ಹೆಚ್.ಡಿ.ದೇವೇಗೌಡರ ಹೆಸರಲ್ಲಿ ಮೆಡಿಕಲ್ ಕಾಲೇಜು, ಎಸ್.ಎಂ.ಕೃಷ್ಣ ಹೆಸರಲ್ಲಿ ಇಂಜಿನಿಯರಿಂಗ್ ಕಾಲೇಜು ಪ್ರಾರಂಭಕ್ಕೆ ನಂಜಾವಧೂತ ಸ್ವಾಮೀಜಿ ಸಲಹೆ

ಒಕ್ಕಲಿಗ ಸಮುದಾಯದ ಪ್ರತಿಭಾವಂತರಿಗೆ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ


 ವರದಿ : ನಜೀರ್ ಅಹಮದ್, ಮೈಸೂರು

ಮೈಸೂರು: ರಾಜ್ಯ ಒಕ್ಕಲಿಗರ ಸಂಘದಲ್ಲಿ ಸುಮಾರು 700 ಕೋಟಿ ಹಣ ಇದ್ದು, ಸಾಕಷ್ಟು ಜಮೀನು ಸಹ ಇರುವುದರಿಂದ ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರ ಹೆಸರಲ್ಲಿ ಒಂದು ಮೆಡಿಕಲ್ ಕಾಲೇಜು ಮತ್ತು ಮಾಜಿ ವಿದೇಶಾಂಗ ಸಚಿವರಾದ ಎಸ್.ಎಂ.ಕೃಷ್ಣ ಅವರ ಹೆಸರಲ್ಲಿ ಒಂದು ಇಂಜಿನಿಯರಿಂಗ್ ಕಾಲೇಜು ಪ್ರಾರಂಭಿಸಬೇಕೆಂದು ಸ್ಪಟಿಕಪುರಿ ಮಹಾಸಂಸ್ಥಾನ ಮಠದ ಪೀಠಾಧಿಪತಿ ಶ್ರೀ ನಂಜಾವಧೂತ ಸ್ವಾಮೀಜಿ ರಾಜ್ಯ ಒಕ್ಕಲಿಗರ ಸಂಘಕ್ಕೆ ಸಲಹೆ ನೀಡಿದರು.

ನಗರದ ಸಪ್ತಪದಿ ಕಲ್ಯಾಣ ಮಂಟಪದಲ್ಲಿ ಭಾನುವಾರ ರಾಜ್ಯ ಒಕ್ಕಲಿಗರ ಸಂಘ ಮತ್ತು ಕೃಷ್ಣಪ್ಪ ರಂಗಮ್ಮ ಎಜುಕೇಷನ್ ಟ್ರಸ್ಟ್ ಸಹಯೋಗದೊಂದಿಗೆ ಒಕ್ಕಲಿಗ ಸಮುದಾಯದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಸಮಾರಂಭದ ಸಾನಿಧ್ಯ ವಹಿಸಿ ಅವರು ಮಾತನಾಡಿದರು.

ಒಕ್ಕಲಿಗರ ಸಂಘ ಸಮುದಾಯದ ಬಡ ಮತ್ತು ಪ್ರತಿಭಾವಂತ ವಿದ್ಯಾರ್ಥಿಗಳ ನೆರವಿಗೆ ನಿಲ್ಲಬೇಕು, ಚಿಕ್ಕಬಳ್ಳಾಪುರದಲ್ಲಿ ಪುಟ್ಟಬರ್ತಿಯ ಮಧುಸೂಧನ ಸಾಯಿ ಅವರು ಮೆಡಿಕಲ್ ಕಾಲೇಜು ಪ್ರಾರಂಭಿಸಿದ್ದಾರೆ. ಅಲ್ಲಿ ಒಂದು ವರ್ಷಕ್ಕೆ ಒಂದು ಮೆಡಿಕಲ್ ಸೀಟಿಗೆ ಕೇವಲ ಒಂದು ರೂಪಾಯಿ ಫೀಸು ಪಡೆದು ಶಿಕ್ಷಣ ನೀಡುವ ಮೂಲಕ ಸಮುದಾಯದ ಸೇವೆ ಸಲ್ಲಿಸುತ್ತಿದ್ದಾರೆ, ನೀವೇನು ಮಾಡುತ್ತಿದ್ದೀರಿ, ಮೆಡಿಕಲ್ ಕಾಲೇಜು ಮತ್ತು ಇಂಜಿನಿಯರಿಂಗ್ ಕಾಲೇಜಿನಲ್ಲಿ ಒಕ್ಕಲಿಗರ ಪ್ರತಿಭಾವಂತ ಮಕ್ಕಳಿಗೆ ಉಚಿತವಾಗಿ ಒಂದು ಸೀಟನ್ನೂ ಕೊಡುತ್ತಿಲ್ಲ, ಯಾವ ರೀತಿ ಸಮುದಾಯಕ್ಕೆ ಸೇವೆ ಸಲ್ಲಿಸುತ್ತಿದ್ದೀರಿ ಎಂದು ಟೀಕಿಸಿದರು. ಕನಿಷ್ಠ ಒಕ್ಕಲಿಗ ಸಮುದಾಯದ ನಾಯಕರಾದ ಹೆಚ್.ಡಿ.ದೇವೇಗೌಡರು ಮತ್ತು ಎಸ್.ಎಂ.ಕೃಷ್ಣ ಅವರ ಹೆಸರು ಶಾಶ್ವತವಾಗಿ ಉಳಿಯುವಂತೆ ಮಾಡಲು ಶಿಕ್ಷಣ ಸಂಸ್ಥೆಗಳಿಗೆ ಅವರ ಹೆಸರಿಡಿ ಎಂದರು.

ಕಾರ್ಯಕ್ರಮವನ್ನು ಉದ್ಘಾಟಿಸಿದ ಶಾಸಕ ಜಿ.ಟಿ.ದೇವೇಗೌಡ ಮಾತನಾಡಿ, ಒಕ್ಕಲಿಗ ಸಮುದಾಯದ ಮಕ್ಕಳು ಉನ್ನತ ಶಿಕ್ಷಣ ಪಡೆಯಬೇಕು, ಪ್ರತಿಭಾವಂತ ಮಕ್ಕಳಿಗೆ ಸನ್ಮಾನಿಸಿ ಪ್ರತಿಭಾ ಪುರಸ್ಕಾರ ನಿಡುವ ಮೂಲಕ ಒಕ್ಕಲಿಗರ ಸಂಘ ಅವರಿಗೆ ಪ್ರೇರಣೆಯಾಗಿ ನಿಂತಿರುವುದು ಸ್ವಾಗತಾರ್ಹ ಎಂದರು.

ವಿಧಾನ ಪರಿಷತ್ ಮಾಜಿ ಉಪ ಸಭಾಪತಿ ಮರಿತಿಬ್ಬೇಗೌಡ ಮಾತನಾಡಿ, ಒಕ್ಕಲಿಗರ ಸಂಘದ ಚುನಾವಣೆಯಲ್ಲಿ ಹಣದ ಹರಿವು ನಡೆಯುತ್ತದೆ, ಹಣ ಪಡೆದು ಓಟು ಹಾಕುವಂತಹ ಅನಿಷ್ಠ ಪದ್ದತಿ ನಿಲ್ಲಬೇಕು, ಸಮುದಾಯಕ್ಕೆ ನಿಸ್ವಾರ್ಥವಾಗಿ ಸೇವೆ ಸಲ್ಲಿಸುವವರಿಗೆ ಅವಕಾಶ ನೀಡಬೇಕು, ಅಲ್ಲದೇ ಒಕ್ಕಲಿಗರ ಸಂಘದಲ್ಲಿ ನಡೆಯುವ ಎಲ್ಲ ಕಾರ್ಯಕ್ರಮಗಳ ಬಗ್ಗೆ ಅಧ್ಯಕ್ಷರು ಸರಿಯಾದ ನಿರ್ಧಾರಗಳನ್ನು ಕೈಗೊಳ್ಳಬೇಕೆಂದು ಸಲಹೆ ನೀಡಿದರು.

ಮೈಸೂರು ಮಹಾನಗರಪಾಲಿಕೆ ಮಾಜಿ ಸದಸ್ಯರು ಮತ್ತು ಒಕ್ಕಲಿಗರ ಸಂಘದ ನಿರ್ದೇಶಕರಾದ ಕೆ.ವಿ.ಶ್ರೀಧರ್ ಮಾತನಾಡಿ, ಮೈಸೂರು ಚಾಮರಾಜನಗರ ಜಿಲ್ಲೆಯಲ್ಲಿ ಎಸ್‍ಎಸ್‍ಎಲ್‍ಸಿ ಮತ್ತು ಪಿಯುಸಿ ಪರೀಕ್ಷೆಗಳಲ್ಲಿ ಉತ್ತಮ ಅಂಕಗಳನ್ನು ಪಡೆದ ನಮ್ಮ ಸಮುದಾಯದ 183 ವಿದ್ಯಾರ್ಥಿಗಳಿಗೆ ತಲಾ 5 ಸಾವಿರ ಹಣ ನೀಡಿ, ಮಕ್ಕಳನ್ನು ಗೌರವಿಸಲಾಗಿದೆ. ಈ ಮೂಲಕ ಒಕ್ಕಲಿಗರ ಸಂಘ ಸಮುದಾಯದ ಮಕ್ಕಳ ಶಿಕ್ಷಣಕ್ಕೆ ನೆರವು ನೀಡುತ್ತಿದೆ ಎಂದರು.

ಕಾರ್ಯಕ್ರಮಕ್ಕೂ ಮುನ್ನ ಶ್ರೀ ಬಾಲಗಂಗಾಧರನಾಥ ಸ್ವಾಮೀಜಿ ಮತ್ತು ಕೆಂಪೇಗೌಡರ ಪುತ್ಥಳಿಗೆ ಪುಷ್ಪಾರ್ಚನೆ ಮಾಡಲಾಯಿತು.

ಒಕ್ಕಲಿಗ ಸಮುದಾಯದ ಸಾಧಕರಾದ ವಿಧಾನ ಪರಿಷತ್ ಮಾಜಿ ಸದಸ್ಯ ಡಾ.ಡಿ.ಮಾದೇಗೌಡ, ನಿವೃತ್ತ ಡಿಐಜಿ ಕೆ.ಅರ್ಕೇಶ್, ಆರಕ್ಷಕ ಉಪ ಅಧೀಕ್ಷಕರಾದ ಶಾಂತಮಲ್ಲಪ್ಪ, ಕರಾಮುವಿವಿ ವಿಶ್ರಾಂತ ಕುಲಪತಿ ಡಾ.ಎಂ.ಎಸ್.ರಾಮೇಗೌಡ, ಯುಪಿಎಸ್‍ಸಿ ಸಾಧಕ ಶ್ರೇಯಸ್, ಪತ್ರಕರ್ತ ವಿನೋದ್ ಭೈರಪ್ಪ ಅವರನ್ನು ಸನ್ಮಾನಿಸಲಾಯಿತು.

ಆದಿ ಚುಂಚನಗಿರಿ ಮಹಾಸಂಸ್ಥಾನ ಶಾಖಾ ಮಠದ ಕಾರ್ಯದರ್ಶಿ ಶ್ರೀ ಸೋಮೇಶ್ವರನಾಥ ಸ್ವಾಮೀಜಿ, ರಾಜ್ಯ ಒಕ್ಕಲಿಗರ ಸಂಘದ ಅಧ್ಯಕ್ಷರಾದ ಬಿ.ಕೆಂಚಪ್ಪಗೌಡ, ಒಕ್ಕಲಿಗರ ಸಂಘದ ಕಾಮಗಾರಿ ಸಮಿತಿ ಅಧ್ಯಕ್ಷ ಸಿ.ಜಿ.ಗಂಗಾಧರ್ ಮುಂತಾದವರು ಮಾತನಾಡಿದರು.

ಕಾರ್ಯಕ್ರಮದಲ್ಲಿ ಮಾಜಿ ಶಾಸಕರಾದ ಎಲ್.ನಾಗೇಂದ್ರ, ರೈಲ್ವೆ ಕೋ ಆಪರೇಟೀವ್ ಬ್ಯಾಂಕ್ ಅಧ್ಯಕ್ಷ ಮಂಜೇಗೌಡ, ಡಾ.ಟಿ.ಕೆ.ಅಂಜನಪ್ಪ, ಸಮುದಾಯದ ಪ್ರಮುಖರಾದ ಅಶೋಕ್ ಜಯರಾಂ, ಮರಿಸ್ವಾಮಿ, ನಾಗಣ್ಣ, ಚೇತನ್, ನಾರಾಯಣಗೌಡ, ಹನುಮಂತರಾಯಪ್ಪ, ವೆಂಟಕರಾಮೇಗೌಡ, ಗಂಗಾಧರಗೌಡ, ಮಂಜೇಗೌಡ, ರವಿ, ಆಲನಹಳ್ಳಿ ಮಾದೇಗೌಡ, ಜಯರಾಮು, ಚೇತನ್, ಬನ್ನೂರು ರಾಮಸ್ವಾಮಿ, ಕೆಂಪೇಗೌಡ ಮುಂತಾದವರು ಇದ್ದರು.