ವರದಿ: ನಿಷ್ಕಲ ಎಸ್.ಗೌಡ, ಮೈಸೂರು
ಮೈಸೂರು: ವರನಟ ದಿವಂಗತ ಡಾ.ರಾಜಕುಮಾರ್ ಅವರನ್ನು ಸಾಮಾಜಿಕ ಜಾಲತಾಣದಲ್ಲಿ ಅವಹೇಳನ ಮಾಡಿರುವ ವ್ಯಕ್ತಿಯನ್ನು ಪೊಲೀಸರು ಕೂಡಲೇ ಬಂಧಿಸಿ ಶಿಕ್ಷೆಗೆ ಒಳಪಡಿಸಬೇಕು ಮತ್ತು ಆತನನ್ನು ಈ ದೇಶದಿಂದಲೇ ಗಡಿಪಾರು ಮಾಡಬೇಕೆಂದು ಕರ್ನಾಟಕ ರಾಜ್ಯ ರೈತಸಂಘ(ರೈತಬಣ)ದ ಅಧ್ಯಕ್ಷರಾದ ಇಂಗಲಗುಪ್ಪೆ ಕೃಷ್ಣೇಗೌಡ ಅವರು ಒತ್ತಾಯಿಸಿದ್ದಾರೆ.
ಬುಧವಾರ ಮೈಸೂರಿನಲ್ಲಿ ಮಾಧ್ಯಮದವರೊಂದಿಗೆ ಅವರು ಮಾತನಾಡಿ, ನಟಸಾರ್ವಭೌಮ ಕನ್ನಡಿಗರ ಕಣ್ಮಣಿ ಡಾ.ರಾಜಕುಮಾರ್ ಅವರನ್ನು ನಿಂದಿಸಿರುವ ವ್ಯಕ್ತಿ ಮಂಗಳೂರು ಮೂಲದ ವಿನೋದ್ ಶೆಟ್ಟಿ ಎಂದು ಪ್ರಾಥಮಿಕವಾಗಿ ತಿಳಿದುಬಂದಿದೆ. ಈತ ಚಾಲಕ ವೃತ್ತಿಯವನಾಗಿದ್ದಾನೆ.
ಈತನ ಮಾತಿನ ಧಾಟಿಯನ್ನು ಗಮನಿಸಿದರೆ, ಈತ ಆಕಸ್ಮಿಕವಾಗಿ ಅಥವಾ ಬಾಯಿ ತಪ್ಪಿ ಮಾತನಾಡಿಲ್ಲ, ಬೇಕಂತಲೇ ಪೂರ್ವನಿಯೋಜಿತವಾಗಿ ಮಾತನಾಡಿದ್ದು, ಈತನ ಮಾತಿನಿಂದ ಏಳು ಕೋಟಿ ಕನ್ನಡಿಗರನ ಮನಸ್ಸಿಗೆ ಘಾಸಿಯಾಗಿದೆ, ಈತನ ಕುಕೃತ್ಯದ ಹಿಂದೆ ಯಾರದೋ ಬಲವಾದ ಕೈವಾಡವಿರುವ ಶಂಕೆಯೂ ವ್ಯಕ್ತವಾಗಿದ್ದು, ಪೊಲೀಸರು ಕೂಡಲೇ ಈತನನ್ನು ಬಂಧಿಸಿ ಇವರ ಹಿಂದೆ ಇರುವ ದುಷ್ಟ ಶಕ್ತಿಗಳನ್ನು ಪತ್ತೆ ಹಚ್ಚಿ ಶಿಕ್ಷೆಗೆ ಒಳಪಡಿಸಬೇಕೆಂದು ಕೃಷ್ಣೇಗೌಡ ಆಗ್ರಹಿಸಿದರು.
ಗೋಕಾಕ್ ಚಳವಳಿಯಲ್ಲಿ ಡಾ. ರಾಜ್‌ಕುಮಾರ್ ಪಾತ್ರ ಬಹುಮುಖ್ಯವಾಗಿತ್ತು, ಸಾಹಿತಿಗಳು, ವಿದ್ಯಾರ್ಥಿಗಳು, ಕನ್ನಡ ಪ್ರೇಮಿಗಳ ಹೋರಾಟಕ್ಕೆ ನಿರೀಕ್ಷಿತ ಮಟ್ಟದಲ್ಲಿ ಯಶಸ್ಸು ಲಭಿಸದ ಕಾರಣ ಕನ್ನಡ ಚಿತ್ರರಂಗದಲ್ಲಿ ನಟಸಾರ್ವಭೌಮನಾಗಿ, ಕೋಟ್ಯಂತರ ಕನ್ನಡಿಗರ ಹೃದಯ ಸಿಂಹಾಸನದಲ್ಲಿ ಮನೆ ಮಾಡಿದ್ದ ರಾಜ್‌ಕುಮಾರ್ ಅವರನ್ನು ಪ್ರತಿಭಟನೆಗೆ ಕರೆ ತರಲಾಯಿತು.
ಪ್ರತಿಭಟನೆ ವಿಚಾರ ತಿಳಿಯುತ್ತಿದ್ದಂತೆ ಡಾ. ರಾಜ್‌ಕುಮಾರ್ ಸ್ವಲ್ಪವೂ ತಡ ಮಾಡದೆ ಹೋರಾಟಕ್ಕೆ ಧುಮುಕಿದರು. ಬೆಂಗಳೂರು, ಮೈಸೂರು, ಕೋಲಾರ, ಬೆಳಗಾವಿ ಸೇರಿದಂತೆ ರಾಜ್ಯದ ವಿವಿಧ ಜಿಲ್ಲೆಗಳಿಗೆ ತೆರಳಿಹೋರಾಟ ಮಾಡಿದರು. ಜನರನ್ನು ಉದ್ದೇಶಿಸಿ ಭಾಷಣ ಮಾಡಿದರು. ಡಾ.ರಾಜ್‌ಕುಮಾರ್ ಜೊತೆಗೆ ಡಾ. ವಿಷ್ಣುವರ್ಧನ್, ಅಂಬರೀಶ್ ಸೇರಿದಂತೆ ಅಂದಿನ ಎಲ್ಲ ಪ್ರಖ್ಯಾತ ನಟರು ಕೈ ಜೋಡಿಸಿದರು. ಅವರು ಹೋದಲೆಲ್ಲಾ ಜನರು ಸಾಗರದಂತೆ ಬಂದು ಸೇರುತ್ತಿದ್ದರು. ಈ ಹೋರಾಟದ ಫಲವಾಗಿಯೇ ಇಂದು ರಾಜ್ಯದಲ್ಲಿ ಕನ್ನಡ ಪ್ರಥಮ ಭಾಷೆ ಆಗಿ ಬದಲಾಗಿದೆ. ಅಂದು ಡಾ.ರಾಜ್‌ಕುಮಾರ್ ನೇತೃತ್ವದಲ್ಲಿ ಆ ಪ್ರತಿಭಟನೆ ನಡೆದಿದ್ದರಿಂದಲೇ ಸರ್ಕಾರ, ಪ್ರತಿಭಟನಾಕಾರರ ಒತ್ತಡಕ್ಕೆ ಮಣಿದು ರಾಜ್ಯದ ಶಾಲೆಗಳಲ್ಲಿ ಕನ್ನಡವನ್ನು ಪ್ರಥಮ ಭಾಷೆಯನ್ನಾಗಿ ಜಾರಿಗೆ ತಂದಿದೆ. ಡಾ.ರಾಜ್ ಕುಮಾರ್ ಅವರ ಸಾಧನೆಯನ್ನು ಅರಿಯದ ಮೂಢಾತ್ಮ ಈ ರೀತಿ ಮಾತನಾಡುವ ಮೂಲಕ ಕನ್ನಡಿಗರನ್ನು ಕೆರಳಿಸಿದ್ದಾನೆ ಎಂದು ಕಿಡಿ ಕಾರಿರುವ ಕೃಷ್ಣೇಗೌಡ ಅವರು, ಕೂಡಲೇ ಪೊಲೀಸರು ಈ ಕಿಡಿಗೇಡಿಯನ್ನು ಬಂಧಿಸಿ ಜೈಲಿಗಟ್ಟಬೇಕು. ಇಲ್ಲದಿದ್ದಲ್ಲಿ ರಾಜ್ಯವ್ಯಾಪಿ ಹೋರಾಟ ನಡೆಸಲಾಗುವುದು ಮತ್ತು ಈತನ ವಿರುದ್ಧ ಗೃಹ ಮಂತ್ರಿಗಳನ್ನು ಮತ್ತು ಡಿಜಿಪಿ ಅವರನ್ನು ಭೇಟಿ ಮಾಡಿ ದೂರು ಸಲ್ಲಿಸಲಾಗುವುದು ಎಂದರು.
0 ಕಾಮೆಂಟ್‌ಗಳು