ಶಾಲಾ ಪಠ್ಯದಲ್ಲಿ ಭಗವದ್ಗೀತೆ ಸೇರ್ಪಡೆಗೆ ಪ್ರೊ.ಕೆ.ಎಸ್.ಭಗವಾನ್ ವಿರೋಧ


ಪ್ರಜಾಪ್ರಭುತ್ವ ಹಾಗೂ ಸಂವಿಧಾನಕ್ಕೆ ವಿರುದ್ಧವಾಗಿ ಚಾತುರ್ವಣದ ಭಗವದ್ಗೀತೆಯನ್ನು ಹೇರಲು ಮುಂದಾದರೆ ದೊಡ್ಡ ಮಟ್ಟದ ಹೋರಾಟದ ಎಚ್ಚರಿಕೆ

ಮೈಸೂರು : ಸೆ.೨೦ : ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಅವರು ಶಾಲಾ  ಪಠ್ಯದ ನೀತಿ ಬೋಧನೆಯಲ್ಲಿ ಭಗವದ್ಗೀತೆ ಸೇರಿಸುತ್ತೇನೆ ಎಂದು ಹೇಳಿರುವುದು ಸಂವಿಧಾನ ಮತ್ತು ಪ್ರಜಾಪ್ರಭುತ್ವ ವಿರೋಧಿಯಾಗಿದೆ ಎಂದು ಪ್ರಗತಿಪರ ಚಿಂತಕ, ಖ್ಯಾತ ಸಾಹಿತಿ ಪ್ರೊ.ಕೆ.ಎಸ್.ಭಗವಾನ್ ಆಕ್ರೋಶ ವ್ಯಕ್ತಪಡಿಸಿದ್ದಾರೆ. ನಗರದ ಪತ್ರಕರ್ತರ ಭವನದಲ್ಲಿ ಮಂಗಳವಾರ ಸುದ್ದಿಗೋಷ್ಠಿಯೊಂದರಲ್ಲಿ ಮಾತನಾಡಿದ ಅವರು, ಭಗವದ್ಗೀತೆ ಚಾತುರ್ವಣದಿಂದ ಕೂಡಿದೆ. ಇದರಲ್ಲಿ ಬ್ರಾಹ್ಮಣರು ಮೇಲು, ಇನ್ನುಳಿದ ಜಾತಿಯವರು ಬ್ರಾಹ್ಮಣರ ಗುಲಾಮರು  ಎಂದು ಹೇಳಿದೆ. ಇಂತಹ ಅಸಂವಿಧಾನಿಕ ಮತ್ತು ಬ್ರಾಹ್ಮಣ್ಯೀಕರಣದ ಭಗವದ್ಗೀತೆಯನ್ನು ಯಾವುದೇ ಕಾರಣಕ್ಕೂ ಶಾಲಾ ಪಠ್ಯದ ನೀತಿ ಭೋದನೆಯಲ್ಲಿ ಸೇರ್ಪಡೆ ಮಾಡಬಾರದು. ಇದು ಮಕ್ಕಳ ಮನಸ್ಸಿನ ಮೇಲೆ ಬ್ರಾಹ್ಮಣ್ಯೀಕರಣ ಹೇರುವ ಹುನ್ನಾರವಾಗಿದೆ. ವೈದಿಕ ಶಾಹಿಗಳು ತಮ್ಮ ಅಜೆಂಡಾವನ್ನು ಸಾಧಿಸಲು ಇಂತಹ ಕೆಲಸಗಳನ್ನು ಮಾಡುತ್ತಲೇ ಬಂದಿದ್ದಾರೆ. 
ಶೇ.೩ರಷ್ಟು ಇರುವ ಬ್ರಾಹ್ಮಣರು ತಮ್ಮ ವೈದಿಕ ಹಿಂದೂ ಧರ್ಮವನ್ನು ಹೇರಲು ಪ್ರಯತ್ನ ಪಡುತ್ತಿದ್ದಾರೆ. ಹಾಗಾಗಿಯೇ ಶಾಲಾ ಪಠ್ಯದಲ್ಲಿ ಭಗವದ್ಗೀತೆ ತರಲು ಮುಂದಾಗಿರುವುದು. ಇಂತಹ ಸಂದರ್ಭದಲ್ಲಿ ನಾವು ಎಚ್ಚೆತ್ತುಕೊಂಡು ಹಿಂದೂ ಧರ್ಮವನ್ನು ವಿರೋಧಿಸಬೇಕಿದೆ ಎಂದು ಹೇಳಿದರು.
ರಾಮಾಯಣದಲ್ಲಿ ರಾಮನ ಕೈಯಲ್ಲೇ ಜನಿವಾರ ಹಾಕದೇ ಇರುವವರು ಶೂದ್ರರು ಎಂದು ಹೇಳಿಸಿದ್ದಾರೆ. ಶೂದ್ರರು ಅಂದರೆ ಬ್ರಾಹ್ಮಣರನ್ನು ಬಿಟ್ಟು ಉಳಿದವರು ವೇಶ್ಯೆಯರ ಮಕ್ಕಳು ಎಂದು ಅರ್ಥ. ಇಂತಹ ಗುಲಾಮ ಸಂಸ್ಕೃತಿ ನಮಗೆ ಬೇಕೆ? ಎಂದು ಪ್ರಶ್ನಿಸಿದರು.
ಪ್ರಧಾನಿ ನರೇಂದ್ರ ಮೋದಿಯವರೇ ನಮ್ಮ ದೇಶದ ಶ್ರೇಷ್ಠ ಗ್ರಂಥ ಸಂವಿಧಾನ ಎಂದು ಹೇಳಿದ್ದಾರೆ. ಅಂತಹ ಸಂವಿಧಾನವನ್ನು ಶಾಲಾ ಪಠ್ಯದಲ್ಲಿ ಅಳವಡಿಸುವುದನ್ನು ಬಿಟ್ಟು ಚಾತುರ್ವಣದ ಭಗವದ್ಗೀತೆ ಹೇರಲು ಹೊರಟಿರುವುದು ಖಂಡನೀಯ. ಕೂಡಲೇ ಈ ನಿರ್ಧಾರದಿಂದ ಹಿಂದೆ ಸರಿಯಬೇಕು ಎಂದು ಆಗ್ರಹಿಸಿದರು.
ಸ್ವಾಮಿ ವಿವೇಕಾನಂದರು ನಾನು ಹಿಂದೂ ಅಲ್ಲ ಎಂದಿದ್ದರು, ಅಂಬೇಡ್ಕರ್ ಅವರು ನಾನು ಹಿಂದುವಾಗಿ ಹುಟ್ಟಿದರೂ ಹಿಂದುವಾಗಿ ಸಾಯಲಾರೆ ಎಂದು ಬೌದ್ದ ಧರ್ಮ ಸ್ವೀಕರಿಸಿದರು. ಕುವೆಂಪು ಅವರು ಹಿಂದೂ ಧರ್ಮವನ್ನು ಧಿಕ್ಕರಿಸಿದ್ದರು. ಹಾಗಾಗಿ ಬರೀ ಬ್ರಾಹ್ಮಣ್ಯವನ್ನೇ ತುಂಬಿಕೊಂಡಿರುವ ಹಿಂದೂ ಧರ್ಮವನ್ನು ನಾವೆಲ್ಲರೂ ವಿರೋಧಿಸಬೇಕಿದೆ. 
ಕೆಲವು ರಾಜಕಾರಣಿಗಳು ತಮ್ಮ ರಾಜಕೀಯ ಅಧಿಕಾರಕ್ಕಾಗಿ ಗುಲಾಮರಾಗಿ ಸರ್ಕಾರ ಕೈಗೊಳ್ಳುತ್ತಿರುವುದರ ತಪ್ಪು ನಿರ್ಧಾರಗಳನ್ನು ಒಪ್ಪಿಕೊಂಡು ಸುಮ್ಮನಿದ್ದಾರೆ ಎಂದು ಕಿಡಿಕಾರಿದರು.
ರಾಜ್ಯ ಸರ್ಕಾರ ಇಂತಹ ಬ್ರಾಹ್ಮಣ್ಯೀಕರಣದ ಭಗವದ್ಗೀತೆಯನ್ನು ಶಾಲಾ ಪಠ್ಯದಲ್ಲಿ ಹೇರಲು ಮುಂದಾದರೆ ರಾಜ್ಯಾದ್ಯಂತ ದೊಡ್ಡ ಮಟ್ಟದ ಹೋರಾಟವನ್ನೇ ಮಾಡಬೇಕಾಗುತ್ತದೆ ಎಂದು ಎಚ್ಚರಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾಜಿ ಮೇಯರ್ ಪುರುಷೋತ್ತಮ್, ಲೇಖಕ ಸಿದ್ದಸ್ವಾಮಿ, ಮಲೆಯೂರು ಸೋಮಯ್ಯ, ವಿಷಕಂಠು, ವಿಷ್ಣುಪ್ರಸಾದ್ ಉಪಸ್ಥಿತರಿದ್ದರು.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು