ಚಳಿಗಾಲದ ಅಧಿವೇಶನದಲ್ಲಿ ಸರ್ಕಾರಕ್ಕೆ ಬಿಸಿ ಮುಟ್ಟಿಸಲು ರೈತ ಸಂಘಟನೆಗಳ ಸಿದ್ದತೆ : ಬೆಳಗಾಂ ಅಧಿವೇಶನದಲ್ಲಿ ರೈತರ ಬೇಡಿಕೆ ಈಡೇರಿಸದಿದ್ದಲ್ಲಿ ಬೃಹತ್ ರಸ್ತೆ ತಡೆ ನಡೆಸಲು ತೀರ್ಮಾನ


 ವರದಿ : ನಿಷ್ಕಲ ಎಸ್., ಮೈಸೂರು

ಮೈಸೂರು : ಬೆಳಗಾಂನಲ್ಲಿ ಡಿಸೆಂಬರ್ 8ರಿಂದ ನಡೆಯುವ ವಿಧಾನಸಭೆ ಚಳಿಗಾಲದ ಅಧಿವೇಶನದಲ್ಲಿ ರಾಜ್ಯ ಸರ್ಕಾರ ರೈತರ ಬೇಡಿಕೆಗಳನ್ನು ಈಡೇರಿಸದಿದ್ದಲ್ಲಿ ಡಿಸೆಂಬರ್ 12 ರಂದು ಬೆಳಗಾಂನಲ್ಲಿ ಬೃಹತ್ ರಸ್ತೆತಡೆ ನಡೆಸಲು ಕರ್ನಾಟಕ ರಾಜ್ಯ ರೈತಸಂಘಗಳ ಒಕ್ಕೂಟ ತೀರ್ಮಾನಿಸಿದೆ.

ಡಿಸೆಂಬರ್ 23 ರಂದು ಮೈಸೂರಿನಲ್ಲಿ ನಡೆಯುವ ವಿಶ್ವ ರೈತ ದಿನಾಚರಣೆ ಸಂಬAಧ ಕರ್ನಾಟಕ ರಾಜ್ಯ ರೈತಸಂಘ (ರೈತಬಣ)ದ ಅಧ್ಯಕ್ಷರಾದ ಇಂಗಲಗುಪ್ಪೆ ಕೃಷ್ಣೇಗೌಡರ ನೇತೃತ್ವದಲ್ಲಿ ಸೋಮವಾರ ನಗರದ ಜಲದರ್ಶಿನಿ ಅತಿಥಿಗೃಹದಲ್ಲಿ ಕರ್ನಾಟಕ ರಾಜ್ಯ ರೈತಸಂಘಗಳ ಒಕ್ಕೂಟ ನಡೆಸಿದ ಪೂರ್ವಭಾವಿ ಸಭೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಯಿತು.

ಈ ಸಂದರ್ಭದಲ್ಲಿ ಇಂಗಲಗುಪ್ಪೆ ಕೃಷ್ಣೇಗೌಡ ಮಾತನಾಡಿ, ರಾಜ್ಯದಲ್ಲಿ ಕಬ್ಬು ಬೆಳೆಗಾರರು ತೀವ್ರ ಸಂಕಷ್ಟದಲ್ಲಿದ್ದಾರೆ. ವ್ಯವಸಾಯದ ಖರ್ಚು ದಿನೇ ದಿನೇ ಹೆಚ್ಚುತ್ತಿದೆ. ರಸಗೊಬ್ಬರ, ಕೂಲಿ, ಇನ್ನಿತರ ಖರ್ಚುಗಳು ಹೆಚ್ಚುತ್ತಿರುವ ಕಾರಣ, ರಾಜ್ಯದ ಎಲ್ಲ ಸಕ್ಕರೆ ಕಾರ್ಖಾನೆಗಳು ಒಂದು ಟನ್ ಕಬ್ಬಿಗೆ ಕನಿಷ್ಠ 3.500 ರೂ, ನೀಡಲೇಬೇಕು. ಅಲ್ಲದೇ, ಕಾರ್ಖಾನೆಗಳು ಕಬ್ಬಿನ ಇಳುವರಿ ಪರೀಕ್ಷೆಯಲ್ಲಿ ರೈತರಿಗೆ ಮೋಸ ಮಾಡುತ್ತಿದ್ದಾರೆ. ಪ್ರತಿ ಕಾರ್ಖಾನೆ ಹತ್ತಿರ ಸರ್ಕಾರವೇ ಒಂದು ಲ್ಯಾಬ್ ನಿರ್ಮಿಸಿ ಇಳುವರಿ ಪರೀಕ್ಷೆ ಮಾಡಬೇಕು ಅಥವಾ ರೈತರ ಜಮೀನಿನಲ್ಲೇ ಇಳುವರಿ ಪರೀಕ್ಷೆ ಮಾಡುವ ವ್ಯವಸ್ಥೆ ಮಾಡಬೇಕು. ಜತೆಗೆ ಸಕ್ಕರೆ ಕಾರ್ಖಾನೆಗಳು ತೂಕದಲ್ಲೂ ರೈತರಿಗೆ ಮೋಸ ಮಾಡುತ್ತಿದ್ದಾರೆ. ಪ್ರತಿ ಕಾರ್ಖಾನೆ ಹತ್ತಿರವೇ ಸರ್ಕಾರದಿಂದಲೇ ಒಂದು ತೂಕ ಮಾಡುವ ಯಂತ್ರವನ್ನು ಹಾಕುವ ಮೂಲಕ ಸಕ್ಕರೆ ಕಾರ್ಖನೆಗಳ ಮೋಸವನ್ನು ತಪ್ಪಿಸಬೇಕು.

ಕೂಡಲೇ ಭತ್ತ ಖರೀದಿ ಕೇಂದ್ರವನ್ನು ತೆರೆಯಬೇಕು. ಭತ್ತಕ್ಕೆ ಕ್ವಿಂಟಾಲ್‌ಗೆ 3500 ರೂ ಮತ್ತು ಮೆಕ್ಕೆ ಜೋಳಕ್ಕೆ ಕ್ವಿಂಟಾಲ್‌ಗೆ 3000 ರೂ. ಬೆಂಬಲ ಬೆಲೆಯನ್ನು ಘೋಷಿಸಬೇಕು. ತಂಬಾಕು ಬೆಳೆಗಾರರೂ ಸಹ ಸಂಕಷ್ಟದಲ್ಲಿದ್ದಾರೆ ಕೇಂದ್ರ ಮತ್ತು ಸರ್ಕಾರ ತಂಬಾಕು ಬೆಳೆಗಾರರ ನೆರವಿಗೆ ಧಾವಿಸಬೇಕು.

ರಾಜ್ಯಾದ್ಯಂತ ರೈತರ ಎಲ್ಲ ಕೃಷಿ ಸಾಲವನ್ನು ಮತ್ತು ಟ್ರಾಕ್ಟರ್ ಇತರೆ ಕೃಷಿ ಉಪಯೋಗಿ ವಾಹನಗಳ ಸಾಲವನ್ನು ಸಂಪೂರ್ಣ ಮನ್ನಾ ಮಾಡಬೇಕು.

ರಾಜ್ಯದ ವಿವಿದೆಡೆ ಕಾಡು ಪ್ರಾಣಿಗಳು ಮತ್ತು ಮಾನವ ಸಂಘರ್ಷ ಮಿತಿ ಮೀರಿದೆ. ಕಾಡುಗಳಲ್ಲಿ ಅಕ್ರಮವಾಗಿ ರೆಸಾರ್ಟ್ಗಳನ್ನು ತೆರೆದಿರುವ ಕಾರಣ, ಕಾಡು ಪ್ರಾಣಿಗಳು ನಾಡಿನತ್ತ ಧಾವಿಸಿ ಮನುಷ್ಯರ ಮೇಲೆ, ಸಾಕು ಪ್ರಾಣಿಗಳ ಮೇಲೆ ದಾಳಿ ಮಾಡುತ್ತಿದೆ. ಇದುವರೆಗೆ ನೂರಾರು ಅಮಾಯಕ ರೈತರು ಕಾಡು ಪ್ರಾಣಿಗಳ ದಾಳಿಗೆ ಬಲಿಯಾಗಿದ್ದಾರೆ. ಸರ್ಕಾರ, ಅರಣ್ಯ ಇಲಾಖೆ ಕೂಡಲೇ ಕಾಡಿನಲ್ಲಿರುವ ಮತ್ತು ಕಾಡಂಚಿನಲ್ಲಿರುವ ರೆಸಾರ್ಟ್ಗಳನ್ನು ತೆರವು ಮಾಡಿಸಿ, ಕಾಡು ಪ್ರಾಣಿಗಳಿಂದ ಜನರನ್ನು ರಕ್ಷಿಸಬೇಕು.

ಈ ಮೇಲ್ಕಂಡ ಎಲ್ಲ ಬೇಡಿಕೆಗಳನ್ನು ರಾಜ್ಯ ಸರ್ಕಾರ ಈ ಚಳಿಗಾಲದ ಅಧಿವೇಶನದಲ್ಲಿ ಮಂಡಿಸಿ, ತೀರ್ಮಾನಿಸಿ ರೈತರಿಗೆ ಅನುಕೂಲ ಮಾಡಿಕೊಡಬೇಕು. ಇಲಿದಿದ್ದಲ್ಲಿ ಕರ್ನಾಟಕ ರಾಜ್ಯ ರೈತಸಂಘಟನೆಗಳ ಒಕ್ಕೂಟ ಬೆಳಗಾಂನಲ್ಲಿ ಡಿಸೆಂಬರ್ 12 ರಂದು ಬೃಹತ್ ರಸ್ತೆ ತಡೆ ನಡೆಸುವ ಮೂಲಕ ಅಧಿವೇಶನಕ್ಕೆ ಅಡ್ಡಿ ಪಡಿಸಲಾಗುವುದು ಜತೆಗೆ ರಾಜ್ಯವ್ಯಾಪಿ ಹೋರಾಟ ನಡೆಸಲಾಗುವುದು ಎಂದು ಅವರು ಎಚ್ಚರಿಕೆ ನೀಡಿದರು.

ಈ ಸಂದರ್ಭದಲ್ಲಿ ವಿವಿಧ ರೈತಸಂಘಟನೆಗಳ ಮುಖಂಡರುಗಳಾದ ಮೋತಿಲಾಲ್ ಚವ್ಹಾಣ್, ಗಣೇಶ ಇಳಿಗೇರ್, ವಿಠಲ್ ಬಿ.ಗಣಾಚಾರಿ, ಮಹೇಶ್ ಹೊನ್ನೇಗೌಡನಹಳ್ಳಿ, ವಳಗೆರೆ ಗಣೇಶ್, ಮಹೇಶ್ ಚರಗಣ್, ವೀರಭದ್ರಯ್ಯ ಎಸ್., ಕೆಆರ್‌ಎಸ್ ರಾಮೇಗೌಡ, ಯೋಗೇಶ್, ರತ್ನಮ್ಮ ಸೇರಿದಂತೆ ಇತರರು ಇದ್ದರು.

ರಾಜ್ಯ ಸರ್ಕಾರ ಸಕ್ಕರೆ ಕಾರ್ಖಾನೆ ಮಾಲೀಕರ ಬೂಟು ನೆಕ್ಕುತ್ತಿದೆ.

ಮುಖ್ಯಮಂತ್ರಿ ಸಿದ್ದರಾಮಯ್ಯನವರ ತವರು ಕ್ಷೇತ್ರದಲ್ಲೇ ಕಬ್ಬು ಬೆಳೆಗಾರರಿಗೆ ಮತ್ತು ರೈತರಿಗೆ ಅನ್ಯಾಯವಾಗುತ್ತಿದೆ. ಕಬ್ಬಿನ ದರ ನಿಗದಿಗೆ ಸರ್ಕಾರ ಉತ್ತರ, ದಕ್ಷಿಣ ಎಂದು ಭಾಗವನ್ನು ಮಾಡಬಾರದು. ಮುಖ್ಯಮಂತ್ರಿಗಳು ರೈತರ ಬಗ್ಗೆ ಮೊಸಳೆ ಕಣ್ಣೀರು ಹಾಕಬಾರದು. ಕೇಂದ್ರ ಸರ್ಕಾರ ಕಬ್ಬಿಗೆ ನಿಗದಿ ಮಾಡಿರುವ ಎಫ್‌ಆರ್‌ಪಿ ದರವನ್ನು ರಾಜ್ಯ ಸರ್ಕಾರ ಅನುಮೋದಿಸಿಲ್ಲ ಎನ್ನುವ ಮುಖ್ಯಮಂತ್ರಿಗಳು ಉತ್ತರ ಕರ್ನಾಟಕದ ರೈತರಿಗೆ 10.5 ಎಫ್‌ಆರ್‌ಪಿಗೆ 3.300 ರೂ ನಿಗದಿ ಮಾಡಿದ್ದಾರೆ, ದಕ್ಷಿಣ ಕರ್ನಾಟಕದ ರೈತರಿಗೆ 400 ಕಡಿಮೆ ಮಾಡಿ 2.900 ರೂ ನೀಡಲು ಆದೇಶ ಮಾಡಲು ಮೀನಾ ಮೇಷ ಎಣಿಸುತ್ತಿದ್ದಾರೆ. ಕಾರಣ ಮುಖ್ಯಮಂತ್ರಿಗಳಿಗೂ ಸಕ್ಕರೆ ಕಾರ್ಖಾನೆ ಮಾಲೀಕರಿಗೂ ಬಾಂಧವ್ಯ ಇರುವುದು ಆದೇಶ ಮಾಡಲು ಅಡ್ಡಿಯಾಗಿದೆ.  

ಹಳ್ಳಿಕೇರೆಹುಂಡಿ ಭಾಗ್ಯರಾಜ್, ರಾಜ್ಯ ಕಬ್ಬು ಬೆಳೆಗಾರರ ಸಂಘದ ಅಧ್ಯಕ್ಷರು