ಶಾರದಾ ವಿಲಾಸ ಕಾಲೇಜಿನಲ್ಲಿ ಸಮರ್ಥನಂ ಸಂಸ್ಥೆಯಿಂದ ಉದ್ಯೋಗ ಮೇಳ: ಎಲ್ಲರೂ ತೆರಿಗೆ ಕಟ್ಟುವಷ್ಟು ಆರ್ಥಿಕ ಶಕ್ತಿ ಪಡೆಯಬೇಕು : ಕೆ.ಸತೀಶ್ ಸಲಹೆ

 

ವರದಿ: ನಿಷ್ಕಲ ಎಸ್., ಮೈಸೂರು

ಮೈಸೂರು : "ಪ್ರತಿ ವಿದ್ಯಾರ್ಥಿಯೂ ತೆರಿಗೆ ಕಟ್ಟುವಷ್ಟು ಆರ್ಥಿಕ ಶಕ್ತಿ ಪಡೆಯಬೇಕು. ಅರ್ಥಾತ್ ನೌಕರಿ ಮಾಡುವಂತಾಗಬೇಕು ಎಂದು ಸಮರ್ಥನಂ ಟ್ರಸ್ಟ್‍ನ ಆಲ್ ಇಂಡಿಯಾ ಪ್ಲೇಸ್ಮೆಂಟ್ ಸೆಲ್ ಹೆಡ್ ಕೆ. ಸತೀಶ್ ಹೇಳಿದರು. 

ನಗರದ ಶಾರದಾ ವಿಲಾಸ ಕಾಲೇಜಿನಲ್ಲಿ ಆಯೋಜಿಸಲಾಗಿದ್ದ ಬೃಹತ್ ಉದ್ಯೋಗ ಮೇಳದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಅವರು,  ಇಂದಿನ ದಿನಗಳಲ್ಲಿ ನೌಕರಿ ಪಡೆಯುವುದು ಸುಲಭದ ಮಾತಲ್ಲ. ಸಂಬಳದ ವಿಷಯದಲ್ಲಿ ಜಿಗುಟುತನ ಮಾಡದೆ ಸಿಕ್ಕ ನೌಕರಿ ಪಡೆದು, ಕ್ರಮೇಣ ಹಂತ ಹಂತವಾಗಿ ಮೇಲೇರುವ ವಿವೇಕ ಬೆಳೆಸಿಕೊಳ್ಳಬೇಕು. ನಮ್ಮ ಸಮರ್ಥನಂ ಸಂಸ್ಥೆ ಅಂಗವಿಕಲರ ಶ್ರೇಯೋಭಿವೃದ್ಧಿಗಾಗಿ ಹಗಲಿರುಳು ದುಡಿಯುತ್ತಿದ್ದು, ಆತ್ಮವಿಶ್ವಾಸ ಹಾಗೂ ಆತ್ಮಾಭಿಮಾನದಿಂದ ಅವರುಗಳು ಸ್ವಂತ ಕಾಲ ಮೇಲೆ ನಿಲ್ಲುವಂತೆ ನಾವು ಮಾಡಿದ್ದೇವೆ. 

ಪ್ರತಿ ವಿದ್ಯಾರ್ಥಿಯೂ ದೊಡ್ಡ ಕನಸುಗಳನ್ನು ಹೊಂದಿರುವುದು ಸಹಜ. ಆದರೆ ಅದರ ಈಡೇರಿಕೆಗೆ ಪ್ರಾಮಾಣಿಕ ಪ್ರಯತ್ನ ಹಾಗೂ ಬದ್ಧತೆ ಅಗತ್ಯ" ಎಂದರು.

ಶಾರದಾ ವಿಲಾಸ ಶಿಕ್ಷಣ ಸಂಸ್ಥೆಗಳ ಗೌರವ ಕಾರ್ಯದರ್ಶಿಗಳಾದ ಆರ್. ದಿನೇಶ್ ಅವರು ಮಾತನಾಡುತ್ತಾ, "ಇಂದು ಬಹುಪಾಲು ವಿದ್ಯಾರ್ಥಿಗಳು ನಾನಾ ಡಿಗ್ರಿಗಳನ್ನು ಪಡೆಯುತ್ತಿದ್ದಾರೆ ಎಂಬುದು ನಿಜವಾದರೂ ಇವರೆಲ್ಲರಿಗೂ ನೌಕರಿಗಳು ಸುಲಭಕ್ಕೆ ಸಿಗುತ್ತಿಲ್ಲ. ಸತ್ವ ಇದ್ದಲ್ಲಿ ಮಾತ್ರ ಕೆಲಸ ಎಂಬ ಸ್ಥಿತಿ ಈಗ ಉಂಟಾಗಿದೆ. ಹಾಗಾಗಿ ವಿದ್ಯಾರ್ಥಿಗಳು ಪ್ರಯತ್ನ, ಪ್ರತಿಭೆ ಹಾಗೂ  ಆತ್ಮವಿಶ್ವಾಸದಿಂದ ಇಂತಹ ಉದ್ಯೋಗ ಮೇಳಗಳಲ್ಲಿ ಭಾಗವಹಿಸಿ. ವಿದೇಶಗಳಲ್ಲಿ ವಿದ್ಯಾರ್ಥಿಗಳು ಕಲಿಕಾ ಕಾಲದಲ್ಲೇ ಗಳಿಸುವ ಸ್ವಾವಲಂಬಿ ಗುಣ ಹೊಂದಿರುತ್ತಾರೆ. ಈ ಗುಣ ನಮ್ಮಲ್ಲೂ ಬೆಳೆಯಬೇಕು ಎಂದುದಲ್ಲದೆ, ಉದ್ಯೋಗಾರ್ಥಿಗಳಿಗೆ  ಶುಭ ಹಾರೈಸಿದರು.

ಕಾಲೇಜಿನ ಪ್ರಾಂಶುಪಾಲರಾದ ಡಾ.ಎಂ. ದೇವಿಕಾ ಅವರು ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿಕೊಂಡಿದ್ದರು. ಅವರು ತಮ್ಮ ಅಧ್ಯಕ್ಷೀಯ ಭಾಷಣದಲ್ಲಿ "  ಶಿಕ್ಷಣ ಸಂಸ್ಥೆಗಳು ವಿದ್ಯಾರ್ಥಿಗಳಿಗೆ ವಿದ್ಯೆ ನೀಡುವಂತೆ, ಉದ್ಯೋಗವನ್ನೂ ನೀಡುವ ರೀತ್ಯಾ ವೇದಿಕೆ ಕಲ್ಪಿಸುವುದು ಅದರ ಜವಾಬ್ದಾರಿ ಎನಿಸಿದೆ. ಕಳೆದ ವರ್ಷ ನಡೆದ  ಉದ್ಯೋಗ ಮೇಳದಲ್ಲಿ ಸು. 600 ವಿದ್ಯಾರ್ಥಿಗಳಿಗೆ ನೌಕರಿ ದೊರೆತಿತ್ತು. ಈ ಬಾರಿಯೂ ಆ ಆಶಾಭಾವ ಇರಿಸಿಕೊಳ್ಳಬಹುದು. ದಿನೇ ದಿನೇ ಏರುತ್ತಿರುವ ವಿದ್ಯಾವಂತರ ಸಂಖ್ಯೆಗನುಗುಣವಾಗಿ ಉದ್ಯೋಗ ಒದಗಿಸುವುದು ದುಸ್ತರವಾಗುತ್ತಿದೆ. ಹಾಗಾಗಿ ಇಂತಹ ಮೇಳಗಳು ಉದ್ಯೋಗ ಆಕಾಂಕ್ಷಿಗಳಿಗೆ ವರದಾನ" ಎಂದರು.

ಈ ಉದ್ಯೋಗ ಮೇಳದಲ್ಲಿ ಸುಮಾರು 27 ಕಂಪನಿಗಳು ಉದ್ಯೋಗ ನೀಡುವ ಭರವಸೆಯಿಂದ  ಭಾಗವಹಿಸಿದ್ದವು. ಸುಮಾರು 405 ವಿದ್ಯಾರ್ಥಿಗಳು  ಉದ್ಯೋಗ ಪಡೆಯುವ ಆಕಾಂಕ್ಷೆ ಹೊತ್ತು ಕಂಪನಿಗಳ ಸಂದರ್ಶನ ಎದುರಿಸಿದರು.