ರಾಹುಲ್ ಗಾಂಧಿಗೆ ಪ್ರಧಾನಿ ಹುದ್ದೆ ತಪ್ಪಿಸಿದ್ದು ’ಮತ ಕಳ್ಳತನ’
ವರದಿ: ನಿಷ್ಕಲ ಎಸ್.ಗೌಡ
ಮೈಸೂರು : ಕಳೆದ ಲೋಕಸಭಾ ಚುನಾವಣೆಯಲ್ಲಿ ದೇಶಾದ್ಯಂತ ಕಾಂಗ್ರೆಸ್ ಪಕ್ಷಕ್ಕೆ ಮತ್ತು ರಾಹುಲ್‍ಗಾಂಧಿ ನಾಯಕತ್ವದ ಪರ ಭಾರಿ ಪ್ರಮಾಣದಲ್ಲಿ ಬೆಂಬಲ ವ್ಯಕ್ತವಾಗಿದ್ದರೂ ಮತ ಕಳ್ಳತನದಿಂದ ಕಾಂಗ್ರೆಸ್ ಪಕ್ಷಕ್ಕೆ ಸೋಲು ಉಂಟಾಯಿತು, ಮತ್ತು ರಾಹುಲ್ ಪ್ರಧಾನಿ ಆಗುವುದು ತಪ್ಪಿಸಿತು, ಎಲ್ಲೋ ಎನೋ ಆಗಿದೆ ಎಂಬ ಅನುಮಾನವನ್ನು ಇಂದು ರಾಹುಲ್‍ಗಾಂಧಿ ಸಾಕ್ಷಿ ಸಮೇತ ಬಹಿರಂಗಪಡಿಸಿದ್ದಾರೆ ಎಂದು ಮೈಸೂರು ಜಿಲ್ಲಾ ಕಾಂಗ್ರೆಸ್ ಪಕ್ಷದ ಬೀದಿ ಬದಿ ವ್ಯಾಪಾರಿಗಳ ಘಟಕದ ಅಧ್ಯಕ್ಷರಾದ ಎಂ.ರಸೂಲ್ ಹೇಳಿದರು.
ಬೆಂಗಳೂರಿನ ಫ್ರೀಡಂ ಪಾರ್ಕ್‍ನಲ್ಲಿ ಶುಕ್ರವಾರ ನಡೆದ ಬೃಹತ್ ಪ್ರತಿಭಟನಾ ಸಮಾವೇಶದಲ್ಲಿ ಶಾಸಕರಾದ ತನ್ವೀರ್ ಸೇಠ್ ಅವರೊಂದಿಗೆ ಭಾಗವಹಿಸಿ ಬಳಿಕ ಮೈಸೂರಿನಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದರು.
ಮತ ಕಳ್ಳತನ ಒಂದು ಸಂವಿಧಾನ ವಿರೋಧಿ ನಡೆಯಾಗಿದೆ. ಇದರಿಂದ ಪ್ರಜಾಪ್ರಭುತ್ವಕ್ಕೆ ಅಪಾಯ ಬರಲಿದೆ. ಇದು ಹೀಗೆಯೇ ಮುಂದುವರಿದರೆ ದೇಶದಲ್ಲಿ ಸರ್ವಾಧಿಕಾರ ಬರುವುದು ನಿಶ್ಚಿತ ಎಂದು ಆತಂಕ ವ್ಯಕ್ತಪಡಿಸಿದ ಅವರು, ಮತ ಕಳ್ಳತನಕ್ಕೆ ಕಡಿವಾಣ ಅಗತ್ಯ, ದೇಶವ್ಯಾಪಿ ಮತದಾರರು ಜಾಗೃತರಾಗಿ ಇದರ ವಿರುದ್ಧ ದನಿ ಎತ್ತಬೇಕು ಎಂದರು.
ಕಳೆದ ಲೋಕಸಭಾ ಚುನಾವಣೆಗೂ ಮುನ್ನ ಕಾಂಗ್ರೆಸ್ ನಡೆಸಿದ ಆಂತರಿಕ ಸಮೀಕ್ಷೆಯು ಕರ್ನಾಟಕದಲ್ಲಿ ಕನಿಷ್ಠ 16 ಸ್ಥಾನಗಳಲ್ಲಿ ಪಕ್ಷ ಮುನ್ನಡೆ ಸಾಧಿಸಲಿದೆ ಎಂದು ಅಂದಾಜಿಸಿತ್ತು, ಆದರೆ, ಅದು ಕೇವಲ ಒಂಬತ್ತು ಸ್ಥಾನಗಳಲ್ಲಿ ಮಾತ್ರ ಗೆದ್ದಿದೆ. ಆ ದಿನ, ಚುನಾವಣೆಯಲ್ಲಿ ಏನೋ ತಪ್ಪಾಗಿದೆ ಎಂಬುದು ನಮ್ಮ ಗಮನಕ್ಕೆ ಬಂದಿತ್ತು. ಎಲೆಕ್ಟ್ರಾನಿಕ್ ಮತದಾರರ ಪಟ್ಟಿ ಮತ್ತು ಮತಗಟ್ಟೆಗಳ ವೀಡಿಯೊ ರೆಕಾರ್ಡಿಂಗ್ ಬಿಡುಗಡೆ ಮಾಡುವಂತೆ ಚುನಾವಣಾ ಆಯೋಗಕ್ಕೆ ನಮ್ಮ ನಾಯಕರಾದ ರಾಹುಲ್ ಗಾಂಧಿ ಮತ್ತು ಮಲ್ಲಿಕಾರ್ಜುನ ಖರ್ಗೆ ಸಾಹೇಬರು ಮತ್ತು ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಮಾಡಿದ ವಿನಂತಿಗಳನ್ನು ಚುನಾವಣ ಆಯೋಗ ನಿರಂತರವಾಗಿ ನಿರಾಕರಿಸಿತು. ನಂತರ 45 ದಿನಗಳಲ್ಲಿ ವೀಡಿಯೊಗಳನ್ನು ಅಳಿಸುವುದನ್ನು ಕಡ್ಡಾಯಗೊಳಿಸಲು ಕಾನೂನನ್ನು ಬದಲಾಯಿಸಲಾಯಿತು. ಇದು ಚುನಾವಣಾ ಆಯೋಗದ ಮೇಲೆ ಜನರಿಗೆ ಅಪನಂಬಿಕೆ ಬರಲು ಕಾರಣವಾಗಿದೆ ಎಂದು ರಸೂಲ್ ಕಿಡಿಕಾರಿದರು.
ಕಳೆದ ಲೋಕಸಭಾ ಚುನಾವಣೆಯಲ್ಲಿ ಮೈಸೂರಿನಲ್ಲೂ ಮತ ಕಳ್ಳತನ ನಡೆದಿದೆ ಎಂದು ಕೆಪಿಸಿಸಿ ವಕ್ತಾರರಾದ ಎಂ.ಲಕ್ಷ್ಮಣ್ ಮಾಡಿರುವ ಆರೋಪ ಕುರಿತು ಪ್ರತಿಕ್ರಿಯಿಸಿರುವ ರಸೂಲ್, ಲಕ್ಷ್ಮಣ್ ಅವರ ಆರೋಪದಲ್ಲಿ ಸತ್ಯವಿದೆ. ಬಿಜೆಪಿ ಮತದಾರರೇ ಇಲ್ಲದ ಬೂತ್‍ಗಳಲ್ಲಿ ಬಿಜೆಪಿಗೆ ಮತ ಬರಲು ಅಸಾಧ್ಯ ಅಂತಹದರಲ್ಲೂ ಅದು ಮತಗಳಿಸಿದೆ ಎಂದರೆ ಇದು ಮತ ಕಳ್ಳತನದಿಂದ ಮಾತ್ರ ಸಾಧ್ಯ ಎಂದರು.
ಕೇಂದ್ರ ಸಚಿವರಾದ ಹೆಚ್.ಡಿ.ಕುಮಾರಸ್ವಾಮಿ ಅವರು ಮತ ಕಳ್ಳತನ ಕುರಿತು ಮಾತನಾಡಿ, ಚುನಾವಣೆಯಲ್ಲಿ ಎಸಗಿದ ಪಾಪವನ್ನು ಸುಳ್ಳಿನಿಂದ ಮುಚ್ಚಿಕೊಳ್ಳಲು ಚುನಾವಣೆ ಆಯೋಗದ ಮೇಲಿನ ಸುಳ್ಳಿನ ಸುರಿಮಳೆ ಜನತಂತ್ರಕ್ಕೆ ನೇಣು ಬಿಗಿಯುವ ದೂರ್ತ ಹುನ್ನಾರ. ಅಮೃತಕಾಲದ ಪ್ರಜಾಪ್ರಭುತ್ವಕ್ಕೆ ವಿಷವಿಕ್ಕುವ ಘೋರ ಷಡ್ಯಂತ್ರ್ಯ ಎಂದು ಕಾಂಗ್ರೆಸ್ ಪಕ್ಷದ ವಿರುದ್ಧ ಕಿಡಿ ಕಾರಿದ್ದರ ಬಗ್ಗೆ ಪ್ರತಿಕ್ರಿಯಿಸಿದ ರಸೂಲ್ ಅವರು, ಮಾನ್ಯ ಕುಮಾರಸ್ವಾಮಿ ಅವರು ಬಿಜೆಪಿ ಸರ್ಕಾರದಲ್ಲಿ ಕೇಂದ್ರ ಸಚಿವರಾಗಿದ್ದಾರೆ. ಅವರು ಮತಗಳ್ಳತನ ತಡೆಯುವ ಬಗ್ಗೆ
‘ಮತದಾರರ ಗುರುತಿನ ಚೀಟಿಗೆ ಆಧಾರ್ ಸಂಖ್ಯೆ ಲಿಂಕ್ ಮಾಡಬೇಕು. ಅಷ್ಟು ಮಾಡಿದರೆ ಮತಗಳ್ಳರ ಆಟಕ್ಕೆ ಅಂಕೆ ಬೀಳುವುದು ಗ್ಯಾರಂಟಿ ಎಂದು ಮತ ಕಳ್ಳತನ ತಡೆಯುವ ಬಗ್ಗೆ ತಮ್ಮ ಅಮೂಲ್ಯ ಸಲಹೆ ನೀಡಿದ್ದಾರೆ. ಮತ್ತೊಂದು ಕಡೆ ಕಾಂಗ್ರೆಸ್ ವಿರುದ್ಧವೂ ಮಾತನಾಡಿದ್ದಾರೆ. ರಾಜಕಾರಣದಲ್ಲಿ ಇದು ಸಹಜ, ಆದರೇ ಮತ ಕಳ್ಳತನ ನಡೆಯುವುದನ್ನು ತಡೆಯಲು ಅವರು ನೀಡಿರುವ ಅಮೂಲ್ಯ ಸಲಹೆಯೇ ನಮಗೆ ಮುಖ್ಯ ಎಂದರು.
ಮತ ಕಳ್ಳತನ ನಡೆದಿದೆ ಎಂದು ಯಾರೇ ದೂರು ಕೊಟ್ಟರೂ ಅದನ್ನು ಸ್ವೀಕರಿಸಿ ತನಿಖೆ ನಡೆಸಿ ಸತ್ಯವನ್ನು ಹೇಳುವುದು ಚುನಾವಣಾ ಆಯೋಗದ ಕೆಲಸ, ಆದರೇ, ಇಲ್ಲಿ ದೂರು ಕೊಟ್ಟವರ ಮೇಲೆಯೇ ಅನುಮಾನ ಪಡುವುದು ನಡೆಯುತ್ತಿದೆ ಇದು ಸಂವಿಧಾನ ವಿರೋಧಿ ನಡೆ. ಜನರು ಜಾಗೃತರಾಗಿ ಇದರ ವಿರುದ್ಧ ಹೋರಾಡುವುದೇ ಉಳಿದಿರುವ ಒಂದೇ ಮಾರ್ಗ.
• ಎಂ.ರಸೂಲ್, ಕಾಂಗ್ರೆಸ್ ಮುಖಂಡರು
0 ಕಾಮೆಂಟ್‌ಗಳು