ಕನ್ನಡಿಗರಿಗೆ ಉದ್ಯೋಗ ನೀಡದಿದ್ದಲ್ಲಿ ಕಾರ್ಖಾನೆ ಬಂದ್ ಮಾಡಿಸುವ ಕನ್ನಡಾಂಬೆ ರಕ್ಷಣಾ ವೇದಿಕೆ ಹೋರಾಟಕ್ಕೆ ಶಾಸಕ ಜಿ.ಟಿ.ದೇವೇಗೌಡ ಬೆಂಬಲ

ವರದಿ: ನಿಷ್ಕಲ ಎಸ್.ಗೌಡ, ಮೈಸೂರು

ಮೈಸೂರು : ಖಾಸಗಿ ಕಾರ್ಖಾನೆಗಳಲ್ಲಿ ಕನ್ನಡಿಗರಿಗೆ ಉದ್ಯೋಗ ನೀಡದಿದ್ದರೆ ಅಂತಹ ಕಾರ್ಖಾನೆಗಳನ್ನು ಬಂದ್ ಮಾಡಿಸಲಾಗುವುದು ಎಂಬ ಧ್ಯೇಯದೊಂದಿಗೆ ಹೋರಾಟ ಮತ್ತು ಕೈಗಾರಿಕೆಗಳಿಗೆ ಜಾಗೃತಿ ಮೂಡಿಸಲು ಕಾಲ್ನಡಿಗೆ ಜಾಥ ನಡೆಸುತ್ತಿರುವ ಕನ್ನಡಾಂಬೆ ರಕ್ಷಣಾ ವೇದಿಕೆಗೆ ನಮ್ಮ ಬೆಂಬಲವಿದೆ ಎಂದು ಚಾಮುಂಡೇಶ್ವರಿ ವಿಧಾನಸಭಾ ಕ್ಷೇತ್ರದ ಶಾಸಕರಾದ ಜಿ.ಟಿ.ದೇವೇಗೌಡ ಹೇಳಿದರು. 

ಹೂಟಗಳ್ಳಿ ಕೈಗಾರಿಕಾ ಪ್ರದೇಶದಲ್ಲಿ ಕನ್ನಡ ನಾಮಫಲಕ ಅಳವಡಿಕೆ, ಕನ್ನಡಿಗರಿಗೆ ಉದ್ಯೋಗ ನೀಡುವುದು, ಕಾರ್ಮಿಕರಿಗೆ ಮೂಲಭೂತ ಸೌಕರ್ಯಗಳನ್ನು ಒದಗಿಸುವಂತೆ ಒತ್ತಾಯಿಸಿ ಕೈಗಾರಿಕೆಗಳಿಗೆ ಜಾಗೃತಿ ಮೂಡಿಸಲು, ಕನ್ನಡಾಂಬೆ ರಕ್ಷಣಾ ವೇದಿಕೆಯಿಂದ ಏರ್ಪಡಿಸಿದ್ದ ಕಾಲ್ನಡಿಗೆ ಜಾಥಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ಕಾರ್ಮಿಕರ ಎಲ್ಲ ರೀತಿಯ ಹಿತರಕ್ಷಣೆ, ಪರಿಸರ ರಕ್ಷಣೆ, ಉದ್ಯೋಗದಲ್ಲಿ ಕನ್ನಡಿಗರಿಗೆ ಪ್ರಥಮ ಆದ್ಯತೆ ನೀಡುವುದು, ಕನ್ನಡದಲ್ಲಿ ವ್ಯವಹರಿಸುವುದು, ಕಾರ್ಮಿಕರ ಸುರಕ್ಷತೆ ಮತ್ತು ಅವರ ಉದ್ಯೋಗ ಭದ್ರತೆ ಬಗ್ಗೆ ಇಂದು ಯಾವ ಸಂಘಟನೆಗಳೂ ಮತ್ತು ಸರ್ಕಾರಗಳು ಮಾತನಾಡುತ್ತಿಲ್ಲ,

ಅಲ್ಲದೇ ಕಾರ್ಮಿಕರ ಪರವಾಗಿ ಹೋರಾಟ ಮಾಡಲು ಯಾವುದೇ ಸಂಘಟನೆಗಳು ಮುಂದೆ ಬರುವುದಿಲ್ಲ, ಅಂತಹದರಲ್ಲಿ ಕನ್ನಡಾಂಬೆ ರಕ್ಷಣಾ ವೇದಿಕೆಯ ರಾಜಶೇಖರ್ ಅವರು ಕಾರ್ಮಿಕರ ಪರವಾಗಿ ದನಿ ಎತ್ತಿದ್ದಾರೆ.

ಅವರ ದನಿಯನ್ನು ದುರ್ಬಲಗೊಳಿಸುವ ಶಕ್ತಿಗಳೂ ಸಹ ಒಂದು ಕಡೆ ಕೆಲಸ ಮಾಡುತ್ತಿವೆ. ಇಂತಹದರಲ್ಲಿ ಕಾರ್ಮಿಕರು ಕನ್ನಡಾಂಬೆ ರಕ್ಷಣಾ ವೇದಿಕೆಗೆ ಬೆಂಬಲ ನೀಡಿ, ಜಾಥಾದಲ್ಲಿ ಪಾಲ್ಗೊಂಡು ನಿಮ್ಮ ಹಕ್ಕನ್ನು ಪಡೆದುಕೊಳ್ಳಿ ಎಂದು ಸಲಹೆ ನೀಡಿದರು.

ಕೈಗಾರಿಕೆಗಳು ಇಂದು ಕಾಯಂ ನೇಮಕಾತಿ ಮಾಡಿಕೊಳ್ಳುತ್ತಿಲ್ಲ, ಎಜೆನ್ಸಿ ಮೂಲಕ ಗುತ್ತಿಗೆ ಆಧಾರದಲ್ಲಿ ಕಡಿಮೆ ಸಂಬಳಕ್ಕೆ ಕಾರ್ಮಿಕರನ್ನು ನೇಮಕ ಮಾಡಿಕೊಳ್ಳುತ್ತಿದ್ದಾರೆ. ಸ್ಥಳೀಯ ಕನ್ನಡಿಗರಿಗೆ ಉದ್ಯೋಗ ನೀಡುತ್ತಿಲ್ಲ, ದೂರದ ಉತ್ತರ ಪ್ರದೇಶ, ಬಿಹಾರ, ಪಶ್ಚಿಮ ಬಂಗಾಳದಿಂದ ಕಾರ್ಮಿಕರನ್ನು ಕರೆಸಿಕೊಂಡು ಕಡಿಮೆ ಸಂಬಳಕ್ಕೆ ದುಡಿಸಿಕೊಳ್ಳುತ್ತಿದ್ದಾರೆ. ಸ್ಥಳೀಯರಿಗೆ ಕೆಲಸವನ್ನೇ ನೀಡುತ್ತಿಲ್ಲ, ಇದರಿಂದ ಉದ್ಯೋಗವಿಲ್ಲದೆ ಸ್ಥಳೀಯರು ಸಾಕಷ್ಟು ಸಂಕಟದಲ್ಲಿದ್ದಾರೆ. ಕೈಗಾರಿಕೆಗಳಿಗೆ ಭೂಮಿ ನೀಡಿದವರಿಗೂ ಉದ್ಯೋಗ ನೀಡುತ್ತಿಲ್ಲ, ಸರೋಜಿನಿ ಮಹಿಷಿ ವರದಿಯೂ ಜಾರಿಗೆ ಬಂದಿಲ್ಲ, ಇವರ ಪರವಾಗಿ ಕನ್ನಡಾಂಬೆ ರಕ್ಷಣಾ ವೇದಿಕೆಯವರು ಹೋರಾಟಕ್ಕೆ ಇಳಿದಿರುವುದು ಶ್ಲಾಘನೀಯ, ಇವರನ್ನು ಬೆಂಬಲಿಸಿ ಎಂದರು.

ಕನ್ನಡಾಂಬೆ ರಕ್ಷಣಾ ವೇದಿಕೆ ರಾಜ್ಯಾಧ್ಯಕ್ಷರಾದ ಬಿ.ಬಿ.ರಾಜಶೇಖರ್ ಮಾತನಾಡಿ, ಕನ್ನಡ ನೆಲ, ಜಲ ಮತ್ತಿತರ ಸೌಲಭ್ಯಗಳನ್ನು ಬಳಸಿಕೊಂಡಿರುವ ಕಾರ್ಖಾನೆಗಳು ಕನ್ನಡಿಗರಿಗೆ ಉದ್ಯೋಗ ನೀಡುತ್ತಿಲ್ಲ, ಕಾರ್ಖಾನೆಗಳ ನಾಮಫಲಕಗಳಲ್ಲಿ ಕನ್ನಡ ಭಾಷೆಗೆ ಆದ್ಯತೆ ನೀಡುತ್ತಿಲ್ಲ, ಉದ್ಯೋಗದಲ್ಲಿ ಕನ್ನಡಿಗರಿಗೆ ಪ್ರಥಮ ಆದ್ಯತೆ ನೀಡುತ್ತಿಲ್ಲ, ಇದರ ವಿರುದ್ಧ ಕನ್ನಡಾಂಬೆ ರಕ್ಷಣಾ ವೇದಿಕೆ ಇಂದಿನಿಂದ ನಾಲ್ಕುದಿನಗಳ ಕಾಲ ಹೂಟಗಳ್ಳಿ, ಕೂರ್ಗಳ್ಳಿ, ಹೆಬ್ಬಾಳ್ ಮತ್ತು ಮೇಟಗಳಲ್ಲಿ ಕ್ಥಗಾರಿಕಾ ಪ್ರದೇಶಗಳಲ್ಲಿರುವ ಕೈಗಾರಿಕೆಗಳಿಗೆ ಜಾಗೃತಿ ಮೂಡಿಸಲು ಕಾಲ್ನಡಿಗೆ ಜಾಥ ಹಮ್ಮಿಕೊಂಡಿದೆ. ಕರ ಪತ್ರಗಳ ಮೂಲಕ ಜಾಗೃತಿಯನ್ನೂ ಮೂಡಿಸುತ್ತಿದೆ. ಇನ್ನು ಮುಂದೆ ಕೈಗಾರಿಕೆಗಳು ಎಚ್ಚೆತ್ತುಕೊಂಡು ನಾಮ ಫಲಕಗಳಲ್ಲಿ ಕನ್ನಡ ಭಾಷೆಯನ್ನು ಹೆಚ್ಚು ಬಳಕೆ ಮಾಡಬೇಕು, ಕಾರ್ಮಿಕರ ತಾರತಮ್ಯ ಅಳಿಸಬೇಕು, ಮೂಲಭೂಲ ಸೌಲಭ್ಯಗಳನ್ನು ಒದಗಿಸಬೇಕು. ಇಲ್ಲದಿದ್ದಲ್ಲಿ ಅಂತಹ ಕಾರ್ಖಾನೆಗಳ ವಿರುದ್ಧ ಕಾರ್ಮಿಕ ಇಲಾಖೆಗೆ ದೂರು ನೀಡಿ ಕಾರ್ಖಾನೆ ಬಂದ್ ಮಾಡಿಸುವ ತನಕವೂ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದರು.

ಬೆಳಗ್ಗೆ ೧೦ ಗಂಟೆಗೆ ಪ್ರಾರಂಭವಾದ ಜಾಥ ಸಂಜೆಯವರೆಗೂ ನಡೆಯಿತು. ಜಾಥಕ್ಕೆ ಚಾಲನೆ ನೀಡಿದ ಜಿಟಿಡಿ ತಾವೂ ಕೂಡ ಕಾಲ್ನಡಿಗೆಯಲ್ಲಿ ಪಾಲ್ಗೊಂಡರು.

ಈ ಸಂದರ್ಭದಲ್ಲಿ ಕನ್ನಡಾಂಬೆ ರಕ್ಷಣಾ ವೇದಿಕೆಯ ಡಿಪಿಕೆ ಪರಮೇಶ್, ರಾಜ್ಯ ಖಜಾಂಚಿ ನಂಜುಂಡ, ಮೈಸೂರು ಜಿಲ್ಲಾ ಅಧ್ಯಕ್ಷ ಸಂತೋಷ್, ಜಿಲ್ಲಾ ಮಹಿಳಾ ವಿಭಾಗದ ಅಧ್ಯಕ್ಷರಾದ ಮಂಜುಳ, ಪದಾಧಿಕಾರಿಗಳಾದ ಸಿಂಧುವಳ್ಳಿ ಶಿವಕುಮಾರ್, ಮನುಗೌಡ,  ಸೋಮಶೇಖರ, ಗೌತಮ್, ಅನುರಾಜ್ ಗೌಡ, ಮಂಜುನಾಥ್, ಸಿದ್ದೇಗೌಡ ಮುಂತಾದವರು ಕಿಕ್ಕೇರಿ ಕಿರಣ, ಶಿವಕುಮಾರ್, ಹೊನ್ನೇಗೌಡ, ರವಿಗೌಡ, ನಾಗರಾಜು, ರಾಜೇಗೌಡ, ಮಹದೇವಸ್ವಾಮಿ, ಕರಿಗೌಡ್ರು, ಸಿಂಗ್ರಿಗೌಡ್ರು, ಕುಮಾರ್, ಶಿವಲಿಂಗಯ್ಯ  ಮತ್ತಿತರರು ಇದ್ದರು.


ಮೈಸೂರಿನ ಬಹುತೇಕ ಕಾರ್ಖಾನೆಗಳಲ್ಲಿ ಕಾರ್ಮಿಕರಿಗೆ ವೇತನದಲ್ಲಿ, ಊಟೋಪಚಾರದಲ್ಲಿ, ಆರೋಗ್ಯ ಸಂರಕ್ಷಣೆ ಮತ್ತು ಉದ್ಯೋಗ ಭದ್ರತೆ ನೀಡುವಲ್ಲಿ ಯಥೇಚ್ಛವಾಗಿ ತಾರತಮ್ಯ ಮಾಡಲಾಗುತ್ತಿದೆ. ಕಾಯಂ ನೌಕರರಿಗೆ ಉತ್ತಮ ಗುಣಮಟ್ಟದ ಊಟ, ದಿನಗೂಲಿ ನೌಕರರಿಗೆ ಕಳಪೆ ಊಟ ನೀಡಲಾಗುತ್ತಿದೆ. ಈ ಬಗ್ಗೆ ಕನ್ನಡಾಂಬೆ ರಕ್ಷಣಾ ವೇದಿಕೆಗೆ ಸಾಕಷ್ಟು ದೂರು ಬಂದಿವೆ. ಕಾರ್ಮಿಕರ ಇಲಾಖೆ ಪರಿಹರಿಸಬೇಕಾದ ಸಮಸ್ಯೆಗಳಿಗೆ ಪರಿಹಾರ ಕೋರಿ ಕಾರ್ಮಿಕರು ಸಂಘಟನೆಗಳ ಬಳಿ ಬರುತ್ತಿದ್ದಾರೆ. ಕಾರ್ಮಿಕ ಇಲಾಖೆ ಕಾರ್ಮಿಕರ ಪರವಾಗಿಲ್ಲ, ಈ ಬಗ್ಗೆ ನಾವು ಸರ್ಕಾರದ ಮಟ್ಟದಲ್ಲಿ ಪತ್ರವ್ಯವಹಾರ ನಡೆಸಿ ಸಮಸ್ಯೆಗಳ ಪರಿಹಾರಕ್ಕೆ ಒತ್ತಾಯಿಸುತ್ತೇವೆ.

ಬಿ.ಬಿ.ರಾಜಶೇಖರ್ ಅಧ್ಯಕ್ಷರು, ಕನ್ನಡಾಂಬೆ ರಕ್ಷಣಾ ವೇದಿಕೆ.




ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು