ಮೈಸೂರಿನ ಸಂತ ಫಿಲೋಮಿನಾ ಕಾಲೇಜಿನಲ್ಲಿ (ಸ್ವಾಯುತ್ತ) ದ್ವಿತೀಯ ವರ್ಷದ ಎಂಬಿಎ, ಎಂಸಿಎ ಪದವಿ ಪ್ರದಾನ ಸಮಾರಂಭ

ವರದಿ : ನಿಷ್ಕಲ ಎಸ್., ಮೈಸೂರು

ಮೈಸೂರು : ಶೈಕ್ಷಣಿಕ ಶ್ರೇಷ್ಠತೆ ಹಾಗೂ ಸಮಗ್ರ ಶಿಕ್ಷಣಕ್ಕೆ ಹೆಸರುವಾಸಿಯಾದ ನಗರದ ಪ್ರತಿಷ್ಠಿತ ಸಂತ ಫಿಲೋಮಿನಾ ಕಾಲೇಜಿನಲ್ಲಿ (ಸ್ವಾಯುತ್ತ) ದ್ವಿತೀಯ ವರ್ಷದ ಎಂಬಿಎ ಮತ್ತು ಎಂಸಿಎ ಪದವಿ ಪ್ರದಾನ ಸಮಾರಂಭ ನಡೆಯಿತು.

ಸೋಮವಾರ ಬೆಳಿಗ್ಗೆ ಕಾಲೇಜಿನ ಸಭಾಂಗಣದಲ್ಲಿ ನಡೆದ ಪದವಿ ಪ್ರದಾನ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಕರ್ನಾಟಕ ಸರ್ಕಾರದ ಉನ್ನತ ಶಿಕ್ಷಣ ಪರಿಷತ್ತಿನ ಉಪಾಧ್ಯಕ್ಷರು, ಗುಲ್ಬರ್ಗಾ ವಿಶ್ವವಿದ್ಯಾಲಯದ ಮಾಜಿ ಕುಲಪತಿಗಳು ಹಾಗೂ ಮೈಸೂರು ವಿಶ್ವವಿದ್ಯಾಲಯದ ಜೈವಿಕ ತಂತ್ರಜ್ಞಾನ ಅಧ್ಯಯನ ವಿಭಾಗದ ಜೀವಿತಾವಧಿ ವಿಶೇಷ ಪ್ರಾಧ್ಯಾಪಕರಾದ ಡಾ.ಎಸ್.ಆರ್.ನಿರಂಜನ್ ಕಾರ್ಯಕ್ರಮವನ್ನು ಉದ್ಘಾಟಿಸಿ ವಿದ್ಯಾರ್ಥಿಗಳಿಗೆ ಪದವಿ ಪ್ರದಾನ ಮಾಡಿದರು.

ನಂತರ ಅವರು ಮಾತನಾಡಿ, ಪ್ರಸ್ತುತ ದೇಶದಲ್ಲಿ ನಡೆಯುತ್ತಿರುವ ಶೈಕ್ಷಣಿಕ ಸಾಧನೆಗಳು, ಲಭ್ಯವಿರುವ ಅವಕಾಶಗಳು, ನೂತನ ಪದವಿಧರರು ಎದುರಿಸಬೇಕಾದ ಸವಾಲುಗಳು, ಎಲ್ಲ ವಿಭಾಗಳಲ್ಲೂ ತಂತ್ರಜ್ಞಾನ ಬಳಕೆ ಕುರಿತು ಸುದೀರ್ಘವಾಗಿ ಮಾತನಾಡಿದರು.

ಜತೆಗೆ ಉನ್ನತ ಶಿಕ್ಷಣ, ಸಂಶೋಧನೆ, ನವೋದ್ಯಮ ಹಾಗೂ ಶೈಕ್ಷಣಿಕ ನಾಯಕತ್ವ ಕುರಿತು ತಮ್ಮ ವಿಶಾಲ ಅನುಭವವನ್ನು ವಿದ್ಯಾರ್ಥಿಗಳೊಂದಿಗೆ ಹಂಚಿಕೊಂಡರು. ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ರೆಕ್ಟರ್, ರೆವರೆಂಡ್ ಡಾ. ಲೂರ್ದು ಪುಸಾದ್ ಜೋಸೆಫ್ ಮಾತನಾಡಿ, ಸಂತ ಫಿಲೋಮಿನಾ ಕಾಲೇಜಿನ ಶೈಕ್ಷಣಿಕ ಸಾಧನೆ ಕುರಿತು ಮಾತನಾಡಿದರು.

ಪದವಿ ಪ್ರದಾನ ಕಾರ್ಯಕ್ರಮಕ್ಕೂ ಮುನ್ನ ಶೈಕ್ಷಣಿಕ ಮೆರವಣಿಗೆ, ಪ್ರಾರ್ಥನೆ ಮತ್ತು ದೀಪ ಬೆಳಗಿಸುವ ಕಾರ್ಯಕ್ರಮ ನಡೆಯಿತು. ಪದವಿ ಪ್ರದಾನ, ಪ್ರಮಾಣ ವಚನ ಸ್ವೀಕಾರ, ಪದಕ ಹಾಗೂ ಪ್ರಮಾಣಪತ್ರ ವಿತರಣೆ ಮತ್ತು ಪ್ರತಿಭಾನ್ವಿತ ವಿದ್ಯಾರ್ಥಿಗಳ ಸನ್ಮಾನ ನಡೆಯಿತು.

ಪೋಷಕರು, ಹಳೆ ವಿದ್ಯಾರ್ಥಿಗಳು, ಬೋಧಕ ವರ್ಗ, ಗಣ್ಯರು ಹಾಗೂ ಆಹ್ವಾನಿತರು ಉಪಸ್ಥಿತರಿದ್ದರು.

ಹಣಕಾಸು ಅಧಿಕಾರಿ ಫಾದರ್ ರೋಷನ್ ಎಸ್., ಪ್ರಾಂಶುಪಾಲರಾದ ಡಾ. ರವಿ ಜೆ.ಡಿ. ಸಲ್ಡಾನ, ಎಐಸಿಟಿಐ ಕಾರ್ಯಕ್ರಮಗಳ ನಿರ್ದೇಶಕರಾದ ಡಾ.ಎನ್. ಸುರೇಶ್ ನಾರಾಯಣರಾವ್,  ಎಂಸಿಎ ವಿಭಾಗದ ಮುಖ್ಯಸ್ಥರಾದ ರೀನಾ ಮೋಲ್ ವಿ.ಯು., ಎಂಬಿಎ ವಿಭಾಗದ ಮುಖ್ಯಸ್ಥರಾದ ಡಾ. ಐಸಾಕ್ ಜಾರ್ಜ್, ಬೋಧಕ ವರ್ಗ, ವಿದ್ಯಾರ್ಥಿಗಳು, ಪೋಷಕರು, ಹಳೆ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.