ಕರ್ನಾಟಕ ರಾಜ್ಯ ಸಾರ್ವಜನಿಕ ಶಿಕ್ಷಣ ಇಲಾಖೆ, ಲಿಪಿಕ, ವಾಹನ ಚಾಲಕರು, ಡಿ ಗ್ರೂಪ್ ನೌಕರರ ಸಂಘದ ಮೈಸೂರು ಜಿಲ್ಲಾ ಅಧ್ಯಕ್ಷರಾಗಿ ರೇವಣ್ಣ ಪದಗ್ರಹಣ

 ವರದಿ: ನಿಷ್ಕಲ ಎಸ್.ಗೌಡ, ಮೈಸೂರು

ಮೈಸೂರು : 2025-29ನೇ ಸಾಲಿಗೆ ಮೈಸೂರು ಜಿಲ್ಲಾ ಲಿಪಿಕ ನೌಕರರು, ವಾಹನ ಚಾಲಕರು ಮತ್ತು ಡಿ ಗ್ರೂಪ್ ನೌಕರರ ಸಂಘದ ಅಧ್ಯಕ್ಷರಾಗಿ ನೂತನವಾಗಿ ಆಯ್ಕೆಯಾಗಿರುವ ರೇವಣ್ಣ ಅವರು ಸಂಘದ ಇತರೆ ಪದಾಧಿಕಾರಿಗಳ ಜತೆ ಶನಿವಾರ ಪದಗ್ರಹಣ ಮಾಡಿದರು.

ಮೈಸೂರಿನ ವಸಂತಮಹಲ್ ಡಯಟ್‍ನ ನೃಪತುಂಗಾ ಸಭಾಂಗಣದಲ್ಲಿ ಪದಗ್ರಹಣ ಸಮಾರಂಭ ನಡೆಯಿತು.

ಪ್ರಾಂಶುಪಾಲರು ಮತ್ತು ಜೆಸಿಟಿಇ ಸಹ ನಿರ್ದೇಶಕರಾದ ಕೆ.ರಾಜಲಕ್ಷ್ಮಿ ಅವರು ಡಾ.ಸರ್ವಪಲ್ಲಿ ರಾಧಾಕೃಷ್ಣನ್ ಮತ್ತು ಸಾವಿತ್ರಿ ಬಾಫುಲೇ ಅವರ ಭಾವಚಿತ್ರಗಳಿಗೆ ಪುಷ್ಪಾರ್ಚನೆ ಮಾಡುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿದರು.

ಬಳಿಕ ಅವರು ಮಾತನಾಡಿ, 2025-29ನೇ ಸಾಲಿಗೆ ಮೈಸೂರು ಜಿಲ್ಲಾ ಲಿಪಿಕ ನೌಕರರು, ವಾಹನ ಚಾಲಕರು ಮತ್ತು ಡಿ ಗ್ರೂಪ್ ನೌಕರರ ಸಂಘದ ಅಧ್ಯಕ್ಷರಾಗಿ ನೂತನವಾಗಿ ಆಯ್ಕೆಯಾಗಿರುವ ರೇವಣ್ಣ ಅವರು ಸಂಘದ ಇತರೆ ಪದಾಧಿಕಾರಿಗಳ ಸಹಕಾರದೊಂದಿಗೆ ಸಂಘದ ಸದಸ್ಯರ ಅಗತ್ಯ ಕೆಲಸಗಳನ್ನು ಮಾಡಿಕೊಡಬೇಕು, ಈ ಹಿಂದಿನ ಆಡಳಿತ ಮಂಡಳಿ ನಡೆಸಿರುವ ಪ್ರಗತಿ ಕಾರ್ಯಕ್ರಮಗಳನ್ನು ಮುಂದುವರಿಸಿಕೊಂಡು ಹೋಗಬೇಕು ಎಂದರು.

ಸಾರ್ವಜನಿಕ ಶಿಕ್ಷಣ ಇಲಾಖೆ(ಆಡಳಿತ)ಯ ಉಪ ನಿರ್ದೇಶಕರಾದ ಎಸ್.ಟಿ.ಜವರೇಗೌಡ ಅವರು ಮಾತನಾಡಿ, ಲಿಪಿಕ ನೌಕರರು, ವಾಹನ ಚಾಲಕರು ಮತ್ತು ಡಿ ಗ್ರೂಪ್ ನೌಕರರು ಸಾಕಷ್ಟು ಸಮಸ್ಯೆಯಲ್ಲಿದ್ದಾರೆ. ಸಂಘದ ಅಧ್ಯಕ್ಷರಾದ ರೇವಣ್ಣ ಅವರು ಅವರ ಸಮಸ್ಯೆಗಳಿಗೆ ಪರಿಹಾರ ಕಲ್ಪಿಸಬೇಕು, ನಾವೂ ಕೂಡ ನಿಮ್ಮೊಂದಿಗಿದ್ದು ನಿಮ್ಮ ಕೆಲಸ ಕಾರ್ಯಗಳು ಸುಗಮವಾಗಿ ನಡೆಯಲು ಸಹಾಯ ಮಾಡುತ್ತೇವೆ ಎಂದು ಹೇಳಿದರು.

ಜಿಲ್ಲಾ ಲಿಪಿಕ ನೌಕರರು, ವಾಹನ ಚಾಲಕರು ಮತ್ತು ಡಿ ಗ್ರೂಪ್ ನೌಕರರ ಸಂಘದ ಅಧ್ಯಕ್ಷರಾಗಿ ನೂತನವಾಗಿ ಆಯ್ಕೆಯಾಗಿರುವ ರೇವಣ್ಣ ಅವರು ಪ್ರಸ್ತಾವಿಕವಾಗಿ ಮಾತನಾಡಿ, ರಾಜ್ಯದಲ್ಲಿ ಇದೇ ಮೊದಲ ಬಾರಿಗೆ ಲಿಪಿಕ ನೌಕರರ ಸಂಘದ ಚುನಾವಣೆಯು ಆನ್‍ಲೈನ್ ಮೂಲಕ ನಡೆದು ಪದಾಧಿಕಾರಿಗಳು ಆಯ್ಕೆಯಾಗಿದ್ದಾರೆ. ನನ್ನನ್ನು ಸಂಘದ ಅಧ್ಯಕ್ಷರನ್ನಾಗಿ ಚುನಾಯಿಸಿದ ಎಲ್ಲರಿಗೂ ನಾನು ಆಭಾರಿಯಾಗಿದ್ದೇನೆ. ಲಿಪಿಕ ನೌಕರರ ಸಂಘದಲ್ಲಿ ಸಿ ಅಂಡ್ ಆರ್ ರೋಲ್, ಇನ್‍ಕ್ರಿಮೆಂಟ್ ಸೇರಿದಂತೆ ನೌಕರರ ಹಲವು ಸಮಸ್ಯೆಗಳಿವೆ. ಅಲ್ಲದೇ ನೌಕರರಿಗೆ ಆರೋಗ್ಯ ಸಮಸ್ಯೆಗಳ ನಿವಾರಣೆ, ನೌಕರರ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ನಿಡುವುದು ಸೇರಿದಂತೆ ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬೇಕಿದೆ. ಎಲ್ಲರ ಸಹಕಾರದೊಂದಿಗೆ ನಾವು ಸಂಘದ ಸದಸ್ಯರ ಕ್ಷೇಮಾಭಿವೃದ್ಧಿಗೆ ಶ್ರಮಿಸುತ್ತೇವೆ ಎಂದರು.

ಈ ಸಂದರ್ಭದಲ್ಲಿ ಡಯಟ್ ಪ್ರಾಂಶುಪಾಲರಾದ ಸಿ.ಆರ್.ನಾಗರಾಜಯ್ಯ ನೂತನ ಪದಾಧಿಕಾರಿಗಳಿಗೆ ಪ್ರಮಾಣ ಪತ್ರ ವಿತರಿಸಿದರು. ನೂತನವಾಗಿ ಆಯ್ಕೆಯಾದ ಸಮಿತಿ ಸದಸ್ಯರನ್ನು ಗೌರವಿಸಲಾಯಿತು.

ಕಾರ್ಯಕ್ರಮದಲ್ಲಿ ಲೆಕ್ಕಾಧೀಕ್ಷಕರಾದ ಮಧು, ಕುಮಾರಸ್ವಾಮಿ, ಮಕ್ಸೂದ್ ಅಹಮದ್, ಎ.ಬಿ.ಜಯಲಕ್ಷ್ಮಿ ಬಾಯಿ, ಎಸ್.ಜಿ.ಯೋಗೇಶ್, ಸಿ.ಎಸ್.ಇಂದುಮತಿ, ಜಿ.ಡಿ.ಶಶಿಕಿರಣ, ಬಸವರಾಜು, ಬಿ.ಎಸ್.ಗುರುಮೂರ್ತಿ, ಅನಂತಕುಮಾರ, ವಿಜಯಕುಮಾರ್, ಮೈಸೂರು ಜಿಲ್ಲಾ ಲಿಪಿಕ ನೌಕರರು, ವಾಹನ ಚಾಲಕರು ಮತ್ತು ಡಿ ಗ್ರೂಪ್ ನೌಕರರ ಸಂಘದ ಜಿಲ್ಲಾ ಕಾರ್ಯದರ್ಶಿ ಪ್ರಕಾಶ್ ಕುಮಾರ್, ಖಜಾಂಚಿ ಜೆ.ಡಿ.ಶಶಿಕಿರಣ, ಉಪಾಧ್ಯಕ್ಷರಾದ ರೂಪ ಜಿ.ಎಸ್., ಸಂಘಟನಾ ಕಾರ್ಯದರ್ಶಿ ಧನರಾಜ್ ಎಸ್., ಸಹ ಕಾರ್ಯದರ್ಶಿ ಮೂರ್ತಿ ಇತರರು ಇದ್ದರು.