ಮೈಸೂರು : ನಾಮಫಲಕಗಳ ಶೇ.60ಕ್ಕಿಂತಲೂ ಅಧಿಕ ಸ್ಥಳದಲ್ಲಿ ಕನ್ನಡ ಭಾಷೆಯ ಬಳಕೆ, ಕನ್ನಡಿಗರಿಗೆ ಕಡ್ಡಾಯವಾಗಿ ಉದ್ಯೋಗ ನೀಡುವುದು, ಕಾರ್ಖಾನೆಗಳಲ್ಲಿ ಕಾಯಂ ಮತ್ತು ಗುತ್ತಿಗೆ ನೌಕರರ ವೇತನ ಮತ್ತು ಊಟೋಪಚಾರಗಳಲ್ಲಿ ತಾರತಮ್ಯ ಖಂಡಿಸಿ ಕನ್ನಡಾಂಬೆ ರಕ್ಷಣಾ ವೇದಿಕೆ ಕೈಗಾರಿಕಾ ಪ್ರದೇಶಗಳಲ್ಲಿ ನಡೆಸುತ್ತಿರುವ ಕಾಲ್ನಡಿಗೆ ಜಾಥ ಮಂಗಳವಾರ ಎರಡನೇ ದಿನಕ್ಕೆ ಕಾಲಿಟ್ಟಿದ್ದು, ಇಂದು ವೇದಿಕೆ ರಾಜ್ಯಾಧ್ಯಕ್ಷ ಬಿ.ಬಿ.ರಾಜಶೇಖರ ಅವರು, ಸರ್ಕಾರದ ನಿಯಮ ಪಾಲಿಸದ ಕಾರ್ಖಾನೆಗಳ ವ್ಯವಸ್ಥಾಪಕರನ್ನು ತರಾಟೆಗೆ ತೆಗೆದುಕೊಂಡರು.
ಸೋಮವಾರ ಆರಂಭವಾದ ಕನ್ನಡಾಂಬೆ ರಕ್ಷಣಾ ವೇದಿಕೆ ಕಾಲ್ನಡಿಗೆ ಜಾಥ ಇಂದು ಎರಡನೇ ದಿನಕ್ಕೆ ಕಾಲಿಟ್ಟಿದ್ದು,
ಮೈಸೂರಿನ ಕೂರ್ಗಳ್ಳಿ ಕೈಗಾರಿಕಾ ಪ್ರದೇಶದಲ್ಲಿ ಪ್ರಾರಂಭವಾದ ಜಾಥಕ್ಕೆ ಜಿಪಂ ಮಾಜಿ ಅಧ್ಯಕ್ಷರಾದ ಕೂರ್ಗಳ್ಳಿ ಮಹದೇವಣ್ಣ ಚಾಲನೆ ನೀಡಿದರು.
ಕೂರ್ಗಳ್ಳಿ ಕೈಗಾರಿಕಾ ಪ್ರದೇಶಗಳಲ್ಲಿ ಸಾಕಷ್ಟು ಕಾರ್ಖಾನೆಗಳಿದ್ದು, ಬಹುತೇಕ ಕಾರ್ಖಾನೆಗಳ ನಾಮಫಲಕಗಳಲ್ಲಿ ಕನ್ನಡ ಭಾಷೆ ಬಳಕೆಯಾಗಿದ್ದರೂ ಅದಕ್ಕೆ ಅಗ್ರಸ್ಥಾನ ನೀಡಿರಲಿಲ್ಲ, ಕಾಟಾಚಾರಕ್ಕೆ ಎಂಬಂತೆ ಸಣ್ಣ ಅಕ್ಷರಗಳಲ್ಲಿ ಕನ್ನಡ ಭಾಷೆ ಬಳಸಿರುವುದನ್ನು ಕಣ್ಣಾರೆ ಕಂಡ ರಾಜಶೇಖರ ಅವರು ಕಾರ್ಖಾನೆ ವ್ಯವಸ್ಥಾಪಕರು, ಮುಖ್ಯಸ್ಥರನ್ನು ಕರೆದು ನಾಮ ಫಲಕಗಳಲ್ಲಿ ಕನ್ನಡ ಭಾಷೆಗೆ ಅಗ್ರಸ್ಥಾನ ನೀಡುವಂತೆ ತಿಳಿ ಹೇಳಿದರು. ಅಲ್ಲದೇ ಕಾರ್ಖಾನೆಗಳಲ್ಲಿ ಬಾಲ ಕಾರ್ಮಿಕರನ್ನು ಮತ್ತು ವೃದ್ಧರನ್ನು ಕೆಲಸಕ್ಕೆ ಹಚ್ಚಬಾರದು, ವೇತನ ತಾರತಮ್ಯ ಬಹಳ ಇದೆ, ಸೆಕ್ಯೂರಿಟಿ ಗಾರ್ಡ್‍ಗಳಿಂದ 12 ಗಂಟೆ ಕೆಲಸ ಮಾಡಿಸಿಕೊಂಡು, ಕೇವಲ 9 ಸಾವಿರ ಸಂಬಳ ನೀಡುತ್ತಿದ್ದೀರಿ, ಅದರಲ್ಲೂ ಇಎಸ್‍ಐ ಪಿಎಫ್ ಕಟಾವು ಮಾಡಿಕೊಂಡು ಕೇವಲ 6,500 ರೂ ಕೈಗೆ ಸಿಗುತ್ತದೆ. ಇದರಲ್ಲಿ ಸಂಸಾರ ನಡೆಸುವುದು ಹೇಗೆ? ಎಂದು ಪ್ರಶ್ನಿಸಿದರಲ್ಲದೇ, ಉದ್ಯೋಗದಲ್ಲಿ ಕನ್ನಡಿಗರಿಗೆ, ಸ್ಥಳೀಯರಿಗೆ ಆದ್ಯತೆ ನೀಡಬೇಕು. ಕಾರ್ಮಿಕರ ಶೋಷಣೆ ತಪ್ಪಿಸಬೇಕು ಜತೆಗೆ ಪರಿಸರ ರಕ್ಷಣೆಗೆ ಮುಂದಾಗಬೇಕು ಎಂದು ಒತ್ತಾಯಿಸಿ ಕರಪತ್ರದ ಮೂಲಕ ತಿಳಿವಳಿಕೆ ನೀಡಿದರು.
ಈ ಸಂದರ್ಭದಲ್ಲಿ ಕನ್ನಡಾಂಬೆ ರಕ್ಷಣಾ ವೇದಿಕೆ ಕಾರ್ಯಕರ್ತರು ಕಾರ್ಖಾನೆಗಳ ಬಳಿ ಕರಪತ್ರಗಳನ್ನು ಅಂಟಿಸಿ ಜಾಗೃತಿ ಮೂಡಿಸಿದರು.
ಇನ್ನು ಮುಂದೆ ಕಾರ್ಖಾನೆಗಳಲ್ಲಿ ಉತ್ತರ ಭಾರತೀಯರಿಗೆ ಕೆಲಸ ನೀಡುವುದರಲ್ಲಿ ಆದ್ಯತೆ ನೀಡುವ ನೀವು ನಮ್ಮ ನೆಲ, ಜಲ, ಪರಿಸರವನ್ನು ಬಳಸಿಕೊಂಡು ಕನ್ನಡಿಗರಿಗೆ ಉದ್ಯೋಗ ನೀಡುವಲ್ಲಿ ವಂಚಿಸುತ್ತಿರುವುದು ಎಷ್ಟು ಸರಿ ಎಂದು ಪ್ರಶ್ನಿಸಿದರು.
ಕನ್ನಡಿಗರು ಕೇವಲ ಉದ್ಯೋಗಿಗಳಾಗಬಾರದು, ಉದ್ಯಮಿಗಳೂ ಆಗಬೇಕೆಂಬುದು ಕನ್ನಡಾಂಬೆ ರಕ್ಷಣಾ ವೇದಿಕೆಯ ಆಶಯವಾಗಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಕನ್ನಡಾಂಬೆ ರಕ್ಷಣಾ ವೇದಿಕೆಯ ಡಿಪಿಕೆ ಪರಮೇಶ್, ರಾಜ್ಯ ಖಜಾಂಚಿ ನಂಜುಂಡ, ಮೈಸೂರು ಜಿಲ್ಲಾ ಅಧ್ಯಕ್ಷ ಸಂತೋಷ್, ಜಿಲ್ಲಾ ಮಹಿಳಾ ವಿಭಾಗದ ಅಧ್ಯಕ್ಷರಾದ ಮಂಜುಳ, ಪದಾಧಿಕಾರಿಗಳಾದ ಸಿಂಧುವಳ್ಳಿ ಶಿವಕುಮಾರ್, ಮನುಗೌಡ, ಸೋಮಶೇಖರ, ಗೌತಮ್, ಅನುರಾಜ್ ಗೌಡ, ಮಂಜುನಾಥ್, ಸಿದ್ದೇಗೌಡ ಮುಂತಾದವರು ಕಿಕ್ಕೇರಿ ಕಿರಣ, ಶಿವಕುಮಾರ್, ಹೊನ್ನೇಗೌಡ, ರವಿಗೌಡ, ನಾಗರಾಜು, ರಾಜೇಗೌಡ, ಮಹದೇವಸ್ವಾಮಿ, ನೇಹ, ಗುಂಗ್ರಾಲ್ ಛತ್ರ ಲೋಕೇಶ್, ಕಿರಣ ಮತ್ತಿತರರು ಇದ್ದರು.
ನಮ್ಮ ನೆಲ, ಜಲ, ವಿದ್ಯುತ್, ಪರಿಸರ ಮುಂತಾದವುಗಳನ್ನು ಬಳಸಿಕೊಂಡು ವ್ಯಾಪಾರ ವ್ಯವಹಾರ ನಡೆಸುವ ಸಣ್ಣ ಮತ್ತು ದೊಡ್ಡಮಟ್ಟದ ಕೈಗಾರಿಕಾ ಉದ್ಯಮಿಗಳು ಉದ್ಯೋಗ ಮಾತ್ರ ಸ್ಥಳೀಯರಿಗೆ ನೀಡುತ್ತಿಲ್ಲ, ಇದು ಅನ್ಯಾಯ ಇವರ ವಿರುದ್ಧ ಕನ್ನಡಾಂಬೆ ರಕ್ಷಣಾ ವೇದಿಕೆ ನಡೆಸುತ್ತಿರುವ ಹೋರಾಟಕ್ಕೆ ನಾವು ಬೆಂಬಲ ನೀಡುತ್ತಿದ್ದೇವೆ.
• ಕೂರ್ಗಳ್ಳಿ ಮಹದೇವು, ಜಿಪಂ ಮಾಜಿ ಅಧ್ಯಕ್ಷರು
ಕಾರ್ಮಿಕರ ಕುಂದು ಕೊರತೆ ನಿವಾರಣೆ, ಕನ್ನಡ ಭಾಷೆಯ ಬಳಕೆ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಕನ್ನಡಾಂಬೆ ರಕ್ಷಣಾ ವೇದಿಕೆ ಮೈಸೂರಿನ ಕೈಗಾರಿಕಾ ಪ್ರದೇಶದಲ್ಲಿ ನಡೆಸುತ್ತಿರುವ ಜಾಗೃತಿ ಜಾಥ ಎರಡನೇ ದಿನಕ್ಕೆ ಯಶಸ್ವಿಯಾಗಿ ಮುನ್ನಡೆದಿದೆ. ಸಾಕಷ್ಟು ಕೈಗಾರಿಕೆಗಳಲ್ಲಿ ಜಾಗೃತಿ ಮೂಡಿಸಿ, ಕಾರ್ಮಿಕರ ಶೋಷಣೆ ನಿಲ್ಲಿಸುವಂತೆ ಎಚ್ಚರಿಕೆ ನೀಡಲಾಗಿದೆ.
• ಬಿ.ಬಿ.ರಾಜಶೇಖರ್, ರಾಜ್ಯಾಧ್ಯಕ್ಷರು