ಪಾಂಡವಪುರದಲ್ಲಿ ಭಾರತ್ ಜೋಡೋಗೆ ಭರ್ಜರಿ ಯಶಸ್ಸು : ರಾಹುಲ್ ಜತೆ ಹೆಜ್ಜೆ ಹಾಕಿದ 50 ಸಾವಿರ ಜನ, ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್, ಬಿ.ಕೆ.ಹರಿಪ್ರಸಾದ್ ಭಾಗಿ

PHOTO- RAGHUVEER

ಸ್ಥಳೀಯ ಮುಖಂಡರಾದ ತ್ಯಾಗರಾಜು, ಡಾ.ರವೀಂದ್ರ, ಕೃಷ್ಣೇಗೌಡ, ಸಿ.ಆರ್.ರಮೇಶ್ ಪಾದಯಾತ್ರೆಗೆ ಸಾಥ್ 
ಬೆಳ್ಳಾಳೆಯಲ್ಲಿ ಪೇಸಿಎಂ ಪೋಸ್ಟರ್ ಪ್ರದರ್ಶನ, ಹೆಜ್ಜೆ ಹಾಕಿದ ಅಂಗವಿಕಲರು 
ದಾರಿಯುದ್ದಕ್ಕೂ ಅದ್ಭುತ ಜನಸ್ಪಂದನೆ 

ಪಾಂಡವಪುರ : ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರ ಭಾರತ್ ಜೋಡೋ ಪಾದಯಾತ್ರೆಗೆ ಪಾಂಡವಪುರದಲ್ಲಿ ಭರ್ಜರಿ ಯಶಸ್ಸು ಸಿಕ್ಕಿದೆ. 
ಎರಡು ದಿನಗಳ ವಿರಾಮದ ನಂತರ ಬೆಳ್ಳಾಳೆ ಗ್ರಾಮದಿಂದ ಗುರುವಾರ ಬೆಳಿಗ್ಗೆ 8 ಗಂಟೆಗೆ ರಾಹುಲ್ ಗಾಂಧಿ ಕಾಂಗ್ರೆಸ್ ಹಿರಿಯ ಮುಖಂಡರಾದ ಹರ್‍ದೀಪ್ ಸಿಂಗ್ ಸುರ್ಜಿವಾಲಾ, ವೇಣುಗೋಪಾಲ್, ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್, ಬಿ.ಕೆ.ಹರಿಪ್ರಸಾದ್ ಜತೆ ಹೆಜ್ಜೆ ಹಾಕಿದರು. 
ಇವರೊಂದಿಗೆ ಮಂಡ್ಯ ಜಿಲ್ಲಾ ಕಾಂಗ್ರೆಸ್ ಮುಖಂಡರಾದ ಎನ್.ಚಲುವರಾಯಸ್ವಾಮಿ, ನರೇಂದ್ರಸ್ವಾಮಿ, ಪ್ರಿಯಾಂಕ್ ಖರ್ಗೆ, ಈಶ್ವರ್ ಖಂಡ್ರೆ, ತ್ಯಾಗರಾಜು, ಕೃಷ್ಣೇಗೌಡ, ಡಾ.ರವೀಂದ್ರ, ಗಂಗಾಧರ್, ಸಿ.ಆರ್.ರಮೇಶ್ ಮುಂತಾದವರು ಹಿರಿಯ ಮುಖಂಡರಿಗೆ ಸಾಥ್ ನೀಡಿದರು.
ಅಮೃತಿಯಲ್ಲಿ ಸೋನಿಯಾ : ಬೆಳ್ಳಾಳೆ ಗ್ರಾಮದಿಂದ ಹೊರಟ ಪಾದಯಾತ್ರೆ ಅಮೃತಿ ಗ್ರಾಮಕ್ಕೆ ಬರುತ್ತಿದ್ದಂತೆ ಕಾಂಗ್ರೆಸ್ ವರಿಷ್ಠ ನಾಯಕಿ ಸೋನಿಯಾ ಗಾಂಧಿ ಪಾದಯಾತ್ರೆಗೆ ಸೇರಿದರು. ಅವರೂ ಸಹ ಮುಖಂಡರ ಜತೆ ಹೆಜ್ಜೆ ಹಾಕಿದರು.
ರಾಹುಲ್ ನೋಡಲು ಜನವೋ ಜನ : ನೆಹರು ವಂಶದ ಕುಡಿ ರಾಹುಲ್ ಗಾಂಧಿಯವರನ್ನು ನೋಡಲು ಸಾವಿರಾರು ಸಂಖ್ಯೆಯಲ್ಲಿ ಜನ ಸೇರಿದ್ದರು. ದೂರ ದೂರದ ಗ್ರಾಮಗಳಿಂದ ವಿವಿಧ ವಾಹನಗಳ ಮೂಲಕ ಆಗಮಿಸಿದ ಮಹಿಳೆಯರು, ಮಕ್ಕಳು, ಯುವಕರು, ವೃದ್ಧರು ರಾಹುಲ್ ನೋಡಲು ಮುಗಿಬಿದ್ದಿದ್ದು ಕಂಡು ಬಂತು.


 

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು