ಆಟೋ ಚಾಲಕರು ನಿಜವಾದ ಶ್ರಮಜೀವಿಗಳು : ನಟ ದ್ರುವ ಸರ್ಜಾ ಶ್ಲಾಘನೆ
ವರದಿ: ಎಸ್.ನಿಷ್ಕಲ, ಮೈಸೂರು
ಮೈಸೂರು: ವಿವಿಧ ಜನಪರ ಕಾರ್ಯಕ್ರಮಗಳ ಮೂಲಕ ಮೈಸೂರಿನ ಸ್ನೇಹಜೀವಿ ಚಾಲಕರ ಟ್ರೇಡ್ ಯೂನಿಯನ್‍ನ 3ನೇ ವರ್ಷದ ಸಂಭ್ರಮಾಚರಣೆ ಮತ್ತು ಚಾಲಕರ ಸಮಾವೇಶ ಮಂಗಳವಾರ ಅದ್ದೂರಿಯಾಗಿ ಮತ್ತು ಯಶಸ್ವಿಯಾಗಿ ನಡೆಯಿತು. ಸಾವಿರಾರು ಆಟೋ ಚಾಲಕರು ಈ ಯಶಸ್ವಿ ಸಮಾರಂಭಕ್ಕೆ ಸಾಕ್ಷಿಯಾದರು.
ನಗರದ ಜಯದೇವ ಆಸ್ಪತ್ರೆ ಮುಂಭಾಗ ನಡೆದ ಸಮಾರಂಭದಲ್ಲಿ ಅಭಿಮಾನಿಗಳ ಭಾರಿ ಕರತಾಡನದ ನಡುವೆ ಖ್ಯಾತ ಚಲನಚಿತ್ರ ನಟ ದ್ರುವ ಸರ್ಜಾ ಕಾರ್ಯಕ್ರಮವನ್ನು ಉದ್ಘಾಟಿಸಿದರಲ್ಲದೇ, ಸ್ನೇಹಜೀವಿ ಚಾಲಕರ ಟ್ರೇಡ್ ಯೂನಿಯನ್ ಲಾಂಛನವನ್ನು ಅನಾವರಣಗೊಳಿಸಿದರು.
ಈ ಸಂದರ್ಭದಲ್ಲಿ ಅವರು ಮಾತನಾಡಿ, ಆಟೋ ಚಾಲಕರು ನಿಜವಾದ ಪ್ರಾಮಾಣಿಕ ಶ್ರಮಜೀವಿಗಳು, ಮಾತೃ ಹೃದಯ ಉಳ್ಳವರು, ಕಷ್ಟಪಟ್ಟು ಸಂಪಾದನೆ ಮಾಡುವುದಲ್ಲದೇ, ಅವಕಾಶ ಸಿಕ್ಕಾಗ ಗರ್ಭಿಣಿ ಮಹಿಳೆಯರಿಗೆ, ರೋಗಿಗಳಿಗೆ ವೃದ್ಧರಿಗೆ, ನಿರ್ಗತಿಕರಿಗೆ, ಮಹಿಳೆಯರಿಗೆ ಉಚಿತವಾಗಿ ಸೇವೆ ಸಲ್ಲಿಸುವುದರ ಮೂಲಕ ನಿಸ್ವಾರ್ಥ ಸೇವೆಯನ್ನು ಮಾಡುತ್ತಿದ್ದಾರೆ. ನನ್ನ ಅದ್ದೂರಿ ಚಲನಚಿತ್ರ ಯಶಸ್ವಿಯಾಗಲು ಆಟೋ ಚಾಲಕರೇ ಪ್ರಮುಖ ಕಾರಣಕರ್ತರು, ಚಿತ್ರ ಬಿಡುಗಡೆಯಾದ ಮೊದಲ ದಿನವೇ ಸಾವಿರಾರು ಆಟೋ ಚಾಲಕರು ತಮ್ಮ ಕುಟುಂಬ ಸಮೇತ ಚಿತ್ರವನ್ನು ವೀಕ್ಷಿಸಿ ಅದರ ಯಶಸ್ಸಿಗೆ ನಾಂದಿ ಹಾಡಿದರು. ಇದನ್ನು ನಾನು ಯಾವತ್ತೂ ಮರೆಯುವುದಿಲ್ಲ ಎಂದರು.
ಕನ್ನಡ ಚಿತ್ರಗಳನ್ನು ಮೊದಲು ನೋಡುವುದೇ ಆಟೋ ಚಾಲಕರು. ಇಂದು ಕನ್ನಡ ಚಿತ್ರಗಳು ಯಶಸ್ವಿಯಾಗಲು ಬಹುತೇಕ ಆಟೋ ಚಾಲಕರೇ ಪ್ರಮುಖ ಕಾರಣಕರ್ತರಾಗಿದ್ದಾರೆ. ನಮ್ಮ ತಂದೆಯೂ ಆಟೋ ಚಾಲಕರಾಗಿದ್ದರು. ಇದರಿಂದ ಆಟೋ ಚಾಲಕರು ಎಂದರೆ ನನಗೂ ನಮ್ಮ ತಂದೆಗೂ ಅಪಾರವಾಗ ಗೌರವ ಹೀಗಾಗಿ ಈ ಕಾರ್ಯಕ್ರಮಕ್ಕೆ ಬರಬೇಕಾಯಿತು. ನಿಮ್ಮೆಲ್ಲರಿಗೂ ಶುಭವಾಗಲಿ ಎಂದು ಹರಸಿದರು.
ಚಲನಚಿತ್ರ ನಿರ್ಮಾಪಕರಾದ ಉಮಾಪತಿ ಶ್ರೀನಿವಾಸಗೌಡ ಅವರು ಮಾತನಾಡಿ, ಆಟೋ ಚಾಲಕರು ಎಂದಾಕ್ಷಣಾ ಅವರು ಕನಿಷ್ಠ ಎಂಬ ಆಲೋಚನೆ ಮಾಡಬಾರದು. ಅವರು ತಮ್ಮ ಜೀವದ ಜತೆ ಆಟೋದಲ್ಲಿ ಕುಳಿತ ಪ್ರಯಾಣಿಕರ ಜೀವವನ್ನೂ ರಕ್ಷಿಸುವ ಜೀವರಕ್ಷಕರು. ರಾಜ್ಯದಲ್ಲಿ ಅಪರಾಧ ಪ್ರಕರಣಗಳು ಹೆಚ್ಚಾಗುತ್ತಿವೆ. ಇದಕ್ಕೆ ಸಾಮಾಜಿಕ ಜಾಲತಾಣ ಮತ್ತು ಮಾಧ್ಯಮಗಳಲ್ಲಿ ಅಪರಾಧ ಪ್ರಕರಣಗಳ ವೈಭವೀಕರಣವೂ ಕಾರಣವಾಗಿದೆ. ಆತ್ಮಹತ್ಯೆ ಪ್ರಕರಣಗಳು ಸಹ ಹೆಚ್ಚಾಗುತ್ತಿವೆ. ಚಿಕ್ಕಮಕ್ಕಳಲ್ಲೂ ಇದು ಹೆಚ್ಚಾಗಿರುವುದು ಆತಂಕಕ್ಕೆ ಕಾರಣವಾಗಿದೆ. ಇವುಗಳಿಗೆ ಪೊಲೀಸರು ಕಡಿವಾಣ ಹಾಕುತ್ತಲೇ ಇದ್ದಾರೆ. ಆಟೋ ಚಾಲಕರು ತಮ್ಮ ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಿಸಬೇಕು ಎಂದರು.
ಆಟೋ ಚಾಲಕರು ಉತ್ತಮ ಮಾಹಿತಿದಾರರು ಆಗಿರುತ್ತಾರೆ. ಅವರು ಆಯಾ ಸ್ಥಳದ ತಳ ಮಟ್ಟದ ಮಾಹಿತಿಯನ್ನು ಸಮರ್ಥವಾಗಿ ಕೊಡಬಲ್ಲರು. ಅತ್ಯಂತ ಪ್ರಾಮಾಣಿಕ ಜೀವಿಗಳು ಎಂದರೆ ಅವರು ಆಟೋ ಚಾಲಕರು ಎಂದು ಶ್ಲಾಘಿಸಿದರು.
ಇದೇ ಸಂದರ್ಭದಲ್ಲಿ ಆಟೋ ಚಾಲಕರ ಮಕ್ಕಳಿಂದ ವಿವಿಧ ಸಾಂಸ್ಕøತಿಕ ಕಾರ್ಯಕ್ರಮಗಳು ನಡೆದವು.ಸುಮಾರು 500ಕ್ಕೂ ಹೆಚ್ಚು ಸಂಘಟನೆಯ ಸದಸ್ಯರಿಗೆ ಸಮವಸ್ತ್ರ ವಿತರಣೆ ಮಾಡಲಾಯಿತು. ಅಲ್ಲದೇ ಆಟೋ ಚಾಲಕರ ಮಕ್ಕಳಿಗೆ ಶಿಕ್ಷಣಕ್ಕೆ ಅನುಕೂಲವಾಗುವಂತೆ ಬ್ಯಾಗ್ ಮತ್ತು ಲೇಖನ ಸಾಮಾಗ್ರಿ ವಿತರಣೆ ಮಾಡಲಾಯಿತು.
ವಿವಿಧ ಸಂಘಟನೆಗಳ ಪದಾಧಿಕಾರಿಗಳು ಮತ್ತು ವೇದಿಕೆಯಲ್ಲಿದ್ದ ಗಣ್ಯರನ್ನು ಅಭಿನಂದಿಸಲಾಯಿತು. ಇದಕ್ಕೂ ಮುನ್ನ ಆಟೋ ಚಾಲಕರಿಗೆ ವಿವಿಧ ಮಾಹಿತಿಗಳನ್ನು ಸಂಪನ್ಮೂಲ ವ್ಯಕ್ತಿಗಳಿಂದ ಕೊಡಿಸಲಾಯಿತು. ಸಂಘಟನೆಯ ರಾಜ್ಯಾಧ್ಯಕ್ಷರಾದ ಸಂತೋಷ್ ಕುಮಾರ್ ಪ್ರಾಸ್ತಾವಿಕವಾಗಿ ಮಾತನಾಡಿದರು.
ಕಾರ್ಯಕ್ರಮದಲ್ಲಿ ವಿವಿ ಪುರಂ ಸಂಚಾರ ಪೊಲೀಸ್ ಠಾಣೆಯ ಇನ್ಸ್‍ಪೆಕ್ಟರ್ ಲವ, ಸ್ನೇಹಜೀವಿ ಚಾಲಕರ ಟ್ರೇಡ್ ಯೂನಿಯನ್ ಗೌರವಾಧ್ಯಕ್ಷರಾದ ಗಂಡಸಿ ಸದಾನಂದಸ್ವಾಮಿ, ಮಾರ್ಗದರ್ಶಕರಾದ ಗೋಪಾಲಣ್ಣ, ರಾಜ್ಯಾಧ್ಯಕ್ಷರಾದ ಸಂತೋಷ್ ಕುಮಾರ್, ಪ್ರಧಾನ ಕಾರ್ಯದರ್ಶಿ ರಾಜು ಕನ್ನಡಿಗ, ಮೈಸೂರು ಜಿಲ್ಲಾ ಅಧ್ಯಕ್ಷರಾದ ಸೋಮಶೇಖರ್ ಎನ್, ಮಾರ್ಗದರ್ಶಕರಾದ ಯಶೋದಾ ಆರ್, ಪ್ರಧಾನ ಕಾರ್ಯದರ್ಶಿ ರವಿ ಎಸ್., ಗೌರವಾಧ್ಯಕ್ಷರಾದ ಕೆ.ವಿ.ಚೇತನ್, ಮಧು ಟಿ., ಲೋಕೇಶ್ ರೆಡ್ಡಿ, ಮಿಥುನ್ ಹೆಚ್.ಎನ್., ಡಾ.ಡಿ.ಪಿ.ರವಿಚಂದ್ರ, ರಘು ಯಾದವ್, ರಮೇಶ್, ವಡಿವೇಲ್, ಸೌಮ್ಯ, ಮುರುಗನ್, ದಿನೇಶ್ ಸಿಂಗ್ ಮತ್ತಿತರರು ಇದ್ದರು.
ಮೈಸೂರು ಪ್ರವಾಸಿ ಕೇಂದ್ರವಾಗಿದೆ. ಹೊರ ರಾಜ್ಯಗಳಲ್ಲದೇ, ವಿದೇಶಗಳಿಂದಲೂ ಹೆಚ್ಚು ಪ್ರವಾಸಿಗರು ಇಲ್ಲಿಗೆ ಬರುತ್ತಾರೆ. ಅವರು ಮೊದಲು ಭೇಟಿ ಮಾಡುವುದೇ ಆಟೋ ಚಾಲಕರನ್ನು ನಂತರ ಟ್ರಾಫಿಕ್ ಪೊಲೀಸರನ್ನು, ಆಟೋ ಚಾಲಕರು ಉತ್ತಮ ಸಮವಸ್ತ್ರ ಧರಿಸಿ ಶಿಸ್ತಿನಿಂದ ಪ್ರವಾಸಿಗರಿಗೆ ಸ್ಪಂದಿಸಿ ಮೈಸೂರು ನಗರದ ಕೀರ್ತಿಯನ್ನು ಹೆಚ್ಚಿಸಬೇಕು.
• ಶಿವನಂಜು, ಎಸಿಪಿ ಮೈಸೂರು.
ಪರೀಕ್ಷೆಯಲ್ಲಿ ಪಾಸಾದವರು 30-40 ಸಾವಿರ ಸಂಬಳಕ್ಕೆ ಇದ್ದರೆ ಫೇಲಾದವರು ಕಂಪನಿಗಳನ್ನು ಪ್ರಾರಂಭಿಸಿ ಹತ್ತಾರು ಜನರಿಗೆ ಉದ್ಯೋಗ ನೀಡುತ್ತಿದ್ದಾರೆ. ಇದರಿಂದ ಫೇಲಾದವರು ಅಥವಾ ಕಡಿಮೆ ವಿದ್ಯಾಭ್ಯಾಸ ಮಾಡಿದವರು ಧೃತಿಗೆಡದೆ ಜೀವನದಲ್ಲಿ ಮುನ್ನುಗ್ಗಬೇಕು.
• ಉಮಾಪತಿ ಶ್ರೀನಿವಾಸಗೌಡ, ನಿರ್ಮಾಪಕರು
0 ಕಾಮೆಂಟ್‌ಗಳು