ಸಂಸದರಾದ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಅವರಿಂದ ಕರ್ನಾಟಕ ಕನ್ನಡ ರಕ್ಷಣಾ ವೇದಿಕೆಯ ಮೈಸೂರು ಜಿಲ್ಲಾ ಘಟಕ ಉದ್ಘಾಟನೆ

ಕನ್ನಡ ಕುಲ ಪುರೋಹಿತ ಆಲೂರು ವೆಂಕಟರಾವ್ ಸ್ಮರಣೆ ಅಗತ್ಯ : ಯದುವೀರ 

ವರದಿ: ನಿಷ್ಕಲ ಎಸ್., ಮೈಸೂರು

ಮೈಸೂರು : ಕನ್ನಡ ರಾಜ್ಯೋತ್ಸವ ಅಥವಾ ಕನ್ನಡದ ನೆಲ, ಜಲ, ಭಾಷೆಯ ವಿಚಾರ ಬಂದಾಗ ನಾವು ಕರ್ನಾಟಕದ ಏಕೀಕರಣ ಚಳುವಳಿಯ ರೂವಾರಿ ಮತ್ತು ’ಕರ್ನಾಟಕ ಕುಲಪುರೋಹಿತ’ ಎಂದು ಕರೆಯಲ್ಪಡುವ ಹಿರಿಯ ಹೋರಾಟಗಾರರಾದ ಆಲೂರು ವೆಂಕಟರಾವ್ ಅವರನ್ನು ನೆನಪಿಸಿಕೊಳ್ಳಬೇಕು ಎಂದು ಮೈಸೂರು-ಕೊಡಗು ಸಂಸದರಾದ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಹೇಳಿದರು.

ವಿಜಯನಗರದಲ್ಲಿರುವ ಕನ್ನಡ ಸಾಹಿತ್ಯ ಪರಿಷತ್ತು ಭವನದಲ್ಲಿ ಶನಿವಾರ ಸಂಜೆ ಕರ್ನಾಟಕ ಕನ್ನಡ ರಕ್ಷಣಾ ವೇದಿಕೆ ಮತ್ತು ಟ್ಯಾಕ್ಸಿ ಮಾಲೀಕರ ಸಂಘದ ಮೈಸೂರು ಜಿಲ್ಲಾ ಘಟಕವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಆಲೂರು ವೆಂಕಟರಾವ್ ಅವರು ಅಂದಿನ ಮೈಸೂರು, ಬಾಂಬೆ ಪ್ರೆಸಿಡೆನ್ಸಿ ಮತ್ತು ಹೈದರಾಬಾದ್-ಕರ್ನಾಟಕದ ಕನ್ನಡ ಮಾತನಾಡುವ ಪ್ರದೇಶಗಳನ್ನು ಒಗ್ಗೂಡಿಸಿ ಒಂದೇ ಕರ್ನಾಟಕ ರಾಜ್ಯ ರಚಿಸಲು ಶ್ರಮಿಸಿದರು. ತಮ್ಮ ’ಕರ್ನಾಟಕ ಗತವೈಭವ’ ಕೃತಿಯ ಮೂಲಕ ಏಕೀಕರಣ ಚಳುವಳಿಗೆ ಬಲ ತುಂಬಿದರು ಮತ್ತು ತಮ್ಮ ಪತ್ರಿಕೆಯ ಮೂಲಕ ಕನ್ನಡ ನಾಡು-ನುಡಿಯ ಏಳಿಗೆಗೆ ದುಡಿದರು ಇಂತಹ ಮಹನೀಯರನ್ನು ಕನ್ನಡ ರಾಜ್ಯೋತ್ಸವದಂದು ಅಗತ್ಯವಾಗಿ ಸ್ಮರಿಸಬೇಕು, 

ಕನ್ನಡ ಸಾಹಿತ್ಯ ಪರಿಷತ್ತುಗಳ ಭವನಗಳಲ್ಲಿ ರಾಷ್ಟ್ರಕವಿ ಕುವೆಂಪು ಅವರ ಭಾವಚಿತ್ರದ ಜತೆಗೆ ಆಲೂರು ವೆಂಕಟರಾವ್ ಅಚವರ ಭಾವಚಿತ್ರವನ್ನೂ ಇರಿಸಿ ಗೌರವಿಸಬೇಕು ಎಂದರು.

ಕನ್ನಡ ಸಾಹಿತ್ಯ ಪರಿಷತ್ತು ಭವನ ನಿರ್ಮಾಣದ ಹಿಂದೆ ಕನ್ನಡ ಭಾಷೆಯ ಅಭಿವೃದ್ಧಿ ಮತ್ತು ಕನ್ನಡಿಗರನ್ನು ಒಗ್ಗಟ್ಟಿಸುವ ಉದ್ದೇಶವೂ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರಿಗಿತ್ತು ಎಂದು ಹೇಳಿದ ಯದುವೀರ್ ಒಡೆಯರ್, ಕನ್ನಡ ನೆಲ, ಜಲ, ಭಾಷೆಯನ್ನು ರಕ್ಷಣೆ ಮಾಡುವುದರಲ್ಲಿ ಕನ್ನಡ ಪರ ಸಂಘಟನೆಗಳ ಪಾತ್ರ ದೊಡ್ಡದು. ಈ ನಿಟ್ಟಿನಲ್ಲಿ ಕರ್ನಾಟಕ ಕನ್ನಡ ರಕ್ಷಣಾ ವೇದಿಕೆ ಮೈಸೂರು ಘಟಕವನ್ನು ಪ್ರಾರಂಭಿಸಿ ಕನ್ನಡ ಭಾಷೆಯ ರಕ್ಷಣೆಗೆ ನಿಂತಿರುವುದು ಸ್ವಾಗತಾರ್ಹ ಎಂದು ಹೇಳಿದರು.

                                      

ಕನ್ನಡ ಸಾಹಿತ್ಯ ಪರಿಷತ್ತು ಮೈಸೂರು ಜಿಲ್ಲಾ ಅಧ್ಯಕ್ಷರಾದ ಮಡ್ಡಿಕೆರೆ ಗೋಪಾಲ್ ಅವರು ಪ್ರಾಸ್ತಾವಿಕವಾಗಿ ಮಾತನಾಡಿ, 

ಕನ್ನಡ ಸಾಹಿತ್ಯ ಪರಿಷತ್ತು ನಿರ್ಮಾಣ ಮಾಡುವ ಮೂಲಕ ರಾಜರ್ಷಿ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರು ಈ ನೆಲ, ಜಲ, ಭಾಷೆಯ ಉಳಿವಿಗೆ ಮೇಲ್ಪಂಕ್ತಿ ಹಾಕಿದ್ದಾರೆ, ಅವರನ್ನು ಸ್ಮರಿಸುವುದು ಅಗತ್ಯವಾಗಿದೆ. ಜತೆಗೆ ಕರ್ನಾಟಕ ಕನ್ನಡ ರಕ್ಷಣಾ ವೇದಿಕೆ ಮೈಸೂರು ಜಿಲ್ಲಾ ಘಟಕವನ್ನು ಪ್ರಾರಂಭಿಸುವುದರ ಮೂಲಕ ಹೋರಾಟಗಾರ ಚಾ.ಗು.ನಾಗರಾಜು ಕನ್ನಡ ಕಿಡಿಯನ್ನು ಮೈಸೂರಿನಲ್ಲಿ ಹಚ್ಚಿದ್ದಾರೆ. ಅದರ ಸಾರಥಿಯನ್ನಾಗಿ ಸಂತೋಷ್ ಅವರನ್ನು ನೇಮಿಸಿದ್ದು, ಇವರ ಕನ್ನಡಪರ ಹೋರಾಟಕ್ಕೆ ನಮ್ಮ ಬೆಂಬಲವಿದೆ ಎಂದರು.

ಇದೇ ವೇಳೆ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾದ ಸಿಂಧುವಳ್ಳಿ ಶಿವಕುಮಾರ್, ಡಾ.ಎ.ಡಿ.ಶ್ರೀನಿವಾಸನ್ ಅವರನ್ನು ಗೌರವಿಸಲಾಯಿತು. ಜತೆಗೆ ಮ್ಥಸೂರು ಕೊಡಗು ಸಂಸದರಾದ ಯದುವೀರ ಒಡೆಯರ್, ಮಾಜಿ ಶಾಸಕ ಎಲ್.ನಾಗೇಂದ್ರ, ಚಾ.ಗು.ನಾಗರಾಜು ಮತ್ತು ಸಂತೋಷ್ ಅವರನ್ನೂ ಸಹ ಗೌರವಿಸಲಾಯಿತು.

ಕಾರ್ಯಕ್ರಮದಲ್ಲಿ ಸಿಂಧುವಳ್ಳಿ ದಾಸೋಹ ಮಠದ ಶಿವಕುಮಾರ ಸ್ವಾಮೀಜಿ ಆಶೀರ್ವಚನ ನೀಡಿದರು.ವೇದಿಕೆಯಲ್ಲಿ ವಕೀಲರಾದ ಎಂ.ಶಿವಪ್ರಸಾದ್, ನಗರಪಾಲಿಕೆ ಮಾಜಿ ಸದಸ್ಯರಾದ ಸುಬ್ಬಯ್ಯ, ಉದ್ಯಮಿ ಗೋಪಾಲಸ್ವಾಮಿ, ರಾಜ್ಯ ಸಂಘಟನಾ ಕಾರ್ಯದರ್ಶಿ ಹಬೀಬ್, ಕಾರ್ಯಕ್ರಮದಲ್ಲಿ ಕರ್ನಾಟಕ ಕನ್ನಡ ರಕ್ಷಣಾ ವೇದಿಕೆ ಮೈಸೂರು ಜಿಲ್ಲಾಧ್ಯಕ್ಷ ಸಂತೋಷ್, ಗೌರಧ್ಯಕ್ಷರಾದ ಮನುಗೌಡ, ಪ್ರಧಾನ ಕಾರ್ಯದರ್ಶಿ ಗೌತಮ್, ಖಜಾಂಚಿ ಅನುಗೌಡ, ಉಪಾಧ್ಯಕ್ಷರಾದ ಮಹೇಶ್, ಕೀರ್ತಿಕುಮಾರ್, ಸಂಚಾಲಕರಾದ ರಮೇಶ್, ಆಪ್ತ ಕಾರ್ಯದರ್ಶಿ ನರಸಿಂಹ ಪ್ರಸಾದ್, ಕಾನೂನು ಸಲಹೆಗಾರರಾದ ಬೀರೇಗೌಡ, ಜಂಟಿ ಕಾರ್ಯದರ್ಶಿ ಸಿದ್ದೇಗೌಡ, ಪ್ರಧಾನ ಸಂಚಾಲಕ ಅರವಿಂದ್ ಹಾಗೂ 

ಟ್ಯಾಕ್ಸಿ ಚಾಲಕರ ಘಟಕದ ಅಧ್ಯಕ್ಷರಾದ ಗಿರೀಶ್, ಪದಾಧಿಕಾರಿಗಳಾದ ಮಧುಸೂದನ್, ಹೇಮಂತ್, ಶ್ರೀನಿವಾಸ್, ರಾಜು ಎಸ್., ಎಂ.ದೇವರಾಜು, ಮೋಹನ್, ದೊರೆಸ್ವಾಮಿ, ಕೀರ್ತಿ ಕುಮಾರ್, ಚಾಮರಾಜನಗರ ಜಿಲ್ಲಾ ಅಧ್ಯಕ್ಷರಾದ ದೇವರಾಜು ಮುಂತಾದವರು ಇದ್ದರು.

ಯದುವೀರ್ ಪ್ರಧಾನಿಯಾಗಲಿ

ಕನ್ನಡ ಪರ ಸಂಘಟನೆಗಳ ಎಲ್ಲ ಕಾರ್ಯಕ್ರಮಗಳಲ್ಲೂ ಭಾಗವಹಿಸಿ ನಾಡು, ನುಡಿಯ ರಕ್ಷಣೆಗೆ ಸದಾಕಾಲ ಬೆಂಬಲ ನೀಡುತ್ತಿರುವ ಸಂಸದರಾದ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಒಬ್ಬ ಸಜ್ಜನ ರಾಜಕಾರಣಿ, ಯಾವುದೇ ಬೇಧ ಭಾವವಿಲ್ಲದೆ ತಮ್ಮ ಬಳಿ ಸಹಾಯ ಕೋರಿ ಬರುವ ಎಲ್ಲರನ್ನೂ ಸಮಾನರಾಗಿ ಕಂಡು ಅವರನ್ನು ಗೌರವಿಸುತ್ತಾರೆ, ಯದುವೀರ್ ಅವರು ಮುಂದಿನ ದಿನಗಳಲ್ಲಿ ಕೇಂದ್ರ ಸಚಿವರಾಗಿ ಮತ್ತು ದೇಶದ ಪ್ರಧಾನಿಯಾಗಬೇಕು.

ಮಡ್ಡಿಕೆರೆ ಗೋಪಾಲ್, ಕಸಾಪ ಜಿಲ್ಲಾ ಅಧ್ಯಕ್ಷರು