ಚಿತ್ರನಟ ಜಯಪ್ರಕಾಶ್ (ಜೆಪಿ) ನೇತೃತ್ವದಲ್ಲಿ ಕಾವೇರಿ ಕ್ರಿಯಾ ಸಮಿತಿಯಿಂದ ’ಚಲೋ ಧರ್ಮಸ್ಥಳ’ ಯಾತ್ರೆಗೆ ಎಂಎಲ್‌ಸಿ ಸಿ.ಎನ್.ಮಂಜೇಗೌಡ ಚಾಲನೆ


 ವರದಿ: ನಿಷ್ಕಲ ಎಸ್.ಗೌಡ, ಮೈಸೂರು

ಮೈಸೂರು : ನಾಡಿನ ಪ್ರಖ್ಯಾತ ಧಾರ್ಮಿಕ ಕ್ಷೇತ್ರವಾಗಿರುವ ಧರ್ಮಸ್ಥಳದ ಧರ್ಮಾಧಿಕಾರಿಗಳ ಮೇಲೆ ಸುಳ್ಳು ಆರೋಪಗಳನ್ನು ಮಾಡಲಾಗಿದೆ ಎಂದು ಆರೋಪಿಸಿ, ಶ್ರೀ ವೀರೇಂದ್ರ ಹೆಗ್ಗಡೆ ಅವರಿಗೆ ನೈತಿಕ ಬೆಂಬಲ ಘೋಷಿಸಿ ಕಾವೇರಿ ಕ್ರಿಯಾ ಸಮಿತಿಯಿಂದ ಮಂಗಳವಾರ ಬೆಳಗ್ಗೆ ಏರ್ಪಡಿಸಿದ್ದ ಚಲೋ ಧರ್ಮಸ್ಥಳ ಯಾತ್ರೆಗೆ ವಿಧಾನ ಪರಿಷತ್ ಶಾಸಕರಾದ ಸಿ.ಎನ್.ಮಂಜೇಗೌಡ ಅವರು ಚಾಲನೆ ನೀಡಿದರು.

ಕೋಟೆ ಆಂಜನೇಯಸ್ವಾಮಿ ದೇವಾಲಯದ ಎದುರು ನಡೆದ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಬಳಿಕ ಅವರು ಮಾತನಾಡಿ, ದೇಶಾದ್ಯಂತ ಕೊಟ್ಯಂತರ ಭಕ್ತರ ಪೂಜನೀಯ ಸ್ಥಳವಾದ ಧರ್ಮಸ್ಥಳಕ್ಕೆ ಇದೀಗ ಸಾಕಷ್ಟು ಅಪಪ್ರಚಾರ ನಡೆದಿದೆ. ಇದರಿಂದ ಭಕ್ತರ ಭಾವನೆಗಳಿಗೆ ಧಕ್ಕೆ ಬಂದಿದೆ. ಕಾವೇರಿ ಕ್ರಿಯಾ ಸಮಿತಿಯ ಅಧ್ಯಕ್ಷರಾದ ಜಯಪ್ರಕಾಶ್ ಮತ್ತು ವಿವಿಧ ಸಂಘಟನೆಗಳ ಮುಖಂಡರು ಇಂದು ಧರ್ಮಸ್ಥಳಕ್ಕೆ ಯಾತ್ರೆ ಮಾಡುವ ಮೂಲಕ ಶ್ರೀಗಳಿಗೆ ನೈತಿಕ ಬೆಂಬಲ ನೀಡುತ್ತಿರುವುದು ಸ್ವಾಗತಾರ್ಹ ಎಂದರು.

ಕನ್ನಡಾ ಸಾಹಿತ್ಯ ಪರಿಷತ್ತು ಅಧ್ಯಕ್ಷರಾದ ಮಡ್ಡಿಕೆರೆ ಗೋಪಾಲ್ ಅವರು ಮಾತನಾಡಿ, ಭಾರತೀಯ ಅಧ್ಯಾತ್ಮ ಮತ್ತು ಯೋಗ ಇಂದು ವಿಜ್ಞಾನಕ್ಕಿಂತಲೂ ಮುಂದಿದೆ ಎಂದು ವಿಶ್ವಸಂಸ್ಥೆ ಹೇಳಿದೆ. ಅಧ್ಯಾತ್ಮಿಕ ಕೇಂದ್ರಗಳ ಸಂರಕ್ಷಣೆಯೂ ನಮ್ಮ ಜವಾಬ್ದಾರಿಯಾಗಿದೆ. ಚಿತ್ರನಟರು ಮತ್ತು ಕಾವೇರಿ ಕ್ರಿಯಾ ಸಮಿತಿ ಅಧ್ಯಕ್ಷರೂ ಆದ ಜಯಪ್ರಕಾಶ್ (ಜೆಪಿ) ನೇತೃತ್ವದಲ್ಲಿ ನಡೆಯುತ್ತಿರುವ ಚಲೋ ಧರ್ಮಸ್ಥಳ ಯಾತ್ರೆ ಸುಗಮವಾಗಿ, ಸುಖಕರವಾಗಿ ನಡೆಯಲಿ ಎಂದು ಆಶಿಸಿದರು.

ಈ ಸಂದರ್ಭದಲ್ಲಿ ಕಾವೇರಿ ಕ್ರಿಯಾ ಸಮಿತಿ ಹೋರಾಟಗಾರರಾದ ತೇಜಸ್ ಲೋಕೇಶ್‌ಗೌಡ, ಗೋಲ್ಡನ್ ಸುರೇಶ್, ಸಿಂಧುವಳ್ಳಿ ಶಿವಕುಮಾರ್,ಕೃಷ್ಣಪ್ಪ, ಶಿವಲಿಂಗು,ಕುಮಾರ್‌ಗೌಡ, ಮಂಜುಳ, ನೇಹ, ಭಾಗ್ಯಮ್ಮ, ಪ್ರಭುಶಂಕರ್, ರಘು ಅರಸ್, ಹನುಮಂತಯ್ಯ,ಮಹೇಶ್‌ಗೌಡ, ಸಿದ್ದೇಗೌಡ, ಶ್ರೀನಿವಾಸ, ಪ್ರಭಾಕರ್ ಇತರರು ಇದ್ದರು.

ಹಿಂದೂಗಳ ಪವಿತ್ರ ಧಾರ್ಮಿಕ ಕ್ಷೇತ್ರವಾದ ಧರ್ಮಸ್ಥಳದ ವಿರುದ್ಧ ಕಳೆದ ಹಲವು ತಿಂಗಳುಗಳಿಂದ ಕೆಲವು ದುಷ್ಕರ್ಮಿಗಳು ಅಪಪ್ರಚಾರ ನಡೆಸುತ್ತಿದ್ದಾರೆ. ಧರ್ಮಾಧಿಕಾರಿಗಳ ಹೆಲಸರಿಗೆ ಕಳಂಕ ತರುವ ಪ್ರಯತ್ನ ಮಾಡುತ್ತಿದ್ದಾರೆ. ಇವರ ಆರೋಗಳೆಲ್ಲವೂ ಸುಳ್ಳು, ಸರ್ಕಾರ ಇವರನ್ನು ಬಂಧಿಸಿ ದೇಶದಿಂದಲೇ ಗಡಿಪಾರು ಮಾಡಬೇಕಿದೆ.

ಜಯಪ್ರಕಾಶ್ (ಜೆಪಿ) ಅಧ್ಯಕ್ಷರು, ಕಾವೇರಿ ಕ್ರಿಯಾ ಸಮಿತಿ