ಖಾಸಗಿ ಫೈನಾನ್ಸ್‌ನಿಂದ ಗ್ರಾಹಕರಿಗೆ ವಂಚನೆ : ನವ ಸಮೃದ್ಧಿ ಬೆನಿಫಿಟ್ ಫಂಡ್ ನಿಧಿ ಲೀ, ಸಂಸ್ಥೆ ಹೆಸರಲ್ಲಿ ಮೋಸ : ದೂರು ದಾಖಲಿಸಲು ವಿದ್ಯಾರಣ್ಯಪುರಂ ಪೊಲೀಸರ ನಕಾರ : ಆರೋಪ


 ಮೈಸೂರು : ಖಾಸಗಿ ಹಣಕಾಸು ಸಂಸ್ಥೆಯೊಂದು ವಿದ್ಯಾರಣ್ಯಪುರಂ ಬಡಾವಣೆಯ ಸಾವಿರಾರು ಬಡ ವ್ಯಾಪಾರಿಗಳಿಗೆ ಹೆಚ್ಚು ಬಡ್ಡಿ ನೀಡುವ ಅಮಿಷವೊಡ್ಡಿ ಕೊಟ್ಯಾಂತರ ರೂ. ಪಿಗ್ಮಿ ಹಣ ಸಂಗ್ರಹಿಸಿ ಪರಾರಿಯಾಗಿರುವ ಘಟನೆ ನಡೆದಿರುವುದು ತಡವಾಗಿ ಬೆಳಕಿಗೆ ಬಂದಿದೆ.

ಒಂದು ವರ್ಷದ ಹಿಂದೆ ಇಲ್ಲಿನ ಎನ್‍ಐಇ ಕಾಲೇಜು ಬಳಿ ಕಚೇರಿ ತೆರೆದ ನವ ಸಮೃದ್ಧಿ ಬೆನಿಫಿಟ್ ಫಂಡ್ ನಿಧಿ ಲಿಮಿಟೆಡ್ ಎಂಬ ಖಾಸಗಿ ಹಣಕಾಸು ಸಂಸ್ಥೆಯು ಇಲ್ಲಿನ ಸಾವಿರಾರು ಸಣ್ಣ ವ್ಯಾಪಾರಿಗಳಿಗೆ ಸಾಲ ಕೊಡುವುದಾಗಿ ಭರವಸೆ ನೀಡಿ ಮತ್ತು ದಿನನಿತ್ಯ ಉಳಿತಾಯ ಹಣ ಕಟ್ಟಿದರೆ ಶೇ.10 ರಷ್ಟು ಬಡ್ಡಿ ನೀಡುವುದಾಗಿ ಹೇಳಿ ಕೊಟ್ಯಾಂತರ ರೂಪಾಯಿ ಪಿಗ್ಮಿ ಹಣ ಸಂಗ್ರಹಿಸಿ ಪರಾರಿಯಾಗಿದೆ ಎಂದು ಹಣ ಕಳೆದುಕೊಂಡ ಸಾರ್ವಜನಿಕರು ಆರೋಪಿಸಿದ್ದು, ಈ ಸಂಬಂಧ ವಿದ್ಯಾರಣ್ಯಪುರಂ ಪೊಲೀಸ್ ಠಾಣೆಗೆ ದೂರು ನೀಡಲು ಹೋದರೆ ನಮ್ಮ ದೂರು ಸ್ವೀಕರಿಸುತ್ತಿಲ್ಲ ಎಂದು ಆರೋಪಿಸಿದರು.  

ಈ ಬಗ್ಗೆ ಪತ್ರಿಕಾ ಹೇಳಿಕೆ ನೀಡಿರುವ ಅವರುಗಳು, ನಾವು ಬಡ ವ್ಯಾಪಾರಿಗಳು, ಎನ್‍ಐಇ ಕಾಲೇಜು ಬಳಿ ಪ್ರಾರಂಭವಾದ ನವ ಸಮೃದ್ಧಿ ಬೆನಿಫಿಟ್ ಫಂಡ್ ನಿಧಿ ಲಿಮಿಟೆಡ್ ಎಂಬ ಖಾಸಗಿ ಹಣಕಾಸು ಸಂಸ್ಥೆಯ ಕೆಲವು ಪ್ರತಿನಿಧಿಗಳು ನಮ್ಮನ್ನು ಸಂಪರ್ಕಿಸಿ ಸಂಸ್ಥೆಯಲ್ಲಿ ದಿನನಿತ್ಯ ನಿಗದಿತ ರೂಪದಲ್ಲಿ ಹಣ ಉಳಿತಾಯ ಮಾಡಿದರೆ ವರ್ಷಾಂತ್ಯಕ್ಕೆ ಶೇ.10 ರಷ್ಟು ಬಡ್ಡಿ ಸೇರಿಸಿ ವಾಪಸ್ ಕೊಡುವುದಾಗಿ ಭರವಸೆ ನೀಡಿದ್ದರ ಮೇರೆಗೆ ನಾವು ತಲಾ 50, 100, 200, 500, 1000, 2000ರೂ, ನಂತೆ ನಮ್ಮ ಶಕ್ತ್ಯಾನುಸಾರ ಉಳಿತಾಯದ ಹಣ ಕಟ್ಟಿದ್ದೇವೆ. ವರ್ಷದ ಬಳಿಕ ಹಣ ಕೇಳಲು ಹೋದಾಗ ಈ ಸಂಸ್ಥೆಯ ಮೇಲ್ವಿಚಾರಕರೊಬ್ಬರು ಇವತ್ತು, ನಾಳೆ ಎಂದು ಸತಾಯಿಸುತ್ತಿದ್ದರು. ನಂತರ ಈ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದ ಹರೀಶ್ ಎಂಬ ವ್ಯಕ್ತಿಯು ಕಚೇರಿಯಲ್ಲೇ ಆತ್ಮಹತ್ಯೆ ಮಾಡಿಕೊಂಡರು. ಆಗ ವಿದ್ಯಾರಣ್ಯಪುರಂ ಠಾಣೆಯ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಕಚೇರಿಯ ಕಂಪ್ಯೂಟರ್ ಸೇರಿದಂತೆ ಕೆಲವು ದಾಖಲೆಗಳನ್ನು ವಶಕ್ಕೆ ಪಡೆದಿದ್ದರು. ಆದರೇ, ಹಣ ಕಳೆದುಕೊಂಡ ನಮ್ಮ ದೂರು ಸ್ವೀಕರಿಸುತ್ತಿಲ್ಲ ಎಂದರು.

ನಾವು ಕಷ್ಟಕಾಲಕ್ಕೆ ಸಹಾಯ ಆಗಲಿ ಎಂದು ಹಣ ಉಳಿತಾಯ ಮಾಡಿದ್ದೆವು ಆದರೇ, ಸಂಸ್ಥೆಯವರು ನಮ್ಮ ಹಣ ದೋಚಿ ಪರಾರಿಯಾಗಿದ್ದಾರೆ. ಇವರನ್ನು ಹುಡುಕುವುದು ಪೊಲೀಸರಿಗೆ ಕಷ್ಟವೇನಲ್ಲ, ಆದರೇ, ಅವರು ನಮ್ಮ ದೂರಿನ ಬಗ್ಗೆ ಆಸಕ್ತಿ ವಹಿಸುತ್ತಿಲ್ಲ ಎಂದು ಪೊಲೀಸರ ಬಗ್ಗೆ ಅನುಮಾನ ವ್ಯಕ್ತಪಡಿಸಿದರು. 

ಇದೇ ಸಂಸ್ಥೆಯಲ್ಲಿ ಹಣ ಕಟ್ಟಿ ಕಳೆದುಕೊಂಡಿರುವ ಕಾರ್ತಿಕ್ ಎಂಬವರು ಮಾತನಾಡಿ, ನಾನು ಈ ಸಂಸ್ಥೆಯಲ್ಲಿ 1ಲಕ್ಷ ರೂ. ಪಿಗ್ಮಿ ಹಣ ಕಟ್ಟಿದ್ದೆ, ಆದರೇ, ನನಗೆ ಹಣ ವಾಪಸ್ ನೀಡಿಲ್ಲ, ಈ ಸಂಸ್ಥೆಗೆ ಸಂಬಂಧಪಟ್ಟಿರುವ ವ್ಯವಸ್ಥಾಪಕ ನಿರ್ದೇಶಕರಾದ ಎನ್. ನಂಜುಂಡರಾಜೇ ಅರಸ್, ಹರೀಶ್‍ರಾವ್, ಆರ್. ವಿನೋದರಾವ್, ಎನ್.ಎಸ್. ಮಹೇಶ್, ಟಿ.ಈ. ಚಂದ್ರ, ಆರ್.

ಕಿರಣ್, ಹಾಗೂ ಫಿಗ್ರಿ ಕಟ್ಟಿಸಿಕೊಳ್ಳಲು ಬರುತ್ತಿದ್ದ ಮಧು ಹಾಗೂ ನವ ಸಮೃದ್ಧಿ ಬೆನಿಫಿಟ್ ಫಂಡ್ ನಿಧಿ ಲಿಮಿಟೆಡ್ ಮೇಲೆ ನಾನು ದೂರು ನೀಡಲು ಹೋದರೆ ವಿದ್ಯಾರಣ್ಯಪುರಂ ಪೊಲೀಸ್ ಠಾಣೆಯಲ್ಲಿ ನಮ್ಮ ದೂರು ಸ್ವೀಕರಿಸುತ್ತಿಲ್ಲ, ಈ ಸಂಬಂಧ ಉನ್ನತ ಅಧಿಕಾರಿಗಳಿಗೆ ದೂರು ನೀಡಲು ಮುಂದಾಗಿದ್ದೇವೆ ಎಂದರು.

ಈ ಸಂದರ್ಭದಲ್ಲಿ ಹಣ ಕಳೆದುಕೊಂಡ ಶಾರದಮ್ಮ, ಶಿವು, ನಾಗರಾಜು, ಕುಮಾರ್, ಪ್ರತಿಮಾ, ಪಾವನ, ಮಮತಾ, ಮಂಜೇಶ, ಲಕ್ಷ್ಮಿ, ಆಕಾಶ, ರೇಣುಕಾ, ಹರ್ಷಿತಾ, ಶಾಂತಾಬಾಯಿ, ಕಾಂತರಾಜ್, ಉಮಾ, ರತ್ನಮ್ಮ ಮತ್ತಿತರರು ಇದ್ದರು.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು