ಮೈಸೂರು : ಪ್ರತಿವರ್ಷ ಜುಲೈ 21 ರಂದು ನಡೆಯುವ ರೈತ ಹುತಾತ್ಮ ದಿನಾಚರಣೆಯನ್ನು ಕರ್ನಾಟಕ ರಾಜ್ಯ ಸರ್ಕಾರವೇ ರಾಜ್ಯದೆಲ್ಲೆಡೆ ಆಚರಿಸುವ ಮೂಲಕ ಹುತಾತ್ಮ ರೈತರಿಗೆ ಗೌರವ ಸಲ್ಲಿಸಬೇಕೆಂದು ಕರ್ನಾಟಕ ರಾಜ್ಯ ರೈತಸಂಘದ(ರೈತಬಣ) ಅಧ್ಯಕ್ಷರಾದ ಇಂಗಲಗುಪ್ಪೆ ಕೃಷ್ಣೇಗೌಡ ಅವರು ಒತ್ತಾಯಿಸಿದರು.
ಅರಸಿಕೇರೆಯ ಎಪಿಎಂಸಿ ಯಾರ್ಡ್‍ನಲ್ಲಿ ಜುಲೈ 21 ರಂದು ನಡೆಯುವ ರೈತ ಹುತಾತ್ಮ ದಿನಾಚರಣೆಯಲ್ಲಿ ಭಾಗವಹಿಸಲು ತೆರಳುವ ಮುನ್ನ ಮೈಸೂರಿನಲ್ಲಿ ಮಾಧ್ಯಮದವರೊಂದಿಗೆ ಅವರು ಪ್ರತಿಕ್ರಿಯಿಸಿ,
ಮಣ್ಣಿನ ಮಗ ಎಂದೇ ಪ್ರಖ್ಯಾತರಾದ ಹೆಚ್.ಡಿ.ದೇವೇಗೌಡರಂತಹ ಒಬ್ಬ ಸಮರ್ಥ ಪ್ರಧಾನಿಯನ್ನು ದೇಶಕ್ಕೆ ನೀಡಿದಂತಹ ಹಾಸನ ಜಿಲ್ಲೆಯಲ್ಲಿ ರೈತರ ಹುತಾತ್ಮ ದಿನಾಚರಣೆ ನಡೆಯುತ್ತಿರುವುದು ಅತ್ಯಂತ ಸಮಯೋಚಿತ ಕಾರ್ಯಕ್ರಮವಾಗಿದೆ.
ಜುಲೈ 21ಕ್ಕೆ ನರಗುಂದ-ನವಲಗುಂದ ರೈತ ಬಂಡಾಯ ಘಟಿಸಿ 45 ವರ್ಷಗಳಾಗಿವೆ. ಅಂದು ರೈತರು ಅನುಭವಿಸುತ್ತಿದ್ದ ಅದೇ ಸಮಸ್ಯೆಗಳೇ ಇಂದಿಗೂ ಮತ್ತಷ್ಟು ಬೃಹದಾಕಾರವಾಗಿ ರೈತರನ್ನು ಕಾಡುತ್ತಿವೆ. ರೈತರು ಎಂದರೆ ಯಾವುದೇ ಆಳುವ ಸರ್ಕಾರಗಳಿಗೆ ಅಸಡ್ಡೆಯಾಗಿದೆ. ರೈತರ ಸಮಸ್ಯೆಗಳಿಗೆ ಶೀಘ್ರ ಪರಿಹಾರ ದೊರಕದಿದ್ದಲ್ಲಿ ರಾಜ್ಯದಲ್ಲಿ ನರಗುಂದ-ನವಲಗುಂದ ಮಾದರಿ ಮತ್ತೊಂದು ಕ್ರಾಂತಿಯಾಗುವುದರಲ್ಲಿ ಯಾವುದೇ ಸಂಶಯವಿಲ್ಲ, ಅಂದು ರೈತರು ಅಧಿಕಾರಿಗಳನ್ನು ಅಟ್ಟಾಡಿಸಿದ್ದಾರೆ. ಮುಂದಿನ ದಿನಗಳಲ್ಲಿ ಜನ ಪ್ರತಿನಿಧಿಗಳನ್ನು ಅಟ್ಟಾಡಿಸುವ ಕಾಲ ಬರುತ್ತದೆ. ಆಳುವವರು ರೈತರ ಸಮಸ್ಯೆಗಳನ್ನು ಗಂಭೀರವಾಗಿ ಪರಿಗಣಿಸಿ ಅದಕ್ಕೆ ಸೂಕ್ತ ಪರಿಹಾರ ಕಲ್ಪಿಸಬೇಕೆಂದು ಕೃಷ್ಣೇಗೌಡ ಆಗ್ರಹಿಸಿದರು.
ಏಪ್ರಿಲ್ 3, 1980 ರಂದು ನರಗುಂದಕ್ಕೆ ಮುಖ್ಯಮಂತ್ರಿ ಗುಂಡೂರಾಯರ ಭೇಟಿ ನೀಡಿದ್ದ ಸಂದರ್ಭದಲ್ಲಿ ಅಲ್ಲಿಗೆ ವಿ.ಎನ್ ಹಳಕಟ್ಟಿ ನೇತೃತ್ವದಲ್ಲಿ ಮೆರವಣಿಗೆ ಮೂಲಕ ಬಂದ ನವಲಗುಂದ ರೈತರು, ‘ನೀರಾವರಿ ಬೆಟರ್‍ಮೆಂಟ್ ಲೆವಿ ವಿಪರೀತವಾಗಿದೆ. ಅದನ್ನು ಹಿಂತೆಗೆದುಕೊಳ್ಳಿ. ಹತ್ತಿ, ಮುಸುಕಿನ ಜೋಳಕ್ಕೆ ಲಾಭದಾಯಕ ಬೆಲೆ ಕೊಡಿ. ಈ ಬೆಳೆಗಳನ್ನು ಸರ್ಕಾರವೇ ಕೊಳ್ಳಬೇಕು' ಇತ್ಯಾದಿ ಒತ್ತಾಯಗಳನ್ನು ಮಾಡಿದ್ದರು.
ಆದರೇ ಮುಖ್ಯಮಂತ್ರಿ ಗುಂಡೂರಾವ್ ಅವರು ರೈತರನ್ನು ನಿರ್ಲಕ್ಷಿಸಿ ನಿರ್ದಾಕ್ಷಿಣ್ಯವಾಗಿ ತೆರಿಗೆ, ಬೆಟರ್‍ಮೆಂಟ್ ಲೆವಿ ಬಾಕಿ ವಸೂಲಿಗೆ ಕ್ರಮ ಕೈಗೊಳ್ಳಿ ಎಂದು ಆದೇಶವಿತ್ತರು.
ಅಂದು ಅಧಿಕಾರಕ್ಕೆ ಬಂದಿದ್ದ ಇಂದಿರಾಗಾಂಧಿ ಸರ್ಕಾರ ರಸಗೊಬ್ಬರಗಳ ಬೆಲೆ ಏರಿಸಿತ್ತು. ಅವುಗಳಿಗೆ ಜೊತೆ ಎಂಬಂತೆ ಕೀಟನಾಶಕಗಳ ಬೆಲೆಗಳನ್ನು ಖಾಸಗಿ ಕಂಪನಿಗಳು ಏರಿಸಿದ್ದವು.
ಆ ವರ್ಷ ಹತ್ತಿಯ ಬೆಲೆ ವಿಪರೀತ ಕುಸಿದು ಹೋಗಿತ್ತು. ಹಿಂದಿನ ವರ್ಷ ಒಂದು ಕ್ವಿಂಟಾಲಿಗೆ 600-800ರೂ ಇದ್ದರೆ ಆ ವರ್ಷ ಕೇವಲ 300-400. ಇದರಿಂದ ಬೆಳೆಯ ಖರ್ಚಿನ ಅರ್ಧ ಕೂಡಾ ದಕ್ಕಲಿಲ್ಲ.
ಇದರಿಂದ ಸಹಜವಾಗಿ ಕೋಪಗೊಂಡಿದ್ದ ರೈತರು ಬಂದ್ ಆಚರಿಸಿದ ವೇಳೆ ನಡೆದ ಗೋಲಿಬಾರ್‍ನಲ್ಲಿ 20ಕ್ಕೂ ಹೆಚ್ಚು ರೈತರು ಹುತಾತ್ಮರಾದರು. ಇದರ ಜತೆ ದಿನಿತ್ಯವೂ ದೇಶಕ್ಕೆ ಅನ್ನ ಕೊಡುವ ಅನ್ನದಾತ ಒಂದಲ್ಲಾ ಒಂದು ಬಿಕ್ಕಟ್ಟಿಗೆ ಸಿಲುಕಿ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾನೆ. ಅನ್ನದಾತನ ಕೈ ಹಿಡಿಬೇಕಾದ ಆಳುವವರು ಕಾರ್ಪೋರೇಟ್ ಸಂಸ್ಥೆಗಳ ಗುಲಾಮರಾಗಿದ್ದಾರೆ. ಮತ್ತೊಂದು ಕಡೆ ಹಸಿರು ಟವಲ್‍ಗಳನ್ನು ಹೊದ್ದ ನಕಲಿ ಹೋರಾಟಗಾರರು ಆಳುವ ಸರ್ಕಾರಗಳ ಬೂಟು ನೆಕ್ಕುತ್ತಾ ನಿಜವಾದ ರೈತರ ದಿಕ್ಕು ತಪ್ಪಿಸುತ್ತಿದ್ದಾರೆ. ಈ ಶೋಷಣೆಯೂ ನಿಲ್ಲಬೇಕೆಂದು ಆಗ್ರಹಿಸಿದರು.
ರೈತ ಹುತಾತ್ಮ ದಿನಾಚರಣೆ ಆಚರಿಸುವ ಮೂಲಕ ನಮ್ಮ ಹೋರಾಟಗಳು ಮತ್ತಷ್ಟು ತೀವ್ರಗೊಳ್ಳುತ್ತವೆ. ನಮಗೆ ಹುತಾತ್ಮರೇ ಪ್ರೇರಣಾ ಶಕ್ತಿ, ರೈತ ಕುಲದ ಏಳಿಗೆಗಾಗಿ ನಾವೂ ಕೂಡ ಹುತಾತ್ಮರಾಗಲು ಸಿದ್ದ ಎಂದು ಕೃಷ್ಣೇಗೌಡ ಹೇಳಿದರು.
0 ಕಾಮೆಂಟ್‌ಗಳು