ಗ್ರಾಮೀಣಾಭಿವೃದ್ಧಿ ಸಚಿವ ಪ್ರಿಯಾಂಕ ಖರ್ಗೆ ವಿರುದ್ಧ ಸಂಘ ಪರಿವಾರ ನಡೆಸುತ್ತಿರುವ ವಾಗ್ದಾಳಿ ಖಂಡಿಸಿ ಪ್ರಗತಿಪರ ಸಂಘಟನೆಗಳಿಂದ ಅಂಬೇಡ್ಕರ್ ಪ್ರತಿಮೆ ಎದುರು ಪ್ರತಿಭಟನೆ


 ಮೈಸೂರು: ಗ್ರಾಮೀಣಾಭಿವೃದ್ಧಿ ಸಚಿವ ಪ್ರಿಯಾಂಕ ಖರ್ಗೆ ಅವರ ಮೇಲೆ ನಡೆಸುತ್ತಿರುವ ದಾಳಿಯನ್ನು ಖಂಡಿಸಿ ಪ್ರಗತಿಪರ ಸಂಘಟನೆಗಳ ವತಿಯಿಂದ ಶನಿವಾರ ಪುರಭವನದ ಆವರಣದಲ್ಲಿರುವ ಅಂಬೇಡ್ಕರ್ ಪ್ರತಿಮೆ ಎದುರು ಪ್ರತಿಭಟನೆ ನಡೆಸಲಾಯಿತು. 

ದಸಂಸ ಮುಖಂಡ ಶಂಭುಲಿಂಗ ಸ್ವಾಮಿ ಮಾತನಾಡಿ, ಸರ್ಕಾರಿ ಶಾಲೆ ಕಾಲೇಜುಗಳ ಮೈದಾನ ಹಾಗೂ ಸಾರ್ವಜನಿಕ ಸ್ಥಳಗಳಲ್ಲಿಯೇ ಮುಗ್ಧ ಮಕ್ಕಳು ಮತ್ತು ಜನಸಾಮಾನ್ಯರನ್ನ ಕೋಮುಗಲಭೆ, ಸಾಮೂಹಿಕ ಹಿಂಸಾಚಾರದಂತಹ ಕಾನೂನು ಬಾಹಿರ ಚಟುವಟಿಕೆಗಳನ್ನು ನಡೆಸುತ್ತಿರುವುದನ್ನು ನಿಯಂತ್ರಿಸುವಂತೆ ಪತ್ರ ಬರೆದಿರುವುದನ್ನು ನೆಪ ಮಾಡಿಕೊಂಡು ತೇಜೋವಧೆ, ಅವಹೇಳನ ಮಾಡುತ್ತಿರುವುದು ಖಂಡನೀಯ ಎಂದರು. 

ನೂರು ವರ್ಷಗಳ ಸಂಭ್ರಮಾಚರಣೆ ಎಂದು ಹೇಳುತ್ತಿರುವ ರಾಷ್ಟ್ರೀಯ ಸ್ವಯಂಸೇವಕ ಸಂಘ ಮತ್ತು ಅದರ ಅಂಗಸಂಸ್ಥೆಗಳ ಕಾನೂನುಬಾಹಿರ ಚಟುವಟಿಕೆಗಳನ್ನು ನಿಯಂತ್ರಿಸಬೇಕು. ಆರ್‌ಎಸ್‌ಎಸ್ ಪ್ರಾರಂಭವಾಗಿದ್ದಿನಿಂದ ತಾರತಮ್ಯದ  ವ್ಯವಸ್ಥೆಯನ್ನು ಮರುಸ್ಥಾಪನೆಗಾಗಿ ದೇಶದ ಸಂವಿಧಾನದ ಸಮಾನತೆಯ ಆಸೆಗಳನ್ನು ವಿರೋಧಿಸುತ್ತಾ ಬಂದಿದೆ. ದೇವರು ಧರ್ಮ ಜಾತಿ ಹೆಸರಿನಲ್ಲಿ ಸುಳ್ಳು ಗೋಪುರ ಕಟ್ಟುತ್ತಾ ತನ್ನ ಕ್ರಿಮಿನಲ್ ಚಟುವಟಿಕೆಗಳನ್ನು ಕಾನೂನು ಬದ್ಧಗೊಳಿಸಲು ಹಿಂದೂ ಮುಸ್ಲಿಂ ಕ್ರೈಸ್ತ ದಲಿತ ಎಂದು ವಿಭಜಿಸಿ ಸಾಮೂಹಿಕ ವಿಚಾರಕ್ಕೆ ಪ್ರಚೋದ ನೀಡುತ್ತಿರುವುದು ದೇಶದ ಅಭಿವೃದ್ಧಿ ಆಂತರಿಕ ಭದ್ರತೆ ಧಕ್ಕೆ ತರುತ್ತಿದೆ ಎಂದರು.  

ಸಾಮಾಜಿಕ ಮಾಧ್ಯಮಗಳಲ್ಲಿ ಸಚಿವರಾದ ಪ್ರಿಯಾಂಕ್ ಖರ್ಗೆ ಅವರಿಗೆ ಕೆಟ್ಟ ರೀತಿಯ ಕಮೆಂಟ್ ಮಾಡುವ, ದ್ವೇಷ ಭಾಷಣ ಮಾಡುವವರನ್ನು ಗಡಿಪಾರು ಮಾಡಬೇಕು ಎಂದು ಒತ್ತಾಯಿಸಿದರು. 

ದಸಂಸದ ಸಂಚಾಲಕರಾದ ಚೋರನಹಳ್ಳಿ ಶಿವಣ್ಣ, ಬಂಗವಾದಿ ನಾರಾಯಣಪ್ಪ, ಸುರೇಶ್ ಕುಮಾರ, ಕಿರಂಗೂರು ಸ್ವಾಮಿ, ಕೆಪಿಸಿಸಿ ಸಂಯೋಜಕ ಬಂಡಿಪಾಳ್ಯ ವಿಜಯ್ ಕುಮಾರ್, ಗೋವಿಂದರಾಜು, ದಸಂಸ ತಾಲೂಕು ಸಂಚಾಲಕ ಕಲ್ಲಹಳ್ಳಿ ಕುಮಾರ್, ಬಬಿತ, ಗ್ರಾಮ ಪಂಚಾಯತಿ ಸದಸ್ಯ ಕುಬೇರ, ಮುರುಡಗಳ್ಳಿಮಂಜು, ಬೆಟ್ಟದ ಬಿಡುಮಹೇಶ್, ನಿರಂಜನ್, ನಟರಾಜ ಇದ್ದರು