ವರದಿ: ನಿಷ್ಕಲ ಎಸ್.ಗೌಡ, ಮೈಸೂರು
ಮೈಸೂರು: ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದ ಸಂಸದರ ಕಚೇರಿ ವತಿಯಿಂದ ಆಯೋಜಿಸಲಾಗಿದ್ದ ‘ಮೈ ಮೈಸೂರು ಐಡಿಯಾಥಾನ್-ಐಡಿಯಾಸ್ ಫಾರ್ ಫ್ಯೂಚರ್, ವಿಷನ್ 2030ಗೆ ಅಭೂತಪೂರ್ವ ಪ್ರತಿಕ್ರಿಯೆ ದೊರೆತಿದ್ದು, ಶನಿವಾರ ಮಧ್ಯಾಹ್ನ ನಡೆದ ಅಂತಿಮ ಆಯ್ಕೆ ಸಮಾರಂಭದಲ್ಲಿ ‘ಆಹಾರ ಧಾರ’ ಮಾದರಿಗೆ ಪ್ರಥಮ ಬಹುಮಾನ ದೊರೆಯಿತು.
ಕೆಆರ್‍ಎಸ್ ರಸ್ತೆಯಲ್ಲಿರುವ ಇಬಿಸ್ ಸ್ಟೈಲ್ ಹೋಟೆಲ್‍ನಲ್ಲಿ ನಡೆದ ಅಂತಿಮ ಸುತ್ತಿನ ಆಯ್ಕೆ ಸಮಾರಂಭದಲ್ಲಿ ತೀರ್ಪುಗಾರರು ಆಹಾರ ಧಾರಾ ಮಾದರಿಗೆ ಪ್ರಥಮ ಬಹುಮಾನ ಘೋಷಿಸಿ ಪುರಸ್ಕರಿಸಿದರು.
ಈ ಸಂದರ್ಭದಲ್ಲಿ ಕಾರ್ಯಕ್ರಮದ ಆಯೋಜಕರಾದ ಮೈಸೂರು-ಕೊಡಗು ಸಂಸದರಾದ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಅವರು ಮಾತನಾಡಿ, ಯುವ ಜನಾಂಗದಲ್ಲಿ ಹೊಸ ಹೊಸ ಕ್ರಿಯಾಶೀಲ ಆಲೋಚನೆಗಳು ಇರುತ್ತವೆ ಇದಕ್ಕೆ ನಾವು ವೇದಿಕೆಯನ್ನು ಸೃಷ್ಟಿಸಿ ಅದರ ಮೂಲಕ ಅವರ ಪ್ರತಿಭೆಯನ್ನು ಅನಾವರಣ ಮಾಡುವ ಪ್ರಯತ್ನ ಮಾಡಿದ್ದೇವೆ. ‘ಮೈ ಮೈಸೂರು ಐಡಿಯಾಥಾನ್-ಐಡಿಯಾಸ್ ಫಾರ್ ಫ್ಯೂಚರ್, ವಿಷನ್ 2030ಗೆ 2500ಕ್ಕೂ ಹೆಚ್ಚು ಕ್ರಿಯಾಶೀಲ ಅರ್ಜಿಗಳು ಬಂದಿದ್ದು, ಈ ಪೈಕಿ ನೂರನ್ನು ಅಂತಿಮ ಆಯ್ಕೆ ಸುತ್ತಿಗೆ ಪರಿಗಣಿಸಲಾಗಿತ್ತು, ಅದರಲ್ಲೂ ಮೂರು ಯೋಜನೆಗಳನ್ನು ಗುರುತಿಸಿ ಬಹುಮಾನ ಘೋಷಿಸಿದ್ದೇವೆ ಎಂದರು.
ಕಳೆದ ಆಗಸ್ಟ್ 22 ರಂದು ಮೈ ಮೈಸೂರು ಐಡಿಯಾಥಾನ್-ಐಡಿಯಾಸ್ ಫಾರ್ ಫ್ಯೂಚರ್, ವಿಷನ್ 2030ಗೆ ಆಸಕ್ತರಿಂದ, ತಜ್ಞರಿಂದ, ಹಾಗೂ ಕ್ರಿಯಾಶೀಲರಿಂದ ವಿಶೇಷ ಯೋಜನೆಗಳ ಬಗ್ಗೆ ಮಾಹಿತಿ ನೀಡಲು ಆಹ್ವಾನಿಸಲಾಗಿತ್ತು.
ಸ್ಥಳೀಯ ಕೆಲವು ಸಮಸ್ಯೆಗಳನ್ನು ವಿದ್ಯಾರ್ಥಿಗಳ ಮುಂದಿಟ್ಟು, ಅವುಗಳಿಗೆ ಪರಿಹಾರ ಕಂಡುಹಿಡಿಯುವ ಬಗ್ಗೆ ಕೋರಲಾಗಿತ್ತು. ಎರಡೂವರೆ ಸಾವಿರಕ್ಕೂ ಹೆಚ್ಚು ಮಂದಿ ತಮ್ಮ ಆಲೋಚನೆಗಳನ್ನು, ಕ್ರಿಯಾಶೀಲ ಯೋಜನೆಗಳನ್ನು ಹಂಚಿಕೊಂಡಿದ್ದರು. ವಿಶೇಷವಾಗಿ ಪ್ರವಾಸೋದ್ಯಮದ ಬಗ್ಗೆ ವಿದ್ಯಾರ್ಥಿಗಳು ಸಾಕಷ್ಟು ಆಸಕ್ತಿ ವಹಿಸಿ ಯೋಜನೆಗಳನ್ನು ರೂಪಿಸಿದ್ದಾರೆ.
ವಿಶೇಷವಾಗಿ ಮೈಸೂರು ಪ್ರವಾಸೋದ್ಯಮ, ಪರಿಸರ ರಕ್ಷಣೆ, ನಗರದ ಅಭಿವೃದ್ಧಿಗೆ ಪೂರಕವಾದ ಯೋಜನೆಗಳು ಮುಂತಾದ ಪರಿಕಲ್ಪನೆಗಳನ್ನು ನಾವು ವಿಷಯವಗಿ ನೀಡಿದ್ದೆವು, ಅವುಗಳಿಗೆ ವಿದ್ಯಾರ್ಥಿಗಳು ಉತ್ತಮವಾಗಿ ಸ್ಪಂದಿಸಿ ತಮ್ಮ ಕಲ್ಪನೆಗಳನ್ನು, ಪರಿಹಾರ ಮತ್ತು ಮಾರ್ಗೋಪಾಯಗಳನ್ನು ಸಾದರ ಪಡಿಸಿದ್ದಾರೆ. ಅಗತ್ಯವಾದಲ್ಲಿ ಮೈಸೂರು ನಗರದ ಸರ್ವಾಂಗೀಣ ಅಭಿವೃದ್ಧಿಗೆ ಇವುಗಳನ್ನು ಬಳಸಿಕೊಳ್ಳಲಾಗುವುದು ಎಂದರು.
ಇದೇ ವೇಳೆ ಅವರು ವಿಜೇತರಿಗೆ ಮೊದಲ ಬಹುಮಾನ 25,000 ರೂ., ಎರಡನೇ ಬಹುಮಾನ 17,500 ರೂ. ಹಾಗೂ ಮೂರನೇ ಬಹುಮಾನ 12,000 ರೂ. ವಿತರಿಸಿ ವಿಜೇತರರಿಗೆ ಬಹುಮಾನ ನೀಡಿದರು.
ಕಾರ್ಯಕ್ರಮದಲ್ಲಿ ಪ್ರಾಯೋಜಕರಾದ ಇಮ್ರಾನ್ ಖಾನ್, ವಿನಾಯಕ ಹೆಗ್ಡೆ, ಮೈಸೂರು ವಿವಿ ವಿಶ್ರಾಂತ ಕುಲಪತಿ ಪ್ರೊ.ರಂಗಪ್ಪ ಮತ್ತಿತರರು ಇದ್ದರು.
ಏನಿದು ‘ಆಹಾರ ಧಾರಾ’ ಮಾದರಿ
ಎಕ್ಸೆಲ್ ಪಬ್ಲಿಕ್ ಶಾಲೆಯವರರು ಸಿದ್ದಪಡಿಸಿದ ‘ಆಟೋಮಿಟಿಕ್ ರೇಷನ್ ಸಿಸ್ಟಂ’ ಮಧ್ಯವರ್ತಿಗಳ ಸಹಾಯವಿಲ್ಲದೆ ಪಡಿತರ ವಿತರಣೆ ಮಾಡುವ ಕ್ರಮವನ್ನು ಆಹಾರ ಧಾರಾ ಯೋಜನೆ ಎಂದು ನಾಮಕರಣ ಮಾಡಲಾಗಿದೆ. ಈ ಯೋಜನೆ ಪಡಿತರ ವಿತರಣೆ ಮಾಡುವ ಯೋಜನೆಯಾಗಿದೆ. ಯಾವುದೇ ಮಧ್ಯವರ್ತಿಗಳ ಸಹಾಯವಿಲ್ಲದೆ ನಾಚು ಐದು ರೂ ಕಾಯಿನ್ ಹಾಕಿ ನೀರು ಪಡೆಯುವಂತೆ, ವಾಹನದ ಮೂಲಕ ಮನೆ ಬಾಗಿಲಿಗೆ ಬರುವ ಪಡಿತರ, ಫಲಾನುಭವಿಯ ಬೆರಳು ಸ್ಕ್ಯಾನಿಂಗ್ ಮಾಡಿ ಪಡಿತರ ವಿತರಣೆ ಮಾಡುವ ಯೋಜನೆಯಾಗಿದೆ. ಇಲ್ಲಿ ತೂಕದಲ್ಲಿ ಯಾವುದೇ ವ್ಯತ್ಯಾಸ ಕಂಡುಬರುವುದಿಲ್ಲ.