ವರದಿ: ನಿಷ್ಕಲ ಎಸ್.ಗೌಡ, ಮೈಸೂರು
ಮೈಸೂರು : ನಾಡಹಬ್ಬ ವಿಶ್ವ ವಿಖ್ಯಾತ ಮೈಸೂರು ದಸರಾ ಮಹೋತ್ಸವದ ಪ್ರಯುಕ್ತ ಮಂಗಳವಾರ ಮಹಾರಾಜ ಒಳಾಂಗಣ ಕ್ರೀಡಾಂಗಣದಲ್ಲಿ ಕರ್ನಾಟಕ ರಾಜ್ಯ ಮಿಕ್ಸಡ್ ಮಾರ್ಷಲ್ ಆಟ್ರ್ಸ್ ಅಸೋಸಿಯೇಷನ್ ವತಿಯಿಂದ ನಡೆದ ಮಿಕ್ಸಡ್ ಮಾರ್ಷಲ್ ಆರ್ಟ್ಸ್ ಪಂದ್ಯಾವಳಿ ರೋಚಕವಾಗಿ ನಡೆಯಿತು.
ಸುಮಾರು ೪೦ ಕ್ರೀಡಾಪಟುಗಳು ಪಂದ್ಯಾವಳಿಯಲ್ಲಿ ಭಾಗವಹಿಸಿ ಮೈ ನವಿರೇಳಿಸುವ ಪ್ರದರ್ಶನ ನೀಡಿದರು. ಒಂದೊಂದು ಪಂದ್ಯಾವಳಿಯೂ ವಿಶೇಷ ಆಕರ್ಷಣೆ, ರೋಮಾಂಚನ ಮತ್ತು ರೋಚಕವಾಗಿ ನಡೆದವು. ಪಂದ್ಯಾವಳಿಯಲ್ಲಿ ಭಾಗವಹಿಸಿದ್ದ ಕ್ರೀಡಾಪಟುಗಳು ಕರಾಟೆ, ಕುಂಗ್‌ಫು, ಕಿಕ್ ಬಾಕ್ಸಿಂಗ್, ಬಾಕ್ಸಿಂಗ್, ಜುಡೊ, ಟೆಕ್ವೆಂಡೋ, ಕುಸ್ತಿ ಮುಂತಾದ ಎಲ್ಲ ರೀತಿಯ ಸಮರ ಕಲೆಗಳನ್ನು ಪ್ರದರ್ಶಸಿ ಸಭಿಕರ ಮನಸೂರೆಗೊಂಡರು.
ಹೆಸರಾಂತ ಕರಾಟೆ ಪಟುಗಳಾದ ರ‍್ಯಾಂಬೋ ಕಿರಣ್, ಕೃಷ್ಣಮೂರ್ತಿ ಜಸ್ವಂತ್ ನೇತೃತ್ವದಲ್ಲಿ ನಡೆದ ಮಿಕ್ಸಡ್ ಮಾರ್ಷಲ್ ಆಟ್ರ್ಸ್ ಪಂದ್ಯಾವಳಿಯನ್ನು ಪದ್ಮಶ್ರೀ ಪುರಸ್ಕೃತ ಕಲಾವಿದರಾದ ಡಾ.ಹಾಸನ ರಘು, ಮೈಸೂರು ವಿವಿ ದೈಹಿಕ ಶಿಕ್ಷಣ ವಿಭಾಗದ ಡಾ.ವೆಂಕಟೇಶ್, ಪ್ರೊ,ಮಹದೇವ ಭರಣಿ, ಸಹನಾ ಶಿವಪ್ಪ ಮುಂತಾದವರು ಉದ್ಘಾಟಿಸಿದರು.
ಪಂದ್ಯಾವಳಿಯ ಸಮಾರೋಪದಲ್ಲಿ ವಿಜೇತರಿಗೆ ಯುವ ಜನ ಸೇವಾ ಮತ್ತು ಕ್ರೀಡಾ ಇಲಾಖೆಯಿಂದ ಪ್ರಮಾಣಪತ್ರ ಮತ್ತು ಮೆಡಲ್ ನೀಡಲಾಯಿತು.
ಈ ಸಂದರ್ಭದಲ್ಲಿ ನಾಡಿನ ಹೆಸರಾಂತ ಕರಾಟೆ ಪಟುಗಳಾದ ಶ್ರೀನಿವಾಸ ರೆಡ್ಡಿ, ಕೃಷ್ಣಮೂರ್ತಿ, ಸುನೀಲ್, ಶಶಿಕುಮಾರ್, ಅಂಬರೀಶ್ ಮುಂತಾದವರು ಇದ್ದರು.