ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರಿಂದ ಉದ್ಘಾಟನೆ
ವರದಿ-ನಜೀರ್ ಅಹಮದ್, ಪಾಂಡವಪುರಮೈಸೂರು : ನಗರದ ಲಕ್ಷ್ಮಿಪುರಂ ಸಿದ್ದಪ್ಪ ಸರ್ಕಲ್ ಹತ್ತಿರ ಎಂ.ಜಿ.ರಸ್ತೆಯಲ್ಲಿ ನೂತನವಾಗಿ ನಿರ್ಮಿಸಿರುವ ವೀನಸ್ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯನ್ನು ಮಾಜಿ ಮುಖ್ಯಮಂತ್ರಿ ಹಾಗೂ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರು ಅಕ್ಟೋಬರ್ 28 ರಂದು ಶುಕ್ರವಾರ ಬೆಳಿಗ್ಗೆ 10 ಗಂಟೆಗೆ ಲೋಕಾರ್ಪಣೆ ಮಾಡಲಿದ್ದಾರೆ ಎಂದು ಆಸ್ಪತ್ರೆ ಮಾಲಿಕರು ಹಾಗೂ ಕಾಂಗ್ರೆಸ್ ಮುಖಂಡರಾದ ಡಾ.ಹೆಚ್.ಕೃಷ್ಣ ಹೇಳಿದರು.
ಜಿಲ್ಲಾ ಪತ್ರಕರ್ತರ ಭವನದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿ, ಮೈಸೂರು, ಮಂಡ್ಯ, ಚಾಮರಾಜನಗರ, ಕೊಡಗು ಮತ್ತು ಹಾಸನ ಜಿಲ್ಲೆಯ ಗ್ರಾಮೀಣ ಭಾಗದ ರೈತಾಪಿ, ಕೂಲಿ ಕಾರ್ಮಿಕರು ಮತ್ತು ಮಧ್ಯಮ ವರ್ಗದ ಜನರ ಆರ್ಥಿಕ ಸ್ಥಿತಿಗತಿಗಳನ್ನು ಗಮನದಲ್ಲಿಟ್ಟು ಅವರಿಗೆ ಉತ್ತಮ ವೈದ್ಯಕೀಯ ಸೇವೆಗಳನ್ನು ನೀಡುವ ದೃಷ್ಟಿಯಿಂದ ಈ ಆಸ್ಪತ್ರೆಯನ್ನು ಪ್ರಾರಂಭಿಸಲಾಗಿದ್ದು, ಆಸ್ಪತ್ರೆಯ ಚಿಕಿತ್ಸೆ ವಚ್ಚದ ಬಗ್ಗೆ ಯಾರೂ ಆತಂಕ ಪಡಬೇಕಿಲ್ಲ. ಕೈಗೆಟುಕುವ ದರದಲ್ಲಿ ಅತ್ಯಾಧುನಿಕ ಚಿಕಿತ್ಸೆ ನೀಡಲಾಗುವುದು ಎಂದರು.
ಆಸ್ಪತ್ರೆಯಲ್ಲಿ ವಿಶೇಷವಾಗಿ ಕಿಡ್ನಿ ಸಂಬಂಧಿತ ಸಮಸ್ಯೆಗಳಿಗೆ ವಿಶೇಷ ಚಿಕಿತ್ಸೆ ನೀಡಲಾಗುವುದು. ಅಲ್ಲದೇ, ಯೂರೋಲಜಿ, ನೆಫ್ರೋಲಜಿ, ಜನರಲ್ ಸರ್ಜರಿ, ಇಂಟರ್ ನಲ್ ಮೆಡಿಸನ್, ಐಸಿಯು, ಗ್ಯಾಸ್ಟೋ ಎಂಡ್ರೋಲಜಿ, ಪ್ರಸೂತಿ ಮತ್ತು ಸ್ತ್ರೀರೋಗ ಚಿಕಿತ್ಸೆ, ಆರ್ಥೋಪೆಡಿಕ್ಸ್, ಪೀಡಿಯಾಟ್ರಿಕ್ಸ್, ರೇಡಿಯಾಲಜಿ ಸರ್ವಿಸ್, ಫಾರ್ಮಸಿ, ಲ್ಯಾಬ್ ಸರ್ವಿಸ್ ಸೇರಿದಂತೆ 24 ಗಂಟೆಗಳ ಆಂಬುಲೆನ್ಸ್ ಸೇವೆಗಳೂ ಸಹ ಲಭ್ಯವಿರುತ್ತದೆ ಎಂದರು. ಆರ್ಥಿಕವಾಗಿ ಹಿಂದುಳಿದಿರುವ ಕುಟುಂಬಗಳು, ಗ್ರಾಮೀಣ ರೈತಾಪಿ ಜನರಿಗೆ ಉತ್ತಮ ಆರೋಗ್ಯ ಸೇವೆ ಒದಗಿಸುವ ಗುರಿಯನ್ನು ನಾವು ಹೊಂದಿದ್ದು, ಚಿಕಿತ್ಸಾ ವೆಚ್ಚದಲ್ಲಿ ಆತಂಕ ಬೇಡ, ಇತರೆ ಖಾಸಗಿ ಆಸ್ಪತ್ರೆಗಳಿಗಿಂತ ಶೇ.50 ರಷ್ಟು ಕಡಿಮೆ ವೆಚ್ಚದಲ್ಲಿ ಉತ್ತಮ ಚಿಕಿತ್ಸೆ ನೀಡುತ್ತೇವೆ ಎಂದರು.
ಉದ್ಘಾಟನಾ ಸಮಾರಂಭದಲ್ಲಿ ಮಾಜಿ ಸಚಿವರಾದ ಎನ್.ಚಲುವರಾಯಸ್ವಾಮಿ, ಹೆಚ್.ಸಿ.ಮಹದೇವಪ್ಪ, ಪಿ.ಎಂ.ನರೇಂದ್ರ ಸ್ವಾಮಿ, ಎಂ.ಎಸ್.ಆತ್ಮಾನಂದ, ಮಾಜಿ ಸಂಸದ ಆರ್.ದ್ರುವನಾರಾಯಣ, ಶಾಸಕರಾದ ಎಸ್.ಎ.ರಾಮದಾಸ್, ಡಾ.ಯತೀಂದ್ರ ಸಿದ್ದರಾಮಯ್ಯ, ತನ್ವೀರ್ ಸೇಠ್, ವಿಧಾನ ಪರಿಷತ್ ಸದಸ್ಯರಾದ ದಿನೇಶ್ ಗೂಳೀಗೌಡ, ಮಧು ಜಿ.ಮಾದೇಗೌಡ, ಮಾಜಿ ಶಾಸಕರಾದ ಎಂ.ಕೆ.ಸೋಮಶೇಖರ್, ಕೆ.ಬಿ.ಚಂದ್ರಶೇಖರ್, ರಮೇಶ್ ಬಾಬು ಬಂಡಿಸಿದ್ದೇಗೌಡ, ಜಿ.ರಾಮಕೃಷ್ಣ ಮುಂತಾದವರು ಭಾಗವಹಿಸಲಿದ್ದಾರೆ ಎಂದರು. ಸುದ್ದಿಗೋಷ್ಠಿಯಲ್ಲಿ ಖ್ಯಾತ ಯುರೋಲಜಿಸ್ಟ್ ಹಾಗೂ ವೀನಸ್ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯ ವ್ಯವಸ್ಥಾಪಕ ನಿರ್ದೇಶಕ ಡಾ.ವಿವೇಕ್ ಕೃಷ್ಣ, ಮಂಜುನಾಥ್, ವೇಣುಗೋಪಾಲ್, ಕೆಪಿಸಿಸಿ ಸದಸ್ಯ ಜೇಸುದಾಸ್ ಇದ್ದರು.
ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರಿಂದ ಉದ್ಘಾಟನೆ
ವರದಿ-ನಜೀರ್ ಅಹಮದ್, ಪಾಂಡವಪುರ
0 ಕಾಮೆಂಟ್‌ಗಳು