ಲಕ್ಷಾಂತರ ರೂ, ಬೆಳೆ ನಷ್ಟ : ಬಾಗಿದ ವಿದ್ಯುತ್ ಕಂಬಗಳು : ಕುಸಿದ ಮನೆಗಳು
ಭಾರಿ ಮಳೆಯಿಂದಾಗಿ ಪಾಂಡವಪುರ ತಾಲೂಕಿನ ತೊಣ್ಣೂರುಕೆರೆ ಕೋಡಿ ಬಿದ್ದು ರಸ್ತೆಯಲ್ಲಿ ನೀರು ಹರಿಯುತ್ತಿರುವುದು.
ವರದಿ-ನಜೀರ್ ಅಹಮದ್
ಪಾಂಡವಪುರ: ಕಳೆದ ರಾತ್ರಿ ಸುರಿದ ಬಾರಿ ಮಳೆಗೆ ತಾಲೂಕಿನ ವಿವಿಧೆಡೆ ಕೆರೆಕಟ್ಟೆಗಳು ಉಕ್ಕಿ ಹರಿದಿದ್ದು, ಸಾಕಷ್ಟು ಪ್ರಮಾಣದ ಬೆಳೆ ಮತ್ತು ಮನೆಗಳಿಗೆ ಹಾನಿಯುಂಟಾಗಿದೆ.ತಾಲೂಕಿನ ಕೆರೆತೊಣ್ಣೂರಿನ ಐತಿಹಾಸಿಕ ತೊಣ್ಣೂರು ಕೆರೆಯಲ್ಲೂ ಸಹ ನೀರು ಉಕ್ಕಿ ಹರಿದಿದೆ. ಗುರುವಾರ ರಾತ್ರಿಯಿಡಿ ಸುರಿದ ಧಾರಾಕಾರ ಮಳೆಗೆ ಕೆರೆಯ ಒಳ ಹರಿವು ಹೆಚ್ಚಾಗಿ ಕೋಡಿಯ ಮೇಲೆ ನೀರು ಉಕ್ಕಿದೆ. ಇದರಿಂದ ಕೆರೆಯ ಏರಿಯ ಮೇಲೆ ಹೋಗುವ ರಸ್ತೆ ತುಂಬೆಲ್ಲಾ ನೀರು ಹರಿದು ಅವಾಂತರ ಸೃಷ್ಢಿಸಿದೆ. ಜತೆಗೆ ಸಮೀಪದ ಜಮೀನುಗಳಿಗೆ ನೀರು ನುಗ್ಗಿ ಅಪಾರ ಪ್ರಮಾಣದ ಬೆಳೆನಷ್ಟವಾಗಿದೆ. ಒಂದು ವೇಳೆ ಶುಕ್ರವಾರ ರಾತ್ರಿಯೂ ಸಹ ಇದೇ ರೀತಿಯಲ್ಲಿ ಮಳೆ ಸುರಿದರೆ ಸಾವಿರ ವರ್ಷದ ಇತಿಹಾಸವಿರುವ ತೊಣ್ಣೂರು ಕೆರೆಗೆ ಅಪಾಯ ಕಟಿಟ್ಟಬುತ್ತಿ ಎಂದು ಸ್ಥಳೀಯರು ಹೇಳುತ್ತಾರೆ.ತೊಣ್ಣೂರು ಕೆರೆಯಿಂದ ಭಾರಿ ಪ್ರಮಾಣದಲ್ಲಿ ನೀರು ಹೊರಕ್ಕೆ ಬಂದ ಕಾರಣ ಸಮೀಪದ ಸಣ್ಣ ಪುಟ್ಟ ಕಾಲುವೆಗಳು ಭರ್ತಿಯಾಗಿ ರಸ್ತೆಯ ಮೇಲೆ ನೀರು ಹರಿದು ವಾಹನ ಸಂಚಾರಕ್ಕೆ ಅನಾನುಕೂಲವಾಗಿದೆ. ಜತೆಗೆ ಹಲವಾರು ಕಡೆ ವಿದ್ಯುತ್ ಕಂಬಗಳು ನೆಲಕ್ಕುರುಳಿವೆ. ತೊಣ್ಣುರು ಪ್ರಾಥಮಿಕ ಆರೋಗ್ಯ ಕೇಂದ್ರ ಜಲಾವೃತವಾಗಿದೆ. ಹೀರೀಮರಳಿ ಗ್ರಾಮವೊಂದರಲ್ಲೇ 15ಕ್ಕೂ ಹೆಚ್ಚು ಮನೆಗಳು ಕುಸಿದಿರುವ ಬಗ್ಗೆ ವರದಿಯಾಗಿದೆ.ಶಾಸಕರು ಭೇಟಿ: ತೊಣ್ಣೂರು ಕೆರೆ ಕೋಡಿ ಬಿದ್ದ ವಿಷಯ ತಿಳಿಯುತ್ತಲೇ ಶಾಸಕ ಸಿ.ಎಸ್.ಪುಟ್ಟರಾಜು ಅಧಿಕಾರಿಗಳೊಂದಿಗೆ ಸ್ಥಳಕ್ಕೆ ದೌಡಾಯಿಸಿ ಪರಿಶೀಲನೆ ನಡೆಸಿದರು. ಕೆರೆಯ ಏರಿಯ ಮೇಲೆ ರಸ್ತೆಗಳ ಮೇಲೆ ನೀರು ಹರಿದು ಬರುತ್ತಿದ್ದು ನೀರಿನಲ್ಲಿಯೇ ಕೆರೆ ಏರಿಯ ಮೇಲೆ ಹೋಗಿ ಪರಿಶೀಲನೆ ನಡೆಸಿದರು. ಇದಕ್ಕೂ ಮೊದಲು ತಹಶಿಲ್ದಾರ್ ನಯನ ಸಹ ಭೇಟಿ ಕೊಟ್ಟು ಪರಿಶೀಲಿಸಿದರು.
ತೊಣ್ಣೂರು ಕೆರೆ ಕೋಡಿ ಬಿದ್ದಿರುವ ಕಾರಣ ಪಕ್ಕದ ಲಕ್ಷ್ಮೀಸಾಗರ ಗ್ರಾಮಸ್ಥರು ಎಚ್ಚರಿಕೆಯಿಂದ ಇರುವಂತೆ ಶಾಸಕ ಸಿ.ಎಸ್.ಪುಟ್ಟರಾಜು ಗ್ರಾಮಸ್ಥರಿಗೆ ಸೂಚನೆ ನೀಡಿದರು.ಈ ವೇಳೆ ಶಾಸಕ ಸಿ.ಎಸ್.ಪುಟ್ಟರಾಜು ಮಾತನಾಡಿ, ಕಳೆದ ರಾತ್ರಿ ಸುರಿದ ಧಾರಾಕಾರ ಮಳೆಯಿಂದಾಗಿ ತೊಣ್ಣೂರುಕೆರೆಗೆ ಅಧಿಕ ಪ್ರಮಾಣದಲ್ಲಿ ನೀರು ಹರಿದು ಬಂದು ಅಪಾಯದ ಅಂಚಿನಲ್ಲಿದೆ. ಕೆರೆ ಪರಿಶೀಲನೆ ನಡೆಸಿ ಹೆಚ್ಚುವರಿ ನೀರನ್ನು ಕೆರೆಯಿಂದ ಹೊರ ಹಾಕಲು ನೀರಾವರಿ ತಜ್ಞರರನ್ನು ಸ್ಥಳಕ್ಕೆ ಕರೆಸಿದ್ದಾರೆ.ಇದಕ್ಕಾಗಿ ವಿಶೇಷ ಅನುದಾನವನ್ನು ಸಹ ಬಿಡುಗಡೆ ಮಾಡಿಸಲಾಗಿದ್ದು ಟೆಂಡರ್ ಪ್ರಕ್ರಿಯೆ ನಡೆಯುತ್ತಿದೆ. ತೊಣ್ಣೂರು ಕೆರೆಯ ಪಕ್ಕದಲ್ಲೇ ಇರುವ ಲಕ್ಷ್ಮೀಸಾಗರ ಗ್ರಾಮಕ್ಕೂ ಅಪಾಯ ಎದುರಾಗಿದ್ದು, ನೂರಾರು ಎಕರೆ ರೈತರ ಭೂಮಿಯ ಮೇಲ್ಪದರ ಕೊಚ್ಚಿಹೋಗಿದೆ. ಜತೆಗೆ ಮನೆಗಳಿಗೂ ಹಾನಿಯುಂಟಾಗುತ್ತಿದೆ. ಈ ಬಗ್ಗೆ ಕೆರೆಯ ಅಕ್ಕಪಕ್ಕದ ಗ್ರಾಮಗಳ ನಿವಾಸಿಗಳು ಎಚ್ಚರಿಕೆಯಿಂದ ಇರಬೇಕು ಎಂದು ಶಾಸಕರು ಮನವಿ ಮಾಡಿದರು.
ತೊಣ್ಣೂರು ಕೆರೆ ಕೋಡಿ ಬಿದ್ದಿರುವ ಕಾರಣ ಪಕ್ಕದ ಲಕ್ಷ್ಮೀಸಾಗರ ಗ್ರಾಮಸ್ಥರು ಎಚ್ಚರಿಕೆಯಿಂದ ಇರುವಂತೆ ಶಾಸಕ ಸಿ.ಎಸ್.ಪುಟ್ಟರಾಜು ಗ್ರಾಮಸ್ಥರಿಗೆ ಸೂಚನೆ ನೀಡಿದರು.
0 ಕಾಮೆಂಟ್‌ಗಳು