ಎಂ.ರಸೂಲ್ ಸಂಘಟನೆಗೆ ನಗರ ಕಾಂಗ್ರೆಸ್ ಅಧ್ಯಕ್ಷ ಆರ್.ಮೂರ್ತಿ ಶ್ಲಾಘನೆ
ಮೈಸೂರು: ನಗರ ಕಾಂಗ್ರೆಸ್ ಅಧ್ಯಕ್ಷರಾದ ಆರ್.ಮೂರ್ತಿ ಅವರ ಅಧ್ಯಕ್ಷತೆ ಹಾಗೂ ಜಿಲ್ಲಾ ಕಾಂಗ್ರೆಸ್ ಬೀದಿ ಬದಿ ವ್ಯಾಪಾರಿಗಳ ವಿಭಾಗದ ಅಧ್ಯಕ್ಷರಾದ ಎಂ.ರಸೂಲ್ ನೇತೃತ್ವದಲ್ಲಿ ಬೀದಿ ಬದಿ ವ್ಯಾಪಾರಿಗಳ ಪದಗ್ರಹಣ ಸಮಾರಂಭ ನಗರದಲ್ಲಿ ಅದ್ದೂರಿಯಾಗಿ ನೆರವೇರಿತು.
ನಗರದ ಎನ್.ಆರ್.ಮೊಹಲ್ಲ ಮಾರುತಿ ವೃತ್ತದ ಬಳಿ ಇರುವ ಕಾಂಗ್ರೆಸ್ ಪಕ್ಷದ ಬೀದಿ ಬದಿ ವ್ಯಾಪಾರಿಗಳ ಕಚೇರಿ ಆವರಣದಲ್ಲಿ ನಡೆದ ಅದ್ದೂರಿ ಸಮಾರಂಭದಲ್ಲಿ ಮೈಸೂರು ನಗರದ ನರಸಿಂಹರಾಜ, ಚಾಮರಾಜ, ಚಾಮುಂಡೇಶ್ವರಿ ಸೇರಿದಂತೆ ಮೂರು ವಿಧಾನಸಭಾ ಕ್ಷೇತ್ರಗಳ ಸುಮಾರು ೫೦ಕ್ಕೂ ಹೆಚ್ಚು ಬೀದಿ ಬದಿ ವ್ಯಾಪಾರಿಗಳನ್ನು ವಿವಿಧ ಹುದ್ದೆಗಳಿಗೆ ನೇಮಿಸಿ ನೇಮಕಾತಿ ಪತ್ರಗಳನ್ನು ವಿತರಣೆ ಮಾಡಲಾಯಿತು.
ಈ ಸಂದರ್ಭದಲ್ಲಿ ನಗರ ಕಾಂಗ್ರೆಸ್ ಅಧ್ಯಕ್ಷರಾದ ಆರ್.ಮೂರ್ತಿ ಅವರು ಮಾತನಾಡಿ, ಎನ್‌ಆರ್ ಕ್ಷೇತ್ರದ ಶಾಸಕರಾದ ತನ್ವೀರ್ ಸೇಠ್ ಅವರ ಶಿಫಾರಸ್ಸು ಮತ್ತು ಕೆಪಿಸಿಸಿ ಅಧ್ಯಕ್ಷರಾದ ಡಿ.ಕೆ.ಶಿವಕುಮಾರ್ ಅವರ ಆದೇಶದ ಮೇರೆಗೆ ಎಂ.ರಸೂಲ್ ಅವರನ್ನು ಮೈಸೂರು ನಗರ ಬೀದಿ ಬದಿ ವ್ಯಾಪಾರಿಗಳ ವಿಭಾಗದ ಅಧ್ಯಕ್ಷರನ್ನಾಗಿ ನೇಮಕ ಮಾಡಲಾಗಿದ್ದು, ಅವರು ಕಳೆದ ಮೂರು ತಿಂಗಳಿನಿಂದ ತಮ್ಮ ಕಾರ್ಯವ್ಯಾಪ್ತಿಯಲ್ಲಿ ಉತ್ತಮ ಸಂಘಟನೆ ಮಾಡುವ ಮೂಲಕ ಪಕ್ಷದ ಗಮನ ಸೆಳೆದಿದ್ದಾರೆ. ಇದೇ ರೀತಿ ಸಂಘಟನೆ ಮಾಡುವ ಮೂಲಕ ಪಕ್ಷವನ್ನು ಬಲವರ್ಧನೆ ಮಾಡಿದರೆ ಅವರು ಮುಂದಿನ ದಿನಗಳಲ್ಲಿ ಉತ್ತಮ ಭವಿಷ್ಯವಿದೆ ಎಂದು ಹೇಳಿದರು.
ಬೀದಿ ಬದಿ ವ್ಯಾಪಾರಿಗಳು ದಿನನಿತ್ಯ ಆತಂಕದಲ್ಲೇ ಜೀವನ ನಡೆಸುತ್ತಿದ್ದಾರೆ. ಅವರಿಗೆ ಮೈಸೂರು ಮಹಾನಗರ ಪಾಲಿಕೆವತಿಯಿಂದ ಲೈಸೆನ್ಸ್ ಕೊಡಿಸುವ ಕೆಲಸವನ್ನು ಮಾಡಲಾಗುತ್ತಿದೆ, ವ್ಯಾಪಾರಿಗಳು ಸಾರ್ವಜನಿಕರ ಜತೆ ಸೌಹಾರ್ಧತೆಯಿಂದ ವರ್ತಿಸಿ ನಾಗರಿಕರಿಗೆ ಯಾವುದೇ ರೀತಿಯಲ್ಲಿ ಅಡಚಣೆ ಉಂಟಾಗದಂತೆ ಮತ್ತು ಸಾಂಸ್ಕೃತಿಕ ನಗರಿ ಮೈಸೂರಿನ ವರ್ಚಸ್ಸಿಗೆ ಧಕ್ಕೆ ಆಗದ ರೀತಿಯಲ್ಲಿ ತಮ್ಮ ವ್ಯಾಪಾರ ವಹಿಸವಾಟು ನಡೆಸಬೇಕು, ಇನ್ನಿತರ ಯಾವುದೇ ಸಮಸ್ಯೆ ಇದ್ದರೂ ಕಾಂಗ್ರೆಸ್ ಪಕ್ಷ ನಿಮ್ಮೊಂದಿಗೆ ಇರುತ್ತದೆ. ಕಾಂಗ್ರೆಸ್ ಪಕ್ಷದ ಧ್ಯೆಯವೇ ರಕ್ಷಣೆ ಎಂದು ಹೇಳಿದರು.
ಕಾಂಗ್ರೆಸ್ ಪಕ್ಷದ ಬೀದಿ ಬದಿ ವ್ಯಾಪಾರಿಗಳ ಜಿಲ್ಲಾ ಸಮಿತಿ ಅಧ್ಯಕ್ಷರಾದ ಎಂ.ರಸೂಲ್ ಮಾತನಾಡಿ, ಮುಂದಿನ ಎಲ್ಲ ಚುನಾವಣೆಗಳನ್ನು ಗಮನದಲ್ಲಿಟ್ಟುಕೊಂಡು ನಾವು ಪಕ್ಷವನ್ನು ಬಲವಾಗಿ ಸಂಘಟನೆ ಮಾಡುತ್ತಿದ್ದೇವೆ. ಶಾಸಕರಾದ ತನ್ವೀರ್ ಸೇಠ್ ಮತ್ತು ಕೆ,.ಹರೀಶ್‌ಗೌಡ ಅವರು ನಮ್ಮ ಎಲ್ಲ ಕಾರ್ಯಕ್ರಮಗಳಿಗೆ ಬೆಂಬಲವಾಗಿ ನಿಂತಿದ್ದಾರೆ. ಅವರುಗಳ ಶಿಫಾರಸ್ಸಿನ ಅನ್ವಯ, ಮತ್ತು ಕಾಂಗ್ರೆಸ್ ಪಕ್ಷದ ಬೀದಿ ಬದಿ ವ್ಯಾಪಾರಿಗಳ ರಾಜ್ಯ ಸಮಿತಿ ಅಧ್ಯಕ್ಷರಾದ ರಂಗಸ್ವಾಮಿ ಅವರ ಅನುಮೋದನೆ ಮೇರೆಗೆ ಇಂದು ನಾವು ಮೈಸೂರು ನಗರದ ವಿವಿಧ ವಾರ್ಡ್‌ಗಳಿಗೆ ೫೦ಕ್ಕೂ ಹೆಚ್ಚು ಪದಾಧಿಕಾರಿಗಳನ್ನು ನೇಮಿಸಿ ಅವರಿಗೆ ನೇಮಕಾತಿ ಪತ್ರವನ್ನು ಕೊಟ್ಟಿದ್ದೇವೆ. ಬೀದಿ ಬದಿ ವ್ಯಾಪಾರಿಗಳು ದಿನನಿತ್ಯ ಎದುರಿಸಿವ ಸಂಕಷ್ಟಗಳನ್ನು ನಿವಾರಿಸುವುದು, ಅನಗತ್ಯ ಕಿರುಕುಳ ತಪ್ಪಿಸುವುದು ಮತ್ತು ಪ್ರಾಧಿಕಾರದಿಂದ ಅವರಿಗೆ ಸೂಕ್ತ ಪರವಾನಗಿ ಕೊಡಿಸುವುದು ಪದಾಧಿಕಾರಿಗಳ ಕರ್ತವ್ಯವಾಗಿದ್ದು, ಆಮೂಲಕ ಕಾಂಗ್ರೆಸ್ ಪಕ್ಷವನ್ನು ಸಂಘಟಿಸಬೇಕೆಂದು ಅವರು ಕರೆ ನೀಡಿದರು.
ದೇಶದಲ್ಲಿ ಒಟ್ಟು ೭.೫ ಕೋಟಿ ಜನ ಬೀದಿ ಬದಿ ವ್ಯಾಪಾರಿಗಳು ಕಾಂಗ್ರೆಸ್ ಪಕ್ಷದ ಸದಸ್ಯರಾಗಿದ್ದಾರೆ. ಇಡೀ ಕಾಂಗ್ರೆಸ್ ಪಕ್ಷ ಬೀದಿ ಬದಿ ವ್ಯಾಪಾರಿಗಳ ಜತೆಗಿದೆ, ಮೈಸೂರಿನಲ್ಲೂ ೨೮೨೯ ಬೀದಿ ಬದಿ ವ್ಯಾಪಾರಿಗಳು ನಮ್ಮ ಪಕ್ಷದ ಜತೆಗಿದ್ದು, ನಾವು ಅವರಿಗೆ ಕಾರ್ಪೋರೇಷನ್ ಜತೆ ಲಿಂಕ್ ಮಾಡಿಸಿ ವ್ಯಾಪಾರ ನಡೆಸಲು ಲೈಸೆನ್ಸ್ ಕೊಡಿಸಿದ್ದೇವೆ. ಇನ್ನೂ ಹೆಚ್ಚಿನ ಜನರಿಗೆ ಅಗತ್ಯ ಅನುಕೂಲ ಮಾಡಿಕೊಡಲು ನಮ್ಮ ತಂಡ ಸದಾ ಸಿದ್ದವಿದೆ ಎಂದರು.
ಇದೇ ವೇಳೆ ನಗರ ಕಾಂಗ್ರೆಸ್ ಅಧ್ಯಕ್ಷರಾದ ಆರ್.ಮೂರ್ತಿ ಅವರನ್ನು ಎಂ.ರಸೂಲ್ ಆತ್ಮೀಯವಾಗಿ ಅಭಿನಂದಿಸಿದರು.
ಕಾರ್ಯಕ್ರಮದಲ್ಲಿ ನಗರ ಕಾಂಗ್ರೆಸ್ ವಕ್ತಾರ ಮಹೇಶ್, ಗಿರೀಶ್, ಅಜ್ಮಲ್ ಪಾಷ, ಸೈಯದ್ ಮಾಜು, ಟೀಪೂ, ರಹಮತುಲ್ಲಾ, ಜುನೇದ್, ಏಜಾಸ್, ಅಲೀಂ, ಫಯಾಸ್, ಸಾದೀಖ್ ಮೊಹಮ್ಮದ್ ಸಿದ್ದೀಖ್ ಮುಂತಾದವರು ಇದ್ದರು.
ಸೇಬಿನ ಹಾರ ಹಾಕಿ ಭರ್ಜರಿ ಸನ್ಮಾನ:
ಇದೇ ಸಂದರ್ಭದಲ್ಲಿ ಕಾರ್ಯಕ್ರಮಕ್ಕೆ ಆಗಮಿಸಿದ್ದ ನೂರಾರು ಜನ ಬೀದಿ ಬದಿ ವ್ಯಾಪಾರಿಗಳು ತಮ್ಮ ನೆಚ್ಚಿನ ನಾಯಕ ಎಂ.ರಸೂಲ್ ಅವರಿಗೆ ಭಾರಿ ಗಾತ್ರದ ಸೇಬಿನ ಹಾರ ಹಾಕುವ ಮೂಲಕ ಅಭಿನಂದಿಸಿದರು.
0 ಕಾಮೆಂಟ್‌ಗಳು