ರಾಷ್ಟ್ರಪತಿಗಳಿಂದ ದಸರಾ ಉದ್ಘಾಟನೆ: ಸಂತಸ ವ್ಯಕ್ತಪಡಿಸಿದ ಶಾಸಕ ಆರ್.ನರೇಂದ್ರ

 

ವರದಿ-ಶಾರೂಖ್ ಖಾನ್, ಹನೂರು

ಹನೂರು : ಭಾರತದ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು  ಶ್ರೀ ಚಾಮುಂಡೇಶ್ವರಿ ದರ್ಶನ ಪಡೆದು ದಸರಾ ಕಾರ್ಯಕ್ರಮಕ್ಕೆ ಚಾಲನೆ ನೀಡಿರುವುದು ಸಂತಸದ ವಿಷಯ ಎಂದು ಶಾಸಕ ಆರ್.ನರೇಂದ್ರ ತಿಳಿಸಿದರು.
ಪಟ್ಟಣದ ಪ್ರವಾಸಿಮಂದಿರದಲ್ಲಿ ದಸರಾ ಆಚರಣೆ ಸಂಬಂಧ ಕರೆಯಲಾಗಿದ್ದ ತಾಲ್ಲೂಕು ಮಟ್ಟದ ಅಧಿಕಾರಿಗಳ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಅವರು, ಜಿಲ್ಲಾ ಉಸ್ತುವಾರಿ ಸಚಿವ ವಿ.ಸೋಮಣ್ಣ ಅವರ ನಿರ್ದೇಶನದಂತೆ  ಜಿಲ್ಲೆಯ ಎಲ್ಲಾ ತಾಲ್ಲೂಕು ಕೇಂದ್ರಗಳಲ್ಲಿ ದಸರಾ ಹಬ್ಬವನ್ನು ವಿಜೃಂಭಣೆಯಿಂದ ಅರ್ಥ ಪೂರ್ಣವಾಗಿ ಆಚರಣೆ ಮಾಡಲು ತೀರ್ಮಾನ ಮಾಡಲಾಗಿದೆ. ಹನೂರು ತಾಲೂಕಿನಲ್ಲೂ ಅದ್ದೂರಿಯಾಗಿ ಆಚರಣೆ ಮಾಡಬೇಕು. ಪಟ್ಟಣದ ಕ್ರಿಸ್ತರಾಜ ಶಾಲೆಯಲ್ಲಿ ವೇದಿಕೆ ಕಾರ್ಯಕ್ರಮವನ್ನು ಆಯೋಜನೆ ಮಾಡಲಾಗುವುದು. ಗಿಚ್ಚಿ ಗಿಲಿಗಿಲಿ ಹಾಸ್ಯ ತಂಡದವರಿಂದ ಹಾಗೂ ಸ್ಥಳೀಯ ಕಲಾವಿದರಿಂದ ಸಾಂಸ್ಕೃತಿಕ ಕಾರ್ಯಕ್ರಮ ಏರ್ಪಡಿಸಲಾಗುತ್ತದೆ. ಶಾಲಾ ಮಕ್ಕಳಿಂದ ನಡೆದ ನೃತ್ಯ, ರಂಗೋಲಿ ಸ್ಪರ್ಧೆ ಆಟೋಟ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಬಹುಮಾನ ವಿತರಣೆ ಮಾಡಲಾಗುವುದು ಎಂದರು.
ಸೇಸ್ಕ್ ವತಿಯಿಂದ ಖಾಸಗಿ ಹಾಗೂ ಸರ್ಕಾರಿ ಕಟ್ಟಡಗಳಿಗೆ ವಿದ್ಯುತ್ ದೀಪಾಲಂಕಾರ ಕೈಗೊಳ್ಳಬೇಕು. ಕುಡಿಯುವ ನೀರಿನ ವ್ಯವಸ್ಥೆ, ಪೊಲೀಸ್  ಭದ್ರತೆ, ಅರೋಗ್ಯ ಇಲಾಖೆ, ಅಗ್ನಿ ಶಾಮಕ ಸೇರಿದಂತೆ ವಿವಿಧ ಇಲಾಖೆ ಅಧಿಕಾರಿಗಳಿಗೆ ನೀಡಿರುವ ಜವಾಬ್ದಾರಿಯನ್ನು ಅಚ್ಚುಕಟ್ಟಾಗಿ ನಿರ್ವಹಿಸುವ ಮೂಲಕ ವಿಜೃಂಭಣೆಯಿಂದ ದಸರಾ ಆಚರಣೆ ಮಾಡಬೇಕು ಎಂದರು.
ಅಧಿಕಾರಿಗಳು, ಜನ ಪ್ರತಿನಿಧಿಗಳು, ಸಂಘ ಸಂಸ್ಥೆಯವರು, ಸಾಹಿತಿಗಳು, ಕವಿಗಳು, ವಿವಿಧ ಸಂಘಟನೆ ಮುಖಂಡರುಗಳು ಸಹಕಾರ ನೀಡುವ ಮೂಲಕ ತಾಲೂಕು ಮಟ್ಟದ ದಸರಾ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕು ಎಂದರು.
ಈ ಸಂದರ್ಭದಲ್ಲಿ ತಹಸಿಲ್ದಾರ್ ಆನಂದಯ್ಯ, ಪಟ್ಟಣ ಪಂಚಾಯ್ತಿ ಮುಖ್ಯಾಧಿಕಾರಿ ಪರಶಿವಯ್ಯ, ತಾಲೂಕು ಪಂಚಾಯ್ತಿ ಕಾರ್ಯನಿರ್ವಹಣಾಧಿಕಾರಿ ಶ್ರೀನಿವಾಸ್, ವೃತ್ತ ನಿರೀಕ್ಷಕ ಸಂತೋಷ್ ಕಶ್ಯಪ್, ಕೃಷಿ ಸಹಾಯಕ ನಿರ್ದೇಶಕಿ ಸುಂದರಮ್ಮ, ಕ್ಷೇತ್ರ ಶಿಕ್ಷಣಾಧಿಕಾರಿ ಶಿವರಾಜು, ಪಟ್ಟಣ ಪಂಚಾಯ್ತಿ ಸದಸ್ಯರಾದ ಗಿರೀಶ್, ಹರೀಶ್, ಸಂಪತ್ ಕುಮಾರ್ ಸೇರಿದಂತೆ ಇನ್ನಿತರರು ಹಾಜರಿದ್ದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು