ಸಾತಗಳ್ಳಿ ರೆಸಿಡೆನ್ಸಿ ವೆಲ್ಫೇರ್ ಅಸೋಸಿಯೇಷನ್ ವತಿಯಿಂದ ಭಾರತದ ಕ್ರಾಂತಿಕಾರಿ ನಾಯಕ ಭಗತ್‌ಸಿಂಗ್ ಜನ್ಮದಿನ ಆಚರಣೆ

ಭಗತ್‌ಸಿಂಗ್ ಧೈರ್ಯ, ಸಾಹಸ, ದೇಶಪ್ರೇಮ ಇಂದಿನ ಯುವಕರಿಗೆ ಮಾದರಿಯಾಗಲಿ: ಪಿಎಸ್‌ಐ ವಿ.ಮಹೇಶ್

ಮೈಸೂರು : ಮಹಾತ್ಮಾ ಗಾಂಧಿಯವರ ಅಹಿಂಸಾವಾದದ ಬಗ್ಗೆ ಭಗತ್ ಸಿಂಗ್‍ಗೆ ಹೆಚ್ಚು ನಂಬಿಕೆ ಇರಲಿಲ್ಲ. ಇದಕ್ಕಾಗಿ ಅವರು ತಮ್ಮ ಮದುವೆಯನ್ನೂ ನಿರಾಕರಿಸಿ ಹಿಂಸಾ ಮಾರ್ಗದಲ್ಲಿ ದೇಶಕ್ಕೆ ಸ್ವಾತಂತ್ರ್ಯ ಕೊಡಿಸುವ ನಿರ್ಧಾರ ಮಾಡಿ ಸಂಘರ್ಷದ ಹಾದಿ ಹಿಡಿದು ತಮ್ಮ ಕೊನೆಯ ಉಸಿರು ಇರುವ ತನಕ ದೇಶಕ್ಕಾಗಿ ತಮ್ಮ ಜೀವನವನ್ನೇ ಮುಡಿಪಾಗಿಟ್ಟರು ಎಂದು ನಿವೃತ್ತ ಸೈನಿಕರೂ ಪ್ರಸ್ತುತ ನಜರ್‍ಬಾದ್ ಪೊಲೀಸ್ ಠಾಣೆಯ ಸಬ್ ಇನ್ಸ್‍ಪೆಕ್ಟರ್ ಆಗಿರುವ ವಿ.ಮಹೇಶ್ ಹೇಳಿದರು.

ಸಾತಗಳ್ಳಿ ವೆಲ್ಫೇರ್ ಅಸೋಸಿಯೇಷನ್ ವತಿಯಿಂದ ನಗರದ ಸಾತಗಳ್ಳಿ ಬಿ. ವಲಯದಲ್ಲಿರುವ ಭಗತ್‍ಸಿಂಗ್ ವೃತ್ತದಲ್ಲಿ ಭಾನುವಾರ ಬೆಳಗ್ಗೆ ಏರ್ಪಡಿಸಿದ್ದ ಭಗತ್ ಸಿಂಗ್ ಅವರ 118ನೇ ಜಯಂತಿ ಕಾರ್ಯಕ್ರಮದಲ್ಲಿ ಭಗತ್‍ಸಿಂಗ್ ಭಾವಚಿತ್ರವುಳ್ಳ ನಾಮಫಲಕಕ್ಕೆ ಪುಷ್ಪಾರ್ಚನೆ ಸಲ್ಲಿಸಿ ಅವರು ಮಾತನಾಡಿದರು.

ಭಗತ್‍ಸಿಂಗ್ ಭಾರತದ ಕ್ರಾಂತಿಕಾರಿ ನಾಯಕ, ತಮ್ಮ  ಧೈರ್ಯದಿಂದಲೇ ಬ್ರಿಟಿಷರ ಎದೆ ನಡುಗಿಸಿದ ಮಹಾನ್ ದೇಶಭಕ್ತ, ಸ್ವಾತಂತ್ರ್ಯ ಹೋರಾಟಗಾರ.   

ಬ್ರಿಟಿಷರ ಗಮನ ಸೆಳೆದು ಸತ್ಯ ಹುಡುಕುವುದೇ ಭಗತ್ ಸಿಂಗ್ ಮತ್ತು ಅವರ ಗೆಳೆಯರಾದ ರಾಜಗುರು ಮತ್ತು ಸುಖದೇವ್ ಅವರ ಉದ್ದೇಶವಾಗಿತ್ತು. 

ಭಗತ್ ಸಿಂಗ್ ಅವರು ಸೆಪ್ಟೆಂಬರ್ 28, 1907 ರಲ್ಲಿ ಇಂದಿನ ಪಾಕಿಸ್ತಾನದ ಪಂಜಾಬ್ ಪ್ರಾಂತ್ಯದ ಫೈಸಲಾಬಾದ್ ಜಿಲ್ಲೆಯ ಬಾಂಗಾ ಗ್ರಾಮದಲ್ಲಿ ಜನಿಸಿದರು. ಭಗತ್ ಸಿಂಗ್‍ರ ತಂದೆ ಕಿಶನ್ ಸಿಂಗ್, ತಾಯಿ ವಿದ್ಯಾವತಿ. ತಂದೆ ಕಿಶನ್ ಸಿಂಗ್ ಜೀವ ವಿಮಾ ಕಂಪನಿಯಲ್ಲಿ ಏಜೆಂಟ್ ರಾಗಿ ಕೆಲಸ ಮಾಡುತ್ತಿದ್ದರು. ಭಗತ್ ಸಿಂಗ್ ಹುಟ್ಟಿದ ದಿನವೇ ಅವರ ತಂದೆ ಮತ್ತು ಅವರ ಇಬ್ಬರು ಚಿಕ್ಕಪ್ಪಂದಿರಾದ ಅಜಿತ್ ಸಿಂಗ್ ಮತ್ತು ಸ್ವರಣ್ ಸಿಂಗ್ ಅವರನ್ನು ಜೈಲಿನಿಂದ ಬಿಡುಗಡೆ ಮಾಡಲಾಯಿತು. ಈ ಕಾರಣದಿಂದ ಅವರಿಗೆ ಭಗತ್ ಸಿಂಗ್(ಭಾಗ್ಯವಂತ) ಎಂದು ನಾಮಕರಣ ಮಾಡಲಾಯಿತು. ಅವರ ಕುಟುಂಬಸ್ಥರು ಸದಾ ರಾಜಕೀಯ ವಲಯದಲ್ಲಿ ಸಕ್ರಿಯರಾಗಿದ್ದರು. ಎಲ್ಲರೂ ಸ್ವಾತಂತ್ರ್ಯ ಹೋರಾಟಗಾರರಾಗಿದ್ದರು.

ಭಗತ್ ಸಿಂಗ್ ಅವರು ತಮ್ಮ ಚಿಕ್ಕ ವಯಸ್ಸಿನಲ್ಲಿಯೇ ಕ್ರಾಂತಿಕಾರಿ ಮನೋಭಾವ ಬೆಳೆಸಿಕೊಂಡಿದ್ದರು. 

ಬ್ರಿಟಿಷ್ ಪೆÇಲೀಸ್ ಅಧಿಕಾರಿಗೆ ಗುಂಡಿಕ್ಕಿದ ಆರೋಪದ ಮೇಲೆ ಅವರಿಗೆ ನೇಣು ಶಿಕ್ಷೆ ವಿಧಿಸಲಾಗಿತ್ತು. ಮಾರ್ಚ್ 24, 1931 ರಂದು ಅವರನ್ನು ನೇಣಿಗೇರಿಸುವುದೆಂದು ತೀರ್ಮಾನಿಸಲಾಗಿತ್ತು. ಆದರೆ ಭಗತ್ ಸಿಂಗ್ ಅವರಿಗೆ ವಿಧಿಸಿರುವ ಶಿಕ್ಷೆಯನ್ನು ರದ್ಧು ಮಾಡಬೇಕೆಂದು ಲಾಹೋರ್ ಸೆಂಟ್ರಲ್ ಜೈಲಿನ ಎದುರು ಸುಮಾರು 25 ಸಾವಿರಕ್ಕೂ ಹೆಚ್ಚು ಜನರು ಪ್ರತಿಭಟನೆಯನ್ನು ಹಮ್ಮಿಕೊಂಡಿದ್ದರು. ಇದನ್ನು ಅರಿತ ಬ್ರಿಟೀಷರು, ನೇಣಿಗೆರಿಸುವ ಸಮಯವನ್ನು 11 ಗಂಟೆ ಹಿಂದೂಡಿ ಮಾರ್ಚ್ 23, 1973, 7.30 ಕ್ಕೆ ಗಲ್ಲಿಗೇರಿಸಲಾಯಿತು. ಸತ್ಲೆಜ್ ನದಿಯ ದಡದಲ್ಲಿ ಜೈಲು ಅಧಿಕಾರಿಗಳೇ ರಹಸ್ಯವಾಗಿ ಅಂತ್ಯಕ್ರಿಯೆ ನೇರವೇರಿಸಿದರು.

ಗಲ್ಲಿಗೇರುವುದಕ್ಕೂ ಮುನ್ನ ಭಗತ್ ತನ್ನ ತಾಯಿಗೆ "ಅಮ್ಮಾ ನಿನ್ನ ಮಗ ಇಡೀ ಬ್ರಿಟೀಷ್ ಸಾಮ್ರಾಜ್ಯಶಾಹಿಯ ಎದೆಗುಂಡಿಗೆ ಅದುರುವಂತೆ ಮಾಡಿ ಹೆಮ್ಮೆಯಿಂದ ಗಲ್ಲಿಗೇರುತ್ತಿದ್ದಾನೆ. ನಾನು ಗಲ್ಲಿಗೇರುವಾಗ ಖಂಡಿತಾ ನಗುನಗುತ್ತಿರುತ್ತೇನೆ. ನನ್ನ ಕಣ್ಣಲ್ಲಿ ಸಾವಿನ ಹೆದರಿಕೆಯನ್ನು ಆಂಗ್ಲರು ಖಂಡಿತ ನೋಡಲಾರರು. ನೀನು ಯಾವುದೇ ಕಾರಣಕ್ಕೂ ಕಣ್ಣಿರಿಡಬಾರದು. ನಿನ್ನ ಕಣ್ಣೀರು ನೋಡಿ ಭಗತ್ ಸಿಂಗ್ ತಾಯಿ ಅಸಹಾಯಕಳಾಗಿ ಕಣ್ಣೀರಿಡುತ್ತಿದ್ದಾಳೆ ಎಂದು ಬ್ರಿಟೀಷರು ಆಡಿಕೊಳ್ಳುವುದು ನನಗೆ ಇಷ್ಟವಿಲ್ಲ. ಏಕೆಂದರೆ ಜನರ ಕಣ್ಣಲ್ಲಿ ನಿನ್ನ ಮಗ ಹುತಾತ್ಮ ಎಂದು ಧೈರ್ಯ ತುಂಬಿದ್ದರು. ಇಂತಹ ಮಹಾನ್ ದೇಶಭಕ್ತನ ಧೈರ್ಯ, ಸಾಹಸ, ದೇಶಪ್ರೇಮ ಇಂದಿನ ಯುವಕರಿಗೆ ಮಾದರಿಯಾಗಬೇಕು ಎಂದು ಮಹೇಶ್ ಸಲಹೆ ನೀಡಿದರು.

ಕಾರ್ಯಕ್ರಮದಲ್ಲಿ ಶಂಭುಲಿಂಗಸ್ವಾಮಿ, ಚಲುವೇಗೌಡ ಅವರು ಮಾತನಾಡಿದರು.

ಕಾರ್ಯಕ್ರಮಕ್ಕೂ ಮುನ್ನ ನಿವೃತ್ತ ಸೈನಿಕರು ಮತ್ತು ಬಡಾವಣೆಯ ಮಕ್ಕಳು, ಮಹಿಳೆಯರು ಭಗತ್ ಸಿಂಗ್ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಿದರು. ಬಳಿಕ ರಾಷ್ಟ್ರಗೀತೆ ಹಾಡಲಾಯಿತು. ನಂತರ ಸಭಿಕರಿಗೆ ಸಿಹಿ ವಿತರಣೆ ಮಾಡಲಾಯಿತು. ಕಾರ್ಯಕ್ರಮದಲ್ಲಿ 

ಸಾತಗಳ್ಳಿ ರೆಸಿಡೆನ್ಸಿ ವೆಲ್ಫೇರ್ ಅಸೋಸಿಯೇಷನ್ ಅಧ್ಯಕ್ಷರಾದ ಚೆಲುವೇಗೌಡ, ಉಪಾಧ್ಯಕ್ಷರಾದ ತಿರುಮಲಾಚಾರ್, ಕಾರ್ಯದರ್ಶಿ ಗಂಗಾಧರ್, ಜಯಸ್ವಾಮಿ, ರಾಘವೇಂದ್ರಭಟ್ಟ, ಮಹಿಳೆಯರು ಮತ್ತು ಮಕ್ಕಳು ಭಾಗವಹಿಸಿದ್ದರು.

ಭಗತ್‍ಸಿಂಗ್ ಅವರಲ್ಲಿದ್ದ ದೇಶಭಕ್ತಿ ಅಸಾಧಾರಣವಾದುದು, ತಮ್ಮ 12ನೇ ವಯಸ್ಸಿನಲ್ಲಿ ಜಲಿಯನ್ ವಾಲಾಬಾಗ್ ಹತ್ಯಾಕಾಂಡದ ಬಗ್ಗೆ  ತಿಳಿದುಕೊಂಡು ಅಂದು ಹತಾರಾಗಿದ್ದ ಭಾರತೀಯರ ರಕ್ತದ ಮಣ್ಣನ್ನು ಒಂದು ಸೀಸದಲ್ಲಿ ತುಂಬಿಸಿ ದೇವರ ಕೋಣೆಯಲ್ಲಿಟ್ಟು ಪೂಜಿಸುತ್ತಿದ್ದರು. ಅವರಿಗೆ ಗಲ್ಲು ಶಿಕ್ಷೆ ಆಗುವಾಗ ಹಗ್ಗಕ್ಕೆ ಮುತ್ತಿಟ್ಟು ಪ್ರಾಣ ತ್ಯಾಗ ಮಾಡಿದ ವ್ಯಕ್ತಿಯ ಜಯಂತಿಯನ್ನು ಮಾಡುವುದು ನಮ್ಮೆಲ್ಲರ ಕರ್ತವ್ಯ.


ವಿ.ಮಹೇಶ್, ನಿವೃತ್ತ ಸೈನಿಕರು ಮತ್ತು ನಜರ್‍ಬಾದ್ ಪೊಲೀಸ್ ಸಬ್ ಇನ್ಸ್‍ಪೆಕ್ಟರ್