ವಿಧಾನ ಸೌಧ ವ್ಯಾಪಾರ ಸೌಧ ಮಾಡಿದ್ದು ಬಿಜೆಪಿ ಸಾಧನೆ

ಶಾಸಕರ ಖರೀದಿಸಿದ್ದು, ವಿಧ್ಯಾರ್ಥಿಗಳಿಗೆ ಕೇಸರಿ ಶಾಲು ಹಾಕಿಸಿದ್ದು,  ಹಿಜಾಬ್, ಹಲಾಲ್, ಜಟ್ಕಾಕಟ್ ವಿವಾದ ಸೃಷ್ಟಿಸಿದ್ದು ಡರ್ಟಿ ಪಾಲಿಟಿಕ್ಸ್ : ಪ್ರಿಯಾಂಕ್ ಖರ್ಗೆ

ಮೈಸೂರು : ವಿಧಾನ ಸೌಧವನ್ನು ವ್ಯಾಪಾರ ಸೌಧ ಮಾಡಿದ್ದು ಬಿಜೆಪಿಯವರ ಸಾಧನೆ ಎಂದು ಕರ್ನಾಟಕ ಪ್ರದೇಶ ಸಮಿತಿ ಸಂವಹನ ವಿಭಾಗದ ಮುಖ್ಯಸ್ಥ, ಶಾಸಕ ಪ್ರಿಯಾಂಕ್ ಖರ್ಗೆ ಆಕ್ರೋಶ ವ್ಯಕ್ತಪಡಿಸಿದರು.
ಕಾಂಗ್ರೆಸ್ ಭವನದಲ್ಲಿ ಭಾನುವಾರ ಸುದ್ದಿಗೋಷ್ಠಿಯಲ್ಲಿ ಪೇ ಸಿಎಂ ಅಭಿಯಾನ ಕಾಂಗ್ರೆಸ್ ಡರ್ಟಿ ಪಾಲಿಟಿಕ್ಸ್ ಎಂಬ ಸಿಎಂ ಬಸವರಾಜ ಬೊಮ್ಮಾಯಿ ಟೀಕೆಗೆ ಪ್ರತಿಕ್ರಿಯಿಸಿ ಡರ್ಟಿ ಪಾಲಿಟಿಕ್ಸ್ ಮಾಡುತ್ತಿರುವುದು ಬಿಜೆಪಿಯವರು ಎಂದು ತಿರುಗೇಟು ನೀಡಿದರು.
ಶಾಸಕರ ಖರೀದಿಸಿ ಸಿಎಂ ಆಗಿದ್ದು, ಕೇಸರಿ ಶಾಲು ಹಾಕಿಸಿ ಧರ್ಮ ದಂಗಲ್ ಮಾಡಲು ಯುವಕರನ್ನು ಕಳುಹಿಸುತ್ತಿರುವುದು, ಹಿಜಾಬ್, ಹಲಾಲ್, ಜಟ್ಕಾ ಕಟ್ ವಿವಾದ ಸೃಷ್ಟಿಸಿದ್ದು ಡರ್ಟಿ ಪಾಲಿಟಿಕ್ಸ್ ಎಂದರು.
ಶೇ. ೪೦ ಕಮಿಷನ್ ಆರೋಪ ಬಂದಾಗ, ಪಿಎಸ್‌ಐ ನೇಮಕಾತಿ ಸೇರಿದಂತೆ ಹಲವಾರು ಭ್ರಷ್ಟಾಚಾರದ ಹಗರಣಗಳು ಬಯಲಿಗೆ ಬಂದಾಗ ರಾಜ್ಯದ ಮರ್ಯಾದೆಗೆ ಧಕ್ಕೆಯಾಗಿಲ್ಲ. ಭ್ರಷ್ಟಾಚಾರ ಮಾಡಿದರೂ ಪರವಾಗಿಲ್ಲ. ಅಭಿಯಾನ ಮಾಡಬಾರದು ಎನ್ನುವ ಬಿಜೆಪಿ ಮುಖಂಡರು ಹತಾಶರಾಗಿದ್ದಾರೆ. ಭ್ರಷ್ಟಾಚಾರದ ಇಮೇಜ್‌ನಿಂದ ಹೊರಬರಲಾಗುತ್ತಿಲ್ಲ ಎಂದು ಕುಟುಕಿದರು.
ಕಮಿಷನ್, ಭ್ರಷ್ಟಾಚಾರಕ್ಕೆ ಉತ್ತರ ಕೊಡಲಾಗದೇ ಧರ್ಮ, ಜಾತಿಯ ಕಾರ್ಡ್ ಬಳಸುತ್ತಿದ್ದಾರೆ. ಆಡಳಿತ ಪಕ್ಷ ವಿಧಾನಸೌಧದಲ್ಲಿ ಪ್ಲೇಕಾರ್ಡ್ ಪ್ರದರ್ಶಿಸಿದ, ಸದನದ ಬಾವಿಗಿಳಿದ ಉದಾಹರಣೆಯೇ ಇಲ್ಲ. ಭ್ರಷ್ಟಾಚಾರದ ಕುರಿತು ಚರ್ಚೆಗೆ ಅವಕಾಶ ಕೊಡದೇ ಅಧಿವೇಶನ ಮುಗಿಸಿತು ಎಂದು ಹೇಳಿದರು.
ಲಿಂಗಾಯತ ಸಿಎಂ ಟಾರ್ಗೆಟ್ ವಿಚಾರವಾಗಿ ಪ್ರತಿಕ್ರಿಯಿಸಿದ ಪ್ರಿಯಾಂಕ್ ಖರ್ಗೆ, ನಾಡಿನ ನಾಯಕ ಯಡಿಯೂರಪ್ಪ ಅವರು ಕಣ್ಣೀರು ಹಾಕಿ ಸಿಎಂ ಸ್ಥಾನದಿಂದ ಕೆಳಗಿಳಿದಾಗ, ಸಂತೋಷ ಪಾಟೀಲ್ ಆತ್ಮಹತ್ಯೆ ಮಾಡಿಕೊಂಡಾಗ, ಶೇ.೩೦ ಕಮಿಷನ್ ಕೊಡಬೇಕು ಎಂದು ಹೇಳಿದ ಸ್ವಾಮೀಜಿಯೊಬ್ಬರು ಲಿಂಗಾಯತ ಸಮಾಜದವರಲ್ಲವೇ ಎಂದು ಪ್ರಶ್ನಿಸಿದರು.
ಸರ್ವವ್ಯಾಪಿ ಸರ್ವಸ್ಪರ್ಶಿ ಎಂಬುದು ಬಿಜೆಪಿಯವರ ಘೋಷವಾಕ್ಯ ಬದಲಾಗಿದ್ದು, ಸರ್ವವ್ಯಾಪಿ ಭ್ರಷ್ಟಾಚಾರ ಎಂದಾಗಿದೆ. ಭ್ರಷ್ಟಚಾರಕ್ಕೆ ಧರ್ಮ ಜಾತಿ ಇಲ್ಲ. ವೈಪಲ್ಯ ಮುಚ್ಚಿಕೊಳ್ಳಲು ಧರ್ಮ, ಜಾತಿ ತರುವುದಕ್ಕೆ ನಾಚಿಕೆಯಾಗಬೇಕು ಎಂದರು.
ಸಿಎಂ ಸ್ಥಾನಕ್ಕೆ ೨ ಸಾವಿರ ಕೋಟಿ ಕೊಡಬೇಕೆಂದ ಯತ್ನಾಳ್, ಸರ್ಕಾರ ಸರಿಯಾಗಿ ನಡೆಯುತ್ತಿಲ್ಲ ಎಂದ ರೇಣುಕಾಚಾರ್ಯ, ಸಚಿವರಾದ ಮಾಧುಸ್ವಾಮಿ, ವಿಶ್ವನಾಥ್ ಅವರು ಲಿಂಗಾಯತ ವಿರೋಧಿಗಳೇ? ಎಂದು ಪ್ರಶ್ನಿಸಿದರು.
ಸರ್ಕಾರದ ಮರ್ಯಾದೆ ರಾಜ್ಯದ ಮರ್ಯಾದೆ ಎಂದು ಬಿಂಬಿಸುತ್ತಿರುವುದು ಸರಿಯಲ್ಲ. ತೆಲಂಗಾಣ ವಿಮಾನ ನಿಲ್ದಾಣದಲ್ಲಿ ಶೇ.೪೦ ಕಮಿಷನ್ ಸಿಎಂ ಪೋಸ್ಟರ್ ಆಗಿದ್ದಕ್ಕೆ ತಲೆ ತಗ್ಗಿಸಬೇಕು. ಮುಖ್ಯಮಂತ್ರಿಗಳಿಗೆ ಪ್ರಾಮಾಣಿಕತೆ ಇದ್ದರೆ ಹಗರಣಗಳನ್ನು ನ್ಯಾಯಾಂಗ ತನಿಖೆಗೆ ಒಪ್ಪಿಸಬೇಕು ಎಂದು ಒತ್ತಾಯಿಸಿದರು.
ಒಂದು ಕ್ಯೂ ಆರ್ ಕೋಡ್‌ಗೆ ಸರ್ಕಾರ ಅಲ್ಲಾಡುತ್ತಿದೆ. ಪೇ ಸಿಎಂ ಪೋಸ್ಟರ್‌ನಲ್ಲಿ ಕಾಂಗ್ರೆಸ್ ಮಾಹಿತಿ ಇಲ್ಲ. ಪತ್ರಿಕೆಗಳಲ್ಲಿ ಪ್ರಕಟವಾದ, ಶಾಸಕರು, ಸಚಿವರು ನೀಡಿದ ಮಾಹಿತಿಯನ್ನು ಹಾಕಿದ್ದೇವೆ. ಈ ಸರ್ಕಾರದ ದುರಾಡಳಿತದ ವಿರುದ್ಧ ಜನರು ಆಕ್ರೋಶಗೊಂಡಿದ್ದಾರೆ. ಹಾಗಾಗಿಯೇ ಜನಸ್ಪಂದನ ಖಾಲಿ ಕುರ್ಚಿಗಳ ಉತ್ಸವವಾಯಿತು ಎಂದು ಟೀಕಿಸಿದರು.
ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಡಾ.ಬಿ.ಜೆ.ವಿಜಯ್‌ಕುಮಾರ್, ನಗರ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಶಿವಣ್ಣ, ನಾಗವಾಲ ಗ್ರಾಪಂ ಅಧ್ಯಕ್ಷ ನರೇಂದ್ರ, ಕಾಂಗ್ರೆಸ್ ವಕ್ತಾರ ಎಂ.ಮಹೇಶ್ ಮುಂತಾದವರಿದ್ದರು.

`ಸಿಎಂ ಬಸವರಾಜ ಬೊಮ್ಮಾಯಿ ಡಮ್ಮಿಯಲ್ಲ. ಕೈಗೊಂಬೆ ಮುಖ್ಯಮಂತ್ರಿ. ಅತೀ ಬುದ್ಧಿವಂತರು. ಕೇಶವ ಕೃಪದ ನಿರ್ದಶನವನ್ನು ಪಾಲಿಸುತ್ತಾರೆ’
-ಪ್ರಿಯಾಂಕ್ ಖರ್ಗೆ, ಶಾಸಕ

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು