ವಕ್ಫ್ ಸಲಹಾ ಸಮಿತಿ ನೂತನ ಅಧ್ಯಕ್ಷರಾದ ಅಜೀಜುಲ್ಲಾ @ ಅಜ್ಜು ಅವರಿಗೆ ಗಣ್ಯರಿಂದ ಶುಭ ಹಾರೈಕೆ
ವರದಿ: ಎಸ್.ನಿಷ್ಕಲ
ಮೈಸೂರು : ಮೈಸೂರು ಜಿಲ್ಲೆಯಲ್ಲಿರುವ ಕೊಟ್ಯಂತರ ರೂ ಮೌಲ್ಯದ ವಕ್ಫ್ ಆಸ್ತಿಗಳ ಸಂರಕ್ಷಣೆಗೆ ಮೊದಲ ಆದ್ಯತೆ ನೀಡಲಾಗುವುದು ಎಂದು ಮೈಸೂರು ಜಿಲ್ಲಾ ವಕ್ಫ್ ಸಲಹಾ ಸಮಿತಿಗೆ ನೂತನ ಅಧ್ಯಕ್ಷರಾಗಿ ನೇಮಕವಾಗಿರುವ ಅಜೀಜುಲ್ಲಾ @ ಅಜ್ಜು ಭರವಸೆ ನೀಡಿದರು.
ಗುರುವಾರ ಮೈಸೂರು ಜಿಲ್ಲಾ ವಕ್ಫ್ ಸಲಹಾ ಸಮಿತಿ ಕಚೇರಿಗೆ ಭೇಟಿ ನೀಡಿ, ನಗರದ ವಿವಿಧ ಮಸೀದಿಗಳ ಧರ್ಮಗುರುಗಳು ಮತ್ತು ಗಣ್ಯರಿಂದ ಅಭಿನಂದನೆಗಳನ್ನು ಸ್ವೀಕರಿಸಿ ಅವರು ಮಾತನಾಡಿ, ನಮ್ಮ ಹಿರಿಯರು, ಪೂರ್ವಜರು ಮುಸ್ಲಿಂ ಸಮುದಾಯದ ಶಿಕ್ಷಣ, ಆರೋಗ್ಯ ಮತ್ತು ಧಾರ್ಮಿಕ ಕಾರ್ಯಗಳು ಸುಗಮವಾಗಿ ನಡೆಯಲು ತಮ್ಮ ಆಸ್ತಿಗಳನ್ನು ವಕ್ಫ್ ಮಂಡಳಿಗೆ ದಾನ ಮಾಡಿರುತ್ತಾರೆ. ಈ ಸಂಪೂರ್ಣ ಆಸ್ತಿಗಳನ್ನು ಸಂರಕ್ಷಿಸಲು ನಾನು ಮೊದಲ ಆದ್ಯತೆ ನೀಡುತ್ತೇನೆ ಎಂದರು.
ವಕ್ಫ್ ಆಸ್ತಿಗಳನ್ನು ಕೆಲವರು ಕಬ್ಜಾ ಮಾಡಿರುವ ಬಗ್ಗೆ ಅನೇಕ ದೂರುಗಳು ಬಂದಿವೆ. ಇದನ್ನು ದಾಖಲೆ ಸಮೇತ ನಮಗೆ ನೀಡಿದರೆ ಅದನ್ನೂ ಸಹ ಸಂರಕ್ಷಣೆ ಮಾಡುವ ಕ್ರಮಕ್ಕೆ ಮುಂದಾಗುತ್ತೇವೆ. ನಾನು ಕೇವಲ ಧಾರ್ಮಿಕ ಸೇವೆ ಮಾಡುವ ಒಂದು ಸದುದ್ದೇಶದಿಂದ ಈ ಸಮಿತಿಗೆ ಅಧ್ಯಕ್ಷನಾಗಿ ಬಂದಿದ್ದೇನೆ. ಯಾವುದೇ ರೀತಿಯ ಹಣ ಮಾಡುವ ಉದ್ದೇಶ ಹೊಂದಿಲ್ಲ, ವಕ್ಷ್ ಬೋರ್ಡ್ ಎನ್ನುವುದು ಒಂದು ಪವಿತ್ರವಾದ ಸಂಸ್ಥೆ, ಈ ಸಂಸ್ಥೆಯ ಆಸ್ತಿಗಳನ್ನು ಅತ್ಯಂತ ಜತನದಿಂದ ಕಾಪಾಡುವುದು ನಮ್ಮ ಉದ್ದೇಶವಾಗಿದೆ. ಈ ಸಂಸ್ಥೆಯಲ್ಲಿ ಕೆಲಸ ಮಾಡಿ ಸೈ ಎನಿಸಿಕೊಂಡರೆ ಸಮುದಾಯ ನಮ್ಮನ್ನು ಗೌರವದಿಂದ ಕಾಣುತ್ತದೆ ಎಂದು ಹೇಳಿದರು.
ಮೈಸೂರು ಜಿಲ್ಲಾ ವಕ್ಫ್ ಸಲಹಾ ಸಮಿತಿಗೆ ನೂತನ ಅಧ್ಯಕ್ಷರಾಗಿ ನೇಮಕವಾಗಿರುವ ಅಜೀಜುಲ್ಲಾ @ ಅಜ್ಜು ಅವರನ್ನು ಮೈಸೂರಿನ ಗಣ್ಯರು ಹಾಗೂ ವಿವಿಧ ಮಸೀದಿಗಳ ಧರ್ಮಗುರುಗಳು ಶುಭ ಹಾರೈಸಿದರು.
ಈ ಸಂದರ್ಭದಲ್ಲಿ ಉಪಸ್ಥಿತರಿದ್ದ ಮೈಸೂರಿನ ಸರ್‌ಖಾಜಿ ಮೊಹಮ್ಮದ್ ಉಸ್ಮಾನ್ ಷರೀಫ್ ಅವರು ಮಾತನಾಡಿ, ಮೈಸೂರು ಜಿಲ್ಲಾ ವಕ್ಫ್ ಸಲಹಾ ಸಮಿತಿಗೆ ನೂತನ ಅಧ್ಯಕ್ಷರಾಗಿ ಆಯ್ಕೆಯಾಗಿರುವ ಹಿರಿಯ ಕಾಂಗ್ರೆಸ್ ಮುಖಂಡರಾದ ಅಜೀಜುಲ್ಲಾ @ಅಜ್ಜು ಅವರು ಮೈಸೂರಿನ ಜನಪ್ರಿಯ ನಾಯಕರು. ಮೊದಲ ಬಾರಿಗೆ ವಕ್ಫ್ ಸಲಹಾ ಸಮಿತಿ ಸದಸ್ಯರನ್ನಾಗಿ ಧರ್ಮಗುರುಗಳನ್ನು ಆಯ್ಕೆ ಮಾಡಿರುವುದು ಅತ್ಯಂತ ಸಂತೋಷದ ಸಂಗತಿಯಾಗಿದೆ ಎಂದರು.
ಮೈಸೂರು ಜಿಲ್ಲಾ ವಕ್ಫ್ ಸಲಹಾ ಸಮಿತಿ ಸದಸ್ಯರಾದ ಮೌಲಾನ ಅಬ್ದುಲ್ ಸಲಾಮ್ ಮಾತನಾಡಿ, ಮೈಸೂರು ಜಿಲ್ಲಾ ವಕ್ಫ್ ಸಲಹಾ ಸಮಿತಿಗೆ ಅಜೀಜುಲ್ಲಾ @ ಅಜ್ಜು ಅವರನ್ನು ಅಧ್ಯಕ್ಷರನ್ನಾಗಿ ನೇಮಕ ಮಾಡುವಲ್ಲಿ ಸಹಕರಿಸಿದ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಸಚಿವರಾದ ಜಮೀರ್ ಅಹಮದ್ ಖಾನ್ ಮತ್ತು ಶಾಸಕರಾದ ತನ್ವೀರ್ ಸೇಠ್ ಅವರಿಗೆ ಅಭಿನಂದನೆ ಸಲ್ಲಿಸುವುದಾಗಿ ಹೇಳಿದರು.
ಕಾರ್ಯಕ್ರಮದಲ್ಲಿ ಉಪಾಧ್ಯಕ್ಷರಾದ ಶಬ್ನಮ್ ಸಯೀದ್, ಸದಸ್ಯರಾದ ನಿಸಾರ್ ಅಹಮದ್, ಅಮ್ಜದ್ ಪಾಷ, ಮೈಸೂರು ಮಹಾನಗರ ಪಾಲಿಕೆ ಮಾಜಿ ಸದಸ್ಯರಾದ ಸಮಿ ಉಲ್ಲಾ, ಮುಖಂಡರಾದ ಜಾವೀದ್ ಅಹಮದ್ ರಜ್ವಿ, ಮೌಲಾನಾ ಜಾವೀದ್ ಜಮಾಲಿ, ಮೌಲಾನ ಹಸನ್ ರಝಾ, ಮೌಲಾನ ಮತೀನ್ ರಜಾ, ಕೆ.ಆರ್.ನಗರದ ಅಸ್ಲಂ, ವಕ್ಫ್ ಇನ್ಸ್‌ಪೆಕ್ಟರ್ ಮೊಹಮ್ಮದ್ ಯೂನುಸ್ ಮತ್ತಿತರರು ಇದ್ದರು.
0 ಕಾಮೆಂಟ್‌ಗಳು