ವರದಿ : ನಿಷ್ಕಲ ಎಸ್.ಗೌಡ, ಜೆ.ಮಲ್ಲೇನಹಳ್ಳಿ
ಪಾಂಡವಪುರ : ತಾಲ್ಲೂಕಿನ ಚಂದ್ರೆ ಗ್ರಾಮದಲ್ಲಿ 1.5 ಕೋಟಿ ರೂ. ವೆಚ್ಚದಲ್ಲಿ ಸಿಸಿ ರಸ್ತೆ ಮತ್ತು ಚರಂಡಿ ನಿರ್ಮಾಣ ಕಾಮಗಾರಿಗಳಿಗೆ ಶಾಸಕ ದರ್ಶನ್ ಪುಟ್ಟಣ್ಣಯ್ಯ ಸೋಮವಾರ ಭೂಮಿಪೂಜೆ ಸಲ್ಲಿಸಿ ಕಾಮಗಾರಿಗೆ ಚಾಲನೆ ನೀಡಿದರು.
ಬಳಿಕ ಅವರು ಮಾತನಾಡಿ, ಚಂದ್ರೆ ಗ್ರಾಮದಲ್ಲಿ ಸಿಸಿ ರಸ್ತೆ ಮತ್ತು ಚರಂಡಿ ನಿರ್ಮಾಣ ಮಾಡಿಸಿಕೊಡುವಂತೆ ಈ ಭಾಗದ ಜನರ ಬಹುದಿನಗಳ ಬೇಡಿಕೆಯಾಗಿತ್ತು, ಅದರಂತೆ ಇಂದು ಕಾಮಗಾರಿಗೆ ಚಾಲನೆ ನೀಡಲಾಗಿದೆ. ಪ್ರಸಕ್ತ ಸಾಲಿನಲ್ಲಿ ಟಿ.ಎಸ್.ಛತ್ರ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಒಟ್ಟು 8.5 ಕೋಟಿ ರೂ. ಕಾಮಗಾರಿಗಳು ಮಂಜೂರಾಗಿವೆ, ಕ್ರಮೇಣ ಇದಕ್ಕೆ ಚಾಲನೆ ನೀಡಲಾಗುವುದು ಎಂದರು.
ಸಾವಯವ ಕೃಷಿಗೆ ಆದ್ಯತೆ ನೀಡಿ
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ಪಾಂಡವಪುರ ತಾಲ್ಲೂಕನ್ನು ಸಾವಯವ ಕೃಷಿ ತಾಲ್ಲೂಕು ಎಂದು ಘೋಷಣೆ ಮಾಡಿದ್ದಾರೆ. ಈ ಬಗ್ಗೆ ಕೃಷಿ ಅಧಿಕಾರಿಗಳು ಎಲ್ಲೆಡೆ ಪ್ರಚಾರ ಮತ್ತು ರೈತರಿಗೆ ಸಾವಯವ ಕೃಷಿಯ ಬಗ್ಗೆ ಜಾಗೃತಿ ಮೂಡಿಸುತ್ತಿದ್ದಾರೆ. ರೈತರು ನಮ್ಮ ಸಮಾಜದ ಆರೋಗ್ಯ ಕಾಪಾಡಲು ಮತ್ತು ಮುಂದಿನ ದಿನಗಳಲ್ಲಿ ನಮ್ಮ ಆಹಾರವು ಆರೋಗ್ಯಕರವಾಗಿರಲು ರಾಸಾಯನಿಕ ಗೊಬ್ಬರಗಳನ್ನು ಕಡಿಮೆ ಮಾಡಿ, ಸಾವಯವ ಕೃಷಿಗೆ ಹೆಚ್ಚು ಒಲವು ತೋರಬೇಕು ಎಂದು ಸಲಹೆ ನೀಡಿದರು.
ರೈತಸಂಘವನ್ನು ಮುಂದಿನ ಬಾರಿಯೂ ಗೆಲ್ಲಿಸಿ
ಪಾಂಡವಪುರ ತಾಲ್ಲೂಕು ರೈತಸಂಘದ ಅಧ್ಯಕ್ಷರಾದ ವೈ.ಪಿ.ಮಂಜುನಾಥ್ ಮಾತನಾಡಿ, ಚಂದ್ರೆ ಗ್ರಾಮವು ರೈತಸಂಘಟನೆಯ ಶಕ್ತಿಯುತ ಗ್ರಾಮವಾಗಿದೆ. ಪುಟ್ಟಣ್ಣಯ್ಯ ಅವರ ಕಾಲದಿಂದಲೂ ಗ್ರಾಮಸ್ಥರು ರೈತಸಂಘವನ್ನು ಬೆಂಬಲಿಸುತ್ತಾ ಬಂದಿದ್ದೀರಿ, ದರ್ಶನ್ ಪುಟ್ಟಣ್ಣಯ್ಯ ಅವರಿಗೂ ಸಹ ಹೆಚ್ಚು ಬೆಂಬಲ ನೀಡಿದ್ದೀರಿ, ನಿಮ್ಮಗಳ ಸಹಕಾರದಿಂದ ದರ್ಶನ್ ಅವರು ಶಾಸಕರಾಗಿ ತಾಲ್ಲೂಕಿನಲ್ಲಿ ಅಭಿವೃದ್ಧಿಯ ಪರ್ವವನ್ನೆ ಹರಿಸಿದ್ದಾರೆ. ಮುಂದಿನ ದಿನಗಳಲ್ಲೂ ನೀವು ರೈತಸಂಘವನ್ನು ಗೆಲ್ಲಿಸಬೇಕು ಎಂದು ಕೋರಿದರು.
ಗ್ರಾಮಗಳಿಗೆ ಮೂಲ ಸೌಕರ್ಯಗಳು ಅಗತ್ಯ
ಜಿಪಂ ಮಾಜಿ ಸದಸ್ಯರದ ಕೆ.ಟಿ.ಗೋವಿಂದೇಗೌಡ ಅವರು ಮಾತನಾಡಿ, ನಾಗರಿಕ ಸಮಾಜದಲ್ಲಿ ಒಂದು ಗ್ರಾಮಕ್ಕೆ ಅಗತ್ಯವಾಗಿ ರಸ್ತೆ, ಚರಂಡಿ, ಕುಡಿಯಲು ಶುದ್ಧವಾದ ನೀರು, ಶಾಲೆ, ಶೌಚಾಲಯಗಳು ಮತ್ತು ಆಸ್ಪತ್ರೆ ಅಗತ್ಯವಾಗಿ ಬೇಕಾಗಿರುತ್ತವೆ. ಇವುಗಳನ್ನು ಒದಗಿಸುವುದು ಸರ್ಕಾರದ ಕರ್ತವ್ಯ, ಈ ನಿಟ್ಟಿನಲ್ಲಿ ನಮ್ಮಗಳ ಪರವಾಗಿ ನಮ್ಮ ಜನಪ್ರತಿನಿಧಿಯಾದ ದರ್ಶನ್ ಪುಟ್ಟಣ್ಣಯ್ಯ ಅವರು ತಾಲ್ಲೂಕಿನ ಎಲ್ಲ ಗ್ರಾಮಗಳಲ್ಲೂ ಮೂಲಭೂತ ಸೌಕರ್ಯಗಳನ್ನು ಒದಗಿಸುವ ಮೂಲಕ ಗ್ರಾಮಗಳ ಅಭಿವೃದ್ಧಿಗೆ ಮುಂದಾಗಿದ್ದಾರೆ ಎಂದರು.
ಚ0ದ್ರೆ ಕೆರೆ ಏರಿಗೆ ತಡೆಗೋಡೆ ಅಗತ್ಯ
ಚಂದ್ರೆ ಗ್ರಾಮದ ಮುಖಂಡರಾದ ಸೋಮೇಗೌಡ ಅವರು ಮಾತನಾಡಿ, ಚಂದ್ರೆ ಗ್ರಾಮದಲ್ಲಿರುವ ಕೆರೆ ಏರಿಯ ರಸ್ತೆ ಕಿರಿದಾಗಿದ್ದು, ವಾಹ ಸಂಚಾರ ಕಷ್ಟವಾಗಿದೆ, ಜನ ಜಾನುವಾರುಗಳ ಸಂಚಾರವೂ ಕಷ್ಟಕರವಾಗಿದ್ದು, ಕೆರೆ ಏರಿಗೆ ತಡೆಗೋಡೆ ನಿರ್ಮಿಸುವುದು, ಚಂದ್ರೆ ಗ್ರಾಮಕ್ಕೆ ಶುದ್ಧ ಕುಡಿಯುವ ನೀರು ಒದಗಿಸುವುದು ಮತ್ತು ಸೋಫಾನಕಟ್ಟೆ ನಿರ್ಮಿಸಿಕೊಡಬೇಕೆಂದು ಶಾಸಕ ದರ್ಶನ್ ಪುಟ್ಟಣ್ಣಯ್ಯ ಅವರಲ್ಲಿ ಗ್ರಾಮಸ್ಥರ ಪರವಾಗಿ ಮನವಿ ಮಾಡಿದರು.
ಕಾಮಗಾರಿಗಳ ಗುಣ್ಣಮಟ್ಟ ಕಾಪಾಡಬೇಕು
ಚಂದ್ರೆ ಗ್ರಾಮದಲ್ಲಿ ಇಂದು 1.5 ಕೋಟಿ ವೆಚ್ಚದಲ್ಲಿ ಸಿಸಿ ರಸ್ತೆ ಮತ್ತು ಚರಂಡಿ ನಿರ್ಮಾಣ ಕಾಮಗಾರಿಗೆ ಶಾಸಕರಾದ ದರ್ಶನ್ ಪುಟ್ಟಣ್ಣಯ್ಯ ಭೂಮಿಲೂಜೆ ಸಲ್ಲಿಸಿದ್ದು, ಕಾಮಗಾರಿಯ ಗುಣಮಟ್ಟವನ್ನು ಗ್ರಾಮಸ್ಥರು ಪರಿಶೀಲಿಸಿ ಉತ್ತಮ ಕಾಮಗಾರಿ ನಡೆಸುವಂತೆ ನೋಡಿಕೊಳ್ಳಬೇಕು ಎಂದು ಸರ್ವೋದಯ ಕರ್ನಾಟಕ ಪಕ್ಷದ ತಾಲ್ಲೂಕು ಅಧ್ಯಕ್ಷ ದಯಾನಂದ ಸಲಹೆ ನೀಡಿದರು.
ಕಾರ್ಯಕ್ರಮದಲ್ಲಿ ರೈತಸಂಘದ ತಾಲ್ಲೂಕು ಮಹಿಳಾ ಅಧ್ಯಕ್ಷರಾದ ರೂಪ, ಚಂದ್ರೆ ಗ್ರಾಮದ ಮುಖಂಡರಾದ ವೆಂಕಟೇಶ್, ಚಿಕ್ಕೇಗೌಡ, ಸ್ವಾಮೀಗೌಡ, ಸುಶೀಲಮ್ಮ, ಸೋಮಣ್ಣ, ಲಕ್ಷೆ÷್ಮÃಗೌಡ, ಬಲರಾಮು, ಸಿದ್ದೇಗೌಡ, ರಾಮಕೃಷ್ಣೇಗೌಡ, ಪುಟ್ಟಸ್ವಾಮಿ, ಕಂಟ್ರಾಕ್ಟರ್ ರಮೇಶ್, ಅಶೋಕ, ನಾಗೇಂದ್ರ, ಬಾಲಕೃಷ್ಣ, ಹನುಮೇಗೌಡ ಇತರರು ಇದ್ದರು.


