ಮೈಸೂರು ಸಮೀಪದ ಗುಡುಮಾದನಹಳ್ಳಿಯಲ್ಲೇ ನಿಮ್ಹಾನ್ಸ್ ಆಸ್ಪತ್ರೆ ನಿರ್ಮಿಸಲು ಒತ್ತಾಯಿಸಿ ಪೌರ ಕಾರ್ಮಿಕ ಸಂಘಟನೆಗಳ ಒಕ್ಕೂಟದಿಂದ ಬೃಹತ್ ಪ್ರತಿಭಟನೆ

ವರದಿ : ನಿಷ್ಕಲ ಎಸ್., ಮೈಸೂರು

ಮೈಸೂರು : ರಾಜ್ಯ ಸರ್ಕಾರ ಮೈಸೂರು ಸಮೀಪ ವರುಣಾ ಹೋಬಳಿ ಗುಡುಮಾದನಹಳ್ಳಿಯಲ್ಲಿ 100 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲು ಉದ್ದೇಶಿಸಿರುವ ನಿಮ್ಹಾನ್ಸ್ ಮಾದರಿ ನರರೋಗ ಆಸ್ಪತ್ರೆಯನ್ನು ಯಾವುದೇ ಶಕ್ತಿಗಳಿಗೆ ಮಣಿಯದೆ ಗುಡುಮಾದನಹಳ್ಳಿಯಲ್ಲೇ ನಿರ್ಮಿಸಬೇಕೆಂದು ಒತ್ತಾಯಿಸಿ ಕರ್ನಾಟಕ ಪೌರಕಾರ್ಮಿಕರ ಸಂಘಟನೆಗಳ ಒಕ್ಕೂಟದಿಂದ ಬುಧವಾಗ ಬೃಹತ್ ಪ್ರತಿಭಟನೆ ನಡೆಯಿತು.

ಸಿದ್ಧಾರ್ಥ ನಗರದಲ್ಲಿರುವ ಮೈಸೂರು ಜಿಲ್ಲಾಧಿಕಾರಿಗಳ ಕಚೇರಿ ಎದುರು ಬುಧವಾರ ಬೆಳಗ್ಗೆ ನಡೆದ ಪ್ರತಿಭಟನೆಯಲ್ಲಿ ನೂರಾರು ಮಹಿಳೆಯರು ಪಾಲ್ಗೊಂಡು ಗುಡುಮಾದನಹಳ್ಳಿಯಲ್ಲೇ ನಿಮ್ಹಾನ್ಸ್ ಮಾದರಿ ನರರೋಗ ಚಿಕಿತ್ಸಾ ಆಸ್ಪತ್ರೆ ನಿರ್ಮಿಸಬೇಕೆಂದು ಘೋಷಣೆ ಕೂಗಿ ಆಗ್ರಹಿಸಿದರು.

ಈ ಸಂದರ್ಭದಲ್ಲಿ ಕರ್ನಾಟಕ ಪೌರಕಾರ್ಮಿಕರ ಸಂಘಟನೆಗಳ ಒಕ್ಕೂಟದ ರಾಜ್ಯಾಧ್ಯಕ್ಷ ಡಾ.ಡಿ.ಆರ್.ರಾಜು ಮಾತನಾಡಿ, ರಾಜ್ಯ ಸರ್ಕಾರ ವರುಣಾ ಹೋಬಳಿ ಗುಡುಮಾದನಹಳ್ಳಿಯಲ್ಲಿ 100 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲು ಉದ್ದೇಶಿಸಿರುವ ನಿಮ್ಹಾನ್ಸ್ ಮಾದರಿ ನರರೋಗ ಆಸ್ಪತ್ರೆಯು ಮೈಸೂರು ಜಿಲ್ಲೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನೀಡಿರುವ ಬಹುದೊಡ್ಡ ಕೊಡುಗೆಯಾಗಿದೆ. ಈ ಆಸ್ಪತ್ರೆ ಸರ್ಕಾರಿ ಜಮೀನಿನಲ್ಲೇ ನಿರ್ಮಾಣ ಮಾಡಲು ಉದ್ದೇಶಿಸಲಾಗಿದೆ. ಆದರೇ, ರೈತರ ಹೆಸರಿನಲ್ಲಿ ಕೆಲವರು ಆಸ್ಪತ್ರೆ ಬೇಡ ಎಂದು ಪ್ರತಿಭಟನೆ ನಡೆಸುತ್ತಿರುವುದು ಸರಿಯಲ್ಲ, ಈ ಆಸ್ಪತ್ರೆ ನಿರ್ಮಾಣವಾದರೆ, ಸಾವಿರಾರು ಜನರ ಪ್ರಾಣ ಉಳಿಯುತ್ತದೆ. ನರರೋಗ ಸಂಬAಧ ಯಾವುದೇ ಚಿಕಿತ್ಸೆಗೆ ನಾವು ಸೇರಿದಂತೆ ಈ ಭಾಗದ ಎಲ್ಲ ರೈತಾಪಿ ಜನರು ಬೆಂಗಳೂರಿನ ನಿಮ್ಹಾನ್ಸ್ ಆಸ್ಪತ್ರೆಯನ್ನೇ ಅವಲಂಬಿಸಿದ್ದಾರೆ. ಈ ಭಾಗದಲ್ಲಿ ಯಾವುದೇ ಅಪಘಾತವಾದರೇ ಸತತ ಮರ‍್ನಾಲ್ಕು ಗಂಟೆಗಳ ಪ್ರಯಾಣ ಮಾಡಿ ರೋಗಿಯನ್ನು ಆಸ್ಪತ್ರೆಗೆ ತಲುಪಿಸಬೇಕಾಗುತ್ತದೆ. ಇಂತಹ ಪ್ರಾಣ ರಕ್ಷಕ ಪ್ರಮುಖ ಆಸ್ಪತ್ರೆ ಮೈಸೂರು ನಗರದ ಸಮೀಪ ನಿರ್ಮಿಸಿದ್ದಲ್ಲಿ ಈ ಭಾಗದ ಸಾವಿರಾರು ಜನರು ಇದರ ಉಪಯೋಗ ಪಡೆಯಬಹುದು. ಗುಡುಮಾದನಹಳ್ಳಿಯಲ್ಲಿ ಆಸ್ಪತ್ರೆ ನಿರ್ಮಿಸಲು ಉದ್ದೇಶಿಸಿರುವ ಜಮೀನಿನಲ್ಲಿ ಒಂದು ವೇಳೆ ರೈತರು ಉಳುಮೆ ಮಾಡುತ್ತಿದ್ದಲ್ಲಿ, ಸರ್ಕಾರ ಅಂತಹ ರೈತರ ದಾಖಲೆಗಳನ್ನು ಪರಿಶೀಲಿಸಿ ನಿಯಮಾನುಸಾರ ಅವರಿಗೆ ಪರ್ಯಾಯ ವ್ಯವಸ್ಥೆ ಕಲ್ಪಿಸಬೇಕು. ಜತೆಗೆ ಆಸ್ಪತ್ರೆಯನ್ನು ಯಾವುದೇ ಕಾರಣಕ್ಕೂ ಇಲ್ಲಿಂದ ಸ್ಥಳಾಂತರ ಮಾಡಬಾರದೆಂದು ರಾಜು ಒತ್ತಾಯಿಸಿದರು. 

ಪ್ರತಿಭಟನೆಯಲ್ಲಿ ಕರ್ನಾಟಕ ಪೌರಕಾರ್ಮಿಕರ ಸಂಘಟನೆಗಳ ಒಕ್ಕೂಟದ ಗೌರವ ಸಲಹೆಗಾರರಾದ ಶಿವ ಶ್ರೀನಿವಾಸ್, ಸಿ.ಆರ್.ವಿಜಯ, ಕಾರ್ಯಾಧ್ಯಕ್ಷ ಮಂಚಯ್ಯ, ಉಪಾಧ್ಯಕ್ಷರಾದ ಬ್ಯಾಂಕ್ ರಂಗಣ್ಣ, ಪ್ರಧಾನ ಕಾರ್ಯದರ್ಶಿ ದಿನೇಶ್ ಕುಮಾರ್, ಸಫಾಯಿ ಕರ್ಮಾಚಾರಿ ಜಾಗೃತಿ ಸಮಿತಿ ಸದಸ್ಯರಾದ ವಸಂತಕುಮಾರಿ, ಅಂಜಲಿ, ಪವಿತ್ರ ಮುಂತಾದವರು ಇದ್ದರು.

ಉರಿ ಬಿಸಿಲಿನಲ್ಲೇ ಪ್ರತಿಭಟನೆ

ಜಿಲ್ಲಾಧಿಕಾರಿಗಳ ಕಚೇರಿ ಎದುರು ನಡೆದ ಪ್ರತಿಭಟನೆಯಲ್ಲಿ ನೂರಾರು ಮಹಿಳೆಯರು ಭಾಗವಹಿಸಿದ್ದು, ವಿಶೇಷವಾಗಿತ್ತು. ಉರಿಯುವ ಬಿಸಿಲಿನಲ್ಲೇ ಮಹಿಳೆಯರು ಪ್ರತಿಭಟನೆ ನಡೆಸಿದರು. ಈ ವೇಳೆ ಆಯೋಜನರು ಶಾಮಿಯನ ಹಾಕಲು ಮುಂದಾದರೂ ಪೊಲೀಸರು ಶಾಮಿಯಾನ ಹಾಕಲು ಅವಕಾಶ ನೀಡಲಿಲ್ಲ ಎಂದು ಆರೋಪಿಸಿದ ಮುಖಂಡರು, ಬಿಸಿಲಿನಲ್ಲೇ ಪ್ರತಿಭಟನೆ ನಡೆಸಿದರು.