ಮೈಸೂರು : ವಿವಿಧ ಸೇವಾ ಕಾರ್ಯಗಳ ಮೂಲಕ ಅಲ್ಪಸಂಖ್ಯಾತ ಕಲ್ಯಾಣ ಇಲಾಖೆ ಸಚಿವರಾದ ಬಿ.ಝೆಡ್.ಜಮೀರ್ ಅಹಮದ್ ಅವರ ಹುಟ್ಟುಹಬ್ಬವನ್ನು ಮೈಸೂರು ಜಿಲ್ಲಾ ವಕ್ಫ್ ಸಲಹಾ ಸಮಿತಿ ಅಧ್ಯಕ್ಷರಾದ ಅಜೀಜುಲ್ಲಾ @ ಅಜ್ಜು ಮತ್ತು ಸಹೋದರರು ಆಚರಿಸಿದರು.
ಶುಕ್ರವಾರ ಬೆಳಗ್ಗೆ ನಗರದ ಬನ್ನಿಮಂಟಪದಲ್ಲಿರುವ ಮಹಿಳಾ ವೃದ್ಧಾಶ್ರಮಕ್ಕೆ ಭೆಟಿ ನೀಡಿದ ಅವರು, ಅಲ್ಲಿನ ವೃದ್ಧ ನಿರ್ಗತಿಕ ಮಹಿಳೆಯರಿಗೆ ಬಟ್ಟೆ ಮತ್ತಿತರ ಉಡುಗೋರೆಗಳನ್ನು ನೀಡಿದರಲ್ಲದೇ, ಅವರಿಗೆ ಊಟದ ವ್ಯವಸ್ಥೆಯನ್ನೂ ಸಹ ಮಾಡಿದರು. ಬಳಿಕ ವೃದ್ಧರೊಂದಿಗೆ ಕೇಕ್ ಕತ್ತರಿಸಿ ಜಮೀರ್ ಅಹಮದ್ ಅವರ ಹುಟ್ಟುಹಬ್ಬವನ್ನು ಅರ್ಥಪೂರ್ಣವಾಗಿ ಆಚರಿಸಿದರು.
ಬಳಿಕ ಅವರು, ಕೆಆರ್ ಆಸ್ಪತ್ರೆಯ ಚಲುವಾಂಬ ವಾರ್ಡಿನ ಬಳಿ ಸುಮಾರು ೨ ಸಾವಿರ ಜನರಿಗೆ ಊಟ ಬಡಿಸಿದರು, ಸಂಜೆ ೭ ಗಂಟೆಗೆ ಬಡೇ ಮಕಾನ್ ಬಳಿ ನೂರಾರು ಸಾರ್ವಜನಿಕರ ಜತೆಗೂಡಿ ಕೇಕ್ ಕತ್ತರಿಸಿ ಸಂಭ್ರಮಿಸಿದರಲ್ಲದೇ, ಬಡೇ ಮಕಾನ್ ಮಸೀದಿಯಲ್ಲಿ ವಿಶೇಷ ಪ್ರಾರ್ಥನೆ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಅಜೀಜುಲ್ಲಾ @ ಅಜ್ಜು ಅವರು ಮಾತನಾಡಿ, ನಮ್ಮ ನಾಯಕರಾದ ಬಿ.ಝೆಡ್ ಜಮೀರ್ ಅಹಮದ್ ಖಾನ್ ಅವರು, ಮಾತೃ ಹೃದಯವುಳ್ಳ ಜನನಾಯಕರು, ಜನ ಕಷ್ಟಗಳಿಗೆ ತಕ್ಷಣ ಸ್ಪಂದಿಸುವ ಹೃದಯವಂತರು, ಕರುಣಾಮಯಿ ಸದಾಕಾಲ ಬಡವರ ಕಷ್ಟಕ್ಕೆ ಮಿಡಿಯುತ್ತಾರೆ. ಇಂತಹ ಮಹಾನ್ ನಾಯಕನ ಹುಟ್ಟು ಹಬ್ಬವನ್ನು ಇಂದು ನಾವು ವಿವಿಧ ಸೇವಾ ಕಾರ್ಯಗಳ ಮೂಲಕ ಆಚರಿಸಿದ್ದೇವೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಮೈಸೂರು ಮಹಾನಗರಪಾಲಿಕೆ ಮಾಜಿ ಸದಸ್ಯರಾದ ಸಮಿ, ಮೈಸೂರು ಜಿಲ್ಲಾ ವಕ್ಫ್ ಸಲಹಾ ಸಮಿತಿ ಉಪಾಧ್ಯಕ್ಷರಾದ ಶಬ್ನಂ ಸಯೀದ್, ಸದಸ್ಯರಾದ ನಿಸಾರ್ ಅಹಮದ್ ಸೇರಿದಂತೆ ಹಲವು ಮುಖಂಡರು ಮತ್ತು ಜಮೀರ್ ಅಹಮದ್ ಖಾನ್ ಅವರ ನೂರಾರು ಅಭಿಮಾನಿಗಳು ಹಾಜರಿದ್ದರು.
0 ಕಾಮೆಂಟ್‌ಗಳು