ಮೈಸೂರಿನಲ್ಲಿ ಕಿಸಾನ್ ಸ್ವರಾಜ್ ಸಮ್ಮೇಳನ : ಬೀಜ ಉತ್ಸವ, ಸಾವಯವ ಕೃಷಿ ಪ್ರದರ್ಶನ

ಸುಸ್ಥಿರ ಮತ್ತು ಸಮಗ್ರ ಕೃಷಿ ಮೈತ್ರಿಕೂಟದಿಂದ ಕಾರ್ಯಕ್ರಮ ಆಯೋಜನೆ


 ಮೈಸೂರು : ಈ ತಿಂಗಳ 11, 12, 13 ರಂದು ನಗರದ ಸುಸ್ಥಿರ ಮತ್ತು ಸಮಗ್ರ ಕೃಷಿ ಮೈತ್ರಿಕೂಟ ಹಾಗೂ ರಾಜ್ಯ ಮುಕ್ತ ವಿವಿ ಸಂಯುಕ್ತಾಶ್ರಯದಲ್ಲಿ ಮುಕ್ತ ವಿವಿ ಆವರಣದಲ್ಲಿ ಕಿಸಾನ್ ಸ್ವರಾಜ್ ಸಮ್ಮೇಳನ ನಡೆಯಲಿದೆ ಎಂದು ಸಹಜ ಸಮೃದ್ಧ ಸಂಸ್ಥೆಯ ನಿರ್ದೇಶಕ ಕೃಷ್ಣಪ್ರಸಾದ್ ತಿಳಿಸಿದರು.
ಜಿಲ್ಲಾ ಪತ್ರಕರ್ತರ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಈ ವೇಳೆ ಪರಿಸರ ದಿಗ್ಗಜರು ಸಮ್ಮೇಳನದಲ್ಲಿ ಪಾಲ್ಗೊಳ್ಳಲಿದ್ದಾರೆ. ಈ ಸಂದರ್ಭದಲ್ಲಿ ಬೀಜ ಉತ್ಸವ, ಸಾವಯವ ಕೃಷಿ ಪ್ರದರ್ಶನ, ವಿಚಾರ ಸಂಕಿರಣ, ಚರ್ಚೆ ಹಾಗೂ ಉಪನ್ಯಾಸಗಳು ನಡೆಯಲಿವೆ.
ದೇಶದ 15 ಕ್ಕೂ ಹೆಚ್ಚು ರಾಜ್ಯಗಳಿಂದ 1500 ಕ್ಕೂ ಹೆಚ್ಚು ರೈತರು ಈ ಮಹಾ ಮೇಳದಲ್ಲಿ ಪಾಲ್ಗೊಳ್ಳಲಿದ್ದಾರೆ. ಸದ್ಯದಲ್ಲಿ ಕೃಷಿ ವಲಯ ಹಾಗೂ ರೈತರು ಎದುರಿಸುತ್ತಿರುವ ಸಮಸ್ಯೆ ಮತ್ತು ಅಲ್ಲಲ್ಲಿ ಕಂಡುಕೊಂಡಿರುವ ಸುಸ್ಥಿರ ಪರಿಹಾರೋಪಾಯ ಮಾರ್ಗಗಳನ್ನು ಒಂದೇ ವೇದಿಕೆಗೆ ತರುವ ಉದ್ದೇಶ ಈ ಸಮ್ಮೇಳನ ಹೊಂದಿದೆ ಎಂದು ವಿವರಿಸಿದರು.
ಹಲವು ಕಾರಣಗಳಿಂದಾಗಿ ಜಾಗತಿಕ ತಾಪಮಾನ ಏರಿಕೆಯಾಗುತ್ತಿದೆ. ಭೂಮಂಡಲ ಬಿಸಿಯಾಗುತ್ತಿದ್ದು, ಎಲ್ಲ ದೇಶಗಳೂ ಈ ಬಿಕ್ಕಟ್ಟಿನ ಬಗ್ಗೆ ಚಿಂತನೆ ನಡೆಸಲು ಮುಂದಾಗಿವೆ. ಹೀಗಾಗಿ ಪರಿಸರ ಸ್ನೇಹಿ ಕೃಷಿ, ನಿಸರ್ಗದ ಸಂರಕ್ಷಣೆಯಂಥ ಕ್ರಮಗಳನ್ನು ಅನುಸರಿಸುವ ಮೂಲಕ ಜಾಗತಿಕ ತಾಪಮಾನ ಬಿಕ್ಕಟ್ಟಿಗೆ ಪರಿಹಾರ ಕಲ್ಪಿಸಬೇಕಾಗಿದೆ. ಇಂಥ ಹತ್ತು ಹಲವರು ವಿಧಾನಗಳನ್ನು ಕಿಸಾನ್ ಸ್ವರಾಜ್ ಸಮ್ಮೇಳನ ಪ್ರತಿಪಾದಿಸಲಿದೆ ಎಂದು ಮಾಹಿತಿ ನೀಡಿದರು. ಅಲ್ಲದೆ, ವೇತನದಾರರು 3,500 ರೂ., ಪುರಷ ರೈತರು, ಪತ್ರಕರ್ತರು, ಸ್ವಯಂ ಸೇವಾ ಪ್ರತಿನಿಧಿಗಳು 2,500 ರೂ., ಪೂರ್ಣಾವಧಿ ರೈತರು 1,500 ರೂ., ಮಹಿಳಾ ರೈತರು 800 ರೂ., ಶುಲ್ಕ ನೀಡಿ ನೋಂದಣಿ ಮಾಡಿಕೊಳ್ಳಬಹುದಾಗಿದೆ ಎಂದು ಹೇಳಿದರು. ಹೆಚ್ಚಿನ ಮಾಹಿತಿಗೆ ದೂ. 99005 37434 ನ್ನು ಸಂಪರ್ಕಿಸಲು ಕೋರಿದರು. ಕವಿತಾ, ಸಂತೋಷ ಕೌಲಗಿ, ಕವಿತಾ ಶ್ರೀನಿವಾಸನ್, ಡಾ. ರಾಮಕೃಷ್ಣಪ್ಪ ಹಾಜರಿದ್ದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು