ಸರಸ್ವತಿ ಸಮ್ಮಾನ್ ಪುರಸ್ಕೃತ ಲೇಖಕರಾದ ಡಾ.ಎಸ್.ಎಲ್.ಭೈರಪ್ಪ ನಿಧನಕ್ಕೆ ಕನ್ನಡಾಂಬೆ ರಕ್ಷಣಾ ವೇದಿಕೆಯಿಂದ ಶ್ರದ್ಧಾಂಜಲಿ

ಕನ್ನಡ ಇರುವ ತನಕವೂ ಎಸ್.ಎಲ್.ಭೈರಪ್ಪ ಇರುತ್ತಾರೆ: ಜಯಪ್ಪ ಹೊನ್ನಾಳಿ

 ವರದಿ: ನಿಷ್ಕಲ ಎಸ್.ಗೌಡ, ಮೈಸೂರು

ಮೈಸೂರು: ಕನ್ನಡದ ಹಿರಿಯ ಲೇಖಕ, ಸರಸ್ವತಿ ಸಮ್ಮಾನ್ ಪುರಸ್ಕøತ ಹಿರಿಯ ಲೇಖಕರು, ಹೆಸರಾಂತ ಕಾದಂಬರಿಕಾರರೂ ಆದ ಎಸ್.ಎಲ್.ಭೈರಪ್ಪ ನಿಧನಕ್ಕೆ ಕನ್ನಡಾಂಬೆ ರಕ್ಷಣಾ ವೇದಿಕೆಯಿಂದ ಶ್ರದ್ಧಾಂಜಲಿ ಸಲ್ಲಿಸಲಾಯಿತು. 

ನಗರದ ನ್ಯಾಯಾಲಯದ ಎದುರು ಇರುವ ಮಹಾತ್ಮಗಾಂಧಿ ಪುತ್ಥಳಿ ಎದುರು ಕನ್ನಡಾಂಬೆ ರಕ್ಷಣಾ ವೇದಿಕೆ ಅಧ್ಯಕ್ಷರಾದ ಬಿ.ಬಿ.ರಾಜಶೇಖರ್ ನೇತೃತ್ವದಲ್ಲಿ ಜಮಾಯಿಸಿದ ಕಾರ್ಯಕರ್ತರು, ಲೇಖಕರಾದ ಎಸ್.ಎಲ್.ಭೈರಪ್ಪ ಅವರ ಭಾವಚಿತ್ರ ಹಿಡಿದು, ಮೋಂಬತ್ತಿ ಹಚ್ಚಿ ಸಂತಾಪ ಸೂಚಿದರು.

ಈ ಸಂದರ್ಭದಲ್ಲಿ ಸಾಹಿತಿ ಜಯಪ್ಪ ಹೊನ್ನಾಳಿ ಮಾತನಾಡಿ, ಎಸ್.ಎಲ್.ಭೈರಪ್ಪ ಅವರು, ರಾಷ್ಟ್ರೀಯವಾದಿ, ಕೋಮುವಾದಿ ಆಗಿರಲಿಲ್ಲ, ಅವರನ್ನು ಕೋಮುವಾದಿ ಎಂದು ಬಿಂಬಿಸಲಾಯಿತು ಅಷ್ಟೇ, ಅವರೊಬ್ಬ ರಾಷ್ಟ್ರಮಟ್ಟದ ಚಿಂತಕರು, ಕನ್ನಡಕ್ಕೆ ಕಿರೀಟ ಪ್ರಾಯವಾದ ಲೇಖಕರು, 25ಕ್ಕೂ ಹೆಚ್ಚು ಕಾದಂಬರಿಗಳನ್ನು ಬರೆದಿದ್ದಾರೆ. ಅವರ ಕಾದಂಬರಿಯ ಒಂದು ಸಾಲು ಓದಿದರೆ ಇಡೀ ಕಾದಂಬರಿ ಓದಬೇಕೆನ್ನುವ ಹಂಬಲ, ಕುತೂಹಲ ಮೂಡುತ್ತದೆ. ಅವರ ಹೆಸರಾಂತ ಕೃತಿಗಳಾದ ಪರ್ವ, ದಾಟು ಸೇರಿದಂತೆ ಅನೇಕ ಸೃಜನಶೀಲ ಕಾದಂಬರಿಗಳು ಇಂಗ್ಲೀಷ್ ಸೇರಿದಂತೆ ಹಲವು ಭಾಷೆಗಳಲ್ಲಿ ತರ್ಜುಮೆ ಆಗಿದೆ, ಕನ್ನಡ ಸಾಹಿತ್ಯ ಹೆಸರಾಂತ ಕಾದಂಬರಿಕಾರನನ್ನು ಕಳೆದುಕೊಂಡು ತಬ್ಬಲಿಯಾಗಿದೆ ಎಂದರು.

ಕನ್ನಡಾಂಬೆ ರಕ್ಷಣಾ ವೇದಿಕೆ ಅಧ್ಯಕ್ಷರಾದ ಬಿ.ಬಿ.ರಾಜಶೇಖರ್ ಮಾತನಾಡಿ, ಎಸ್.ಎಲ್.ಭೈರಪ್ಪ ಅವರು, ದೇಶ ಕಂಡ ಶ್ರೇಷ್ಠ ಅಪ್ರತಿಮ ಸೃಜನಶೀಲ ಲೇಖಕರು, ಆಧುನಿಕ ಕನ್ನಡ ಸಾಹಿತ್ಯದ ಜನಪ್ರಿಯತೆ ಮತ್ತು ಚಿಂತನಾಶೀಲತೆ ಕಾಯ್ದುಕೊಂಡ ಅಪೂರ್ವ ಬರಹಗಾರರಾಗಿದ್ದರು, ಅವರಿಗೆ ಪದ್ಮಭೂಷಣ, ಸರಸ್ವತಿ ಸಮ್ಮಾನ್ ಸೇರಿದಂತೆ ಹಲವಾರು ಪ್ರಶಸ್ತಿಗಳು ಲಭಿಸಿದ್ದವು. ಶ್ರೀ ಎಸ್.ಎಲ್.ಭೈರಪ್ಪರವರ ನಿಧನ ಸಾಹಿತ್ಯ ಲೋಕಕ್ಕೆ ತುಂಬಲಾರದ ನಷ್ಟವನ್ನುಂಟುಮಾಡಿದೆ. ಕನ್ನಡ ಸಾಹಿತ್ಯದ ದಿಗ್ಗಜರಾಗಿದ್ದ ಎಸ್.ಎಲ್.ಭೈರಪ್ಪರವರ ಕೃತಿಗಳು ಭಾಷೆಯ ಗಡಿಯನ್ನು ದಾಟಿ ಗುಜರಾತಿ, ಹಿಂದಿ, ಸಂಸ್ಕೃತ, ಮಲಯಾಳಂ, ತಮಿಳು, ತೆಲಗು ಹಾಗೂ ಇಂಗ್ಲೀಷ್ ಭಾಷೆಗಳಿಗೂ ಅನುವಾದಗೊಂಡಿವೆ. ``ಧರ್ಮಶ್ರೀ'' ಯಿಂದ ಹಿಡಿದು ಇತ್ತೀಚಿಗೆ ಪ್ರಕಟವಾದ ``ಉತ್ತರಕಾಂಡ''ದವರಗೆ 20 ಕ್ಕೂ ಹೆಚ್ಚು ಮಹತ್ವಪೂರ್ಣ ಕಾದಂಬರಿಗಳನ್ನು ಭೈರಪ್ಪರವರ ಬರೆದಿದ್ದಾರೆ. ವಂಶವೃಕ್ಷ, ತಬ್ಬಲಿಯು ನೀನಾದೆ ಮಗನೇ, ನಾಯಿನೆರಳು, ಮತದಾನ ಕೃತಿಗಳು ಚಲನಚಿತ್ರಗಳಾಗಿ ರಾಷ್ಟ್ರಮಟ್ಟದ ಹತ್ತು ಹಲವು ಪ್ರಶಸ್ತಿಗಳನ್ನು ಮುಡಿಗೇರಿಸಿಕೊಂಡಿವೆ. ಮಹಾನ್ ಕಾದಂಬರಿಕಾರರಾದ ಶ್ರೀ ಎಸ್.ಎಲ್.ಭೈರಪ್ಪರವರ ನಿಧನ ಅವರ ಕುಟುಂಬಕ್ಕಷ್ಟೇ ಅಲ್ಲ, ಕನ್ನಡ ಸಾಹಿತ್ಯ ಲೋಕಕ್ಕೆ ತುಂಬಲಾರದ ನಷ್ಟವಾಗಿದೆ ಎಂದರು.

ಈ ಸಂದರ್ಭದಲ್ಲಿ ಕನ್ನಡಾಂಬೆ ರಕ್ಷಣಾ ವೇದಿಕೆಯ ರಾಜ್ಯ ಖಜಾಂಜಿ ನಂಜುಂಡ, ಮೈಸೂರು ಜಿಲ್ಲಾಧ್ಯಕ್ಷ ಸಂತೋಷ್, ಮೈಸೂರು ಮಹಿಳಾ ವಿಭಾಗದ ಜಿಲ್ಲಾಧ್ಯಕ್ಷರಾದ ಮಂಜುಳಾ, ಗೌರವ ಕಾರ್ಯದರ್ಶಿ ಸಿಂಧುವಳ್ಳಿ ಶಿವಕುಮಾರ್, ಅನುರಾಜ್ ಗೌಡ, ಮೈಸೂರು ಪ್ರಾಂತ್ಯ ಗೌರವಾಧ್ಯಕ್ಷರು ರವಿ ಗೌಡ, ಮಂಜುನಾಥ್, ಮಹೇಂದ್ರ,  ವಿಷ್ಣು ಇತರರು ಇದ್ದರು.