ಮತಾಂತರ ನಿಷೇಧ ಸಂವಿಧಾನದ ಆಶಯಕ್ಕೆ ವಿರುದ್ಧ


ಸಿದ್ದರಾಮಯ್ಯ ವಾಗ್ದಾಳಿ, ಭಾರತ್ ಜೋಡೋದಲ್ಲಿ

 25 ಸಾವಿರ ಜನ ಸೇರಲು ಡಿಕೆಶಿ ಕರೆ


ಮೈಸೂರು : ಸರ್ಕಾರ ರಾಜ್ಯದಲ್ಲಿ ಕೋಮುಭಾವನೆ ಕೆರಳಿಸಲು ವಿರೋಧ ಪಕ್ಷಗಳ ವಿರೋಧದ ನಡುವೆಯೂ ಅಂಗೀಕರಿಸಿರುವ ಮತಾಂತರ ನಿಷೇಧ ಕಾಯ್ದೆ ಸಂವಿಧಾನದ ಆರ್ಟಿಕಲ್-25ರ ಆಶಯಕ್ಕೆ ವಿರುದ್ಧವಾಗಿದೆ ಎಂದು ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದರು.

ಮೈಸೂರಿನಲ್ಲಿ ಭಾನುವಾರ ಆಯೋಜಿಸಿದ್ದ ಭಾರತ್ ಜೋಡೋ ಕಾರ್ಯಕ್ರಮದ ಪೂರ್ವಭಾವಿ ಸಭೆಯಲ್ಲಿ ಅವರು ಮಾತನಾಡಿ, 8ವರ್ಷದ ಬಿಜೆಪಿ ಆಡಳಿತದಲ್ಲಿ ತಳ ಸಮುದಾಯವಾದ ದಲಿತರು, ಹಿಂದುಳಿದ ವರ್ಗ, ಅಲ್ಪಸಂಖ್ಯಾತರಿಗೆ ರಕ್ಷಣೆ ಇಲ್ಲ. ಬಿಜೆಪಿ ಧರ್ಮ ರಾಜಕಾರಣ ಮಾಡುತ್ತಾ ದೇಶ ಮತ್ತು ಸಂವಿಧಾನವನ್ನು ಒಡೆಯುತ್ತಿದೆ. ಆನರು ಸದಾ ಆತಂಕದಲ್ಲಿದ್ದಾರೆ. ಭಾರತ ಯಾವುದೇ ಒಂದು ಧರ್ಮಕ್ಕೆ ಸೀಮಿತವಾಗದ ಬಹುತ್ವದಿಂದ ಕೂಡಿದ ದೇಶ. ಎಲ್ಲರಿಗೂ ತಮ್ಮ ತಮ್ಮ ಧರ್ಮಾಚರಣೆ ಮಾಡುವ ಯಾವುದೇ ಧರ್ಮಕ್ಕೆ ಮತಾಂತರವಾಗುವ ಹಕ್ಕಿದೆ. ಯಾವುದೇ ಬಲವಂತದ ಮತಾಂತರ ನಡೆಯದಿದ್ದರೂ ಬಿಜೆಪಿ ವದಂತಿಯನ್ನು ಹಬ್ಬಿಸಿ ಈ ಕಾನೂನು ಜಾರಿ ಮಾಡಿದೆ ಎಂದರು.

ರಾಜ್ಯದಲ್ಲಿ 545 ಪಿಎಸ್‍ಐ ಹುದ್ದೆಗಳ ನೇಮಕಕ್ಕೆ ಹಿಂದೆಂದೂ ಕಂಡು ಕೇಳರಿಯದ ಭ್ರಷ್ಟಾಚಾರ ನಡೆದಿದೆ. ಸುಮಾರು 300 ಕೋಟಿ ಹಣ ಮಂತ್ರಿಗಳು, ಅಧಿಕಾರಿಗಳ ಜೇಬು ಸೇರಿದೆ. ಎಡಿಜಿಪಿ ಕಚೇರಿಯಲ್ಲೇ ಈ ಅವ್ಯವಹಾರ ನಡೆದಿದ್ದು, ರಾಜ್ಯದ ಇತಿಹಾಸದಲ್ಲೇ ಲಂಚದ ಆರೋಪಕ್ಕೆ ಐಪಿಎಸ್, ಐಎಎಸ್ ಅಧಿಕಾರಿಗಳು ಜೈಲು ಸೇರುತ್ತಿರುವುದು ದುರ್ದೈವ. ನಾ ಖಾವೂಂಗ, ನಾ ಖಾನೆದೂಂಗ ಎನ್ನುವ ಪ್ರಧಾನಿ ಇಷ್ಟೆಲ್ಲಾ ಭ್ರಷ್ಟಾಚಾರ ನಡೆಯುತ್ತಿದ್ದರೂ ಕಣ್ಣುಮುಚ್ಚಿ ಕುಳಿತಿದ್ದಾರೆ. ಬಿಜೆಪಿ ಸರ್ಕಾರ ಅತ್ಯಂತ ಕಡು ಭ್ರಷ್ಟ ಸರ್ಕಾರವಾಗಿದ್ದು, ಇದನ್ನು ಕಿತ್ತೊಗೆಯಲು, ದೇಶದಲ್ಲಿ ಶಾಂತಿ, ಸೌಹಾರ್ಧತೆ ಕಾಪಾಡಲು ರಾಹುಲ್ ಗಾಂಧಿ ಭಾರತ್ ಜೋಡೋ ಕಾರ್ಯಕ್ರಮ ನಡೆಸುತ್ತಿದ್ದು, ಪಾದಯಾತ್ರೆ ಮೈಸೂರಿಗೆ ಬಂದಾಗ ಸಹಸ್ರ ಸಂಖ್ಯೆಯಲ್ಲಿ ಸಾರ್ವಜನಿಕರು ಪಾಲ್ಗೊಂಡು ಬೆಂಬಲಿಸಬೇಕೆಂದು ಕೋರಿದರು.

ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಮಾತನಾಡಿ, ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿ ತಮಗೆ ಒಲಿದಿದ್ದ ಪ್ರಧಾನಿ ಹುದ್ದೆಯನ್ನು ತ್ಯಾಗ ಮಾಡಿದವರು. ಮುಂದಿನ ಬಾರಿ ಕಾಂಗ್ರೆಸ್ ಅಧಿಕಾರಕ್ಕೆ ಬರುವುದು ಖಚಿತ ಎಂದು ತಿಳಿದ ಬಿಜೆಪಿ ಮುಖಂಡರು ವಿನಾಕಾರಣ ಈಡಿ ಮೂಲಕ ಕಿರುಕುಳ ನೀಡುತ್ತಿದೆ. ರಾಹುಲ್ ಗಾಂಧಿ ಮೈಸೂರಿಗೆ ಆಗಮಿಸುತ್ತಿರುವುದು ನಮ್ಮ ಸೌಭಾಗ್ಯ. ಪಾದಯಾತ್ರೆಯಲ್ಲಿ ಕನಿಷ್ಠ 25 ಸಾವಿರ ಜನರು ಭಾಗವಹಿಸಿ ಯಶಸ್ವಿಗೊಳಿಸಬೇಕು ಎಂದು ಹೇಳಿದರು.

ಕೆಪಿಸಿಸಿ ಕಾರ್ಯಾಧ್ಯಕ್ಷ ಆರ್.ದ್ರವನಾರಾಯಣ ಪ್ರಸ್ತಾವಿಕವಾಗಿ ಮಾತನಾಡಿದರು. ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಬಿ.ಜೆ.ವಿಜಯಕುಮಾರ್, ನಗರಾಧ್ಯಕ್ಷ ಆರ್.ಮೂರ್ತಿ, ಶಾಸಕರಾದ ತನ್ವೀರ್ ಸೇಠ್, ಡಾ.ಯತೀಂದ್ರ, ಎಚ್.ಪಿ.ಮಂಜುನಾಥ್, ಅನಿಲ್ ಚಿಕ್ಕಮಾದು, ಮಾಜಿ ಸಚಿವ ಡಾ.ಎಚ್.ಸಿ.ಮಹದೇವಪ್ಪ, ಮಾಜಿ ಶಾಸಕರಾದ ಎಂ.ಕೆ.ಸೋಮಶೇಖರ್, ವಾಸು ಮುಂತಾದವರು ಇದ್ದರು.

ಕೋಟ್ 

ದೇಶದಲ್ಲಿ ಧರ್ಮದ ಹೆಸರಲ್ಲಿ ನಡೆಯುತ್ತಿರುವ ಅನೈತಿಕ ಗೋಂಡಾಗಿರಿ, ಕೊಲೆ, ಸುಲಿಗೆ, ಬೆದರಿಕೆಗಳನ್ನು ತಪ್ಪಿಸಲು ಭಾರತ್ ಜೋಡೋ ಯಾತ್ರೆ ನಡೆಸುವ ಬಗ್ಗೆ ಉದಯಪುರದಲ್ಲಿ ನಡೆದ ಎಐಸಿಸಿ ಸಭೆಯಲ್ಲಿ ತೀರ್ಮಾನವಾಗಿತ್ತು. ರಾಹುಲ್ ಗಾಂಧಿ ಪಾದಯಾತ್ರೆಯನ್ನು ದೇಶವು ಒಂದು ಆಸೆಗಣ್ಣಿನಿಂದ ನೋಡುತ್ತಿದೆ. ಎಲ್ಲೆಡೆ ಅಭೂತಪೂರ್ವ ಬೆಂಬಲ ದೊರಕಿದೆ.

-ಜಾನ್ ರೋಸಿ, ಎಐಸಿಸಿ ಕಾರ್ಯದರ್ಶಿ



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು