ಮೈಸೂರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಕೊಡುಗೆ ಇದೆ, ಆದರೇ, ನಾಲ್ವಡಿ ಕೃಷ್ಣರಾಜ ಒಡೆಯರ್ ಜತೆ ಹೋಲಿಕೆ ಹಾಸ್ಯಾಸ್ಪದ : ಇಂಗಲಗುಪ್ಪೆ ಕೃಷ್ಣೇಗೌಡ


 ಮೈಸೂರು : ಎರಡು ಬಾರಿ ರಾಜ್ಯದ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮೈಸೂರಿಗೆ ಸಾಕಷ್ಟು ಕೊಡುಗೆ ನೀಡಿದ್ದಾರೆ. ಆದರೇ, ನಾಲ್ವಡಿ ಕೃಷ್ಣರಾಜ ಒಡೆಯರ್ ಜತೆ ಅವರನ್ನು ಹೋಲಿಕೆ ಮಾಡುವುದು ಬಾಲಿಶತನ ಎಂದು ಕರ್ನಾಟಕ ರಾಜ್ಯ ರೈತಸಂಘದ(ರೈತಬಣ) ಅಧ್ಯಕ್ಷರಾದ ಇಂಗಲಗುಪ್ಪೆ ಕೃಷ್ಣೇಗೌಡ ಹೇಳಿದರು.

ಭಾನುವಾರ ಮೈಸೂರಿನಲ್ಲಿ ಮಾಧ್ಯಮದವರೊಂದಿಗೆ ಅವರು ಮಾತನಾಡಿ, ಡಾ.ಯತೀಂದ್ರ ಅವರು ಒಬ್ಬ ವೈದ್ಯರು, ವಿದ್ಯಾವಂತರು ಮತ್ತು ಹೆಚ್ಚಾಗಿ ವಿಧಾನ ಪರಿಷತ್ ಸದಸ್ಯರು ಆಗಿದ್ದಾರೆ. ಒಬ್ಬ ಜವಾಬ್ದಾರಿಯುತ ರಾಜಕಾರಣಿಯಾದ ಅವರಿಂದ ಇಂತಹ ಹೇಳಿಕೆ ನಾವು ನಿರೀಕ್ಷಿಸಿರಲಿಲ್ಲ, ನಾಲ್ವಡಿ ಕೃಷ್ಣರಾಜರು ಎಲ್ಲಿ, ಸಿದ್ದರಾಮಯ್ಯ ಎಲ್ಲಿ, ಬಾನು, ಭುವಿಗೆ ಹೋಲಿಕೆ ಸಾಧ್ಯವೆ?

ಎಂದು ಹೇಳಿದ ಅವರು, ನಾಲ್ವಡಿ ಕೃಷ್ಣರಾಜ ಒಡೆಯರ್ ಅವರು, ಆಧುನಿಕ ಕನ್ನಡ ನಾಡಿನ ನಿರ್ಮಾತೃಗಳು, ಶಿವನಸಮುದ್ರದಲ್ಲಿ ಜಲವಿದ್ಯುತ್ ಯೋಜನೆ, ಮಿಂಟೋ ಕಣ್ಣಿನ ಆಸ್ಪತ್ರೆ,

ಬೆಂಗಳೂರಿನಲ್ಲಿ ಬೀದಿ ದೀಪಗಳು, ಉಭಯ ಸದನಗಳ ಸಭೆ, ಮಹಿಳೆಯರ ಮತದಾನದ ಹಕ್ಕು, ಚಿತ್ರದುರ್ಗದ ವಾಣಿ ವಿಲಾಸ ಸಾಗರ್ ಅಣೆಕಟ್ಟು, ಮೈಸೂರು ಬಾಯ್ ಸ್ಕೌಟ್ಸ್, ಬೆಂಗಳೂರಿನಲ್ಲಿರುವ ಇಂಡಿಯನ್ ಇನ್‍ಸ್ಟಿಟ್ಯೂಟ್ ಆಫ್ ಸೈನ್ಸ್, 

1913 ರಲ್ಲಿ ಸ್ಟೇಟ್ ಬ್ಯಾಂಕ್ ಆಫ್ ಮೈಸೂರು, ಬೆಂಗಳೂರು ಕೃಷಿ ವಿಶ್ವವಿದ್ಯಾಲಯಯ, ಕನ್ನಡ ಸಾಹಿತ್ಯ ಪರಿಷತ್ತು ಸ್ಥಾಪನೆ, ಮೈಸೂರು ವಿಶ್ವವಿದ್ಯಾನಿಲಯ, ಮೈಸೂರು ಚೇಂಬರ್ ಆಫ್ ಕಾಮರ್ಸ್, ವಿಶ್ವೇಶ್ವರಯ್ಯ ಯೂನಿವರ್ಸಿಟಿ ಕಾಲೇಜ್ ಆಫ್ ಇಂಜಿನಿಯರಿಂಗ್, ಮೈಸೂರಿನಲ್ಲಿ ಮಹಿಳೆಯರಿಗಾಗಿ ಮಹಾರಾಣಿ ಕಾಲೇಜು,

ಶ್ರೀಗಂಧದ ಎಣ್ಣೆ ಕಾರ್ಖಾನೆ, ಸಿಲ್ಕ್‍ಫ್ಯಾಕ್ಟರಿ, ಭದ್ರಾವತಿ ಕಬ್ಬಿಣ ಮತ್ತು ಉಕ್ಕಿನ ಕಾರ್ಖಾನೆ, ಕೆಆರ್‍ಎಸ್ ಅಣೆಕಟ್ಟು, ಮೈಸೂರು ಮೆಡಿಕಲ್ ಕಾಲೇಜು, ಮಾರ್ಕೋನಹಳ್ಳಿ ಅಣೆಕಟ್ಟು, ವಾಣಿ ವಿಲಾಸ ಮಹಿಳಾ ಮತ್ತು ಮಕ್ಕಳ ಆಸ್ಪತ್ರೆ, ಮೈಸೂರು ಪೇಪರ್ ಮಿಲ್ಸ್,

ಮೈಸೂರು ಪೇಂಟ್ಸ್ ಮತ್ತು ವಾರ್ನಿಷ್, ಹಾಸನದಲ್ಲಿ ಮೈಸೂರು ಇಂಪ್ಲಿಮೆಂಟ್ಸ್ ಕಾರ್ಖಾನೆ,

ಹಿರೇಭಾಸ್ಕರ ಅಣೆಕಟ್ಟು, ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್, ಕನ್ನಡ ಭಾಷೆ-ನಾಡು-ನುಡಿಗೆ ಸಂಬಂಧಿಸಿ ಮಹೋನ್ನತ ಕೊಡುಗೆ ನೀಡುತ್ತಿರುವ ಕನ್ನಡ ಸಾಹಿತ್ಯ ಪರಿಷತ್ ಅನ್ನು ಸ್ಥಾಪಿಸಿದ ಕೀರ್ತಿಯೂ ಕೂಡ ನಾಲ್ವಡಿಯವರದ್ದು, ಇಂತಹ ಆಧುನಿಕ ಕರ್ನಾಟಕದ ನಿರ್ಮಾತೃವನ್ನು ನಿಮ್ಮ ತಂದೆಯವರೊಂದಿಗೆ ಹೋಲಿಸುವುದು ಎಷ್ಟು ಸರಿ ಎಂದು ಅವರು ಪ್ರಶ್ನಿಸಿದರು. 

ನಾಲ್ವಡಿ ಕೃಷ್ಣರಾಜ ಒಡೆಯರ್‍ರ  ಮರಣ ಸಂದರ್ಭದಲ್ಲಿ ಅವರ ಬಳಿ ಸುಮಾರು 400 ಮಿಲಿಯನ್ ಯುಎಸ್ ಡಾಲರ್ ವೈಯಕ್ತಿಕ ಸಂಪತ್ತು ಇತ್ತು. ಅವರು ವಿಶ್ವದ ಶ್ರೀಮಂತ ವ್ಯಕ್ತಿಗಳಲ್ಲಿ ಒಬ್ಬರಾಗಿದ್ದರು. ಅವರ ಆಳ್ವಿಕೆಯಲ್ಲಿ, ಮೈಸೂರು ವಿಶ್ವದಲ್ಲೇ ಅತ್ಯುತ್ತಮ ಆಡಳಿತದ ರಾಜ್ಯವೆಂದು ಹೆಸರುವಾಸಿಯಾಗಿತ್ತು. ಇವಿಷ್ಟೇ ಸಾಕು ಅವರ ಆಡಳಿತದ ವೈಭವವನ್ನು ನೆನಪಿಸಲು. 

ನಾಲ್ವಡಿಯವರು ಅಸ್ಪೃಶ್ಯತೆಯನ್ನು ಅಪರಾಧವೆಂದು ಪರಿಗಣಿಸಿದರು. ಎಂಟು ವರ್ಷಕ್ಕಿಂತ ಕಡಿಮೆ ವಯಸ್ಸಿನ ಬಾಲಕಿಯರ ಬಾಲ್ಯ ವಿವಾಹವನ್ನು ನಿಷೇಧಿಸಿದರು. ಅವರು ವಿಧವೆ ಹುಡುಗಿಯರಿಗಾಗಿ ಹಲವಾರು ವಿದ್ಯಾರ್ಥಿವೇತನವನ್ನು ಸ್ಥಾಪಿಸಿದರು. 1915ರಲ್ಲಿ ಮೈಸೂರು ಸಮಾಜದ ದುರ್ಬಲ ವರ್ಗಗಳ ಸಬಲೀಕರಣಕ್ಕಾಗಿ ಮೈಸೂರು ಸಾಮಾಜಿಕ ಪ್ರಗತಿ ಸಂಘವನ್ನು ರಚಿಸಲಾಯಿತು. ವಿಶೇಷ ಚೇತನ ಮಕ್ಕಳಿಗೆಂದು ವಿಶೇಷ ಅನುದಾನವನ್ನು ಮೀಸಲಿರಿಸಲಾಯಿತು.

1918ರಲ್ಲಿ ಅವರು ಹಿಂದುಳಿದ ವರ್ಗಗಳಿಗೆ ಸಾಮಾಜಿಕ ಸ್ಥಾನಮಾನ ಕಲ್ಪಿಸಲು ಮತ್ತು ಅದಕ್ಕೆ ಸಂಬಂಧಿಸಿದ ವರದಿಯನ್ನು ತಯಾರಿಸಲು  ಸರ್ ಲೆಸ್ಲಿ ಮಿಲ್ಲರ್ ಅವರನ್ನು ನೇಮಿಸಿದರು ಮತ್ತು ಬ್ರಾಹ್ಮಣೇತರರಿಗೆ ಸರ್ಕಾರಿ ಉದ್ಯೋಗಗಳಲ್ಲಿ 25% ಮೀಸಲಾತಿಯನ್ನು ಶಿಫಾರಸು ಮಾಡಿದರು. 1925ರಲ್ಲಿ, ಅವರು ತಗಡೂರಿನ ಗ್ರಾಮಸ್ಥರಿಗೆ ಸಹಾಯ ಮಾಡಲು ಕಧಾರ ಸಹಕಾರ ಸಂಘವನ್ನು ಸ್ಥಾಪಿಸಿದರು. ಸಿಟಿ ಇಂಪ್ರೂವ್‍ಮೆಂಟ್ ಟ್ರಸ್ಟ್ ಬೋರ್ಡ್ ಅನ್ನು ಅವರ ಮಾರ್ಗದರ್ಶನದಲ್ಲಿ ಸ್ಥಾಪಿಸಲಾಯಿತು. ಭಾರತದಲ್ಲಿ ಇದು ಈ ರೀತಿಯಲ್ಲಿ ಸ್ಥಾಪನೆಯಾದ  ಮೊದಲ ಸಂಘ.

ಮೈಸೂರಿನ ಸಂಸ್ಕೃತ ಕಾಲೇಜಿಗೆ ಮಹಾರಾಜರು ವೈಯಕ್ತಿಕವಾಗಿ ಧನಸಹಾಯ ಮಾಡಿದರು. ಅವರು ವಿಜ್ಞಾನ ಸಂಸ್ಥೆಯನ್ನು ಸ್ಥಾಪಿಸಲು ಸರ್ ಸಿವಿ ರಾಮನ್ ಅವರಿಗೆ 10 ಎಕರೆ ಭೂಮಿಯನ್ನು ಉಡುಗೊರೆಯಾಗಿ ನೀಡಿದರು.

1927ರಲ್ಲಿ ಅವರ ಸಂಸ್ಥಾನದಲ್ಲಿ ಶಿಕ್ಷಣದ ಮೇಲೆ ಮಾಡಲಾದ ಒಟ್ಟು ವೆಚ್ಚವು 699,000 ರೂ.ಗಳಷ್ಟಿದ್ದು 1902ರಲ್ಲಿ  4,680,000 ರೂ.ಗೆ ಏರಿತು. ಆ ಸಮಯದಲ್ಲಿ ಮೈಸೂರಿನಲ್ಲಿ ಒಟ್ಟು 8,000 ಶಾಲೆಗಳಿದ್ದು ಅದರಲ್ಲಿ 515,000 ವಿದ್ಯಾರ್ಥಿಗಳು ಕಲಿಯುತ್ತಿದ್ದರು.

ಇವು ಮಹಾರಾಜ ಶ್ರೀ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಕೆಲವು ಗಮನಾರ್ಹ ಸಾಧನೆಗಳು. ಮೈಸೂರಿನಲ್ಲಿ ಒಂದೆರಡು ಆಸ್ಪತ್ರೆ, ಕಟ್ಟಡ ನಿರ್ಮಿಸಿದಾಕ್ಷಣ ಸಿದ್ದರಾಮಯ್ಯ ನಾಲ್ವಡಿ ಕೃಷ್ಣರಾಜರಿಗೆ ಸಮನಾಗಲ್ಲ, ಅದು ನಿಮ್ಮ ಮೂರ್ಖತನ ಎಂದು ಬೇಸರಿಸಿದ ಕೃಷ್ಣೇಗೌಡ ಅವರು, ಕೂಡಲೇ ನಿಮ್ಮ ಹೇಳಿಕೆ ವಾಪಸ್ ಪಡೆದು ಮೈಸೂರಿಗರ ಕ್ಷಮೆ ಕೋರಬೇಕೆಂದು ಅವರು ಆಗ್ರಹಿಸಿದರು.

ಇಂಗಲಗುಪ್ಪೆ ಕೃಷ್ಣೇಗೌಡ

ರಾಜ್ಯಾಧ್ಯಕ್ಷರು, ಕರ್ನಾಟಕ ರಾಜ್ಯ ರೈತಸಂಘ(ರೈತಬಣ)

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು