ಷ÷್ಮಣತೀರ್ಥ ನದಿಗಳ ಸಂಗಮ ಸ್ಥಳದಲ್ಲಿ ಅ.೧೩ರಿಂದ ೧೬ರವರೆಗೆ ಶ್ರೀ ಮಲೆಮಹದೇಶ್ವರ ಮಹಾ ಕುಂಭ ಮೇಳ ಪ್ರಾರಂಭವಾಗಲಿದ್ದು, ಜಿಲ್ಲಾಡಳಿತ ಸಕಲ ಸಿದ್ಧತೆ ಮಾಡಿಕೊಂಡಿದೆ.  
ಮೈಸೂರಿನ ಸುತ್ತೂರು ಶಾಖಾ ಮಠದಲ್ಲಿ ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಸುತ್ತೂರು ಮಠಾಧೀಶರಾದ ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಮಾತನಾಡಿ, ೯ ವರ್ಷದ ನಂತರ ಕುಂಭಮೇಳ ನಡೆಸಲಾಗುತ್ತಿದೆ. ೩ ತಿಂಗಳುಗಳಿಂದಲೇ ಭಕ್ತರಿಗೆ ತೊಂದರೆ ಆಗದಂತೆ ನೋಡಿಕೊಳ್ಳಲು ಅಗತ್ಯವಾದ ಎಲ್ಲ ವ್ಯವಸ್ಥೆಯನ್ನೂ ಮಾಡಲಾಗಿದೆ ಎಂದರು.
ಮಹದೇಶ್ವರರು ಕರ್ನಾಟಕದಲ್ಲಿ ಮೊದಲು ಅಂಬಿಗರಹಳ್ಳಿಗೆ ಬಂದರು. ಅಲ್ಲಿಂದಲೇ ಪವಾಡಗಳನ್ನು ಆರಂಭಿಸಿದರು ಎಂಬ ನಂಬಿಕೆ ಇದೆ. ಇಂತಹ ಪವಿತ್ರ ತ್ರಿವೇಣಿ ಸಂಗಮದಲ್ಲಿ ಕುಂಭಮೇಳ ನಡೆಯುತ್ತಿದೆ. ಚಾಮರಾಜನಗರ, ಮಂಡ್ಯ ಮತ್ತು ಮೈಸೂರು ಜಿಲ್ಲೆಗಳಾದ್ಯಂತ ಮಹದೇಶ್ವರರ ಜ್ಯೋತಿ ಯಾತ್ರೆಗೆ ಅಭೂತಪೂರ್ವ ಪ್ರತಿಕ್ರಿಯೆ ವ್ಯಕ್ತವಾಗಿದೆ ಎಂದರು.
೧೬ರಂದು ವಿಶೇಷ ಗಂಗಾರತಿ: ನಾಲ್ಕು ದಿನಗಳವರೆಗೆ ವಿವಿಧ ಧಾರ್ಮಿಕ ಮತ್ತು ಸಾಂಸ್ಕöÈತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ. ೧೫ರಂದು ಸಂಜೆ ತ್ರಿವೇಣಿ ಸಂಗಮದಲ್ಲಿ ವಿಶೇಷ ಗಂಗಾರತಿ ನೆರವೇರಲಿದೆ. ೧೬ರಂದು ಉತ್ತರಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಬಿಜೆಪಿ ಸಂಸದೀಯ ಮಂಡಳಿಯ ಸದಸ್ಯ ಬಿ.ಎಸ್.ಯಡಿಯೂರಪ್ಪ ಮೊದಲಾದವರು ಭಾಗವಹಿಸಲಿದ್ದಾರೆ ಎಂದು ಮಾಹಿತಿ ನೀಡಿದರು.
ಬೇಬಿ ಮಠದ ಶ್ರೀ ತ್ರಿನೇತ್ರ ಮಹಾಂತ ಶಿವಯೋಗಿ ಸ್ವಾಮೀಜಿ ಮಾತನಾಡಿ, ಮೂರು ನದಿಗಳ ಸಂಗಮ ಗೋಚರಿಸುವ ಪವಿತ್ರ ಸ್ಥಳವಿದು. ಹೀಗಾಗಿ ಕುಂಭಮೇಳಕ್ಕೆ ಹಾಗೂ ಪುಣ್ಯಸ್ನಾನಕ್ಕೆ ವಿಶೇಷ ಮಹತ್ವವಿದೆ. ಇಲ್ಲಿ ಪುಣ್ಯಸ್ನಾನ ಮಾಡುವುದರಿಂದ ಮೋಕ್ಷ ಪಡೆಯಬಹುದು. ಈ ಭಾಗದ ಭಕ್ತರು ಪುಣ್ಯಸ್ನಾನಕ್ಕೆ ಪ್ರಯಾಗಕ್ಕೋ, ವಾರಾಣಸಿಗೋ ಹೋಗುವುದು ಕಷ್ಟ. ಇಲ್ಲೇ ಸಿಕ್ಕಿರುವ ಅವಕಾಶ ಬಳಸಿಕೊಳ್ಳಬೇಕು ಎಂದು ತಿಳಿಸಿದರು.
ಅಬಕಾರಿ ಸಚಿವ ಕೆ.ಗೋಪಾಲಯ್ಯ ಮಾತನಾಡಿ, ನೂತನವಾಗಿ ನಿರ್ಮಿಸಿರುವ ಮಾದೇಶ್ವರ ದೇವಸ್ಥಾನದ ಉದ್ಘಾಟನೆಯೂ ನೆರವೇರಲಿದೆ. ಧರ್ಮಸ್ಥಳದ ಧರ್ಮಾಧಿಕಾರಿ ಡಿ.ವೀರೇಂದ್ರ ಹೆಗ್ಗಡೆ ಕುಂಭಮೇಳ ಉದ್ಘಾಟಿಸಲಿದ್ದಾರೆ. ಸುತ್ತೂರು ಮಠದ ಶಿವರಾತ್ರಿ ದೇಶೀಕೇಂದ್ರ ಸ್ವಾಮೀಜಿ ಮತ್ತು ಆದಿಚುಂಚನಗಿರಿ ಮಠದ ನಿರ್ಮಲಾನಂದನಥ ಸ್ವಾಮೀಜಿ ನೇತೃತ್ವದಲ್ಲಿ ಕುಂಭಮೇಳ ಆಯೋಜಿಸಲಾಗಿದೆ. 
೧೫ರಂದು ಧಾರ್ಮಿಕ ಸಭೆ ಹಾಗೂ ೧೬ರಂದು ಪುಣ್ಯಸ್ನಾನ ಕಾರ್ಯಕ್ರಮ ನಡೆಯಲಿದೆ ಎಂದು ವಿವರಿಸಿದರು.
ಇದು ರಾಜಕೀಯ ಕಾರ್ಯಕ್ರಮವಲ್ಲ. ನನ್ನ ಉತ್ಸವವೂ ಏನಲ್ಲ. ಜನರ ಕಾರ್ಯಕ್ರಮವಿದು. ನಾನೊಬ್ಬ ಸೇವಕನಾಗಿ ಕೆಲಸ ಮಾಡುತ್ತಿದ್ದೇನೆ. ಅಲ್ಲಿರುವ ದೇವಸ್ಥಾನದ ಪುನರುಜ್ಜೀವನನ್ನೂ ಮಾಡುತ್ತೇವೆ. ರಥವನ್ನೂ ಸಿದ್ಧಪಡಿಸಲಾಗುವುದು. ಸರ್ಕಾರದಿಂದ ಬಿಡುಗಡೆಯಾಗಿರುವ ೪ ಕೋಟಿ ಅನುದಾನವನ್ನು ಕುಂಭಮೇಳಕ್ಕಾಗಿಯೇ ಬಳಸುತ್ತಿಲ್ಲ. ಅಲ್ಲಿನ ಅಭಿವೃದ್ಧಿ ಕಾರ್ಯವೂ ನಡೆಯುತ್ತಿದೆ. ಸಂಪರ್ಕ ರಸ್ತೆ ಅಭಿವೃದ್ಧಿಪಡಿಸಲಾಗಿದೆ ಎಂದು ಸಚಿವ ನಾರಾಯಣಗೌಡ ಉತ್ತರಿಸಿದರು.
ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್, ಸಂಸದ ಪ್ರತಾಪ ಸಿಂಹ, ವಸ್ತುಪ್ರದರ್ಶನ ಪ್ರಾಧಿಕಾರದ ಅಧ್ಯಕ್ಷ ಮಿರ್ಲೆ ಶ್ರೀನಿವಾಸಗೌಡ, ಮಂಡ್ಯ ಜಿಲ್ಲಾಧಿಕಾರಿ ಅಶ್ವಥಿ ಸೇರಿದಂತೆ ಹಲವರು ಇದ್ದರು.
ಸ್ವಾಮೀಜಿಗಳು, ಸಾಧು-ಸಂತರಿಗೆ ಪ್ರತ್ಯೇಕ ಸ್ನಾನಘಟ್ಟ
ಸ್ವಾಮೀಜಿಗಳು, ಸಾಧು-ಸಂತರಿಗೆ ಪ್ರತ್ಯೇಕ ಸ್ನಾನಘಟ್ಟ ನಿರ್ಮಿಸಲಾಗಿದೆ. ೨೦೦ಕ್ಕೂ ಹೆಚ್ಚು ಮೊಬೈಲ್ ಶೌಚಾಲಯ ಒದಗಿಸಲಾಗಿದೆ. ೨೦೦ ಮಂದಿ ಸಾಧುಗಳ ವಾಸ್ತವ್ಯಕ್ಕೆ ಟೆಂಟ್ ವ್ಯವಸ್ಥೆ ಮಾಡಲಾಗಿದೆ. ಎರಡು ಸಾವಿರಕ್ಕೂ ಹೆಚ್ಚು ಪೊಲೀಸರನ್ನು ಭದ್ರತೆಗೆ ನಿಯೋಜಿಸಿದ್ದು, ೪ ಸಾವಿರ ಸ್ವಯಂ ಸೇವಕರು ಇರುತ್ತಾರೆ. ನುರಿತ ಈಜುಗಾರರನ್ನೂ ಸ್ಥಳದಲ್ಲಿ ನಿಯೋಜಿಸಲಾಗುವುದು. ಕುಂಭಮೇಳಕ್ಕೆ ಕಳೆದ ಬಾರಿ ೫೦ ಲಕ್ಷ ಖರ್ಚಾಗಿತ್ತು. ಈ ಬಾರಿ ಸರ್ಕಾರದಿಂದ ೪ ಕೋಟಿ ಬಿಡುಗಡೆಯಾಗಿದೆ. ಸಾವಿರ ಕ್ವಿಂಟಲ್ ಅಕ್ಕಿ ದಾನಿಗಳಿಂದಲೇ ಸಂಗ್ರಹವಾಗಿದೆ. ಸಂಗಮ ಸ್ಥಳದ ದೇಗುಲದಲ್ಲಿ ಪ್ರತಿ ಪೌರ್ಣಿಮೆ, ಅಮಾವಾಸ್ಯೆಯಂದು ವಿಶೇಷ ಪೂಜೆ ಹಾಗೂ ದಾಸೋಹ ನಡೆಸಿಕೊಂಡು ಹೋಗಲು ನಿರ್ಧರಿಸಲಾಗಿದೆ. ಮುಂದಿನ ಕುಂಭಮೇಳವನ್ನು ಎಷ್ಟು ವರ್ಷಗಳಿಗೊಮ್ಮೆ ನಡೆಸಬೇಕು ಎನ್ನುವುದನ್ನು ಮುಖ್ಯಮಂತ್ರಿ ಜೊತೆ ಚರ್ಚಿಸಿ ತೀರ್ಮಾನಿಸಲಾಗುವುದು.
-ನಾರಾಯಣಗೌಡ, ಸಚಿವರು 
 

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು