ಆದಿವಾಸಿ ಕರಿಯಪ್ಪ ಅನುಮಾನಾಸ್ಪದ ಸಾವು : ಅರಣ್ಯ ಇಲಾಖೆ 17 ಸಿಬ್ಬಂಧಿ ವಿರುದ್ಧ ಕೊಲೆ ಅಕ್ರಮ ಬಂಧನ ಪ್ರಕರಣ ದಾಖಲು

ಮೃತ ಕುಟುಂಬಕ್ಕೆ ಪರಿಹಾರ ನೀಡುವಂತೆ ಕೆ.ಆರ್.ಆಸ್ಪತ್ರೆ ಶವಾಗಾರದ ಮುಂದೆ ಆದಿವಾಸಿಗಳ ಪ್ರತಿಭಟನೆ


ವರದಿ-ನಜೀರ್ ಅಹಮದ್ 

ಮೈಸೂರು,ಅ.13: ಜಿಂಕೆ ಮಾಂಸ ಮಾರಾಟ ಆರೋಪದಡಿ ಅರಣ್ಯ ಇಲಾಖೆಯವರು ಬಂಧಿಸಿ ವಿಚಾರಣೆ ನಡೆಸುವ ವೇಳೆ ಎಚ್.ಡಿ.ಕೋಟೆ ತಾಲ್ಲೂಕು ಹೊಸಹಳ್ಳಿ ಹಾಡಿಯ ಕರಿಯಪ್ಪ ಅನುಮಾನಾಸ್ಪದವಾಗಿ ಸಾವನ್ನಪ್ಪಿದ ಘಟನೆ ಹಿನ್ನಲೆಯಲ್ಲಿ ಗುಂಡ್ರೆ ಅರಣ್ಯ ವಲಯದ ಆರ್‍ಎಫ್‍ಓ, ಡಿಆರ್‍ಎಫ್‍ಓ ಸೇರಿದಂತೆ 17 ಅರಣ್ಯ ಸಿಬ್ಬಂಧಿ ವಿರುದ್ಧ ಅಂತರಸಂತೆ ಪೊಲೀಸ್ ಠಾಣೆಯಲ್ಲಿ ಕೊಲೆ ಮತ್ತು ಅಕ್ರಮ ಬಂಧನ ಸಂಬಂಧ ಪ್ರಕರಣ ದಾಖಲಾಗಿದ್ದು, ಮೃತ ಕುಟುಂಬಕ್ಕೆ ಪರಿಹಾರ ಮತ್ತು  ಸರ್ಕಾರಿ ಕೆಲಸ ನೀಡುವಂತೆ ಒತ್ತಾಯಿಸಿ ಮೈಸೂರಿನ ಕೆ.ಆರ್.ಆಸ್ಪತ್ರೆ ಮುಂಭಾಗ ಹಾಡಿ ನಿವಾಸಿಗಳು ಮತ್ತು ವಿವಿಧ ಸಂಘಟನೆಗಳವರು ಪ್ರತಿಭಟನೆ ನಡೆಸಿದರು.
ಕೊಲೆ ಮತ್ತು ಅಕ್ರಮ ಬಂಧನ ಪ್ರಕರಣಕ್ಕೆ ಸಂಬಂಧಿಸಿದಂತೆ ಗುಂಡ್ರೆ ಅರಣ್ಯ ವಲಯದ ಆರ್‍ಎಫ್‍ಓ ಅಮೃತೇಶ್, ಡಿಆರ್‍ಎಫ್‍ಓ ಕಾರ್ತಿಕ್ ಯಾದವ್, ಸಿಬ್ಬಂದಿಗಳಾದ ನಂದ್, ಬಾಹುಬಲಿ, ರಾಮು, ಶೇಖರಯ್ಯ, ಸದಾಶಿವ, ಮಂಜು, ಉಮೇಶ್, ಸಂಜಯ್, ರಾಜಾನಾಯಕ್, ಸುಷ್ಮಾ, ಮಹದೇವಿ, ಅಯ್ಯಪ್ಪ, ಸೋಮಶೇಖರ್, ತಂಗಮಣಿ, ಸಿದ್ದಿಕ್ ಪಾಷಾ ಮೇಲೆ ಅಂತರಸಂತೆ ಪೆÇಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ಕರಿಯಪ್ಪನ ಮಗನ ಹೇಳಿಕೆಯನ್ವಯ ಅರಣ್ಯ ಇಲಾಖೆ ಅಧಿಕಾರಿ ಹಾಗೂ ಸಿಬ್ಬಂದಿ ಸೋಮವಾರ ನಮ್ಮ ಮನೆಗೆ ಬಂದರು. ನನ್ನನು ಹಾಗೂ ತಂಗಿಯನ್ನು ಎಳೆದಾಡಿ, ಅವಾಚ್ಯ ಶಬ್ದಗಳಿಂದ ನಿಂದಿಸಿ ನಿಮ್ಮ ತಂದೆ ಎಲ್ಲಿ ತೋರಿಸಿ ಎಂದು ಬೆದರಿಸಿದರು. ಇಲ್ಲದಿದ್ದರೆ ಕುಟುಂಬ ಸಮೇತ ನಿಮ್ಮೆಲ್ಲರಿಗೂ ಗುಂಡು ಹಾರಿಸುವುದಾಗಿ, ಪೆಟ್ರೋಲ್ ಸುರಿದು ಮನೆಯನ್ನು ಸುಡುವುದಾಗಿಯೂ ಬೆದರಿಸಿದ್ದಾರೆ ಎಂದು ಹೇಳಿದ್ದಾರೆ.
ಅದೇ ದಿನ ಮಧ್ಯಾಹ್ನ 2.30ರ ವೇಳೆಯಲ್ಲಿ ಬಹಿರ್ದೆಸೆಗೆ ಹೋಗಿದ್ದ ತಂದೆ ಕರಿಯಪ್ಪನನ್ನು ಅರಣ್ಯ ಇಲಾಖೆಯವರು ಎಳೆದೊಯ್ದಿದ್ದಾರೆ. ಮಂಗಳವಾರ ಸಂಜೆ 6.30ರಲ್ಲಿ ಡಿಆರ್‍ಎಫ್‍ಓ ಕಾರ್ತಿಕ್ ಯಾದವ್ ಅವರು ತಮ್ಮ ಸಂಬಂಧಿಕರಿಂದ ರವಿ ಎಂಬುವರಿಗೆ ಕರೆ ಮಾಡಿ, ಕರಿಯಪ್ಪನನ್ನು ಕರೆದುಕೊಂಡು ಹೋಗುವಂತೆ ತಿಳಿಸಿದ್ದರು. ರವಿ ಅವರು ಹೋಗಿ ನೋಡಿದಾಗ ಅರಣ್ಯ ಇಲಾಖೆಯವರು ನೀಡಿದ ಚಿತ್ರಹಿಂಸೆಯಿಂದ ಕರಿಯಪ್ಪ ತೀವ್ರ ಅಸ್ವಸ್ಥಗೊಂಡ ಪರಿಸ್ಥಿತಿಯಲ್ಲಿದ್ದರು. ನಂತರ ಅವರನ್ನು ಮನೆಗೆ ಕರೆತರಲು ರವಿ ನಿರಾಕರಿಸಿದರು. ಬಳಿಕ ಅರಣ್ಯ ಇಲಾಖೆಯವರೇ ಮೈಸೂರಿಗೆ ನನ್ನ ತಂದೆಯನ್ನು ಕರೆದೊಯ್ದರು ಎಂದು ದೂರಿನಲ್ಲಿ ಸತೀಶ ವಿವರಿಸಿದ್ದಾರೆ.
ಅಂತರ ಸಂತೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾದ ನಂತರವಷ್ಟೇ ವೈದ್ಯರು ಮರೋಣತ್ತರ ಪರೀಕ್ಷೆ ನಡೆಸಿದ್ದಾರೆ. ಮರಣೋತ್ತರ ಪರೀಕ್ಷೆಗೂ ಮುನ್ನ ಮೃತ ಕರಿಯಪ್ಪ ಅವರ ಶವವನ್ನು ನ್ಯಾಯಾಧೀಶರು ಬಂದು ಪರಿಶೀಲಿಸಿದರು. ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿಗಳು ಸ್ಥಳಕ್ಕೆ ಆಗಮಿಸಿ ಮಾಹಿತಿ ಸಂಗ್ರಹಿಸಿದರು.
ಪ್ರತಿಭಟನೆ: ಮೃತ ಕರಿಯಪ್ಪ ಅವರ ಕುಟುಂಬದಲ್ಲಿ ಕರಿಯಪ್ಪನೇ ಆಧಾರವಾಗಿದ್ದ, ಆತನನ್ನು ಕೊಲೆ ಮಾಡಿ ಸಾಯಿಸಿದ ಮೇಲೆ ಅವರ ಕುಟುಂಬದ ನಿರ್ವಹಣೆ ಕಷ್ಟವಾಗಿದೆ. ಹಾಗಾಗಿ ಸರ್ಕಾರ ಮೊದಲು ಮೃತ ಕುಟುಂಬಕ್ಕೆ ಪರಿಹಾರ ನೀಡಿ, ಕರಿಯಪ್ಪ ಕುಟುಂಬದ ಓರ್ವ ಸದಸ್ಯರಿಗೆ ಸರ್ಕಾರಿ ಕೆಲಸ ನೀಡಬೇಕು ಮತ್ತು ಅವರ ಮಕ್ಕಳ ವಿದ್ಯಾಭ್ಯಾಸವನ್ನು ಸರ್ಕಾರವೇ ನೋಡಿಕೊಳ್ಳಬೇಕು ಎಂದು ಒತ್ತಾಯಿಸಿ ಕೆ.ಆರ್.ಆಸ್ಪತ್ರೆಯ ಶವಾಗಾರದ ಮುಂದೆ ಹಾಡಿ ನಿವಾಸಿಗಳು ಪ್ರತಿಭಟನೆ ನಡೆಸಿದರು.

ಪ್ರತಿಭಟನೆ ವೇಳೆ ಆದಿವಾಸಿ ಸಂಘಟನೆಗಳು, ದಸಂಸ, ಕ್ರಾಂತಿದಳ, ಸೇರಿದಂತೆ ವಿವಿಧ ಸಂಘಟನೆಗಳು ಮೃತ ಕರಿಯಪ್ಪನ ಕುಟುಂಬದ ಬೆಂಬಲಕ್ಕೆ ನಿಂತು ಸೂಕ್ತ ಪರಿಹಾರ ನೀಡುವಂತೆ ಆಗ್ರಹಿಸಿದರು.
ಪ್ರತಿಭಟನೆಯಲ್ಲಿ ಆದಿವಾಸಿ ಜಿಲ್ಲಾಧ್ಯಕ್ಷ ಜೆ.ಕೆ.ಮೋಹನ್, ದಲಿತ ಸಂಘಟನೆ ಜಿಲ್ಲಾ ಸಂಘಟನಾ ಕಾರ್ಯದರ್ಶಿ ಕೆ.ಶಿವಕುಮಾರ್, ಕ್ರಾಂತಿದಳದ ಅಧ್ಯಕ್ಷ ಕಂಸಾಳೆ ರವಿ, ಶಿವಕುಮಾರ್ ಶಿವಾರ್ಚಕ, ತೇಜಸ್ ಸೇರಿದಂತೆ ಹಲವರು ಭಾಗವಹಿಸಿದ್ದರು.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು