ವರದಿ: ಎಸ್.ನಿಷ್ಕಲ
ಮೈಸೂರು: ಹಿರಿಯ ಪತ್ರಿಕೋದ್ಯಮಿ ಕೆ.ಬಿ.ಗಣಪತಿ ಅವರು ತಮ್ಮ ಪತ್ರಿಕೆಗಳ ಮೂಲಕ ರೈತ, ದಲಿತ, ದನಿ ಇಲ್ಲದ ಸಮುದಾಯಗಳ ಹೋರಾಟಗಳಿಗೆ ದನಿಯಾಗಿದ್ದರು, ಕೆಬಿಜಿ ನಿಧನದಿಂದ ರೈತ ಸಮುದಾಯಕ್ಕೆ ತುಂಬಲಾರದ ನಷ್ಟವಾಗಿದೆ ಎಂದು ಕರ್ನಾಟಕ ರಾಜ್ಯ ರೈತಸಂಘ(ರೈತಬಣ)ದ ಅಧ್ಯಕ್ಷ ಇಂಗಲಗುಪ್ಪೆ ಕೃಷ್ಣೇಗೌಡ ಕೆಬಿಜಿ ಅವರ ನಿಧನಕ್ಕೆ ಸಂತಾಪ ವ್ಯಕ್ತಪಡಿಸಿದ್ದಾರೆ.
ಈ ಕುರಿತು ಸೋಮವಾರ ಮಾಧ್ಯಮದವರೊಂದಿಗೆ ಅವರು ಮಾತನಾಡಿ, ಕೆಬಿಜಿ ಅವರು, ಮೈಸೂರು ಪ್ರಾಂತ್ಯದಲ್ಲಿ ಒಂದು ದೊಡ್ಡ ಶಕ್ತಿಯಾಗಿದ್ದರು. ತಮ್ಮ ಮೊನಚು ಬರಹಗಳ ಮೂಲಕ ಸದಾ ಕಾಲ ಸರ್ಕಾರವನ್ನು, ಆಡಳಿತವನ್ನು ಎಚ್ಚರಿಸುತ್ತಿದ್ದರು. ಮೈಸೂರು ಮಿತ್ರ ಮತ್ತು ಸ್ಟಾರ್ ಆಫ್ ಮೈಸೂರು ಪತ್ರಿಕೆಗಳಲ್ಲಿ ಯಾವುದೇ ಒಂದು ಸುದ್ದಿ ಬಂತು ಎಂದರೆ, ಅದಕ್ಕೊಂದು ಮಹತ್ವ ಇಂದಿಗೂ ಇದೆ, ಅದನ್ನು ಕೆಬಿಜಿ ಅವರು ಕಳೆದ 50 ವರ್ಷಗಳಿಂದ ಕಾಪಾಡಿಕೊಂಡು ಬಂದಿದ್ದಾರೆ. ರೈತರ ಹೋರಾಟಗಳು, ಸಮಸ್ಯೆಗಳ ಬಗ್ಗೆ ತಮ್ಮ ಪತ್ರಿಕೆಗಳಲ್ಲಿ ಬೆಳಕು ಚೆಲ್ಲಿ ರೈತಕುಲಕ್ಕೆ ನ್ಯಾಯ ಕೊಡಿಸಿದ್ದಾರೆ. ಅವರ ನಿಧನ ನಿಜಕ್ಕೂ ರೈತಕುಲಕ್ಕಾದ ಅಪಾರ ನಷ್ಟ ಎಂದರು.
88 ವರ್ಷದ ಕೆಬಿಜಿ ಅವರು ತಮ್ಮ ಬದುಕಿನ ಕಡೆಯ ದಿನದವರೆಗೂ ಪತ್ರಿಕಾಲಯದಲ್ಲಿ ಸಕ್ರಿಯರಾಗಿದ್ದರು. ಅವರ ಒಡೆತನದ ಕನ್ನಡದ ‘ಮೈಸೂರು ಮಿತ್ರ’ ಹಾಗೂ ಇಂಗ್ಲೀಷ್‍ನ ‘ಸ್ಟಾರ್ ಆಫ್ ಮೈಸೂರು’ ಪತ್ರಿಕೆಗಳು ಹೋರಾಟದ ದನಿಯಾಗಿದ್ದವು ಎಂದು ಬಣ್ಣಿಸಿದರು.
ತಮ್ಮ ಎರಡೂ ಪತ್ರಿಕೆಗಳ ಮೂಲಕ ಹಳೇ ಮೈಸೂರು ಪ್ರಾಂತ್ಯದಲ್ಲಿ ದೊಡ್ಡ ಓದುಗ ವರ್ಗವನ್ನು ಸೃಷ್ಟಿಸುವಲ್ಲಿ ಕೆಬಿಜಿ ಯಶಸ್ವಿಯಾಗಿದ್ದರು.
ನೂರಾರು ಪತ್ರಕರ್ತರನ್ನ ಈ ನಾಡಿಗೆ ಕೊಡುಗೆ ನೀಡಿದ ಹಿರಿಮೆ ಗಣಪತಿ ಅವರಿಗೆ ಸಲ್ಲುತ್ತದೆ.
ತಮ್ಮ ಅಂಕಣ ಬರಹಗಳ ಮೂಲಕ ಪತ್ರಕರ್ತರ ಅವರು ತಮ್ಮ ಸಾಮಾಜಿಕ ಬದ್ಧತೆಯನ್ನ ಸಮಾಜಕ್ಕೆ ತೋರಿಸಿದವರು. ಯಶಸ್ವಿ ಪತ್ರಿಕೋದ್ಯಮದ ಮೂಲಕ ಇಡೀ ರಾಜ್ಯದ ಪತ್ರಿಕಾ ಸಮೂಹ ಮೈಸೂರಿನ ಕಡೆ ನೋಡುವ ಹಾಗೆ ಮಾಡುವಲ್ಲಿ ಕೆಬಿಜಿ ಅವರು ಯಶಸ್ವಿಯಾಗಿದ್ದರು. ಸುಮಾರು 50 ವರ್ಷಗಳ ನಿರಂತರ ಪತ್ರಿಕೋದ್ಯಮದಲ್ಲಿ ಮೈಲಿಗಲ್ಲಿನಂತಹ ನೂರಾರು ಸಾಧನೆಗಳನ್ನು ಗಣಪತಿ ಅವರು ಮಾಡಿದ್ದಾರೆ. ಅವರನ್ನು ಕಳೆದುಕೊಳ್ಳುವ ಮೂಲಕ ಪತ್ರಿಕೋದ್ಯಮ ಮತ್ತು ರೈತಕುಲ ಶೂನ್ಯ ಸೃಷ್ಟಿಸಿಕೊಂಡಿದೆ ಎಂದರು.
ಯಾವುದೇ ವ್ಯಕ್ತಿಗೆ ನೇರ ಪ್ರಶ್ನೆ ಮಾಡುತ್ತಿದ್ದಂತಹ ಕೆಬಿಜಿ ಅವರಿಂದ ನಾವೆಲ್ಲರೂ ಪ್ರೇರಣೆ ಹಾಗೂ ಸ್ಫೂರ್ತಿ ಪಡೆದಿದ್ದೇವೆ.
ಮಂಡ್ಯ ಜಿಲ್ಲೆಯ ರೈತರ ಜೀವನಾಡಿ ಕಾವೇರಿ ನದಿಯ ಉಗಮ ಸ್ಥಾನವಾದ ಕೊಡಗು ಜಿಲ್ಲೆಯಿಂದ ಬಂದ ಕೆಬಿಜಿ ಅವರು, ಸಾಂಸ್ಕøತಿಕ ನಗರಿ ಮೈಸೂರನ್ನು ತಮ್ಮ ಕರ್ಮಭೂಮಿಯನ್ನಾಗಿ ಮಾಡಿಕೊಂಡು ತಮ್ಮ ಸಾಧನೆಯ ಗುರಿಯನ್ನು ಸಾಧಿಸಿದ್ದಾರೆ ಎಂದು ಕೃಷ್ಣೇಗೌಡ ತಿಳಿಸಿದ್ದಾರೆ.
0 ಕಾಮೆಂಟ್‌ಗಳು