ವರದಿ: ಎಸ್.ನಿಷ್ಕಲ
ಮೈಸೂರು: ದೇವನಹಳ್ಳಿ ತಾಲ್ಲೂಕಿನ 1777 ಎಕರೆ ಜಮೀನಿನ ಭೂಸ್ವಾಧೀನ ರದ್ದುಗೊಳಿಸುವುದರ ಮೂಲಕ ಮುಖ್ಯಮಂತ್ರಿ ಸಿದ್ದರಾಮಯ್ಯ ಸೋತರೂ ರೈತರ ಮನಸ್ಸು ಗೆದ್ದಿದ್ದಾರೆಂದು ಎಂದು ಕರ್ನಾಟಕ ರಾಜ್ಯ ರೈತಸಂಘದ(ರೈತಬಣ) ಅಧ್ಯಕ್ಷರಾದ ಇಂಗಲಗುಪ್ಪೆ ಕೃಷ್ಣೇಗೌಡ ಶ್ಲಾಘಿಸಿದ್ದಾರೆ.
ಮಂಗಳವಾರ ಮಾಧ್ಯಮದವರೊಂದಿಗೆ ಅವರು ಮಾತನಾಡಿ, ಇದು ರೈತರ ಸುದೀರ್ಘ ಹೋರಾಟಕ್ಕೆ ಸಿಕ್ಕ ಗೆಲುವಾಗಿದೆ ಮತ್ತು ಸರ್ಕಾರಕ್ಕೂ ಒಂದು ಎಚ್ಚರಿಕೆಯಾಗಿದೆ. ಕೃಷಿ ಭೂಮಿಯನ್ನು ಯಾವುದೇ ಕಾರಣಕ್ಕೂ ಸ್ವಾಧೀನ ಮಾಡಿಕೊಳ್ಳಬಾರದು. ರಾಜ್ಯ ಸರ್ಕಾರ ರೈತರ ಹೋರಾಟಕ್ಕೆ ಬೆಲೆ ನೀಡಿದೆ. ದೇವನಹಳ್ಳಿ ಭೂಸ್ವಾಧೀನ ಪ್ರಕ್ರಿಯೆಯನ್ನು ರದ್ದು ಮಾಡಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನಡೆ ಶ್ಲಾಘನೀಯ, ಅವರು ನಿಜಕ್ಕೂ ಒಂದು ರೈತಪರ, ಸಮಾಜದ ಪರವಾಗಿ ಮಾನವೀಯ ನಿರ್ಧಾರ ಕೈಗೊಂಡಿದ್ದಾರೆ. ದೇವನಹಳ್ಳಿ ತಾಲ್ಲೂಕಿನ ಚನ್ನರಾಯಪಟ್ಟಣ ಸುತ್ತಮುತ್ತಲಿನ 13 ಹಳ್ಳಿಗಳ ಕೃಷಿಭೂಮಿ ಅತ್ಯಂತ ಫಲವತ್ತಾದ ಭೂಮಿಯಾಗಿದೆ. ಇಲ್ಲಿನ ಕೃಷಿಕರು ಹಣ್ಣು ತರಕಾರಿಗಳನ್ನು ಬೆಳೆದು ತಮ್ಮ ಬದುಕು ಕಟ್ಟಿಕೊಂಡಿದ್ದಾರೆ. ಒಮ್ಮೆ ಇವರು ತಮ್ಮ ಭೂಮಿಯನ್ನು ಕಳೆದುಕೊಂಡರೆ ಅದರಿಂದ ಬರುವ ಹಣ ನಿಜಕ್ಕೂ ಅವರಲ್ಲಿ ಉಳಿಯುವುದಿಲ್ಲ, ಒಂದೆರಡು ವರ್ಷದ ನಂತರ ಹಣ ಕಳೆದುಕೊಂಡು ಅದೇ ರೈತರು ತಮ್ಮ ಭೂಮಿಯಲ್ಲಿ ಸ್ಥಾಪನೆಯಾದ ಕೈಗಾರಿಕೆಗಳಲ್ಲಿ ವಾಚ್‍ಮನ್ ಆಗಿ ದುಡಿಯಲು ಬರಬೇಕಿದೆ. ಈಗಾಗಲೇಇಂತಹ ಹಲವಾರು ಘಟನೆಗಳು ನಡೆದಿವೆ. ಈ ಕಾರಣದಿಂದಲೂ ಈ ಫಲವತ್ತಾದ ಕೃಷಿ ಭೂಮಿ ರೈತರಿಂದ ಜಾರಬಾರದು ಎಂಬುದು ಸಹ ಹೋರಾಟಗಾರರ ನಿಲುವಾಗಿತ್ತು ಎಂದು ಕೃಷ್ಣೇಗೌಡ ಹೇಳಿದರು.
ಅಲ್ಲದೇ ಭೂಸ್ವಾಧೀನ ವಿರೋಧಿಸಿ ರೈತರು ನಡೆಸುತ್ತಿರುವ ಸುಮಾರು ಮೂರುವರೆ ವರ್ಷಗಳ ನಿರಂತರ ಹೋರಾಟಕ್ಕೆ ಜಯ ಸಿಕ್ಕಿದೆ. ಈ ಹೋರಾಟದಲ್ಲಿ ಸಿದ್ದರಾಮಯ್ಯ ಅವರು ಸೋತು ಗೆದ್ದಿದ್ದಾರೆ.
ಸರ್ಕಾರವೂ ರೈತರ ಹೋರಾಟಕ್ಕೆ ಮನ್ನಣೆ ನೀಡಿ ತಡವಾಗಿಯಾದರೂ ರೈತ ಪರವಾಗಿ ತೀರ್ಮಾನ ಕೈಗೊಂಡಿರುವುದು ಶ್ಲಾಘನೀಯ, ರೈತರ ಈ ಜಯ ಮುಂದಿನ ಹೋರಾಟಕ್ಕೆ ಸ್ಪೂರ್ತಿ ನೀಡುತ್ತದೆ ಎಂದು ಅವರು ಹೇಳಿದ್ದಾರೆ.
0 ಕಾಮೆಂಟ್‌ಗಳು