ಮೈಸೂರು: ಕೃಷಿ ಸಚಿವರಾದ ಎನ್.ಚಲುವರಾಯ ಸ್ವಾಮಿ ಅವರು ರಾಜ್ಯದಲ್ಲಿ ಬಿತ್ತನೆ ಬೀಜ ಮತ್ತು ರಸಗೊಬ್ಬರದ ಕೊರತೆ ಇಲ್ಲ ಎಂದು ಹೇಳಿದ ಬೆನ್ನಲ್ಲೆ ರಾಜ್ಯದ ವಿವಿಧೆಡೆ ಬಿತ್ತನೆ ಬೀಜ ಮತ್ತು ರಸಗೊಬ್ಬರದ ಕೊರತೆ ಕಂಡುಬಂದಿದ್ದು, ಕೂಡಲೇ ಕೃಷಿ ಸಚಿವರು ಈ ಬಗ್ಗೆ ಗಂಭೀರವಾಗಿ ಪರಿಶೀಲಿಸಿ ಯಾವುದೇ ಕಾರಣಕ್ಕೂ ಇವುಗಳ ಕೊರತೆ ಆಗದಂತೆ ಕ್ರಮ ವಹಿಸಬೇಕೆಂದು ಇಲ್ಲದಿದ್ದಲ್ಲಿ ರಾಜ್ಯವ್ಯಾಪಿ ಪ್ರತಿಭಟನೆ ನಡೆಸಲಾಗುವುದು ಎಂದು ಕರ್ನಾಟಕ ರಾಜ್ಯ ರೈತಸಂಘದ(ರೈತಬಣ) ರಾಜ್ಯಾಧ್ಯಕ್ಷ ಇಂಗಲಗುಪೆ ಕೃಷ್ಣೇಗೌಡ ಎಚ್ಚರಿಕೆ ನೀಡಿದ್ದಾರೆ.
ಈ ಕುರಿತು ಮಾಧ್ಯಮ ಹೇಳಿಕೆ ನೀಡಿರುವ ಅವರು, ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಾಗಲೆಲ್ಲ ಬಿತ್ತನೆ ಬೀಜ ಮತ್ತು ರಸಗೊಬ್ಬರಕ್ಕೆ ಮಧ್ಯವರ್ತಿಗಳು ಹುಟ್ಟಿಕೊಳ್ಳುತ್ತಾರೆ. ಕೃತಕ ಅಭಾವ ಸೃಷ್ಟಿಸುತ್ತಾರೆ. ರಾಜ್ಯ ಸರ್ಕಾರ ರಸಗೊಬ್ಬರ ಸಂಗ್ರಹಕ್ಕೆ ಪೂರ್ವಸಿದ್ಧತೆ ಮಾಡಿಕೊಂಡಿಲ್ಲ. ಯಾವ ಜಿಲ್ಲೆಗೆ ಎಷ್ಟು ಗೊಬ್ಬರದ ಅಗತ್ಯವಿದೆ ಎಂಬ ಮಾಹಿತಿಯೇ ಇಲ್ಲ. ಲೆಕ್ಕಾಚಾರ ಇಲ್ಲದೇ ರೈತರಿಗೆ ಆತಂಕದ ಸ್ಥಿತಿ ಉಂಟಾಗಿದೆ. ಇಂತಹ ಸ್ಥಿತಿಯ ಲಾಭ ಪಡೆದ ಮಧ್ಯವರ್ತಿಗಳು ಕೃತಕ ಅಭಾವ ಸೃಷ್ಟಿಸಿ, ಅಧಿಕ ಲಾಭ ಮಾಡಿಕೊಳ್ಳುತ್ತಿದ್ದಾರೆ ಎಂಬ ಆರೋಪಗಳೂ ಸಹ ಕೇಳಿಬಂದಿದೆ.
ಕೃಷಿ ಸಚಿವರ ಬಗ್ಗೆ ನಮಗೆ ಅತ್ಯಂತ ಗೌರವ ಇದ್ದು, ಅಧಿಕಾರಿಗಳ ನಿರ್ಲಕ್ಷ್ಯವೂ ಗೊಂದಲಕ್ಕೆ ಕಾರಣವಾಗಿರಬಹುದು ಅಥವಾ ಕೃಷಿ ಸಚಿವರ ಹೆಸರಿಗೆ ಮಸಿ ಬಳಿಯಲು ಕಾಣದ ಕೈಗಳ ಕೈವಾಡವೂ ಇರಬಹುದು ಎಂದರು.
`ರಸಗೊಬ್ಬರ ದಾಸ್ತಾನಿದೆ. ಕೊರತೆ ಇಲ್ಲ' ಎಂದು ಕೃಷಿ ಸಚಿವರು ಹೇಳಿದ್ದಾರೆ. ಹಾಗಾದರೆ ರೈತರು ಏಕೆ ಹೋರಾಟ ನಡೆಸುತ್ತಿದ್ದಾರೆ? ಎಂದು ಪ್ರಶ್ನಿಸಿರುವ ಕೃಷ್ಣೇಗೌಡ ಅವರು, ಮುಂಗಾರು 25 ದಿನಗಳು ಮೊದಲೇ ಆರಂಭವಾದರೂ, ಸರ್ಕಾರ ನಿರ್ಲಕ್ಷ್ಯ ಮಾಡಿದೆ. ಈಗ ಕೇಂದ್ರ ಸಹಕಾರ ನೀಡುತ್ತಿಲ್ಲ ಎಂದು ಹೇಳುತ್ತಿದ್ದಾರೆ. ರಾಜ್ಯಕ್ಕೆ 6,31,000 ಟನ್ ನಿರೀಕ್ಷೆ ಇದ್ದಿತ್ತಾದರೂ, , ಜುಲೈ ಅಂತ್ಯಕ್ಕೆ ಕೇಂದ್ರದಿಂದ ಬಂದಿರುವುದು 8,73,000 ಟನ್. ರಾಜ್ಯ ಸರ್ಕಾರ ಸಲ್ಲಿಸಿದ ಬೇಡಿಕೆಗಿಂತ ಹೆಚ್ಚು ರಸಗೊಬ್ಬರ ರಾಜ್ಯಕ್ಕೆ ಬಂದಿದೆ ಎಂದು ಬಿಜೆಪಿ ಮುಖಂಡರು ಹೇಳುತ್ತಾರೆ. ಇದರಲ್ಲಿ ಯಾವುದು ಸತ್ಯ ಎನ್ನುವುದನ್ನು ಕೃಷಿ ಸಚಿವರು ಸ್ಪಷ್ಟಪಡಿಸಬೇಕು ಎಂದು ಕೃಷ್ಣೇಗೌಡ ಒತ್ತಾಯಿಸಿದರು.
ಯೂರಿಯಾ ಬೇಡಿಕೆ ಹೆಚ್ಚಾಗಿರುವುದರಿಂದ ಸಮಸ್ಯೆ:
ಈ ವರ್ಷ ಮುಂಗಾರು ಬೇಗ ಆರಂಭವಾಗಿದ್ದರಿಂದ ಮತ್ತು ಸುಮಾರು 2 ಲಕ್ಷ ಹೆಕ್ಟೇರ್ ಮುಸುಕಿನ ಜೋಳ ಪ್ರದೇಶ ವಿಸ್ತರಣೆಯಾದ ಕಾರಣ ಯೂರಿಯಾ ಗೊಬ್ಬರಕ್ಕೆ ಬೇಡಿಕೆ ಹೆಚ್ಚಾಯಿತು. ಇದರಿಂದ ಐದಾರು ಜಿಲ್ಲೆಗಳಲ್ಲಿ ಸಮಸ್ಯೆ ಆಗಿದೆ. ಉಳಿದಂತೆ ಎಲ್ಲಿಯೂ ರಸಗೊಬ್ಬರ ಕೊರತೆ ಆಗಿಲ್ಲ ಎಂದು ಕೃಷಿ ಸಚಿವ ಎನ್.ಚಲುವರಾಯಸ್ವಾಮಿ ಅವರೇ ಒಪ್ಪಿಕೊಂಡಿದ್ದಾರೆ.
ಅಲ್ಲದೇ, `ರಾಜ್ಯದಲ್ಲಿ ನಮ್ಮ ಬೇಡಿಕೆಗಿಂತ ಹೆಚ್ಚಿನ ದಾಸ್ತಾನು ಲಭ್ಯವಿದೆ. ಜುಲೈ ತಿಂಗಳ ಬೇಡಿಕೆಗೆ ಅನುಗುಣವಾಗಿ ವಿತರಣೆ ಮಾಡಿದ ಬಳಿಕವೂ ದಾಸ್ತಾನು ಉಳಿಕೆ ಇದೆ. ಕೆಲವು ನಿರ್ದಿಷ್ಟ ಪ್ರದೇಶಗಳಲ್ಲಿ ಯೂರಿಯಾ ಸೇರಿದಂತೆ ರಸಗೊಬ್ಬರದ ಕೊರತೆ ಕಂಡುಬಂದರೆ, ಉಳಿಕೆಯಿಂದ ಹೆಚ್ಚುವರಿಯಾಗಿರುವ ಜಿಲ್ಲೆಗಳಿಂದ ಮರುವಿಂಗಡಣೆ ಮಾಡಿ, ಸರಬರಾಜು ಮಾಡಲಾಗುವುದು' ಎಂದೂ ಸಹ ಕೃಷಿ ಸಚಿವರು ಹೇಳಿದ್ದಾರೆ. ಆದಾಗ್ಯೂ ರೈತರು ರಸಗೊಬ್ಬರ ಮತ್ತು ಬಿತ್ತನೆ ಬೀಜಕ್ಕೆ ಹೋರಾಟ ಮಾಡಬೇಕಾದ ಪರಿಸ್ಥಿತಿ ಇದೆ.
ಜುಲೈ ತಿಂಗಳವರೆಗೆ ರಾಜ್ಯಕ್ಕೆ ಕೇಂದ್ರ ಸರ್ಕಾರದಿಂದ 5,34,009 ಟನ್ ರಸಗೊಬ್ಬರ ಹಂಚಿಕೆಯಾಗಿದೆ. ಇದರಲ್ಲಿ ಈವರೆಗೆ 4,30,633 ಟನ್ ಸರಬರಾಜಾಗಿದೆ. ಏಪ್ರಿಲ್‍ನಿಂದ ಜುಲೈವರೆಗೆ ರಾಜ್ಯದಲ್ಲಿ 6,80,655 ಟನ್ ಯೂರಿಯಾ ಬೇಡಿಕೆ ಇದ್ದು, ಕೇಂದ್ರ ಸರ್ಕಾರದಿಂದ 6,82,500 ಟನ್ ಹಂಚಿಕೆಯಾಗಿದೆ. ಇದರಲ್ಲಿ 5,26,817 ಟನ್ ಸರಬರಾಜಾಗಿದೆ. ರಾಜ್ಯದಲ್ಲಿ ಉಳಿಕೆಯಾಗಿದ್ದ 3,46,499 ಟನ್ ಯೂರಿಯಾ ದಾಸ್ತಾನು ಇದ್ದು, ಕೇಂದ್ರದಿಂದ ಸರಬರಾಜಾದ ಯೂರಿಯಾ ಸೇರಿ 8,73,315 ಟನ್ ಲಭ್ಯತೆ ಇತ್ತು. ಇದರಲ್ಲಿ 7,08,859 ಟನ್ ಯೂರಿಯಾವನ್ನು ವಿವಿಧ ಜಿಲ್ಲೆಗಳಿಗೆ ವಿತರಿಸಿದ್ದು, ರೈತರಿಗೂ ಮಾರಾಟ ಮಾಡಲಾಗಿದೆ. ಇನ್ನು 1,64,567 ಟನ್ ಯೂರಿಯಾ ದಾಸ್ತಾನು ಉಳಿಕೆಯಿದೆ. ಅಲ್ಲದೇ, ಕೇಂದ್ರದಿಂದ ಹಂತ ಹಂತವಾಗಿ ಪೂರೈಕೆಯಾಗುವ ರಸಗೊಬ್ಬರವನ್ನು ಆಗಿಂದಾಗಲೇ ಹಂಚಿಕೆ ಮಾಡಿ ವರ್ಗಾವಣೆ ಮಾಡಲಾಗುವುದು ಎಂದು ಸಹ ಕೃಷಿ ಸಚಿವರು ತಮ್ಮ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಹಾಗಿದ್ದ ಮೇಲೆ ಅಭಾವ ಸೃಷ್ಟಿಯಾದದ್ದು ಹೇಗೆ ಎಂದು ಅವರು ಪ್ರಶ್ನಿಸಿದರು.
ಕೂಡಲೇ ಕೃಷಿ ಸಚಿವರು ಹೆಚ್ಚಿನ ಪ್ರಮಾಣದಲ್ಲಿ ಯೂರಿಯಾವನ್ನು ಶೀಘ್ರವೇ ಪೂರೈಕೆ ಮಾಡಲು ಸೂಕ್ತ ಕ್ರಮಕ್ಕೆ ಮುಂದಾಗಬೇಕು ಎಂದು ಕೃಷ್ಣೇಗೌಡ ಆಗ್ರಹಿಸಿದ್ದಾರೆ.
ವರದಿ:ಎಸ್.ನಿಷ್ಕಲ
0 ಕಾಮೆಂಟ್‌ಗಳು